Thursday, January 27, 2011

ಅಳಿದ ಮಹಾನಗರಕ್ಕೆ ವಂದನೆ 
'ವಿಜಯನಗರ ಸಾಮ್ರಾಜ್ಯ' ಈ ಶಬ್ದ ಕೇಳಿದ ಕೂಡಲೇ ಪ್ರತಿ ಭಾರತೀಯನ ಕಿವಿ ಒಮ್ಮೆ ನೆಟ್ಟಗಾಗುತ್ತದೆ. ಸಾಹಿತ್ಯ, ವಾಸ್ತುಶಿಲ್ಪ, ಸಂಸ್ಕ್ರತಿಗಳಿಂದ ಶ್ರೀಮಂತವಾಗಿದ್ದ ಈ ಸಾಮ್ರಾಜ್ಯ ಆದಿಲ್ ಶಾಯಿಗಳ ಕುತಂತ್ರದ ದಾಳಿಯಿಂದಾಗಿ ಅವನತಿ ಹೊಂದಿತು.
ವಿಜಯನಗರ ಸಾಮ್ರಾಜ್ಯದ ವೈಭವದ ಬಗ್ಗೆ, ಆ ಕಾಲದಲ್ಲಿ ಪರ್ಷಿಯಾದ ರಾಜನ ಪರವಾಗಿ, ಪ್ರವಾಸಿಯಾಗಿ ಬಂದಿದ್ದ ಅಬ್ದುಲ್ ರಜಾಕ್ ಈ ಕೆಳಗಿನ ಮಾತುಗಳನ್ನು ಹೇಳುತ್ತಾನೆ 'ಈ ನಗರವು ಬಹಳ ವಿಶಾಲವಾಗಿ, ಜನರಿಂದ ಕಿಕ್ಕಿರಿದು ತುಂಬಿದೆ. ಇಲ್ಲಿಯ ರಾಜನು ಬಹಳ ಬಲಶಾಲಿ. ಅವನ ರಾಜ್ಯವು ಸಿಂಹಳ ದ್ವೀಪದಿಂದ ಗುಲ್ಬರ್ಗಾದ ವರೆಗೆ, ಬಂಗಾಳದಿಂದ ಮಲಬಾರ್ ವರೆಗೆ ಸಾವಿರ ಗಾವುದಗಳಿಗಿಂತಲೂ (ಒಂದು ಗಾವುದ ಸುಮಾರು 12 ಮೈಲಿ)ಹೆಚ್ಚಿನ ಪ್ರದೇಶಗಳಿಗೆ ವಿಸ್ತರಿಸಿದೆ. ಈ ರಾಜ್ಯದಲ್ಲಿ 300 ಬಂದರುಗಳಿವೆ. ಬೆಟ್ಟದಂತೆ ಬೆಳೆದಿರುವ ಸಾವಿರ ಆನೆಗಳು, 11 ಲಕ್ಷ ಸೈನಿಕರಿಂದ ಕೂಡಿದ ಬಲಿಷ್ಠವಾದ ಸೈನ್ಯವಿದೆ. ಇಡೀ ಹಿಂದುಸ್ತಾನದಲ್ಲಿ ಈ ರಾಜನನ್ನು ಮೀರಿಸಿದ ಬಲಶಾಲಿ ರಾಜ ಇನ್ನೊಬ್ಬನಿಲ್ಲ. ಏಳು ಸುತ್ತುಗೋಡೆಗಳ ನಡುವೆ ನಿರ್ಮಿಸಲಾದ ಈ ವಿಜಯನಗರ ಎಂತಹುದೆಂದರೆ ಇಡೀ ಭೂ ಪ್ರಪಂಚದಲ್ಲಿ ಇಂತಹದನ್ನು ಕಣ್ಣು ಕಂಡಿಲ್ಲ, ಕಿವಿ ಕೇಳಿಲ್ಲ' ನೆನಪಿಡಿ ಒಬ್ಬ ಮುಸ್ಲಿಂ ಬರೆದ ಸಾಲುಗಳಿವು, ಆತನಿಗೆ ಕೃಷ್ಣದೇವರಾಯನನ್ನು ಹೊಗಳಿ ಬರೆಯಬೇಕಾದ ಅಗತ್ಯವಿರಲಿಲ್ಲ, ಪೂರ್ವಗ್ರಹಪೀಡಿತವಲ್ಲದ ಈ ಸಾಲುಗಳನ್ನು ನಂಬಲೇ ಬೇಕು.ಹಲವು ವಿದೇಶಿಯರು ಮೆಚ್ಚಿ ಬರೆದಿರುವ ವಿಜಯನಗರ ಸಾಮ್ರಾಜ್ಯ ಅವನತಿ ಹೊಂದಿದ್ದು ನಮ್ಮ ದೌರ್ಭಾಗ್ಯ.
ಮತಾಂಧ, ಕಾಮುಕ, ಅಹಂಕಾರಿ ಮೊಘಲ್ ದೊರೆ ಅಕ್ಬರ್ ನನ್ನು 'ದಿ ಗ್ರೇಟ್ ಅಕ್ಬರ್' ಎಂದು ಕರೆಯುವ ಸೋಗಲಾಡಿ ಇತಿಹಾಸಕಾರರು, ಕೃಷ್ಣದೇವರಾಯನ ಬಗ್ಗೆ ಬರೆದದ್ದು ಕಡಿಮೆ. ಅವರಿಗೆ ಕೃಷ್ಣದೇವರಾಯ ಗ್ರೇಟ್ ಅಲ್ಲ ಬದಲಾಗಿ ದಕ್ಷಿಣದ ಸಾಮಾನ್ಯ ದೊರೆ ಅಷ್ಟೆ!
ವಿಜಯನಗರ ಸಾಮ್ರಾಜ್ಯದ ವೈಭವವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ, ಶಬ್ದಗಳಿಗೆ ನಿಲುಕದ ವೈಭವವದು.
ನಾನು ಇದನ್ನೆಲ್ಲಾ ಯಾಕೆ ಹೇಳಿದೆ ಅಂದರೆ ಇಂದಿನಿಂದ ಹಂಪಿ ಉತ್ಸವ ನಡೆಯುತ್ತಿದೆ. ನಮ್ಮ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಈಗಿನ ತಲೆಮಾರಿಗೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಇದು ನಿಜವಾಗಿಯೂ ಶ್ಲಾಘನೀಯ ಪ್ರಯತ್ನ. ಹಂಪಿ ಉತ್ಸವ ಚೆನ್ನಾಗಿ ನಡೆದು, ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸಾರುವಂತಾಗಲಿ ಎಂಬುವುದು ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯನ ಹಾರೈಕೆಯಾಗಿದೆ.
                                                                               - ಡಾ.ಶೆಟ್ಟಿ   

No comments:

Post a Comment