Wednesday, August 31, 2011

ಕೆಲಸಮಯದ ಬಿಡುವಿನ ನಂತರ ನಾವು ಮತ್ತೆ ಬರುತ್ತಿದ್ದೇವೆ....
ಸುದ್ದಿಗಳ ವಿಶ್ಲೇಷಣೆ ಮತ್ತೆ ಆರಂಭವಾಗುತ್ತದೆ ನಿರೀಕ್ಷಿಸಿ....

 

Thursday, May 5, 2011ಪ್ರಿಯ ಓದುಗ ಮಿತ್ರರೇ,
ನಾವು ೪ ಮಂದಿ ಗೆಳೆಯರು ಕಾಲೇಜು ಜೀವನಕ್ಕೆ ಕಣ್ಣೀರಿನೊಂದಿಗೆ ವಿದಾಯ ಹೇಳಿ ಬಂದಿದ್ದೇವೆ. ಆ  ಮೂಲಕ ,ಜೊತೆ-ಜೊತೆಯಾಗಿದ್ದ ನಾವು ದೂರ ದೂರವಾಗುವ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಇದರ ಜೊತೆ ನಮ್ಮಲ್ಲಿ ಕೆಲವರಿಗೆ ಅನ್ನಕ್ಕಾಗಿ ಉದ್ಯೋಗ ಹುಡುಕಬೇಕಾಗಿದೆ. ಇನ್ನು ಕೆಲವರು, ಹಲವರಿಗೆ ಉದ್ಯೋಗ ನೀಡುವ ಶಿಕ್ಷಣವೆಂಬ ವ್ಯಾಪಾರದ ಗಿರಾಕಿಗಳಾಗಲು ಹೊರಟಿದ್ದಾರೆ. ಇಷ್ಟೆಲ್ಲಾ ತೊಂದರೆಗಳ ನಡುವೆ, ನಮ್ಮ ಲೇಖನಗಳು ಇನ್ನುಮುಂದೆ ಪ್ರಕಟಗೊಳ್ಳಲಿಕ್ಕಿಲ್ಲ. ಅದಕ್ಕಾಗಿ ನಮ್ಮನ್ನು ದಯವಿಟ್ಟು ಕ್ಷಮಿಸಿ.. 
ನೆನಪಿಡಿ,ನಾವು ಒಂದು ದಿನ ಪುನಃ ಬರುತ್ತೇವೆ!!

ನಿರೀಕ್ಷಿಸಿ..

-NEW YORKER TIMES

Friday, April 1, 2011

ಪಾಠವಾಗಲಿ ತೀರ್ಪು... 
ಬಾಲಿವುಡ್ ಎಂಬ ಮಾಯಾ ಲೋಕದಲ್ಲಿ ಎಲ್ಲಾ ರೀತಿಯ ಜನರು ಸಿಗುತ್ತಾರೆ. ಉತ್ತಮರು, ಅಧಮರು, ಸಾಧುಗಳು ಹೀಗೆ ಎಲ್ಲಾ ರೀತಿಯ character ಗಳನ್ನೂ ನೀವು ಒಂದೇ ಕಡೆ ನೋಡಬೇಕೆಂದರೆ ಬಾಲಿವುಡ್ ಅನ್ನು ನೋಡಬೇಕು. ನಾನು ಈಗ ಹೇಳ ಹೊರಟಿರುವುದು ಉತ್ತಮರ ಬಗ್ಗೆ ಅಲ್ಲ, ಅಧಮನೊಬ್ಬನ ಬಗ್ಗೆ. ಮನೆ ಕೆಲಸದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿರುವ ಭೂಪನ ಬಗ್ಗೆ! ನಿಮಗೆ ಈಗಾಗಲೇ ಗೊತ್ತಾಗಿರಬಹುದು ಯಾರೆಂದು, ಅವನೇ ಶೈನಿ ಅಹುಜಾ ಎಂಬ ಉದಯೋನ್ಮುಕ ನಟ. ಮಾಜಿ ಸೈನ್ಯಾಧಿಕಾರಿಯ ಮಗನಾದ ಈತ, ಕಲಿತದ್ದೆಲ್ಲ ಸೈನ್ಯದ ಶಾಲೆಯಲ್ಲಿಯೇ, ಬಾಲ್ಯದಲ್ಲಿ ಸೈನ್ಯಕ್ಕೆ ಸೇರಬೇಕು ಎಂಬ ಆಸೆ ಹೊತ್ತುಕೊಂಡಿದ್ದ ಇವನು ಅದ್ಯಾವ ದುರಾದೃಷ್ಟಕ್ಕೆ ಬಾಲಿವುಡ್ ಎಂಟ್ರಿಯಾದನೋ ಏನೋ ಪಾಪ!
ಕಳೆದ 2009 ರಲ್ಲಿ ಶೈನಿ ಅಹುಜಾ, ಆತನ ಮನೆ ಕೆಲಸದ ಹುಡುಗಿ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಮಾಡಿದ್ದಳು. ಪೊಲೀಸರು ಆತನನ್ನು ಬಂಧಿಸಿದ್ದರು, ನಂತರ ಜಾಮೀನು ಪಡಕೊಂಡು ಹೊರಬಂದಿದ್ದ ಶೈನಿಗೆ, ಈಗ ಕೋರ್ಟ್ 7 ವರ್ಷ ಸಜೆ ನೀಡಿದೆ. ಈ ಮೂಲಕ ಶೈನಿಗೆ ಜೈಲಿನ ಊಟ ಗ್ಯಾರಂಟಿ ಆಗಿದೆ. 
ಶೈನಿಗೆ ದೊರೆತ ಈ ಶಿಕ್ಷೆ ಇತರರಿಗೂ ಪಾಠವಾಗಲಿ. ಬಡತನದ ಕಾರಣದಿಂದ ಮನೆಕೆಲಸ ಮಾಡಿ ಹೊಟ್ಟೆ ತುಂಬಿಸುವ ಹುಡುಗಿಯರನ್ನು, ಪುಸಲಾಯಿಸಿಯೋ, ದೌರ್ಜನ್ಯ ಮಾಡಿಯೋ ಬಳಸಿಕೊಳ್ಳುವವರಿಗೆ ಈ ತೀರ್ಪು ಎಚ್ಚರಿಕೆಯ ಘಂಟೆಯಾಗಲಿ.
ಹಾ'ಗೇ' ಸುಮ್ಮನೆ- ಶೈನಿಯ ಕಥೆ ಕೇಳಿದ ಉಮೇಶ, ಇನ್ನು ಮುಂದೆ ಮನೆ ಕೆಲಸಕ್ಕೆ ಹುಡುಗರನ್ನು ಇಡಬೇಕು ಎನ್ನುತ್ತಿದ್ದಾನೆ. ಹಾ'ಗೇ'  ಮಾಡಿದರೆ, ಹೀ'ಗೇ' ಆಗಲಿಕ್ಕಿಲ್ಲ ಎನ್ನುವುದು ಉಮೇಶನ ಅಭಿಪ್ರಾಯ.
                                             -ಡಾ.ಶೆಟ್ಟಿ 
ಎಲ್ಲ ಮುಗಿದಿದೆ. ಮತ್ತೊಂದು ಕನಸಿನ ಆರಂಭದೊಂದಿಗೆ 
ಒಂದೇ ಭಾರತ, ಒಂದೇ ಕನಸು, ಒಂದೇ ಭಯ ಒಂದೇ ಕುತೂಹಲ, ಒಂದೇ ಗುರಿ. ಇದು ನಿನ್ನೆ ಬಿಕೋ ಎನ್ನುತ್ತಿದ್ದ ಎಲ್ಲಾ ಬೀದಿಗಳ, ಎಲ್ಲಾ ಕಂಪೆನಿಗಳ ಎಲ್ಲ ಶಾಲಾ ಕಾಲೇಜುಗಳ ಮೌನದಲ್ಲಿದ್ದ ಒಂದೇ ಮಾತು. ಇತಿಹಾಸಕ್ಕೂ ಮೀರಿದ ಭಾರತ-ಪಾಕ್ ನಡುವಿನ ಕ್ರಿಕೆಟ್ ಪಂದ್ಯದ ಒಂದೇ ಉದ್ದೇಶ. 
ಮೊನ್ನೆ ಗಂಟೆ 2:30 ಯಿಂದ ಶುರುವಾದ ಪಂದ್ಯ, ಸೆಹ್ವಾಗ್ ಅನ್ನೇ ಟಾರ್ಗೆಟ್ ಎಂದು ಹೇಳಿಕೆ ನೀಡಿದ ಉಮ್ಮರ್ ಗುಲ್ ಬೌಲಿಂಗ್ ಅನ್ನು ಎಂದೂ ಯಾರೂ ಕೇಳರಿಯದಂತೆ  ಚಚ್ಚುವ ಮೂಲಕ ಪಾಕಿ Main seamer ನ ಕಾನ್ಫಿಡೆನ್ಸ್ ಕೆಳಗೆ ತಳ್ಳಿ ಅಫ್ರಿದಿಯನ್ನು ತಡಕಾಡುವಂತೆ  ಮಾಡಿ ಇನ್ನೇನು ಪಂದ್ಯ  One sided ಆಗಬಹುದೇ ಎಂಬ ಊಹೆ ಭಾರತೀಯರ ಮನದಲ್ಲಿ ಮೂಡುವ ಸಮಯಕ್ಕೆ ವಹಾಬ್ ನ ಮಾರಕ ಎಸೆತಕ್ಕೆ  ಎಲ್.ಬಿ ಯಾಗಿ ನಿರ್ಗಮಿಸಿದ ಸೆಹ್ವಾಗ್ ಜೊತೆ  One sided  ಪಂದ್ಯವೂ ಕೂಡ ಪೆವಿಲಿಯನ್ ಅಲ್ಲಿ ಕುಳಿತು ಮ್ಯಾಚ್ ವೀಕ್ಷಣೆ ಗೈಯ್ಯಲು ಪ್ರಾರಂಭಿಸಿತ್ತು ಎನ್ನಬಹುದು. ಮತ್ತೆ ಆರಂಭವಾಗಿತ್ತು Tension situation ಸದಾ ವಿಕೆಟ್ ಉರುಳುತ್ತಾ, ಸಣ್ಣ ಸಣ್ಣ Partnership ಜತೆಗೊಳ್ಳುತ್ತಾ ಭಾರತ 260 ರನ್ ಗಡಿ ತಲುಪಿತ್ತು.
ಕ್ರಿಕೆಟ್ ಆರಾಧ್ಯ ದೈವ ಸಚಿನ್ 85 ಮೌಲ್ಯಯುತವಾದ ರನ್ ಗಳಿಸಿ ಭಾರತವನ್ನು ಸುಸ್ಥಿತಿಯ ದಾರಿಗೆ ಹಾಕುವ ಸತತ ಪ್ರಯತ್ನ ಮಾಡುವಲ್ಲಿ 5 ಜೀವದಾನವನ್ನು ಪಡೆದರೆ, ಒಟ್ಟಾರೆಯಾಗಿ ಪಾಕಿಗಳು 6 ಕ್ಯಾಚ್ ಡ್ರಾಪ್ ಮಾಡಿ, ಅತ್ಯಂತ ಕಳಪೆ ಫೀಲ್ಡಿಂಗ್ ಪ್ರದರ್ಶನ ತೋರಿ ನಮಗೆ ಗುರಿ ತಲುಪುವಲ್ಲಿ ಸ್ವಲ್ಪ ಸಹಕಾರಿಯಾದರು  ಎಂದರೂ ತಪ್ಪಲ್ಲ. 
ತದನಂತರ ಶುರುವಾಗಿತ್ತು ವಾಸ್ತವ ಯುದ್ದ. ಬ್ಯಾಟ್ ಹಿಡಿದು ಪಾಕಿಗಳು ಭಾರತೀಯ   ಬೌಲರ್ ಗಳನ್ನೂ ದಂಡಿಸಲು ಪ್ರಾರಂಭಿಸಿದಾಗ, ಈ ಬಾರಿ ನಿರೀಕ್ಷೆ ಹುಸಿಯಾಗುತ್ತೋ ಎಂಬ ಗೊಂದಲ ಭಯ, ನೀರವ ಮೌನ. ಆದರೆ ಛಲ ಬಿಡದ ಭಾರತದ ಜಾಹಿರ್ ಖಾನ್ ಮೊದಲ ವಿಕೆಟ್ ಉರುಳಿಸುವ  ಮೂಲಕ ಭಾರತಕ್ಕೆ ಹೊಸ ಹುರುಪನ್ನು ನೀಡಿದರು. ಮುಂದೆ Regular intervals of time ನಲ್ಲಿ ಪಾಕಿ ವಿಕೆಟುಗಳನ್ನು ಉರುಳಿಸಿ, ಯಾವ ಬ್ಯಾಟ್ಸ್ ಮ್ಯಾನ್ ಗಳೂ ಸರಿಯಾದ Partnership ಮಾಡಲಾಗದಂತೆ ಭಾರತೀಯ ಬೌಲರ್ ಗಳು ಲೈನ್ ಅಂಡ್ ಲೆಂಥ್ ನಲ್ಲಿ ಬೌಲಿಂಗ್ ಮಾಡಿ ಗೆಲುವಿನ ಹಾದಿ ಸುಗಮವಾಗುವಂತೆ ಮಾಡಿದರು. 
ಮಿಸ್ಬಾ ಮತ್ತು ಅಕ್ಮಲ್ ಎಷ್ಟು ಪ್ರಯತ್ನ ಪಟ್ಟರೂ ಪಾಕ್ ಕೊನೆಗೆ ತನ್ನ ಸೋಲನ್ನು ಒಪ್ಪಿಕೊಳ್ಳ ಬೇಕಿತ್ತು. ಮಿಸ್ಬಾನ ವಿಕೆಟ್ ನೊಂದಿಗೆ ಭಾರತೀಯರ ಕನಸು ನನಸಾಗಿತ್ತು. ಅಬ್ಬಬ್ಬಾ! ಅದೆಂತಹ ರೋಮಾಂಚನದ ಕ್ಷಣ. ಕೊನೆಗೂ ಇತಿಹಾಸ ಮರುಕಳಿಸಿಯೇ ಬಿಟ್ಟಿತು. ಪಾಕ್ ಭಾರತದ ಎದುರು ಸೋತೆ ಬಿಟ್ಟಿತು. 
Democracy ವ್ಯವಸ್ಥೆಯಲ್ಲಿ 100 ಕೋಟಿ ಭಾರತೀಯ ಜನತೆ 200 ಕೋಟಿ  ಕನಸುಗಳನ್ನು ಕಾಣುವ ನಮ್ಮ ಜನ, ಒಂದೇ ಕನಸು ಕಾಣುವುದೆಂದರೆ! ಎಷ್ಟೊಂದು ಆನಂದ? ಈಗ ಎಲ್ಲ ಮುಗಿದಿದೆ. ಮತ್ತೊಂದು ಕನಸಿನ ಆರಂಭದೊಂದಿಗೆ. 
Best of luck India. For India vs Srilanka Match                                
                                                              -ಡಾ.ಶ್ರೇ.

Saturday, March 26, 2011

ಲಿಬಿಯಾದ ಗತಿ ಏನು?
ಅಮೆರಿಕಾ ಮಿತ್ರ ರಾಷ್ಟ್ರಗಳು ಲಿಬಿಯಾದಲ್ಲಿ 'ಶಾಂತಿ'ಗಾಗಿ ಹೋರಾಡುತ್ತಿವೆ. ನಾಗರಿಕರ ಪ್ರತಿಭಟನೆಯಿಂದಾಗಿ ಅರಾಜಕತೆ ಉಂಟಾಗಿದ್ದ ಲಿಬಿಯಾದಲ್ಲಿ ಮಿತ್ರರಾಷ್ಟ್ರಗಳ ಸೈನಿಕರ ಬೂಟಿನ ಸದ್ದು ಕೇಳಿಸುತ್ತಿದೆ. ಮಿತ್ರರಾಷ್ಟ್ರಗಳ ಹೋರಾಟಕ್ಕೆ ವಿಶ್ವಸಂಸ್ಥೆ ಕೂಡ ಹಸಿರು ನಿಶಾನೆ ತೋರಿದೆ. 
ಲಿಬಿಯಾದಲ್ಲಿ ಪ್ರಜಾಪ್ರಭುತ್ವದ ಹೋರಾಟಕ್ಕೆ ಬೆಂಬಲ ನೀಡುವುದು ಪ್ರಶಂಸನೀಯ, ಆದರೆ ಶಾಂತಿ ಸ್ಥಾಪನೆಯ ಹೆಸರು ಹೇಳಿಕೊಂಡು ಮುಗ್ದ ಜನರ ಹತ್ಯೆಯಾಗುವುದು ಎಷ್ಟು ಸರಿ?
ಲಿಬಿಯಾದಲ್ಲಿ ಶಾಂತಿ ಸ್ಥಾಪಿಸಲು ಅಮೆರಿಕಾ ಮಾಡಿಟ್ಟಿರುವ ಪ್ರಯತ್ನದಲ್ಲಿ ಸ್ವಹಿತಾಸಕ್ತಿ ಇರುವುದು ಮಾತ್ರ ಸ್ಪಷ್ಟ ಸಂಗತಿ, ಯಾಕೆಂದರೆ ಅಮೆರಿಕಾ ಎಂಬ ಕುತಂತ್ರಿ ರಾಷ್ಟ್ರ ಲಾಭವಿಲ್ಲದೆ ಯಾವ ಕೆಲಸವನ್ನು ಕೂಡ ಮಾಡುವುದಿಲ್ಲ! ಅಮೆರಿಕಾದ ಕುತಂತ್ರವನ್ನು ತಿಳಿದುಕೊಳ್ಳಲು ಸೌದಿ ಅರೇಬಿಯಾ ಎಂಬ ದೇಶದ ಇತಿಹಾಸವನ್ನು ಒಮ್ಮೆ ನೆನಪು ಮಾಡಿಕೊಳ್ಳಿ.. 
ಅದೊಂದು ಕಾಲ, ಸೌದಿ ಎಂಬ ಪುಟ್ಟ ರಾಷ್ಟದಲ್ಲಿ ತೈಲ ಸಂಪತ್ತು ಅಪಾರವಾಗಿದೆ ಎಂಬ ವಿಚಾರ ಜಗತ್ತಿನ ಯಾವ ದೇಶಕ್ಕೂ ಗೊತ್ತಿರಲಿಲ್ಲ, ಆಗ ಸೌದಿಯನ್ನು ಹಷಿಮೈತ್ ಮತ್ತು ಸೌದಿ ಎಂಬ ೨ ರಾಜ ವಂಶಗಳು ಆಳುತ್ತಿದ್ದವು. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟರೆ ಸೌದಿ ಶಾಂತವಾಗಿಯೇ ಇತ್ತು. ಆದರೆ ಯಾವಾಗ ಸೌದಿಯ ಗರ್ಭದಲ್ಲಿ ತೈಲ ನಿಕ್ಷೇಪಗಳು ಇದೆ ಎಂಬ ವಿಚಾರ ಗೊತ್ತಾಯಿತೋ, ಅಮೆರಿಕಾದ ಕಿವಿ ನೆಟ್ಟಗಾಯಿತು, ಹೇಗಾದರೂ ಮಾಡಿ ಸೌದಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದಿತು. ಅದಕ್ಕಾಗಿ ಹಷಿಮೈತ್ ರಾಜ ವಂಶದ ಮೇಲೆ ಸೌದಿಯ ರಾಜರನ್ನು ಎತ್ತಿ ಕಟ್ಟಿದರು, ಸೌದಿ ರಾಜ ವಂಶಕ್ಕೆ ಆಯುಧ, ಸೈನ್ಯ ಮುಂತಾದ ಬೆಂಬಲ ನೀಡಿ, ಹಷಿಮೈತ್ ಗಳನ್ನು ನಿರ್ನಾಮ ಮಾಡಿ ಬಿಟ್ಟರು. ಅದರ ಫಲವಾಗಿ ಇಂದಿಗೂ ಸೌದಿ ಎಂಬ ರಾಷ್ಟ್ರ ದೊಡ್ಡಣ್ಣನಿಗೆ ನಿಷ್ಠವಾಗಿಯೇ ಇದೆ! ಸೌದಿಯಲ್ಲಿ ನಡೆಯುವ ತೈಲ ವ್ಯವಹಾರದಲ್ಲಿ ಅಮೆರಿಕಾಕ್ಕೆ ಸಿಂಹಪಾಲು ದೊರೆಯುತ್ತಿದೆ, ಸೌದಿ ದೊರೆಯ ಆಸ್ಥಾನದಲ್ಲಿ ಅಮೆರಿಕಾದ ಪ್ರತಿನಿಧಿ ಇದ್ದಾನೆ, ಅವನು ಹೇಳಿದಕ್ಕೆಲ್ಲ ತಲೆಯಾಡಿಸುವುದೆ ಸೌದಿ ದೊರೆಯ ಕೆಲಸ!
ಲಿಬಿಯಾ ಎಂಬ ದೇಶ ಕೂಡ ತೈಲ ಸಂಪತ್ತಿನಿಂದ ಸಮೃದ್ಧವಾಗಿದೆ, ನಾಗರಿಕರ ದಂಗೆಯ ಹೆಸರು ಹೇಳಿಕೊಂಡು ಅಮೆರಿಕಾ ಅಲ್ಲಿ ತನ್ನ ಬೇಳೆ ಬೇಯಿಸುವ ಪ್ರಯತ್ನ ಮಾಡುತ್ತಿದೆ, ಅದರಲ್ಲಿ ಯಶಸ್ಸು ಕೂಡ ಪಡೆಯಬಹುದು. ಆದರೆ ಹಾಗಾಗದಿರಲಿ ಎಂಬುವುದೇ ಎಲ್ಲರ ಹಾರೈಕೆ. 
ಲಿಬಿಯಾದಲ್ಲಿ ಪ್ರಜಾಪ್ರಭುತ್ವ ಬರಲಿ, ಆದರೆ ಮುಗ್ಧ ನಾಗರಿಕರ ಮತ್ತು ಅಮೆರಿಕಾದ ಅಟ್ಟಹಾಸ ನಿಲ್ಲಲಿ.
ಹಾಗೇ ಸುಮ್ಮನೆ - ಜಪಾನ್ ನಲ್ಲಿ ಸುನಾಮಿ ಬರಲು ಅಮೆರಿಕಾ ಕಾರಣ ಎಂಬ ಹೊಸ ವಾದವನ್ನು ಕೇಳಿದ ಉಮೇಶ, ನಮ್ಮ ಉತ್ತರ ಕರ್ನಾಟಕದಲ್ಲಿ ಕೂಡ ನೆರೆ ಬರಲು ಅಮೆರಿಕಾವೇ ಕಾರಣವಾಗಿರಬಹುದು ಎಂದು ಶಂಕಿಸುತ್ತಿದ್ದಾನೆ.
                                                                         -ಡಾ.ಶೆಟ್ಟಿ 

ಯಪ್ಪಾ! ನಮ್ಮೂರಲ್ಲಿ ಹಿಂಗೆಲ್ಲಾ ಇಲ್ಲಪ್ಪಾ!!!
ಒಂದು ಕೆಲಸದಿಂದ ನುಸುಳಿಕೊಂಡು ನಾವು ಹಲವು ದಾರಿಗಳನ್ನು ಹುಡುಕುತ್ತೇವೆ. ಇದು ನಮ್ಮ ಸಂಸ್ಕೃತಿಯಲ್ಲೇ ಬಂದಿದೆ. ಇನ್ನೂ ರಸ್ತೆಗಳನ್ನು ಕಾಣದ ಅದೆಷ್ಟೋ ಊರುಗಳು ನಮ್ಮ ದೇಶದಲ್ಲಿ ಇದೆ. ಮೂಲಭೂತ ಸೌಕರ್ಯ ದೊರಕದ ಕುಟುಂಬಗಳಿವೆ. ಒಂದೂರಿನಿಂದ ಇನ್ನೊಂದು ಊರಿಗೆ ಸಂಬಂಧ ಕಲ್ಪಿಸುವ ಸೇತುವೆಗಳು ಶಿಫಾರಸ್ಸಾಗಿ ಹಾಗೆ ಉಳಿದಿವೆ. Family drama ನಡೆಸಲೆಂದೇ ಸಂಸತ್ತಿನಲ್ಲಿ ಅಧಿವೇಶನಗಳು ನಡೆಯುತ್ತಲೇ ಇರುತ್ತವೆ. ಒಂದು ಹೊತ್ತು ಸಾಮಾನ್ಯನ ಬಗ್ಗೆ ಯೋಚಿಸುವ ಲೀಡರ್ ಇಲ್ಲವೆಂದೇ ಹೇಳಬಹುದು. 
ಜಪಾನ್ನಲ್ಲಿ ಮಾರ್ಚ್ 11 ರಂದು ನಡೆದ ಸುನಾಮಿ ಭೂಕಂಪನಗಳಿಂದ ಜೀವ ಹಾನಿಯೊಂದಿಗೆ ಎದ್ದು ನಿಲ್ಲಲಾಗದ ರೀತಿಯಲ್ಲಿ ಕುಸಿದು ಬಿದ್ದಂತೆ ದೇಶದ ಸ್ಥಿತಿಯು ಕಾಣುತ್ತಿತ್ತು. ಆದರೆ ಅವರು ನಮ್ಮವರಂತಲ್ಲ. ಜಪಾನಿನ ನಾಕಾದ ಗ್ರೇಟ್ ಕಾಂಟೋ ಹೆದ್ದಾರಿ ಸುನಾಮಿ ಭೂಕಂಪದಿಂದ ಛಿದ್ರಗೊಂಡಿದ್ದರೂ ಮಾರ್ಚ್ 17 ರಂದು ಶುರು ಹಚ್ಚಿದ ದುರಸ್ತಿ ಕಾರ್ಯವು ಮತ್ತೆ ಆರೇ ದಿನಗಳಲ್ಲಿ ಪೂರ್ಣಗೊಂಡು ಮೊದಲಿನಂತೆ ಕಂಗೊಳಿಸುತ್ತಿದೆ. ಇದನ್ನು ಸರಿಯಾಗಿ ಗಮನಿಸಿದಾಗ ಜಪಾನ್ ಗೆ ಜಪಾನ್ ಮಾತ್ರ ಸಾಟಿ ಎನ್ನಬಹುದು. 
ಯಾವುದೇ ಕಾರ್ಯಗಳು ಆಗಬೇಕು ಎಂದಿದ್ದಲ್ಲಿ ದೃಢ ನಿಶ್ಚಯ ಮತ್ತು Hard work ಇದ್ದರೆ ಅದು ಆಗಿಯೇ ತೀರುತ್ತದೆ. 
ನಮ್ಮಲ್ಲಿ ಯಾಕೆ ಇಂತಹ ಚುರುಕು ಕೆಲಸಗಳು ನಡೆಯುತ್ತಿಲ್ಲ? ನಮ್ಮಲ್ಲಿರುವ ದೋಷವಾದರೂ ಏನು? ಮುಕ್ತಿಯಾದರೂ ಹೇಗೆ? ನಮ್ಮ ಜನರು ಕಣ್ಣಿಗೆ ಬ್ರಹ್ಮ ಗಂಟನ್ನೇ ಕಟ್ಟಿದ ಕಣ್ಣು ಪಟ್ಟಿಯನ್ನು ಕಟ್ಟಿ ಕುಳಿತ್ತಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ.
                                                                                 -ಕೆ.ಪಿ.ಭಟ್ 

Thursday, March 17, 2011

ಪುನಃ ಭಿನ್ನಮತ?
ಯಡಿಯೂರಪ್ಪನವರ ಗ್ರಹಗತಿ ಚೆನ್ನಾಗಿಲ್ಲವೋ? ಅಥವಾ ರಾಜ್ಯದ ಗ್ರಹಚಾರ ಸರಿಯಾಗಿಲ್ಲವೋ ಗೊತ್ತಿಲ್ಲ, ಒಟ್ಟಿನಲ್ಲಿ ರಾಜ್ಯದಲ್ಲಿ ಬಿ.ಜೆ.ಪಿ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದ, ದಿನಕ್ಕೊಂದು ವಿವಾದ ಹುಟ್ಟಿಕೊಳ್ಳುತ್ತಲೇ ಇದೆ. 
'ನಮ್ಮನ್ನು ಸರಿಯಾಗಿ ಆಡಳಿತ ನಡೆಸಲು ಪ್ರತಿಪಕ್ಷದವರು ಬಿಡುತ್ತಿಲ್ಲ' ಎಂದು ಯಡಿಯೂರಪ್ಪನವರು ಬೊಬ್ಬೆ ಹಾಕಿದರೆ, 'ನಿಮ್ಮಷ್ಟು ಭ್ರಷ್ಟ ಮುಖ್ಯಮಂತ್ರಿ ದೇಶದಲ್ಲೇ ಇಲ್ಲ' ಎಂದು ಪ್ರತಿಪಕ್ಷಗಳು ಕೂಗೆಬ್ಬಿಸುತ್ತಿವೆ. ಯಡಿಯೂರಪ್ಪನವರಿಗೆ ಪ್ರತಿಪಕ್ಷಗಳ ತೊಂದರೆ ಒಂದೆಡೆಯಾದರೆ, ಪಕ್ಷದಲ್ಲೇ ಇರುವ ಭಿನ್ನರದು ಇನ್ನೊಂದು ಕಿರಿಕಿರಿ. ಜನಾರ್ಧನ ರೆಡ್ಡಿಯವರು ಆರಂಭ ಮಾಡಿದ  ಭಿನ್ನಮತದ ಸಂಪ್ರದಾಯ, ನಿನ್ನೆ ಅನಂತ್ ಕುಮಾರ್, ಈಶ್ವರಪ್ಪ ರ ವರೆಗೆ ಮುಂದುವರೆದಿದೆ. 
ಪ್ರೇರಣಾ ಹಗರಣದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುತ್ತದೆ ಎಂದು, ಬಿ.ಜೆ.ಪಿಯ ಕೆಲ ಶಾಸಕರು ನಿನ್ನೆ ಮುಖ್ಯಮಂತ್ರಿಯವರನ್ನು ವಿರೋಧಿಸಿ ಗುಪ್ತ ಸಭೆ ನಡೆಸಿದರು. ಅಲ್ಲಿಗೆ ತನ್ನ ಬೆಂಬಲಿಗ ಶಾಸಕರೊಡನೆ ನುಗ್ಗಿ, ಅಲ್ಲಿ ಏನೇನೋ ಮಾಡಿ, ಹೊರ ಬಂದಾಗ ಸಿಕ್ಕ ಡ್ರೈವರ್ ಮಹಾಶಯನಿಗೆ ಬಡಿದ ಯಡ್ಡಿಯವರನ್ನು, ನಿನ್ನೆ ನೀವು ದೃಶ್ಯಮಾಧ್ಯಮದಲ್ಲಿ ನೋಡಿರುತ್ತೀರಿ. 
ಪ್ರೇರಣಾ ಟ್ರಸ್ಟ್ ವಿಚಾರದಲ್ಲಿ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಬೀಸುತ್ತಿದೆ. ಬಿ.ಜೆ.ಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ವಿಧಾನಸಭೆಯಲ್ಲಿ ಕೂಡ ಸುಗಮ ಕಲಾಪ ನಡೆಸಲು ಪ್ರತಿಪಕ್ಷಗಳು ಬಿಡುತ್ತಿಲ್ಲ. ಈ ಕಾರಣದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸದ್ಯಕ್ಕಂತೂ ಫುಲ್ ಸ್ಟಾಪ್. ಉಪಚುನಾವಣೆ ಕೂಡ ಹತ್ತಿರವಿರುವುದರಿಂದ, ಬಿ.ಜಿ.ಪಿ ಆಂತರಿಕ ಬಿಕ್ಕಟ್ಟನ್ನು ಹೇಗೆ ನಿರ್ವಹಿಸುತ್ತದೆ ಎಂಬುವುದು ಈಗ ಎಲ್ಲರ ಮುಂದಿರುವ ಪ್ರಶ್ನೆ.
ಹಾಗೇ ಸುಮ್ಮನೆ- 'ಪಕ್ಷದಲ್ಲಿ ಭಿನ್ನಮತವಿಲ್ಲ' ಎಂಬ ಯಡ್ಡಿಯವರ ಮಾತು ಕೇಳಿದ ಉಮೇಶನಿಗೆ ನಗು ಬಂತಂತೆ. ಯಾಕೆಂದರೆ ಎಲ್ಲವೂ ಸರಿಯಾಗಿರುವ ವ್ಯಕ್ತಿ 'ನಾನು ಸರಿಯಾಗಿದ್ದೇನೆ' ಎಂದು ಹೇಳಿಕೊಂಡು ತಿರುಗಿದಾಗ ತಾನೆ ಪಕ್ಕದವರಿಗೆ doubt ಬರೋದು, ಏನೋ ಚೂರು ಎಡವಟ್ಟಾಗಿದೆ ಎಂದು. 
                                                                                -ಡಾ.ಶೆಟ್ಟಿ 
ಕಹಿ ಕಹಿ ನೆನಪು..
ಮೋಪ್ಲಾ ಕಾಂಡದ ನೆನಪು ಮಾಡಿದ ಕೂಡಲೇ ಕಣ್ಣಿಗೆ ಕಟ್ಟಿದಂತೆ ಆಗುವುದು ಹಿಂದೂಗಳ ಮಾರಣ ಹೋಮ. ಇದರ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ ವಹಿಸಿದಂತೆ ವಿಕೃತಿಗಳು ಮತ್ತಷ್ಟು ಜನನವಾಗುತ್ತಲೇ ಹೋಗುತ್ತವೆ. ಇಲ್ಲಿ ಒಂದು ರೀತಿಯ ವಿಚಿತ್ರ ವಿಕೃತ ಮನೋಭಾವವನ್ನು ನಾವು ಕಾಣಬಹುದು. 
ಗಾಂಧೀ ಪ್ರವರ್ತಿತ ಕಿಲಾಫಾತ್ ಚಳುವಳಿಯ ನೇರ ಪರಿಣಾಮವಾಗಿ 1921 ರಲ್ಲಿ ಕೇರಳದಲ್ಲಿ ನಡೆದ ಮೋಪ್ಲಾ ಬಂಡಾಯದ ಚಿತ್ರಣ ಮುಂದೆ ಕಾಡ್ಗಿಚ್ಚಿನಂತೆ ಬೆಳೆಯುತ್ತಲೇ ಹೋಗುತ್ತದೆ. 
ಮೊಪ್ಲಾಗಳು(ಮಾಪಿಳ್ಳೆ) ಶ್ರೀಮಂತ ಹಿಂದೂ ಮಹಿಳೆಯರನ್ನು ಮುಸ್ಲಿಂ ಕೂಲಿಗಳಿಗೆ ಮದುವೆ ಮಾಡಿ ಕೊಟ್ಟರು. ನಂತರ ಅತ್ಯಾಚಾರವನ್ನು ದಿನದೂಟದಂತೆ ಮಾಡುತ್ತಿದ್ದರು. ಇದರ ಎಲ್ಲದರ ಎದುರುಗಡೆ ಹೋರಾಡಲಾಗದೆ ಮಹಿಳೆಯರು ಉಡಲು ಸರಿಯಾದ ಬಟ್ಟೆಗಳಿಲ್ಲದೆ ದಟ್ಟ ಕಾಡಿನಲ್ಲಿ ಅವಿತು ಕುಳಿತರು. ಆಗಿನ ವೈಸರಾಯ್ ಪತ್ನಿಗೆ ಪತ್ರಗಳ ಮೂಲಕ ತಮ್ಮ ಗೋಳನ್ನು ಹೇಳಿಕೊಂಡು ಅಂಗಲಾಚಿದರು. ಈ ರೀತಿ ಚಳುವಳಿಯ ಇನ್ನೊಂದು ಕರಾಳ ಮುಖ ನಮಗೆ ಕಾಣ ಸಿಗುತ್ತದೆ.
                                                               -ಕೆ.ಪಿ.ಭಟ್     

Tuesday, March 15, 2011

ಎಂದೂ ಮರೆಯದ ಮಹಾನ್ ಯೋಧ!
ಎಲ್ಲವೂ ಸರಿಯಾಗಿದ್ದರೆ ಆತ ಇಂದು ತನ್ನ ಬೆಂಗಳೂರಿನ ಮನೆಯಲ್ಲಿ, ಹುಟ್ಟು ಹಬ್ಬದ ಕೇಕು ಕತ್ತರಿಸುತ್ತಾ ಇರುತ್ತಿದ್ದ. ಎಲ್ಲರಂತೆ ಎಂಜಿನಿಯರಿಂಗ್, ಮೆಡಿಕಲ್ ಆಯ್ದುಕೊಂಡಿದ್ದರೆ ಇಂದು ಆತ ಅವನ ಗರ್ಲ್ ಫ್ರೆಂಡ್ ಜೊತೆ, ಕಾಫಿ ಡೇ ಯಲ್ಲಿ ಕಾಫಿ ಹೀರುತ್ತಿದ್ದ. ಆದರೆ ಆತ ಹಾಗಾಗಲಿಲ್ಲ, ದೇಶ ಸೇವೆಗೆ, ದೇಶಭಕ್ತಿಗೆ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟ. ದೇಶದ ಮಾನ ಕಾಪಾಡಲು ತನ್ನ ಪ್ರಾಣವನ್ನೇ ಬಲಿ ನೀಡಿದ, ಈತನೇ ದೇಶ ಕಂಡ  ಮಹಾನ್ ಯೋಧ, ಅಶೋಕಚಕ್ರ ದಿ.ಮೇಜರ್ ಸಂದೀಪ್ ಉನ್ನಿಕೃಷ್ಣನ್! 
ಅಂದು ನವೆಂಬರ್, 26 , 2008 ದೇಶದ ವಾಣಿಜ್ಯನಗರಿ ಮುಂಬೈ, ಪಾಕ್ ಉಗ್ರಗಾಮಿಗಳ ದಾಳಿಗೊಳಗಾಯಿತು. ಕೆಲ ಷಂಡ ಉಗ್ರಗಾಮಿಗಳ ಕುತಂತ್ರಕ್ಕೆ ದೇಶ ಮುಗ್ಧ ನಾಗರಿಕರ ಜೊತೆ ಕೆಲ ಧೀರ ಯೋಧರನ್ನು ಕೂಡ ಕಳಕೊಂಡಿತು. ಅದರಲ್ಲಿ N.S.G (national security guards) ನ ಯೋಧ ಸಂದೀಪ್ ಉನ್ನಿಕೃಷ್ಣನ್ ಒಬ್ಬರು.
ದೇಶದ ಯುವಕರು ಪಬ್ಬು, ಕ್ಲಬ್ಬು, ಹೆಣ್ಣು, ಹೆಂಡ ಎಂದು ತಿರುಗುವಾಗ, ಸಂದೀಪ್ ದೇಶ ಕಾಯುವ ಯೋಧನಾಗಬೇಕು ಎನ್ನುವ ಕನಸು ಕಂಡವರು. ಇವರಿಗೆ ಬಾಲ್ಯದಲ್ಲೇ ಅವರ ತಂದೆ ತಾಯಿಗಳು ದೇಶಭಕ್ತಿಯ ಶಿಕ್ಷಣವನ್ನು ಜೋಡಿಸಿದ್ದರು. ಸಂದೀಪ್ ಅವರು ಎಂಜಿನಿಯರ್, ಡಾಕ್ಟರ್ ಆಗಿ ಲಕ್ಷ ಲಕ್ಷ ಎನಿಸಬೇಕು ಎನ್ನುವ ಲಕ್ಷ್ಯವನ್ನು ಹೊಂದದೆ, ದೇಶದಲ್ಲೇ ಅತ್ಯುನ್ನತವಾದ N.S.G ಯಲ್ಲಿ ಯೋಧನಾಗಿ ಸೇರಿಕೊಂಡರು ಆದರೆ ದುರ್ಧೈವವೆಂದರೆ, ಸಂದೀಪ್ ಎನ್ನುವ ದೀಪ ಪ್ರಕಾಶಮಾನವಾಗಿ ಉರಿಯುತ್ತಿರುವಾಗಲೇ ನಂದಿ ಹೋಯಿತು. ಅದು ದೇಶಕ್ಕಾದ ಮಹಾನ್ ನಷ್ಟ.
ಇಂದು ಸಂದೀಪ್ ಅವರ 34 ನೇ ಹುಟ್ಟುಹಬ್ಬ, ಅವರಂತಹ ಧೀರ ಯೋಧ ನಮ್ಮೊಂದಿಗೆ ಇರದಿರುವುದು ದುರಂತ. ಬೆಂಗಳೂರಿನ ಸಂದೀಪ್ ಅವರ ಮನೆಯಲ್ಲಿ ತಂದೆ ತಾಯಿ, ಅವರ ಪೋಟೋದ ಎದುರು ಅಳುತ್ತಿದ್ದರೆ, ಇತ್ತ ಮುಂಬೈ ದಾಳಿಯ ಉಗ್ರ ಕಸಬ್; ನಮ್ಮ ದೇಶದ ಜೈಲಿನಲ್ಲಿ ಕೂತು ಹೊಟ್ಟೆಭರ್ತಿ ತಿನ್ನುತ್ತಿದ್ದಾನೆ! ನಿಜಕ್ಕೂ ನಮ್ಮ ಭಾರತ ಗ್ರೇಟ್!
                                                              -ಡಾ.ಶೆಟ್ಟಿ 

Thursday, March 10, 2011

ಮುಗ್ಧ ಮನಸ್ಸಿನ ಚಲಿಸುವ ದೇವತೆ 
ಅಮ್ಮ ಹೇಳಿದ 8 ಸುಳ್ಳುಗಳನ್ನು ಕೇಳಿದ ಮೇಲೆ ನನ್ನ ಕಣ್ಣುಗಳಲ್ಲಿ ನೀರು ತುಂಬಿತ್ತು. ಆಕೆ ಹರಿದ ಸೀರೆ ಉಟ್ಟಿದ್ದಾಳೆ, ಮನೆ ಕೆಲಸವೂ ಯಾವತ್ತೂ ಆಕೆಗೆ ಬೋರ್ ಅನಿಸಿಲ್ಲ. ಕೆಲವೊಮ್ಮೆ ಎದೆ ನೋವಿನಿಂದ ಬಳಲುತ್ತಾಳೆ. ಯಾವತ್ತೂ ಆ ನೋವಿನ ಬಗೆಗೆ ತನ್ನ ಅಳಲು ತೋರಿಲ್ಲ. ನಾವು ಯಾರೂ ಇನ್ನೂ ಆಕೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ. ಆದರು ಸದಾ ನಮ್ಮ ನೋವಿಗೆ ಹೆಗಲು ನೀಡುತ್ತಲೇ ಬಂದಿದ್ದಾಳೆ. 
ಓ ಅಮ್ಮ ನೀನೆಷ್ಟು ಒಳ್ಳೆಯವಳು? 
 ಅಮ್ಮನ ಬಗ್ಗೆ ನನಗೆ ಬರೆಯಬೇಕು ಎಂದೆನೆಸಿಯೇ ಇಲ್ಲ. ಆದರೆ 'ಅಮ್ಮ ಹೇಳಿದ 8 ಸುಳ್ಳುಗಳು' ಎಂಬ ಬರಹವನ್ನು ಓದಿದಾಗ ಮನಸ್ಸು ಕರಗಿ ಆಕೆಯ ಬಗ್ಗೆ ಬರೆಯುತ್ತಿದ್ದೇನೆ. 
Sorry ಅಮ್ಮ, ನಾನು ಹೊಟ್ಟೆ ಭರ್ತಿ ಉಂಡು ಬಂದಾಗಲೂ ಸ್ವಲ್ಪ ಅನ್ನ ಇದ್ದರೂ ನನಗೆ ಊಟ ಆಗಿದೆ, ನೀನು ಊಟ ಮಾಡು ಎಂದು ಯಾಕೆ ಹೇಳಿದೆ? ನೀನು ಎಂದೂ ನನ್ನ ಬಿಟ್ಟು ಉಂಡಿಲ್ಲ. ಕೇಳಿದರೆ ಹಸಿವಿಲ್ಲ ಎನ್ನುತ್ತೀಯ. ಮನೆಯ ಸಮಸ್ಯೆ ಬಗ್ಗೆ ಸಮಸ್ಯೆ ಇದೆ ಎಂದು ನಮ್ಮನ್ನು ಯಾವತ್ತೂ ಗಲಿಬಿಲಿಗೊಳಿಸಿಲ್ಲ.
ಅಪ್ಪ ತೀರಿಹೋದಾಗ ಅತ್ತಿದ್ದೀಯ. ನಿನ್ನ ಕಣ್ಣಿನ ನೀರಿನಲ್ಲಿ ನನ್ನ ಮತ್ತು ಅಕ್ಕನವರ ಪ್ರತಿಬಿಂಬ ನೋಡಿದ್ದೇನೆ. ನಂತರ ಯಾವತ್ತೂ ಅತ್ತಿಲ್ಲ ನೀನು. ಅಳುವ ಸಂದರ್ಭ ಅದೆಷ್ಟೋ ಬಂದಿದೆ. ಆ ಸಂದರ್ಭದಲ್ಲಿ ಮುಗುಳು ನಗು ನಕ್ಕಿದ್ದೀಯ. ಸಂಬಂಧಿಕರ ಕಟು ಮಾತುಗಳಿಗೆ  ಯಾವತ್ತೂ ತಿರುಗುತ್ತರ ನೀಡಿಲ್ಲ. ನಿನ್ನ ಮಕ್ಕಳ ಬೌದ್ದಿಕ ಬೆಳವಣಿಗೆಯನ್ನು ಎದುರು ನೋಡುತ್ತಿರುವ ನಿನಗೆ ಯಾವ ಸಮಸ್ಯೆಗಳೂ ಕಾಣಿಸುತ್ತಿಲ್ಲ.
ಇದು ನನ್ನ ಅನುಭವ. ಅನುಭವಗಳ ಪಟ್ಟಿಗಳನ್ನು ಹೀಗೇ ರಾಶಿ ಹಾಕಬಹುದು. ನಿಮ್ಮಲ್ಲೂ ಅದೆಷ್ಟೋ ಅಮ್ಮಂದಿರು ಹೀಗೇ ಇರಬಹುದು. ಅವರನ್ನು ಅರ್ಥ ಮಾಡಿಕೊಳ್ಳಿ. 
ನನ್ನ ಅಮ್ಮ ಮುಗ್ಧ ಮನಸ್ಸಿನ ಚಲಿಸುವ ದೇವತೆ.  
                                 -ಕೆ.ಪಿ.ಭಟ್ 
            ಹೃದಯ ವೈಶಾಲ್ಯತೆ ಅಗತ್ಯ 
ಇನ್ನೇನು ವಿಶ್ವ ಕನ್ನಡ ಸಮ್ಮೇಳನ ಪ್ರಾರಂಭವಾಗಲು ಕ್ಷಣಗಣನೆ ಆರಂಭವಾಗಿದೆ. ಬೆಳಗಾವಿಯು ಎಲ್ಲಾ ಪೂರ್ವ ತಯಾರಿಯೊಂದಿಗೆ ಸಮ್ಮೇಳನವನ್ನು ಆಯೋಜಿಸಲು ಸಂಪೂರ್ಣ ತಯಾರಿ ನಡೆಸಿ ಕನ್ನಡಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಸರಕಾರವು ವಿಶ್ವಕನ್ನಡ ಸಮ್ಮೇಳನವನ್ನು ಬಹಳ ಸೂಕ್ಷ್ಮವಾಗಿ ಪರಿಗಣಿಸಿದೆ ಎನ್ನಬಹುದು. ತಯಾರಿಯ ಸಂದರ್ಭದಿಂದಲೇ ವಿಶ್ವಕನ್ನಡ ಸಮ್ಮೇಳನದ ಸುದ್ದಿ ಪತ್ರಿಕೆಗಳಲ್ಲಿ ಬಿಖರಿಯಾಗಿತ್ತು. 'ಉತ್ತಮ ಮೌಲ್ಯದೊಂದಿಗೆ!' 
ಈಗ ಇದೇ ವಿಶ್ವಕನ್ನಡ ಸಮ್ಮೇಳನದಿಂದ ಪತ್ರಿಕೆಗಳಿಗೆ ಮತ್ತೆ ಮುಖಪುಟ ಸುದ್ದಿಯೊಂದು ದೊರೆತಿದೆ. ಏನೆಂದರೆ, ಸಮ್ಮೇಳನ ಸಂಘಟಕರ ಆಹ್ವಾನ ಅಧ್ವಾಂತ. ಸಮ್ಮೇಳನದ ಆಹ್ವಾನದ ವಿಚಾರದಲ್ಲಿ ಸಂಘಟಕರ ನಿರ್ಲಕ್ಷ್ಯ ಎದ್ದು ಕಂಡಿದೆ. ಇದಕ್ಕೆ ಮೊದಲನೆಯ ಕಾರಣ ಎಂದರೆ, ಬೆಳಗಾವಿಯ ಮೇಯರ್ ಎನ್.ಬಿ. ನಿರ್ವಾಣಿಯವರ ರಾಜಿನಾಮೆ. ತಮಗೆ ಸಮ್ಮೇಳನದ ಪೂರ್ವತಯಾರಿಯಲ್ಲಿ ಸರಿಯಾದ ಜವಾಬ್ದಾರಿ ನೀಡಿಲ್ಲ ಹಾಗು ಸಮ್ಮೇಳನಕ್ಕಾಗಿ 700 ಗೂಡಂಗಡಿಗಳನ್ನು ತೆರವು ಮಾಡುವಾಗ ಅಧಿಕಾರಿಗಳು ಮತ್ತು ಉಸ್ತುವಾರಿ ಸಚಿವರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಮತ್ತು ಎಲ್ಲದಕ್ಕಿಂತ ಮುಖ್ಯ ಕಾರಣವೆಂದರೆ, ವಿಶ್ವ ಕನ್ನಡ ಸಮ್ಮೇಳನಕ್ಕೆ ತಮಗೆ ಆಹ್ವಾನವೇ ನೀಡಿಲ್ಲದಕ್ಕಾಗಿ ರಾಜಿನಾಮೆ ನೀಡಿ, ಮೇಯರ್ ಆದಾಗಕ್ಕಿಂತ ತುಸು, ಯಾಕೆ? ಬಹಳವೇ ಸುದ್ದಿಯಾಗಿದ್ದಾರೆ. ಸಂಘಟಕರು ಯಾವುದನ್ನು ತಲೆಯಲ್ಲಿ ಇಟ್ಟುಕೊಂಡು ಇವರನ್ನು ಈ ರೀತಿ ನಡೆಸಿಕೊಂಡರೋ ಗೊತ್ತಿಲ್ಲ. ಆದರೆ, ಮೇಯರ್ ಆದವರಿಗೆ ಆಹ್ವಾನ ಪತ್ರಿಕೆಯನ್ನು ಮಾತ್ರ ಕಳುಹಿಸಬೇಕಿತ್ತು. ಇದು ಕಾರ್ಯಕ್ರಮದ ಶಿಸ್ತೂ ಹೌದು. 
ಇದೊಂದೇ ಆಗಿದ್ದರೆ, ಏನೋ ಮರೆತು ಬಿಟ್ಟಿದ್ದಾರೋ ಎಂದು ಊಹಿಸಬಹುದಿತ್ತು. ಆದರೆ ಆಹ್ವಾನದಿಂದ ವಂಚಿತರಾದವರ ಪಟ್ಟಿಯಲ್ಲಿ ಕನ್ನಡ ನುಡಿ ತೇರು ಮೂಲಕ ಜಾಗೃತಿ ಜಾಥಾ ನಡೆಸಿ, ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ರಮೇಶ್ ಝಾಳಕಿ ಇದ್ದಾರೆ. ಇವರನ್ನೂ ಮರೆತು ಹೋಗಿದ್ದಾರೆ ಎಂದರೆ ನಂಬಬಹುದು. ಆದರೆ, ಕನ್ನಡ ನಾಡಿನ ಅಭೂತಪೂರ್ವ ವ್ಯಕ್ತಿತ್ವ, ಸದಾ ಸಂಚಾರಿ ಭಾವದ, ಹುಚ್ಚು ಮುಂಡೆ ಮದುವೇಲಿ ಉಂಡೋನೆ ಜಾಣ ಎಂಬ ಪಾಲಿಸಿಯ, ವಟ ವಟ ಮಾತಿನ ವಾಟಾಳ್ ನಾಗರಾಜ್ ಅವರನ್ನು ನಿರ್ಲಕ್ಷಿಸಿರುವುದು Pre planned agenda ವೆ? ಎನ್ನುವ ಆಲೋಚನೆಯತ್ತ ನಮ್ಮನ್ನು ಕೊಂಡೊಯ್ಯುತ್ತದೆ. 
ಇದೆಲ್ಲದರ ನಡುವೆ, ಚಂದ್ರು ಅವರು ಈ ವಿಚಾರದ ಬಗೆಗೆ ಯಾವ ತಗಾದೆಯೂ ತೆಗೆಯದೆ ತಾವು ಸಮ್ಮೇಳನದಲ್ಲಿ ಭಾಗವಹಿಸಿ ಬರುತ್ತೇನೆ ಎಂದು ಹೃದಯ ವೈಶಾಲ್ಯತೆಯನ್ನು ಮೆರೆದು, ಆಯೋಜಕರಿಗೆ ಮುಜುಗರ ಆಗುವಂತೆ ಮಾಡಿದ್ದಾರೆ. ಯಾವುದೇ ರಾಜಿನಾಮೆ, ಪತ್ರಿಕೆಯಲ್ಲಿ ಬರೆಸುವುದು, ಆಹ್ವಾನದಿಂದ ವಂಚಿತರಾಗಿದ್ದಕ್ಕೆ ಹೋರಾಟ ಮಾಡುವುದರಿಂದ ಕೇವಲ ಪತ್ರಿಕೆಯಲ್ಲಿ ಬಹಳ ದೊಡ್ಡ 'ಸುದ್ದಿಯಾಗಿ' ಪತ್ರಿಕೆ ಮಾರಾಟ ಆಗುತ್ತದೆಯೇ ಹೊರತು ಬೇರೇನೂ ಆಗುವುದಿಲ್ಲ. ಆದರೆ ಹೃದಯ ವೈಶಾಲ್ಯತೆ ಮೆರೆದರೆ ಸನ್ನಿವೇಶಾನುಸಾರ ಯಾರಿಗೆ ಏನೇನು ಆಗಬೇಕೋ ಅದು ಆಗಿಯೇ ಆಗುತ್ತದೆ. ಈಗ ಹೇಳಿ, ಜನ ಯಾರನ್ನು ಹೊಗಳುತ್ತಾರೆ? ಚಂದ್ರು ಅವರನ್ನೋ? ನಿರ್ವಾಣಿಯವರನ್ನೋ? ಅಥವಾ ಇದೆಲ್ಲವನ್ನು ಬಿತ್ತರಿಸಿದ ಪತ್ರಿಕೆಯವರನ್ನೋ?       
                                     -ಡಾ.ಶ್ರೇ 

Wednesday, March 9, 2011

                          P.H.D(     ?      )
P.H.D ಅನ್ನೋದನ್ನು, ಪತ್ರಿಕೋದ್ಯಮ ಚೇತನ  ವೈ.ಎನ್.ಕೆ. ಯವರು ಒಂದು ಕಡೆ Precious Hour of Drinking ಎಂದು ವ್ಯಾಖ್ಯಾನಿಸಿ ಕುಡುಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಇವತ್ತಿನ ದಿನ ಪಿ.ಎಚ್.ಡಿ ಮತ್ತು ಅಲ್ಲಿನ ವಸ್ತುಸ್ಥಿತಿಯನ್ನು ಗಮನಿಸಿದರೆ, ಈ ವಿಸ್ತಾರ ಚೂರು ಬದಲಾಗಬೇಕೆ ಎಂದು ಅನಿಸುತ್ತದೆ. ಅನಿಸುವುದೇನು? ಬದಲಾಯಿಸಿಯೇ ಬಿಡುವ. 'Precious Hour of Ding dong'
ಹೌದು, ಪಿ.ಎಚ್.ಡಿ. ಮಾಡಲು ಬರುವ ಮಹಿಳೆಯರನ್ನು ತಮ್ಮ ಕಸ್ಟಮರ್ ನಂತೆ ಕಾಣುವ ಮಾರ್ಗದರ್ಶಕರು ಎಲ್ಲಿಯವರೆಗೆ ವಿ.ವಿ. ಯಲ್ಲಿ ಇರುತ್ತಾರೋ, ಅಲ್ಲಿಯವರೆಗೆ ಈ ಪದದ ವಿಸ್ತಾರ ಸಮಾಜದಲ್ಲಿ Applicable ಎಂದೇ ಹೇಳಬಹುದು. ಹಲವು ವರುಷಗಳಿಂದ ಒಂದು ಪರಂಪರೆಯಂತೆ ಬೆಳೆದು ಬಂದಿರುವ ಈ ಲೈಂಗಿಕ ಕಿರುಕಳ ಇವತ್ತಿನವರೆಗೆ ನಿಲ್ಲಲಿಲ್ಲ. ನಿಲ್ಲುತ್ತಲೇ ಇಲ್ಲ. ಅದೆಷ್ಟು Sexual herasment prevention cell  ಗಳು ವಿ.ವಿ ಯಲ್ಲಿ ತಲೆಯೆತ್ತಿದರೂ, ಅದರ ತಲೆಯ ಮೇಲೆ ಕೂತು ಡಿಸ್ಕೋ ಮಾಡುತ್ತಿದ್ದಾರೆ ಡಾ.ಮನ್ಮಥಾಸ್. ವಿದ್ಯಾಸಂಸ್ಥೆಗಳು ಮಾರುಕಟ್ಟೆಯಾಗಿರುವ ಇವತ್ತಿನ ಸಂದರ್ಭದಲ್ಲಿ ಇದರ ಉಪಯೋಗವನ್ನು ಬಹಳ ಚೆನ್ನಾಗಿ ವಿ.ವಿ ಪ್ರೊಫೆಸರ್ ಗಳು ಬಳಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವು ಕುಲಪತಿಗಳಂತೂ, ತಾವು ಇಡೀ ಕುಲಕ್ಕೇ ಪತಿಯರು ಎಂಬಂತೆ ವರ್ತಿಸುತ್ತಿದ್ದಾರೆ. 
ಏನಿರಬಹುದು ಇದಕ್ಕೆ ಕಾರಣ? ಮಾಡಲು ಕೆಲಸವಿಲ್ಲದೇ, ಸಂಬಳ ಜಾಸ್ತಿಯಾಗಿ ಬಹಳ ಐಡಲ್ ಆಗಿ ಒಬ್ಬ ವ್ಯಕ್ತಿ ಕುಳಿತರೆ ಅವನಲ್ಲಿರುವ Society harmful instinct ಗಳು ಜಾಗ್ರತಗೊಳ್ಳುತ್ತದೆ. ಇಂತಹ instinct ನಲ್ಲಿ ಕಾಮವೂ ಒಂದು. ಕಾಮ ಅತಿಯಾದರೆ ಇಡೀ ಸಮಾಜದ ನೈತಿಕ ಸ್ವಾಸ್ಥ್ಯವೇ ಹದಗೆಟ್ಟು ಹೋಗುತ್ತದೆ. ನಾಗರೀಕತೆಯನ್ನು ಮೀರಿದ ಆಲೋಚನೆಗಳು ತಲೆಯಲ್ಲಿ ಕೂತು ಅನಾಗರಿಕನಂತೆ ವರ್ತಿಸಲು ಪ್ರೇರೇಪಿಸುತ್ತದೆ. 'Idle mind is devil's work shop'.
ಪಿ.ಎಚ್.ಡಿ. ಕ್ಷೇತ್ರದಲ್ಲಿಯೂ ಇದೇ ಆಗಿದೆ. ಬಹಳ ಕೆಲಸವಿಲ್ಲದೆ ಸುಮ್ಮನೆ ಕುಳಿತಿರುವಾಗ ತಲೆಗೆ ಹೊಕ್ಕ ಮಾಯೆಯ ಜೊತೆಗೆ, ಮತ್ತೊಂದು ಜೀವಂತ ಮಾಯೆ ಎದುರಿಗೆ ಬಂದರೆ A psychological trance ನಲ್ಲಿ ಬಿದ್ದು ಒದ್ದಾಡಿ ಅಚಾತುರ್ಯಗಳು ನಡೆಯುತ್ತದೆ. ಧೀರ್ಘವಾದ ಸಲಿಗೆ, ಸ್ನೇಹ ಕೂಡಾ ಪ್ರಚೋದನೆಗೆ  ಕಾರಣವಾಗುತ್ತದೆ. ಆತನಿಗೇನು ಹೆಂಡತಿ ಇಲ್ಲವೇ ಎಂಬ ಪ್ರಶ್ನೆ ಮೂಡಬಹುದು. 'ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿವುದೇ ಜೀವನ' 
ಇದಕ್ಕೂ ಮೀರಿ, ಮನುಜನಲ್ಲಿ ಒಂದು Self control ಇರುತ್ತದೆ. ವ್ಯಕ್ತಿ ಅತ್ಯುಚ್ಚ ಸ್ಥಾನದಲ್ಲಿ ಇರುವಾಗ ಆತನ Self control ಜಾಗ್ರತ ಗೊಳ್ಳಬೇಕು. ಹಲವಾರು ಬಾರಿ ಇದು ಆಗಲ್ಲ ಬಿಡಿ. ಈ ಕಾರಣದಿಂದ, ಕಾಮ ಕಾಂಡವನ್ನು ತಡೆಗಟ್ಟಲು ಒಂದಾ ಪ್ರೊಫೆಸರ್ ಗಳನ್ನು ಇತರ ಚಟುವಟಿಕೆಗಳಲ್ಲಿ  busy ಗೊಳಿಸಬೇಕು. ಇಲ್ಲವೇ  Female candidate should get female guide ಎನ್ನುವ ಹೊಸ ವ್ಯವಸ್ಥೆಗೆ ತೆರೆದುಕೊಳ್ಳಬೇಕು. ಅಲ್ಲೂ ಕಿರುಕುಳ ಶುರುವಾದರೆ, ಏನೂ ಮಾಡಲು ಸಾಧವಿಲ್ಲ ಬಿಡಿ.  
                                        ಡಾ.ಶ್ರೇ 

Tuesday, March 8, 2011

ಸರಕಾರದ ರೂಲ್ಸುಗಳು..
ಸರಕಾರದ ರೂಲ್ಸುಗಳೇ ಹೀಗೆ.. ಅರ್ಥವೇ ಇಲ್ಲದ, ಮೂರು ಕಾಸಿಗೂ ಪ್ರಯೋಜನಕ್ಕೆ ಬಾರದ ಆದೇಶಗಳನ್ನು ಜಾರಿಗೆ ತರುವುದರಲ್ಲಿ ನಮ್ಮ ರಾಜಕಾರಣಿಗಳು ಸಿದ್ದಹಸ್ತರು. ಈಗ ನಮ್ಮ ಹೋಂ ಮಿನಿಸ್ಟರ್ ಕಂ ಸಾರಿಗೆ ಸಚಿವ ಆರ್.ಅಶೋಕ್, ಹೊಸತೊಂದು ರೂಲ್ಸು ತರಲು ಹೊರಟಿದ್ದಾರೆ, ಅದೇನೆಂದರೆ ಸ್ವಾತಂತ್ಯ ಹೋರಾಟಗಾರರಿಗೆ ಎ.ಸಿ ಬಸ್ಸಿನಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಒದಗಿಸುವುದು. ಆದರೆ ವಿಪರ್ಯಾಸವೆಂದರೆ ಅದನ್ನು ಕೂಡ ಪರಿಶೀಲಿಸಿ ನೋಡಬೇಕಂತೆ! ಸ್ವಾತಂತ್ರ್ಯ ಹೋರಾಟಗಾರರಲ್ಲಿ ಹೆಚ್ಚಿನವರು ಈಗ ಬದುಕಿಲ್ಲ, ಅದರಲ್ಲೂ ಬದುಕಿದ್ದರೂ ಅವರು ಯಾರು ಬಸ್ಸಿನಲ್ಲಿ ಓಡಾಡುವ ಸ್ಥಿತಿಯಲ್ಲಿ ಇರಲಿಕ್ಕಿಲ್ಲ. ಒಂದು ವೇಳೆ ಇದ್ದರೂ ಅವರು ಇನ್ನು ಎಷ್ಟು ಸಮಯ ಬದುಕಬಹುದು? ಇರುವ ಸ್ವಲ್ಪ ಸಮಯವಾದರೂ ನೆಮ್ಮದಿಯಿಂದ ಎ.ಸಿ ಬಸ್ಸಿನಲ್ಲಿ ಓಡಾಡಲಿ ಎಂದರೆ, ಅದಕ್ಕೂ ಪರಿಶೀಲನೆ ನಡೆಸಬೇಕಂತೆ!
ಇನ್ನು ಇವರು ಅದನ್ನು ಪರಿಶೀಲಿಸಿ, ಚರ್ಚೆ ನಡೆಸಿ, ಆ ಆದೇಶ ಜಾರಿಗೆ ಬರುವಾಗ; ಪಾಪದ ಸ್ವಾತಂತ್ರ್ಯ ಹೋರಾಟಗಾರರು ಶಿವನ ಪಾದ ಸೇರಿರುತ್ತಾರೆ. ಇನ್ನು ಎ.ಸಿ ಬಸ್ಸಿನಲ್ಲಿ ಸಂಚರಿಸೋದು ಎಲ್ಲಿಂದ ಬಂತು?
ಇನ್ನೊಂದು ತಮಾಷೆಯ ಸಂಗತಿಯಿದೆ, ಗ್ರಾಮಾಂತರ ಪ್ರದೇಶಗಳಲ್ಲಿ ಓಡಾಡುವ ಬಸ್ಸುಗಳಲ್ಲಿ 'ಸ್ವಾತಂತ್ರ್ಯ ಹೋರಾಟಗಾರರಿಗೆ' ಎಂಬ ಸೀಟು ಇರುತ್ತದೆ. ಆದರೆ ಆ ಸೀಟಿನ ಗತಿಯನ್ನು ನೋಡಿದರೆ, ಈಗಾಗಲೇ ವೃದ್ಧರಾಗಿರುವ ಸ್ವಾತಂತ್ರ್ಯ  ಹೋರಾಟಗಾರರು ಕೂತುಕೊಳ್ಳಲು ಸಾಧ್ಯವೇ ಇಲ್ಲ. ತೂತು ಬಿದ್ದು, ಹರಿದು ಚಿಂದಿ ಚಿಂದಿಯಾಗಿರುವ ಈ ಸೀಟುಗಳಲ್ಲಿ ಬಾಯಿಗೆ ಗುಟ್ಕಾ ಹಾಕಿಕೊಂಡು, ಸಿಕ್ಕಸಿಕ್ಕಲ್ಲಿ ಉಗಿಯುವವರೇ ಕೂತಿರುತ್ತಾರೆ. 
ಒಟ್ಟಿನಲ್ಲಿ ' ಸರಕಾರದ ಈ ರೂಲ್ಸುಗಳು ಬಲ್ಬು ಇಲ್ಲದ ಕಂಬಗಳು' ಎನ್ನುವ ಕನ್ನಡ ಚಿತ್ರವೊಂದರ ಸಾಲು ಸಾರ್ವಕಾಲಿಕ ಸತ್ಯ!
ಹಾಗೇ ಸುಮ್ಮನೆ - ಸ್ವಾತಂತ್ರ್ಯ ಹೋರಾಟಗಾರರಿಗೆ ಎ.ಸಿ ಬಸ್ಸಿನಲ್ಲಿ ಉಚಿತ ಪ್ರಯಾಣ ನೀಡಲಾಗುತ್ತದೆ ಎಂಬುವುದನ್ನು ಕೇಳಿದ ಉಮೇಶ, 'ನಮ್ಮ ವಾಟಳಪ್ಪನವರಿಗೂ ಆ ಸೌಲಭ್ಯವನ್ನು ಒದಗಿಸಬೇಕು, ಅವರೂ ಕೂಡ 'ಹಲವು' ತರಹದ ಸ್ವಾತಂತ್ರ್ಯಕ್ಕೆ  ಹೋರಾಡಿದ್ದಾರೆ' ಎನ್ನುತ್ತಿದ್ದಾನೆ.
                                             -ಡಾ.ಶೆಟ್ಟಿ 
ಅರುಣಾ 
ನೋವುಗಳಲ್ಲೇ ಮಿಂದು, ನೊಂದ ಬಿಸಿ ದ್ರವದಲ್ಲಿ ಕುದಿದು, ಮಾನಸಿಕ ಮತ್ತು ದೈಹಿಕವಾಗಿ ಈ ಲೋಕದಲ್ಲಿ ಬಾಳಲು ಸಾಧ್ಯವೇ ಇಲ್ಲ ಎನ್ನುವ ಸ್ಥಿರತೆ. ಬದುಕಿನ ಬಗೆಗೆ ಸಹಜವಾಗಿ ಮೂಡುವ ಮತ್ತು ಸ್ವಲ್ಪ ಸೂಕ್ಷ್ಮವಾಗಿ ಹೇಳುವುದಾದರೆ, ಮೂಡಲೇಬೇಕಾದ ಅವ್ಯಕ್ತ ತಿರಸ್ಕಾರ. ಇದು ನಮ್ಮ ನಡುವೆ ಇರುವ ವಿರಳ, ಮಾನಸಿಕ ಮತ್ತು ದೈಹಿಕ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳ ಸ್ಥಿತಿ. 
ಅರುಣಾ ಶಾನಭಾಗ್ ಈಗ 'ಪ್ರಚಾರ'ದಲ್ಲಿ  ಇರುವ ವ್ಯಕ್ತಿ. 37 ವರುಷಗಳ ಹಿಂದೆ ಮುಂಬಯಿಯ  ಕೆ.ಇ.ಎಂ  ಆಸ್ಪತ್ರೆಯಲ್ಲಿ ನಿಷ್ಠಾವಂತೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಈಕೆಯ ಮೇಲೆ ಸೋಹನ್ ಲಾಲ್ ಎಂಬಾತ ಅಟ್ಯಾಕ್ ಮಾಡಿ ರೇಪ್ ಮಾಡಿದ್ದ. ಆಕೆಯ ಮೇಲೆ ಈತನಿಗಿದ್ದ ಸೇಡು ಈ ಕಾರ್ಯಕ್ಕೆ ಕಾರಣ. ಅವನ ಕೇವಲ ಒಂದು ಸಣ್ಣ ಸೇಡು! ಅವಳ ಜೀವನವಿಡೀ ನೋವಿನ ಸೊಗಡು.. ಅಂದಿನ ದಿನ ಅವನ ಹೊಡೆತದಿಂದ ಆಕೆಯ ಮೆದುಳೇ ನಿಷ್ಕ್ರಿಯವಾಗಿದೆ. ಕೇವಲ ಹಾಸಿಗೆಯೆ ಅವಳ ಸಂಗಾತಿ. ಆವತ್ತಿನಿಂದ ಇವತ್ತಿನವರೆಗೆ. ಆದರೂ ಕೆಲವು ಬಾರಿ ಪುರುಷನ ನೆರಳು ಕಂಡರೆ ಭಯ ಬೀಳುತ್ತಾಳೆ. 'ನಿಷ್ಕ್ರಿಯತೆ'. ಅದೆಂತ ಗಾಢವಾದಂತಹ ನೋವು ಇವಳದ್ದಿರಬಹುದು? 
ಅರುಣಾಳ ಕಷ್ಟವನ್ನು ಗಮನಿಸಿ ಅವಳ ಗೆಳತಿ, ಅರುಣಾ ಬದುಕಲು ಸಾಧ್ಯವೇ ಇಲ್ಲ ಎಂಬುವುದನ್ನು ಅರಿತ ಮೇಲೆ, ದಯಾ ಮರಣಕ್ಕಾಗಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿದಳು. ದಯಾ ಮರಣ ಕೆಲವು ಸಂದರ್ಭದಲ್ಲಿ ನೀಡಬಹುದು ಎಂಬ ಧೋರಣೆ ಕೋರ್ಟ್ ಗರ್ಭದಲ್ಲಿ ಹುದುಗಿದ್ದರೂ, ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ. ಮತ್ತೆ ಆಕೆಯ ಸ್ಥಿತಿ ಡೋಲಾಯಮಾನವಾಗಿದೆ. ಆಕೆಯನ್ನು ನೋಡಿಕೊಳ್ಳುವ ನರ್ಸ್ ಗಳು ದಯಾಮರಣಕ್ಕೆ ವಿರೋಧ! It is just because of psychological attachment towards the medicine. ಎಂದು ವ್ಯಾಖ್ಯಾನ ಮಾಡಬಹುದು. But if a person have real psychological touch with the other person's heart he/she would have been agreed for mercy killing. 
ಇದರ ಬಗ್ಗೆ ಜಾಸ್ತಿ ತಿಳಿಯಲು Guzarish ಸಿನೆಮಾ ನೋಡಿ. ಆಗಾದರು ಸಾವಿನ ಮೌಲ್ಯ ಅರಿವಾದೀತು.  
                                                                                        -ಡಾ.ಶ್ರೇ                                               

Friday, March 4, 2011

'ಕರಡಿ' ಹಿಡಿದ ಬಿ.ಜೆ.ಪಿ! 
ಬಿ.ಜೆ.ಪಿ ಸರಕಾರ ಮತ್ತೊಂದು ಸುತ್ತಿನ ಆಪರೇಶನ್ ಕಮಲಕ್ಕೆ ಚಾಲನೆ ನೀಡಿದೆ. ಇದರ ಫಲವಾಗಿ ಕೊಪ್ಪಳದ ಜೆ.ಡಿ.ಎಸ್ ಶಾಸಕ ಸಂಗಣ್ಣ ಕರಡಿಯವರು ಬಿ.ಜೆ.ಪಿ ಸೇರಿಕೊಂಡಿದ್ದಾರೆ. ಬಿ.ಜೆ.ಪಿ ಗೆ ಈಗಿನ ಸ್ಥಿತಿಯಲ್ಲಿ ಆಪರೇಶನ್ ಅಗತ್ಯವಿರಲಿಲ್ಲ, ಆದರೂ ಕರಡಿ ಶಿಕಾರಿ ಮಾಡಿರುವುದು ಜನರಿಗೆ ಅಚ್ಚರಿ ಮೂಡಿಸಿದೆ.
ಕೊಪ್ಪಳ ಶಾಸಕ ಸಂಗಣ್ಣ ಕರಡಿಯವರು, ಬಿ.ಜೆ.ಪಿ ಸೇರುತ್ತಾರೆ ಎಂಬ ಗುಸುಗುಸು ಕಳೆದ ಅಕ್ಟೋಬರ್ ನಿಂದಲೇ ಕೇಳಿಬರುತ್ತಿತ್ತು. ಆದರೆ ರಾಜ್ಯಸಭೆ ಚುನಾವಣೆ ನಡೆದ ಕೂಡಲೇ ಬಿ.ಜೆ.ಪಿ ಬೋನಿಗೆ ಬಿದ್ದದ್ದು ಮಾತ್ರ ಸೋಜಿಗ.
ಬಿ.ಜೆ.ಪಿ ಆಪರೇಶನ್ ಲೀಸ್ಟ್ ನಲ್ಲಿ ಇನ್ನು ಕೆಲವು ಶಾಸಕರ ಹೆಸರು ಕೇಳಿಬರುತ್ತಿದೆ. ಅದರಲ್ಲಿ ಸುಭಾಷ್ ಗುತ್ತೇದಾರ್, ನಾಡಗೌಡ ವೆಂಕಟರಾವ್ ಮತ್ತು ಬಸವರಾಜನ್ ಪ್ರಮುಖರು. 
ಏನೇ ಇರಲಿ ಏನೇನೋ ಅವಾಂತರಗಳನ್ನು ಮಾಡಿಕೊಂಡು, ಸರಕಾರವನ್ನು ಉರುಳಿಸುವ ಪ್ರಯತ್ನ ಮಾಡುತ್ತಿದ್ದ ಜೆ.ಡಿ.ಎಸ್, ಅದರ ಫಲವನ್ನು ಉಣ್ಣುತ್ತಿದೆ. ಹೀಗೆ ಮುಂದುವರೆದರೆ ದಳಕ್ಕೆ, ಪ್ರತಿಪಕ್ಷ ಸ್ಥಾನ ಉಳಿಯುವುದು ಕೂಡ ಅನುಮಾನ. ಅದು ಅವರ ಪ್ರಾರಬ್ಧ, ಅನುಭವಿಸಲಿ ಬಿಡಿ!
ಸದಾ ಹೋಮ, ಹವನ ಮಾಡಿ ಕಾಲಕಳೆಯುತ್ತಿದ್ದ ಯಡ್ಡಿಯವರಿಗೆ, ಇನ್ನು ಮುಂದೆ ಹೋಮಕ್ಕೆ ಜೇನುತುಪ್ಪದ problem ಬರಲಿಕ್ಕಿಲ್ಲ. ಯಾಕೆಂದರೆ ಜೇನುತುಪ್ಪ ಸಂಗ್ರಹಿಸಲು ಕರಡಿಯಿದೆಯಲ್ಲವೇ?
ಹಾಗೇ ಸುಮ್ಮನೆ- ಜೆ.ಡಿ.ಎಸ್ ಶಾಸಕ ಕರಡಿಯವರು, ಬಿ.ಜೆ.ಪಿ ಸೇರಿರುವುದರಿಂದ, ಸರಕಾರಕ್ಕೆ ಇನ್ನು ದೃಷ್ಟಿ ತಾಗುವುದಿಲ್ಲ ಎಂಬುವುದು ಉಮೇಶನ ನಂಬಿಕೆ. ಯಾಕೆಂದರೆ ಕರಡಿ ರೋಮವನ್ನು, ತಾಯತ ಮಾಡಿ ಕಟ್ಟಿದರೆ, ಆ ವ್ಯಕ್ತಿಗೆ ಏನೂ ಆಗುವುದಿಲ್ಲ ಎಂಬ ನಂಬಿಕೆಯಿದೆ.ಈಗ ಕರಡಿಯೇ ಬಿ.ಜೆ.ಪಿ ಕಡೆ ಇರೋದರಿಂದ, ಬೇಕಾದಷ್ಟು ತಾಯತ ಸಿಗಬಹುದು ಅಲ್ಲವೇ?
                                                            -ಡಾ.ಶೆಟ್ಟಿ   
ಮೂರ್ತಿಯವರು ನಿಮಗೇನು ಮಾಡಿದ್ದಾರೆ?
ಎನ್.ಆರ್ ನಾರಾಯಣ ಮೂರ್ತಿಯವರನ್ನು ಬೆಳಗಾವಿ ಕನ್ನಡ ಸಮ್ಮೇಳನಕ್ಕೆ ಆಯ್ಕೆಮಾಡಿದ್ದು ನನ್ನ ಪ್ರಕಾರ ಸರಿಯಾಗಿದೆ. 
ಅದೃಷ್ಟವಿದ್ದರೆ ಅರ್ಹತೆಯನ್ನು ಮಣಿಸುತ್ತದೆ ಎನ್ನುವ ಮಾತಿಗೆ ತದ್ವಿರುದ್ದವಾಗಿ ಅರ್ಹತೆ ಇದ್ದರೆ ಮಾತ್ರ ಅವರುಗಳಿಗೆ ವಿಪುಲ ಉದ್ಯೋಗ ಅವಕಾಶ ಒದಗಿಸುವ ಇವರನ್ನು ಉದ್ಘಾಟಕರನ್ನಾಗಿ ಆಯ್ಕೆ ಮಾಡಿದಲ್ಲಿ ತಪ್ಪಿಲ್ಲ. ಕನ್ನಡ ಸಮ್ಮೇಳನಕ್ಕೆ ಯೋಗ್ಯವಾದ ಆಯ್ಕೆ ಎನ್ನಬಹುದು. ಇನ್ಫೋಸಿಸ್ ನಾರಾಯಣ ಮೂರ್ತಿಯವರನ್ನು  ಕನ್ನಡ ನಾಡಿನ ಹೆಮ್ಮೆಯ ಪುತ್ರ ಎಂದೇ ಕರೆಯಬಹುದು. ಎಲ್ಲೋ ಒಂದು ಮೂಲೆಯಲ್ಲಿ ನಾರಾಯಣ ಮೂರ್ತಿಯವರ ಹೆಸರು ಹೇಳಿದರೆಂದರೆ ಅದು ಕನ್ನಡ ನಾಡನ್ನು ನೆನಪು ಮಾಡಿದಂತೆ 
ಉದ್ಯೋಗವಕಾಶಕ್ಕಾಗಿ ಬೇರೆ ಬೇರೆ ಸ್ಥಳಗಳಿಗೆ ವಿದೇಶಗಳಿಗೆ ತೆರಳುವಂತಹ ಅದೆಷ್ಟೋ ಇಂಜಿನಿಯರ್ ಹಾಗು ಪದವೀದರರು ನಮ್ಮ ನಾಡಿನಲ್ಲಿಯೇ ಇದ್ದು ಉತ್ತಮ ಸಂಪಾದನೆ ಮಾಡುತ್ತಿದ್ದಾರೆ. ದಾರಾಳವಾಗಿ ಕೈ ತುಂಬಾ ಸಂಪಾದನೆ ಮಾಡುತ್ತಾ  ನಮ್ಮ ನಾಡಿನಲ್ಲಿ ಉಳಿದದ್ದು ಇಂದು ಬೆಂಗಳೂರು ನಗರ ಬೆಳೆಯುವುದಕ್ಕೆ ಪೂರಕವಾಗಿದ್ದಾರೆ. 
ಮನಸ್ಸಿನ ತೀಟೆಯನ್ನು ತೀರಿಸಲು ಕವಿತೆ ಹಾಗು ಬರಹಗಳನ್ನು ಬರೆದ ಕೂಡಲೇ ಅದು ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲ.  ಶಿಶುನಾಳ ಶರೀಫ್ ರಂತಹ ಬರವಣಿಗೆಯು ಬಂದಾಗ ಅಂತಹ ವ್ಯಕ್ತಿಗಳಿಗೆ ಮಣೆ ಹಾಕಬಹುದು. ಬರಹದಲ್ಲಿ ಅರಿವಿನ ಜೊತೆಗೆ ಒಳಿತುಗಳು ಸಾಕಷ್ಟು ಇರಲಿ ಎನ್ನುವುದು ನನ್ನ ಭಾವನೆ. ಇದರ ಅರ್ಥ ಕನ್ನಡ ನಾಡಿನಲ್ಲಿ ಶ್ರೇಷ್ಠ ಸಾಹಿತಿಗಳು ಇಲ್ಲವೇನೆಂದಲ್ಲ. ಆದರೆ ನಾರಾಯಣ ಮೂರ್ತಿಯವರ ಬಗ್ಗೆ ಕೀಳಾಗಿ ಮಾತಾಡುವುದು ಸರಿಯಲ್ಲ. 
ಅದೆಷ್ಟೋ ಸಾಹಿತಿಗಳ ಮಕ್ಕಳು ಇಂದು ಅದೇ ಇನ್ಫೋಸಿಸ್ ನಲ್ಲಿ ಲಕ್ಷ ಲಕ್ಷ ಎಣಿಸುತ್ತಿಲ್ಲವೇ? ಅದೇ ಹಣದಿಂದ ದೇಶ ವಿದೇಶ ಸುತ್ತುವ ಅದೆಷ್ಟೋ ಸಾಹಿತಿಗಳು ತಮ್ಮ ಅನುಭವಗಳನ್ನು ಕನ್ನಡ ಸಾಹಿತ್ಯಕ್ಕೆ ಬಟ್ಟಿ ಇಳಿಸಲಿಲ್ಲವೇ ? ಈ ರೀತಿಯ ಪ್ರವಾಸ ಕಥನ ಎಲ್ಲವುಗಳನ್ನೂ ಬರೆಯುವಲ್ಲಿ ಎಲ್ಲೊ ಒಂದು ಮೂಲೆಯಲ್ಲಿ ಇವರ ಪ್ರಭಾವ ಇದೆ ಎಂದು ಹೇಳಿದರೆ ತಪ್ಪಾಗಲಾರದು.
                                                              -ಕೆ.ಪಿ.ಭಟ್ 

Thursday, March 3, 2011

ವಿಶ್ವಕಪ್ ಆಘಾತ  
ಅದು 1983 , ಭಾರತ, ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ವಿಶ್ವಕಪ್ ಗೆದ್ದು ಕೊಂಡಾಗ ಇಡೀ ವಿಶ್ವವೇ  ನಿಬ್ಬೆರಗಾಗಿತ್ತು. ಆವತ್ತಿನ ದಿನಕ್ಕೆ ಭಾರತ ತಂಡವನ್ನು ವರ್ಲ್ಡ್ ಕ್ರಿಕೆಟ್ ನ ಶಿಶು ಗಳು ಎಂದೇ ಪರಿಗಣಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತ ವಿಶ್ವಕಪ್  ಗೆದ್ದಿದ್ದು, ಒಂದು ವಿಶ್ವಕಪ್ ಆಘಾತ.
ಇದಾದ ಮೇಲೆ ನಂತರದ ಸಾಲಿನಲ್ಲಿ, ವಿಶ್ವಕಪ್ ಕಿರೀಟವನ್ನೇ ಮುಡಿಗೇರಿಸುವ ಆಘಾತಗಳು ನಡೆದಿಲ್ಲವಾದರೂ, ಲೀಗ್ ಪಂದ್ಯಗಳಲ್ಲಿ ಕೆಲವು ಆಘಾತಗಳು ನಡೆದಿದೆ. ಜಿಂಬಾಬ್ವೆ ಭಾರತವನ್ನು ಸೋಲಿಸಿದ್ದು, ಕೀನ್ಯ ಶ್ರೀಲಂಕಾವನ್ನು ಪರಾಭವಗೊಳಿಸಿದ್ದು, ಬಾಂಗ್ಲಾ ಭಾರತದ ವಿರುದ್ದ ಜಯಭೇರಿ ಬಾರಿಸಿದ್ದು, ಐಯರ್ಲ್ಯಾಂಡ್ ಪಾಕಿಗಳ ಸೊಕ್ಕು ಮುರಿದಿದ್ದು. ಆದರೆ ಇವೆಲ್ಲಾ ಬಹಳಾ ಆಘಾತಕಾರಿಯಾಗಿ ಕಂಡಿರಲಿಲ್ಲ. 
ನಿನ್ನೆ (2-3-2011 ) ನಡೆದ ಐರಿಷ್ ಮತ್ತು ಇಂಗ್ಲೀಷ್ ದಾಯಾದಿಗಳ ಕದನದಲ್ಲಿ ಐರಿಷ್  ಶಿಶುಗಳು, ಬಹಳ ಅಚ್ಚರಿ ಪಡುವ ರೀತಿಯಲ್ಲಿ ಇಂಗ್ಲೀಷ್ ರನ್ನು  ಸೋಲಿಸಿದ್ದಾರೆ. ಇದೇನು ಸಾಮಾನ್ಯ ಗೆಲುವಲ್ಲ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೇಂಡ್  ತಂಡ  ಬರೋಬ್ಬರಿ 327 ರನ್  ಪೇರಿಸಿ ಗೆಲುವು ನಮ್ಮದೇ ಎಂಬ ಓವರ್ ಕಾನ್ಫಿಡೆನ್ಸ್ ನಲ್ಲಿ ಬೀಗಿದ್ದರು. ಇದರಂತೆಯೇ ಐರಿಷ್  ತಂಡವು ಮೊದಲಿನಿಂದಲೇ ಸರಾಗವಾಗಿ ವಿಕೆಟ್ ಕಳೆಕೊಲ್ಲುತ್ತಾ ಹೋಯಿತು. 111 -5 ವಿಕೆಟ್ ಹೋಗುವಲ್ಲಿಯವರೆಗೆ, ಇಂಗ್ಲೇಂಡ್ ಅವರ ಮೊಗದಲ್ಲಿ ಅದೇನು ಅಹಂ, ಅದೇನು ಇಗೋ!
 ಆದರೆ ಜಸ್ಟಿನ್ ಒಬ್ರೇನ್ ಯಾವಾಗ ಮೈದಾನಕ್ಕೆ ಇಳಿದನೋ, ಆಗ ಶುರುವಾಗಿತ್ತು ಇಂಗ್ಲೆಂಡ್ ತಂಡದವರ ಬೆವರಿಳಿಯಲು. ಕೇವಲ 50 ಎಸೆತದಲ್ಲಿ 100 ರನ್ ಗಳನ್ನು  ಗಳಿಸಿದಾಗ ಎದುರಾಳಿ ತಂಡದ ಜಂಘಾ ಬಲವೇ  ಕುಸಿದು ಹೋಗಿತ್ತು. ಕೊನೆಗೆ ತುಸು ಆಶಾವಾದದ ಭರವಸೆ ದೊರೆತರೂ ಸೋಲು ತಪ್ಪಿಸಿಕೊಳ್ಳಲಾಗಲಿಲ್ಲ. ಈವರೆಗೆ ನಡೆದ ವಿಶ್ವಕಪ್ ಗಳಲ್ಲಿ 328 ರನ್ ಚೇಸ್ ಅತ್ಯಂತ ಶ್ರೇಷ್ಠ ರನ್ ಚೇಸ್ ಆಗಿ ಇತಿಹಾಸದ ಪುಟ ಸೇರಿಕೊಂಡಿತು. ಹೊಸ ಆಘಾತ ಐರಿಶ್ ತಂಡ ವಿಶ್ವ ಕ್ರಿಕೆಟ್ ಗೆ ನೀಡಿತು. 
ಓವರ್ ಕಾನ್ಫಿಡೆನ್ಸ್ ನಿಂದಾಗಿ,  ಕಳಪೆ ಫೀಲ್ಡಿಂಗ್ ಮತ್ತು ಬೌಲಿಂಗ್ ನಿಂದಾಗಿ ಯಾವ ಬಲಿಷ್ಠ ತಂಡವೂ ಸೋಲಿನ ಸುಳಿಯಲ್ಲಿ ಸಿಲುಕುತ್ತದೆ ಎನ್ನುವುದಕ್ಕೆ ಬೆಂಗಳೂರು ಚಿನ್ನ ಸ್ವಾಮೀ ಕ್ರೀಡಾಂಗಣ ಸಾಕ್ಷಿಯಾಯಿತು.  
                                              -ಡಾ. ಶ್ರೇ  
ಸೋರುತಿಹುದು ಮನಿಯಾ ಮಾಳಿಗೆ! 
ನಿಮ್ಮ ಒಂದು ಕೈಯಲ್ಲಿ 'ಸೋರುತಿಹುದು ಮನಿಯಾ ಮಾಳಿಗೆ, ಅಜ್ಞಾನದಿಂದ' ಕವಿತೆಯನ್ನು ಹಿಡಿದುಕೊಳ್ಳಿ. ಅದೇ ರೀತಿ ಈಗಿನ ಕಾಲದಲ್ಲಿ ತಮ್ಮನ್ನು ತಾವು 
ಕ(ಪಿ)ವಿಗಳೆಂದು ಕರೆಸಿಕೊಳ್ಳುವವರ ಕವಿತೆಗಳನ್ನು ಇನ್ನೊಂದು ಕೈಯಲ್ಲಿ ಹಿಡಿದುಕೊಳ್ಳಿ, ನಿಮಗೆ ಯಾವ ಕವಿತೆಗಳು ಹೆಚ್ಚು ಪ್ರಸ್ತುತ ಎಂದು ಕಾಣುತ್ತದೆ?
'ನಾನು ಸುಂದರ, ನೀನು ಸುಂದರಿ, ನಿನ್ನ ಅಮ್ಮ ಇನ್ನೂ ಸುಂದರಿ' ಎಂದು ಕವನ ಬರೆದು, ಅದನ್ನೇ ದೊಡ್ಡ ಸಾಹಿತ್ಯದ ಸೇವೆಯೆಂದು ಭಾವಿಸುವ ಈಗಿನ ಕವಿಗಳು, ಸಂತ ಶಿಶುನಾಳ ಶರೀಫರ ಕವನಗಳನೊಮ್ಮೆ ಓದಿ ನೋಡಬೇಕು. ಅವರು ಬರೆದ ಕವನಗಳು ಯಾವ ಕಾಲಕ್ಕೂ ಪ್ರಸ್ತುತ. ಇನ್ನು ಒಂದು 20 ವರ್ಷ ಬಿಟ್ಟು ಓದಿದರೂ ಅವರ ಕವನಗಳಿಗೆ ತನ್ನದೇ ಆದ ಮಹತ್ವವಿದೆ. 
'ಸೋರುತಿಹುದು ಮನಿಯಾ ಮಾಳಿಗೆ', 'ಕೋಡಗಾನ ಕೋಳಿ ನುಂಗಿತ್ತಾ', 'ಗುಡುಗುಡಿಯಾ ಸೇದಿ ನೋಡೋ' ಮುಂತಾದ ತತ್ವದ ಪದಗಳಲ್ಲಿ ಜಗದ ಡೊಂಕನ್ನು, ಪ್ರಪಂಚದ ವಾಸ್ತವತೆಯನ್ನು, ಜೀವನದ ಕ್ಷಣಿಕತೆಯನ್ನು ಮನಮುಟ್ಟುವಂತೆ ಕಟ್ಟಿಕೊಟ್ಟ, ಶಿಶುನಾಳ ಶರೀಫರು ನಿಜವಾಗಿಯೂ ಗ್ರೇಟ್!
ಶಿಶುವಿನಹಾಳ ಎಂಬ ಹಳ್ಳಿಯಲ್ಲಿ(ಹಾವೇರಿ ಜಿಲ್ಲೆ), ಮಾರ್ಚ್ ೭, ೧೮೧೯ ರಂದು, ಸಾಮಾನ್ಯ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಇವರು, ನಂತರ ಕಳಸದ ಗುರು ಗೋವಿಂದ ಭಟ್ಟರ ಶಿಷ್ಯರಾದರು. ನಂತರದ ದಿನಗಳಲ್ಲಿ ಇವರು ಹಿಂದೂ-ಮುಸ್ಲಿಂ ಐಕ್ಯತೆಯ ಸಂಕೇತವಾಗಿ ಬೆಳೆದರು. 
ಪ್ರಸ್ತುತ ದಿನಗಳಲ್ಲಿ ಕವಿಗಳೆಂದು ತಮ್ಮನ್ನು ತಾವು ಕರೆಸಿಕೊಳ್ಳುವವರು ಹೆಚ್ಚಾಗಿದ್ದರೆ. ಅರ್ಥವಾಗದ ಕವಿತೆಗಳನ್ನು ಬರೆದು, ಧರ್ಮ-ಧರ್ಮಗಳ ನಡುವೆ ಒಡಕು ಉಂಟುಮಾಡುವ ಈಗಿನ ಕವಿಗಳಿಗೆ, ಶಿಶುನಾಳ ಸಾಹೇಬರು ಆದರ್ಶವಾಗಬೇಕು. ದೇಶದಲ್ಲಿ ಕೋಮು ಸೌಹಾರ್ದ ಮೂಡಬೇಕಾದರೆ, ಶಿಶುನಾಳರಂತ ಕವಿಗಳು, ದಾರ್ಶನಿಕರು ಮತ್ತೆ ಹುಟ್ಟಬೇಕು.
                                         -ಡಾ.ಶೆಟ್ಟಿ  

Wednesday, March 2, 2011

ಸತ್ತು ಹೋದ ವ್ಯಕ್ತಿ ಸತ್ಯವನ್ನು ಎತ್ತಿ ತೋರಿಸಿದ್ದ 
ಯಾವುದಾದರು ಒಂದು ಉನ್ನತ ಕಾರ್ಯ ನಡೆಯಬೇಕು ಎಂದಿದ್ದರೆ, ಅಷ್ಟೇ ಪ್ರಮಾಣದ ಸೋಲುಗಳು, ನೋವುಗಳು ಮಾಮೂಲು. 
ಒಂದು ಪತ್ರಿಕೆಯನ್ನು ಸ್ಥಾಪಿಸುವ ಉದ್ದೇಶಗಳು ಹಲವು ಇರುತ್ತದೆ. ಎಷ್ಟೋ ಸಂದರ್ಭ ಸತ್ಯವನ್ನು ಎತ್ತಿ ತೋರಿಸಲು ಆಗಿರಬಹುದು. ಕೆಲವೊಮ್ಮೆ ತಮ್ಮ ಮುಖವಾಡಗಳು ಕಳಚಿ ಹೋದಂತೆ ಒಂದು ಪ್ರಯತ್ನವಾಗಿರಬಹುದು. 
1780 ಜನವರಿ 29 ರಂದು ಭಾರತದ ಮೊದಲ ಮುದ್ರಿತ ಪತ್ರಿಕೆಯಾಗಿ ಬಂದಂತಹ ಬೆಂಗಾಲ್ ಗೆಜೆಟ್ ಎಂಬ ವಾರಪತ್ರಿಕೆ ಇದರ ಸಂಪಾದಕತ್ವ ವಹಿಸಿದವನು ಜೇಮ್ಸ್ ಅಗಸ್ಟಸ್ ಹಿಕಿ. 
ಇವನು ಹೆಚ್ಚು ಕಲಿತಿರಲಿಲ್ಲ. ಆದರೆ ಜೀವನಾನುಭವಗಳು ಆತನಿಗೆ ಹಾಸುಹೊಕ್ಕಾಗಿ ಇದ್ದುದ್ದರಿಂದ ಕಣ್ಣಿಗೆ ಕಂಡದನ್ನು ಕಣ್ಣು ಕಟ್ಟುವಂತೆ ಬರೆದು ಎಲ್ಲರ ಕಣ್ಣು ಕೆಂಪಾಗುವಂತೆ ಮಾಡುತ್ತಿದ್ದ. ಬ್ರಿಟೀಷ್ ಅಧಿಕಾರಿಗಳ ಖಾಸಗಿ ಜೀವನದ ನಿಂದನೆಗೆ ಹೆಚ್ಚು ಸ್ಥಳಾವಕಾಶ ಮೀಸಲಿರಿಸಿಟ್ಟಿದ್ದ. ನಂತರದ ದಿನಗಳಲ್ಲಿ ಸೆರೆಮನೆ ಶಿಕ್ಷೆಯೊಂದಿಗೆ ಹಲವು ರೂಪಾಯಿಗಳ ದಂಡ ಕೂಡ ವಿಧಿಸಲಾಯಿತು. ಸೆರೆಮನೆಯಲ್ಲಿ ತನ್ನ ಬರಹವನ್ನು ಮುಂದುವರೆಸಿದ ಈತ ಸರಕಾರದ ದಬ್ಬಾಳಿಕೆಯ ಎದುರಿಗೆ ಹೋರಾಡಲಾಗದೆ ಹಣದ ಅಭಾವದಿಂದಾಗಿ ತನ್ನ ಎಲ್ಲವುಗಳನ್ನೂ  ಕಳಕೊಂಡು ಬಡವನಾದ.
ಈಗ ಪತ್ರಿಕೆಗಳು ಅದೆಷ್ಟೋ ಪತ್ರಿಕಾ ಸ್ವತಂತ್ರ ಪಡಕೊಂಡರೂ, ಯಾವೊದೋ ಪಂಕ್ತಿ ಗೆ ವಾಲಿಕೊಂಡು ಯಾರೋ ಕೊಟ್ಟ ಭಿಕ್ಷೆಯನ್ನು ನೆಕ್ಕಿಕೊಂಡು, ಅವರ ಬೆನ್ನನ್ನು ಒರೆಸುವ ಪತ್ರಿಕೆ ಮತ್ತು ಪತ್ರಕರ್ತರಿಗೆ ಅದು ಯಾವ ರೀತಿಯ ಬೆಲೆ ಕೊಡಬೇಕು ಎನ್ನುವುದು ನೀವೇ ಯೋಚಿಸಿ.
ಸಮಾಜದ ಸೇವೆಯ ಜೊತೆಗೆ ಸತ್ಯವನ್ನು ಎತ್ತಿ ಹಿಡಿಯುವ ರೀತಿಯಲ್ಲಿ ಪತ್ರಿಕೆಗಳು ಬೆಳೆಯಬೇಕು. ಕೇವಲ ಹಣ ಮಾಡುವುದೇ ಉದ್ದೇಶವಾಗಿದ್ದರೆ ನಿಮ್ಮ ಆಸಕ್ತಿಗೆ ತಕ್ಕಂತೆ ಸತ್ಯಗಳು ಹೊರಬೀಳಲು ಸಾಧ್ಯ ಅಷ್ಟೇ. ಇಲ್ಲಿ ಯಾರ ಒಲವೂ ನಿಮಗೆ ಬೇಕಿಲ್ಲ. 
ಹಿಕಿ ಯಾವ ರೀತಿಯ ವ್ಯಕ್ತಿ ಎನ್ನುವುದಕ್ಕಿಂತ ಮಿಗಿಲಾಗಿ ಭಾರತದ ಮೊತ್ತ ಮೊದಲ ಪತ್ರಿಕೆ ಸತ್ಯದ ಅನ್ವೇಷಣೆಯೊಂದಿಗೆ ಕ್ರಾಂತಿಯ ಪಥದಲ್ಲಿ ಮುಂದುವರಿದಿದ್ದು ನಿಜವಾಗಲು ಈಗ ಇತಿಹಾಸ.  
                                         - ಕೆ.ಪಿ.ಭಟ್ 

Tuesday, March 1, 2011

ಲೈಸನ್ಸ್ ಬೇಕೇ?
            8th ಪಾಸು ಮಾಡಿ!
ಹಿಂದೊಂದು ಕಾಲವಿತ್ತು ಶಾಲೆಗೆ ಹೋಗಿ, ಏನು ತಲೆಗೆ ಹೋಗದಿದ್ದರೆ, ಅಂತಹ ಮಕ್ಕಳು ತಾನು ಮುಂದೆ ಡ್ರೈವರ್ ಆದರು ಆಗಬಹುದು ಎಂಬ ಮನಸ್ಥಿತಿಯಲ್ಲಿದ್ದರು. ಆದರೆ ಇದಕ್ಕೆ ಕೇಂದ್ರ ಸರಕಾರ ಪುಲ್-ಸ್ಟಾಪ್ ಹಾಕಿದೆ.ಯಾಕೆಂದರೆ ಇನ್ನು ಮುಂದೆ ಡ್ರೈವಿಂಗ್ ಲೈಸನ್ಸ್ ಬೇಕೆಂದರೆ, 8ನೇ ತರಗತಿ ಪಾಸು ಮಾಡಲೇ ಬೇಕು. ಇದು ಕೇಂದ್ರ ಸರಕಾರದ ಹೊಸ ಆದೇಶ.
ಈ ಹೊಸ ಆದೇಶದಿಂದಾಗಿ ಓದುವ ಕಾಲದಲ್ಲಿ ಓದದೆ, ಪೋಲಿ ತಿರುಗಿ ,ಜೀವನದಲ್ಲಿ ಏನು ಆಗದಿದ್ದರು, 'ಕೈಯಲ್ಲಿ ಸ್ಟೇರಿಂಗ್ ಹಿಡಿದು, ಲಾರಿ ಬಿಟ್ಟಾದರು ಜೀವನ ಮಾಡಿಯೇನು' ಎಂಬ ಮನೋಭಾವದವರಿಗೆ ಆತಂಕ ಉಂಟು ಮಾಡಿದೆ.
ಆದರೆ ಕೆಲ ಮಂದ ಬುದ್ದಿಯವರು ಓದು ತಲೆಗೆ ಹೋಗದೆ, ಆಟೋ ಓಡಿಸಿ ಜೀವನ ಮಾಡುತ್ತಿದ್ದರು, ಅಂತಹವರಿಗೆ ಹೊಸ ಆದೇಶ ಬಿಸಿ ತುಪ್ಪವಾಗಿ ಪರಿಣಮಿಸಿದೆ. 
ಇನ್ನು ಮುಂದೆ ಊರಿನ ಬೀದಿ, ಬೀದಿಗಳಲ್ಲಿ '8 ನೇ ಕ್ಲಾಸು ಪಾಸು ಮಾಡುವುದು ಹೇಗೆ?' ಎಂಬ ಕೋಚಿಂಗ್ ಸೆಂಟರುಗಳು ಆರಂಭವಾದರೂ ವಿಶೇಷವಿಲ್ಲ ಬಿಡಿ! ಕೇಂದ್ರ ಸರಕಾರದ ಹೊಸ ಆದೇಶದಿಂದ ಸಾಕ್ಷರತ ಪ್ರಮಾಣ ಹೆಚ್ಚಬಹುದು ಆದರೆ ನನ್ನಂತ ಕೆಲ ಮಂದ ಬುದ್ದಿಯವರು ತೊಂದರೆ ಅನುಭವಿಸೋದಂತು ಸತ್ಯ.
ಕಡು ಬಡತನದಿಂದಾಗಿ, ನಾಗರ ಬೆತ್ತದಿಂದ ಹೊಡೆಯುವ ಶಿಕ್ಷೆಯಿಂದಾಗಿ, ತಲೆಗೆ ಹತ್ತದ ಗಣಿತದಿಂದಾಗಿ, ಹೀಗೆ ನಾನಾ ಕಾರಣಗಳಿಂದ ಶಾಲೆ ಬಿಟ್ಟವರು ಮತ್ತು ಇನ್ನು ಬಿಡುವವರು ಇನ್ನು ಮುಂದೆ ಎಚ್ಚರವಾಗುವುದು ಒಳಿತು.ಯಾಕೆಂದರೆ ವಿದ್ಯೆ ಇಲ್ಲದಿದ್ದರೆ ಇನ್ನು ಮುಂದೆ ಖಾಲಿ ಹೊಟ್ಟೆಯೇ ಗತಿ!
ಹಾಗೇ ಸುಮ್ಮನೆ- ಕೇಂದ್ರ ಸರಕಾರದ ಹೊಸ ಆದೇಶವನ್ನು ಕೇಳಿದ ಉಮೇಶ, 'ಇನ್ನು 10 ವರ್ಷ ಕಳೆದರೆ, ಗದ್ದೆ ಕೆಲಸ ಮಾಡಲು ಕೂಡ MBA ಪಾಸು ಮಾಡಬೇಕು' ಎಂಬ ಆದೇಶ ಬಂದರೂ ಅನುಮಾನವಿಲ್ಲ ಎನ್ನುತ್ತಿದ್ದಾನೆ.
                                            -ಡಾ.ಶೆಟ್ಟಿ    
ಬ್ಯಾಲನ್ಸ್ ಬಜೆಟ್
ಮುಖರ್ಜಿಯವರು ನಿನ್ನೆ ಮಂಡಿಸಿದ ಬಜೆಟ್ ಸಮಾಧಾನಕರವಾಗಿದೆ  ಎಂದರೆ ತಪ್ಪಾಗಲಾರದು.  ಇವರ ಬಜೆಟಿನಲ್ಲಿ ಮೋಡದ  ಮರೆಯಿಂದ ಚಂದ್ರ ಆಗಾಗ ಬಂದು ಕಾಣುವಂತೆ ಇವರ ಬಜೆಟ್ ನಲ್ಲಿ ಶ್ರೀ ಸಾಮಾನ್ಯ ಒಮ್ಮೊಮ್ಮೆ ಕಾಣುತ್ತಾನೆ. 
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯವರ ವೇತನ ದುಪ್ಪಟ್ಟುಗೊಳಿಸಿ, ಅತೀ ಕನಿಷ್ಠ ವೇತನ ಪಡೆಯುತ್ತಿದ್ದವರೆಂಬ ಕೀಳರಿಮೆಯಿಂದ ಹೊರಬರುವಂತೆ ಮಾಡಿದ್ದಾರೆ. income tax slab ತಕ್ಕ ಮಟ್ಟಿಗೆ ಏರಿಕೆಯಾಗಿದೆ.ಒಂದೆಡೆ ಕೃಷಿಕರ ಕಣ್ಣೋರೆಸಿದರೆ, ಮತ್ತೊಂದೆಡೆ ಗ್ರಾಮೀಣ ಪ್ರದೇಶಗಳಿಗೆ ರಸ್ತೆ ಮತ್ತು ದೂರ ಸಂಪರ್ಕಕ್ಕೆ ಒತ್ತು ನೀಡಿದ್ದಾರೆ. ಇನ್ನೊಂದೆಡೆ ಸಿಮೆಂಟ್, ಮೊಬೈಲ್,ಸೈಕಲ್, ಹೊಲಿಗೆಯಂತ್ರಗಳು, ಬ್ರಾಂಡೆಡ್ ಉಡುಪುಗಳು, ವಿಮಾನಯಾನ, ಆಭರಣ, ಹವಾನಿಯಂತ್ರಿತ ಬಾರ್, ಖಾಸಗಿ ಆಸ್ಪತ್ರೆಗಳು, ಹೋಟೆಲ್ ಸೇವೆ, ಇದರ ಜೊತೆ ಔಷಧಿ ಮೊದಲಾದ ಮೂಲಭೂತ ವಸ್ತುಗಳ ಬೆಲೆ ಏರಿಕೆಯಾಗಿದೆ.
ಈ ರೀತಿಯಾಗಿ ಒಂದು ಏರಿ, ಒಂದು ಇಳಿದು; ಒಂದು ಎದ್ದು, ಮತ್ತೊಂದು ಬಿದ್ದು ಒಟ್ಟಾರೆಯಾಗಿ ಅಲ್ಲೂ ಇಲ್ಲ, ಇಲ್ಲೂ ಇಲ್ಲ. ಅಲ್ಲೂ ಎದೆ ಇಲ್ಲೂ ಇದೆ ಎನ್ನುವ ರೀತಿಯಲ್ಲಿ 2G ಹಗರಣವನ್ನು ಮರೆಮಾಚುವ ಹಪಾಹಪಿಯಲ್ಲಿ ಜನರನ್ನು, ಕ್ಷಮಿಸಿ ಮತದಾರರನ್ನು ಓಲೈಸುವ ಪ್ರಯತ್ನ ಮಾಡಿದ್ದಾರೆ. ಒಟ್ಟು 12,57,729 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿ ತಕ್ಕ ಮಟ್ಟಿಗೆ ಮತದಾರರನ್ನು ಓಲೈಸಿದ್ದಾರೆ. ಆದರೂ ಇದನ್ನು ಮಂಕು ಕವಿದ ಬಜೆಟ್ ಎಂದೇ ಕರೆಯಬಹುದು.
                                                -ಡಾ.ಶ್ರೇ 

ಬದುಕು ಒಂದು ಪಯಣ
ಜೀವನವೆಂಬುದು ಒಂದು ಪಯಣ. ಅದು ಹುಟ್ಟಿನಿಂದ ಸಾವಿನ ಕಡೆಗೆ, ಗೆಲುವುಗಳು ಅಲ್ಲೊಂದು ಮೈಲು ಕಲ್ಲುಗಳು ಅಷ್ಟೇ. ಅಲ್ಲಿ ಎಷ್ಟೋ ಬಿರುಗಾಳಿಗಳು ತನ್ನ ಆರ್ಭಟವನ್ನು ಗೈಯ್ಯಬಹುದು. ಕತ್ತಲಿನ ಮಬ್ಬಿಗೆ ನಮ್ಮನ್ನು ನೂಕಿಬಿಡಬಹುದು. ಆದರೆ ಮತ್ತೆ ಹುರುಪಿನೊಂದಿಗೆ ನಮ್ಮ ಪಯಣ. 
ಇಳಿಯಲಾಗದ ಆಳಕ್ಕೆ ನನ್ನ ಗೆಳೆಯನ ಆಲೋಚನೆಗಳು ಇಳಿದಾಗ ಆತನು ಆಂಗ್ಲ ಸಾಹಿತ್ಯದ ಅದ್ಭುತ ಸೃಷ್ಟಿಯಲ್ಲಿ ಒಂದಾದ S.T Coleridge ರವರ  Ancient mariner ಬಗ್ಗೆ ನನ್ನಲ್ಲಿ ಮಾತಿಗಿಳಿದ ಸಂದರ್ಭ ಬಂದ ಮಾತುಗಳು, ಅನುಭವಗಳು ಇವಾಗಿವೆ.
ಸಾಗರದ ತೀರದಲ್ಲಿ ಎತ್ತರವಾದ ಬೆಟ್ಟ ತುದಿಯಲ್ಲಿ ಒಂದು ಲೈಟ್ ಹೌಸ್ ಇದ್ದಾಗ ಅದು ಸುತ್ತಲಿಗೂ ಬೆಳಕನ್ನು ಸೂಚಿಸುತ್ತದೆ. ಅದರ ಬುಡದಲ್ಲಿ ಮಾತ್ರ ಕತ್ತಲು ತುಂಬಿರುತ್ತದೆ. ಈ ರೀತಿ ದ್ವಂದ್ವಗಳ ನಡುವೆ ಸಿಲುಕುವ ಮತ್ತು ಆಶಾ ಭಾವನೆ ಹೊಂದುವ ಬದುಕು, ಕೇವಲ ಬದುಕು ಅಷ್ಟೇ 
ಸಾಗರದ ಮಧ್ಯೆ, ಹಡಗಿನಲ್ಲಿನ ಎಲ್ಲಾ ನಾವಿಕರು ಸತ್ತಿರುವ ಸಂದರ್ಭ ಅವರೆಲ್ಲರ ನಾಯಕನಾಗಿರುವ ನಾವಿಕ ತಾನೇಕೆ ಬದುಕಿದೆ ಎಂಬ ಭಾವನೆ ಒಂದೆಡೆಯಾದರೆ, ಇನ್ನೊಮ್ಮೆ ಬದುಕಬೇಕೆಂಬ ಆಶಾಭಾವನೆ ಮೂಡುತ್ತಿತ್ತು. ಸತ್ತ ನಾವಿಕರ ಕಣ್ಣುಗಳು ಮುಚ್ಚಿರದೆ ಸತ್ತ ನಂತರ ಬದುಕಿನ ಬಗ್ಗೆ ಆಶಾ ಭಾವನೆ ಹೊಂದಿರುವಂತೆ ಕಾಣುತ್ತಿತ್ತು. ಈ ರೀತಿಯ ಜಂಜಾಟಗಳ ನಡುವೆ ನಾಯಕ ನಾವಿಕನು ಕೊಂದ ಅಲ್ಬಟ್ರಾಸ್ ಪಕ್ಷಿಯ ಶಾಪದಂತೆ ಕಾಣಸಿಗುತ್ತದೆ. ತನ್ನ ಮನದ ನೋವನ್ನು ಹೇಳಿಕೊಂಡು ಪಶ್ಚಾ ಪಟ್ಟು ಕೊಂಡಾಗ ಸ್ವಲ್ಪ ನಿದ್ದೆ ಬರುವುದು ಸಹಜ.  ತದ ನಂತರ ಪುನಃ ಅದೇ ಪಶ್ಚಾತಾಪ ಭಾವ ಆತನಲ್ಲಿ ಕಾಣಸಿಗುತ್ತದೆ. 
ಇದನ್ನು ಓದಿದ ಬಳಿಕ ಅದು ಯಾವುದೋ ಗುರಿ ತಲುಪುವ ತವಕದಲ್ಲಿರುವವರಿಗೆ, ಹತ್ತು ಹಲವು ಆಲೋಚನೆಗಳು ಬಂದು ಮಗ್ನರಾಗುವುದರಲ್ಲಿ ಸಂಶಯವಿಲ್ಲ.
                                             -ಕೆ.ಪಿ.ಭಟ್   

Monday, February 28, 2011

ವಿಧಾನಮಂಡಲದಲ್ಲಿ ಕದನ ವಿರಾಮ
ನಮ್ಮ ರಾಜಕಾರಣಿಗಳ ಬಾಕ್ಸಿಂಗ್ ಫೀಲ್ಡ್, ವಿಧಾನಸೌಧ ಶಾಂತವಾಗುವ ಲಕ್ಷಣ ಕಾಣುತ್ತಿದೆ. ಎಷ್ಟೋ ಸಮಯದಿಂದ ವಿಧಾನಸಭೆಯ ಅಧಿವೇಶನಗಳು ಯುದ್ಧರಂಗದಂತೆ ಕಾಣುತ್ತಿತ್ತೇ ವಿನಃ ಅಲ್ಲಿ ರಾಜ್ಯದ ಜನತೆಯ ಸಂಭಂದಿಸಿದ ಚರ್ಚೆ ನಡೆಯುತ್ತಿರಲಿಲ್ಲ.
ಯಾವುದೋ ಹಾಳುಹಿಡಿದ ಭೂಹಗರಣ, ರೆಡ್ಡಿಗಳ ಗಣಿ ಗಲಭೆ, ಮುಂತಾದ ಕೆಲಸಕ್ಕೆ ಬಾರದ ಚರ್ಚೆ ನಡೆದು, ಚರ್ಚೆ ಅತಿರೇಕಕ್ಕೆ ಹೋಗಿ, ಅವಾಚ್ಯ ಪದಗಳ ಬಳಕೆಯಾಗುತ್ತಿತ್ತು. ರಾಜ್ಯದ ಜನರ ಕಣ್ಣಿಗೆ ಕರ್ನಾಟಕ ವಿಧಾನಸಭೆ ಕಾರ್ಗಿಲ್ ಯುದ್ಧ ಭೂಮಿಯಂತೆ ಗೋಚರಿಸುತ್ತಿತ್ತು. ಮನೆಮನೆಗೆ ವೋಟು ಕೇಳಿಕೊಂಡು ಬರುವಾಗ, 'ಅಣ್ಣಯ್ಯ, ದಮ್ಮಯ್ಯ' ಅನ್ನುತ್ತಿದ್ದವರು, ವಿಧಾನಸಭೆಯಲ್ಲಿ 'ಬೊ ಮಗ, ಸೂ ಮಗ' ಪದಗಳ ಬಳಕೆ ಮಾಡುವಾಗ; ಜನರಿಗೆ ಪುಕ್ಕಟೆ ಮನರಂಜನೆ ಸಿಗುತ್ತಿತ್ತೇ ವಿನಃ ಉಪಯೋಗವಂತೂ ಏನೂ ಇಲ್ಲ.
ಅಂತೂ ಇಂತೂ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಯಾಕೋ ಚೂರು ಚಿಂತೆ ಮಾಡಿ, 'ನಮ್ಮ ಡೊಂಬರಾಟ ಇನ್ನು ಸಾಕು. ಎಂತೂ ವೋಟು ಹತ್ತಿರವಾಗುತ್ತಿದೆ, ಇನ್ನಾದರೂ ಸ್ವಲ್ಪ ಬಡವರ ಬಗ್ಗೆ ಮಾತನಾಡೋಣ' ಎಂದು ಭಾವಿಸಿದರೋ ಏನೋ, ಒಟ್ಟಿನಲ್ಲಿ ಇನ್ನು ಮುಂದೆ ವಿಧಾನಮಂಡಲದಲ್ಲಿ ಸುಗಮ ಚರ್ಚೆಯಾಗುತ್ತದೆ ಎಂಬ ನಿರೀಕ್ಷೆ ಮೂಡಿದೆ.
ಯಡಿಯೂರಪ್ಪನವರ ಭೂಹಗರಣವನ್ನು ಕೋರ್ಟ್ ನೋಡಿಕೊಳ್ಳುತ್ತದೆ. ರೆಡ್ಡಿಗಳಿಗೆ C.B.I ಕಾಯುತ್ತಿದೆ. ಇನ್ನಾದರೂ ಸರಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಪ್ರತಿಪಕ್ಷಗಳು ಆರೋಗ್ಯಪೂರ್ಣ ಚರ್ಚೆ ನಡೆಸಬೇಕು. 
ಹಾಗೇ ಸುಮ್ಮನೆ - ಮಾತು ಮಾತಿಗೆ 'ನನ್ನ ಬಳಿ ಸಿ.ಡಿ ಇದೆ' ಎನ್ನುತ್ತಿದ್ದ ಕುಮಾರಣ್ಣನವರಿಗೆ, ನಮ್ಮ ಯಡ್ಡಿಯವರು 'ಹಿಂದೆ ಸಂಸತ್ತಿನಲ್ಲಿ, ಗೌಡರ ಪಂಚೆ ಜಾರಿದ ವಿಡಿಯೋವನ್ನು You tube ಗೆ ಹಾಕುತ್ತೇನೆ' ಎಂದು ಹೆದರಿಸುತ್ತಿರಬೇಕು. ಹಾಗೇ ಕದನವಿರಾಮ ಆಗಿರಬೇಕು ಎಂಬುವುದು ಉಮೇಶನ ಊಹೆ.
                                                                               -ಡಾ.ಶೆಟ್ಟಿ
ಸ್ವಲ್ಪ ಸಮಯ
ಸಂಜೆಯ ಹೊತ್ತು ಕೆಲಸ ಮುಗಿಸಿ, ಅದು ಯಾವುದೋ ಆಲೋಚನೆಗಳನ್ನು ಹೊತ್ತುಕೊಂಡು ಮನೆಗೆ ತೆರಳಬೇಕಾದರೆ ಮನೆಯ ಹೆಂಗಸರು ಟಿ.ವಿ. ಮುಂದೆ ನಿಂತ ನೀರಂತೆ  ಸ್ವಲ್ಪವೂ ಕದಲದೆ ಒಂದೇ ಚಿತ್ತದಲ್ಲಿ ಟಿ.ವಿ ವೀಕ್ಷಣೆಯಲ್ಲಿ ತೊಡಗಿರುತ್ತಾರೆ. 
ಖಡಾಖಂಡಿತವಾಗಿ ಈ ಮಾತನ್ನು ಹೆಂಗಸರ ಮೇಲೆ ಹೊರಿಸುವುದು ತಪ್ಪಾದರೂ ಹೆಚ್ಚಾಗಿ ಈ ಸಮಸ್ಯೆಗಳು ಇರುವುದೇ ಅವರುಗಳಲ್ಲಿ. ಆಲೋಚನೆಗಳಿಗೆ ಸಾಥ್ ನೀಡುವುದು ಬಿಡಿ. ಕಡೆ ಪಕ್ಷ ಒಂದು ಲೋಟ ನೀರು ತಂದುಕೊಡಲು ಸಮಯದ ಅಭಾವ ಇರುತ್ತದೆ. ಮನೆಯ ಗಂಡಸರಿಗೆ ಇಂತಹ ನೋವುಗಳು ಸಾಮಾನ್ಯವಾಗಿರಬಹುದು. ಆದರೆ ಮನೆಗೆ ಅತಿಥಿಗಳು ಬರುವ ಸಂಧರ್ಭವೂ ಇದೆ ಚಾಳಿ ಕೆಲವು ಮನೆಗಳಲ್ಲಿ  ಮುಂದುವರಿಯುತ್ತಿರುತ್ತದೆ. 
ಮನೆಗೆ ಬರುವ ಅತಿಥಿಗೆ ಕಾಫಿ ತಿಂಡಿ ಕೊಟ್ಟು ಸತ್ಕಾರ ಮಾಡುವುದಕ್ಕಿಂತಲೂ ಮನಸ್ಸಿನಿಂದ ಬಾಯಿ ತುಂಬಾ ಮಾತನಾಡಿ ಗೌರವ ಸಲ್ಲಿಸುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಬುವುದು ನಮ್ಮ ಭಾವನೆ. ಮನೆಯೊಳಗೆ ತಿಂಡಿ ತಿನಿಸುಗಳ ಗೋದಾಮು ಇರಬೇಕೆಂದೇನಿಲ್ಲ. ಮಡಿಕೆ ತುಂಬಾ ನೀರಿದ್ದರೆ ಸಾಕು! 
ಮನಸ್ಸನ್ನು ಹಾಳು ಮಾಡುವ ಧಾರಾವಾಹಿಯನ್ನು ನೋಡಿ ನಾಳೆ ಏನಾಗಬಹುದು ಎಂದು ಇಂದೇ ಊಹಿಸಿ ಚಿಂತನೆಯಲ್ಲಿ ಮಗ್ನರಾಗಿ, ಮನೆಯವರ ಚಿಂತೆಗೆ ಸಮಯ ದೊರಕದೆ ಹೋದರೆ ಆ ಕುಟುಂಬವು ಅದು ಯಾವ ನೆಮ್ಮದಿಯನ್ನು ಕಾಣಲು ಸಾಧ್ಯ? ನೀವೇ ಹೇಳಿ 
ಇದರ ಅರ್ಥ ಧಾರಾವಾಹಿಗಳನ್ನು ನೋಡುವುದನ್ನು ಬಿಟ್ಟು ಬಿಡಿ ಎನ್ನುವುದಲ್ಲ. ಹೆಚ್ಚಿನ ಧಾರಾವಾಹಿಗಳ ಕಥೆಯಂತೆ ನಿಮ್ಮ ಜೀವನವೂ ಆಗುವುದು ಬೇಡವೆಂಬುದು ನಮ್ಮ ಬಯಕೆ.
                                      -ಕೆ.ಪಿ.ಭಟ್

Thursday, February 24, 2011

ವಾರ್ಷಿಕೋತ್ಸವ ವರ್ಷಾ೦ತಿಕವಾಗದಿರಲಿ  
ಕಾಲೇಜಿನ ವಾರ್ಷಿಕೋತ್ಸವದಿಂದ ನಮ್ಮ ಉಮೇಶ ಎದ್ದು ಬಿದ್ದು ಓಡುತ್ತಿದ್ದ. 'ಯಾಕಯ್ಯ ಈ ರೀತಿ ಓಡುತ್ತಿದ್ದೀಯ?'. ಎಂದು ನಾನು ಕೇಳಿದಾಗ ನನಗೂ ನಗು ತಡೆದುಕೊಳ್ಳಲಾಗಲಿಲ್ಲ. ಯಾಕೆಂದರೆ, ಕಾಲೇಜಿನಲ್ಲಿ ವಾರ್ಷಿಕೋತ್ಸವ ಎಂದು ನಮ್ಮ ಉಮೇಶ ಫುಲ್ ಸಿಂಗಾರಗೊಂಡು ಹೋಗಿದ್ದನಂತೆ. ಕಾಲೇಜಿನಲ್ಲಿ 'ಈ ದಿನ ವೈವಿಧ್ಯಮಯ ಡ್ಯಾನ್ಸ್ ಗಳನ್ನೂ ಹಾಡುಗಳನ್ನು ನೋಡಬಹುದು, ಯಾವತ್ತಿನಂತೆ ಪಾಠದ ಟೆನ್ಶನ್ ಇಲ್ಲ' ಎಂಬ ಭಾವನೆಯಲ್ಲಿ ಉಮೇಶ ಕಾಲೇಜಿಗೆ ಹೋಗಿದ್ದಂತೆ. ಆದರೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಯಾರೋ 4,5  ಜನ ಮುದುಕರು ಸೇರಿಕೊಂಡು ಮಧ್ಯಾನದ ವರೆಗೆ ಭರ್ಜರಿ ಭಾಷಣ ಹೊಡೆದರಂತೆ, ಅದನ್ನು ಸಹಿಸಿಕೊಂಡು ಇನ್ನಾದರು ಕಾರ್ಯಕ್ರಮಗಳು ಆರಂಭವಾಗಬಹುದು ಎಂದುಕೊಂಡ ಉಮೇಶ, ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದ್ದನಂತೆ. ಆದರೆ ಯಾವುದೋ ಒಬ್ಬಳು ಹುಡುಗಿ ಚಿತ್ರ ವಿಚಿತ್ರ ವೇಷ ಧರಿಸಿ, ಕುಣಿದಾಡಲು ಆರಂಭಿಸಿದಳಂತೆ. ಅದನ್ನು ಕಂಡವನಿಗೆ ತನ್ನ ಊರಿನ ಮಾರಮ್ಮನ ಜಾತ್ರೆಯ ನೆನಪಾಗಿ ಹೆದರಿ ಓಡಿ ಹೋಗುತ್ತಿದ್ದ. ಪಾಪ ಅವನಿಗೆ ಕೊನೆಯ ವರೆಗೂ ಆ ಹುಡುಗಿ ಮಾಡಿದ್ದು ಭರತನಾಟ್ಯವೆಂದು ಗೊತ್ತೇ ಆಗಲಿಲ್ಲ!
ಇಂತಹ ಕಾಲೇಜು ವಾರ್ಷಿಕೋತ್ಸವಗಳು ಬೇಕೇ ಓದುಗರೇ? ನೀವೊಮ್ಮೆ ಕೆಲ ಕಾಲೇಜಿನ ವಾರ್ಷಿಕೋತ್ಸವಗಳಿಗೆ ಹೋಗಿ ನೋಡಿ ಇಡೀ ಕಾರ್ಯಕ್ರಮಗಳು ಬೋರು ಹೊಡೆಸುತ್ತವೆ. ಈಗಿನ ವಿದ್ಯಾರ್ಥಿಗಳಿಗೆ ಭರತನಾಟ್ಯ, ತಾಳಮದ್ದಳೆ, ಹರಿ ಕಥೆಯನ್ನು ಕಂಡರೆ ಅಷ್ಟಕಷ್ಟೆ. ಆ ಕಾರ್ಯಕ್ರಮಗಳಿಗೆ ಖಾಲಿ ಕುರ್ಚಿಗಳೇ ವೀಕ್ಷಕರು. ಅಂತಹದರಲ್ಲಿ ಅದನ್ನೇ ಹೆಚ್ಚು ಹೆಚ್ಚು ಹಾಕಿ ವಿಧ್ಯಾರ್ಥಿಗಳಿಗೆ ಬೋರು ಹೊಡೆಸಿ ಬಿಡುತ್ತಾರೆ. ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳೇ ಮುಖ್ಯಪಾತ್ರ ವಹಿಸುವವರು. ಆದರೆ ಅವರ ಭಾವನೆಗಳಿಗೆ ಬೆಲೆ ಕೊಡದೆ, ಸಂಸ್ಕೃತಿ, ಸಭ್ಯತೆ ಎಂದುಕೊಂಡು, ಓಬಿರಾಯನ ಕಾಲದ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇನ್ನಾದರೂ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ತಮ್ಮ ಸೀಮಿತ ಮನಸ್ಸನ್ನು ಬದಿಗಿಟ್ಟು, ಒಂದು ದಿನವಾದರೂ ಉದಾರವಾಗುವುದು ಒಳಿತು.
                                                 -ಡಾ.ಶೆಟ್ಟಿ 
ಮತ್ತೆ ಅಂತೆಯೇ ಆಗದಿರಲಿ 
ಈ ಬಾರಿ ಯಡಿಯೂರಪ್ಪನವರು ತಮ್ಮ ಸೋಲುಗಳು ಮತ್ತು ಸೋಲಿನಿಂದ ಹೊರಬರುವ ಯೋಜನೆಯನ್ನು ಮನನ ಮಾಡಿ ಬಜೆಟ್ ಮಂಡನೆ ಮಾಡಲಿದ್ದಾರೆ. ಒಂದು ವೇಳೆ ಮಧ್ಯಂತರ ಚುನಾವಣೆ ಎದುರಾದರೆ, ಅದಕ್ಕೂ ಪೂರಕವಾಗುವಂತೆ ಬಜೆಟ್ ಅನ್ನು ತಯಾರಿಸಿ ಜನರ ಮನವೊಲಿಸಲಿದ್ದಾರೆ ಎನ್ನಬಹುದು.
ಕೃಷಿಕರಿಗೆ ಶೇ 1ರ ಬಡ್ಡಿ ದರದಲ್ಲಿ ಬೆಳೆ ಸಾಲ, ಒಣಭೂಮಿ ಅಭಿವ್ರದ್ದಿ  ಯೋಜನೆ, ಭತ್ತ-ಕಬ್ಬು ನಾಟಿ ಮತ್ತು ಕಟಾವು ಯಂತ್ರಗಳಿಗೆ ಸಬ್ಸೀಡಿ, ಬಸವೇಶ್ವರ ವಿ.ವಿ ಸ್ಥಾಪನೆ, ಶಾಸಕರ ನಿಧಿ 2 ಕೋಟಿ ರೂ ಗೆ  ಹೆಚ್ಚಳ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕೃತಿಗಳು ಕಡಿಮೆ ಬೆಲೆಗೆ ಮಾರಾಟ, ವಾಜಪೇಯಿ ಆರೋಗ್ಯಶ್ರೀ ಯೋಜನೆ ಮೈಸೂರು ವಿಭಾಗಕ್ಕೆ ವಿಸ್ತರಣೆ, ಅಕ್ಕಿ-ಬೇಳೆ ಕಾಳು ಮೇಲಿನ ತೆರಿಗೆ ಕಡಿತ. ಇವು ಮುಂಗಡ ಪತ್ರದಲ್ಲಿ ಪ್ರಕಟಣೆ ಹೊರಬೀಳುವ ನಿರೀಕ್ಷೆಯಲ್ಲಿರುವ ಪ್ರಮುಖ ಯೋಜನೆಗಳು.
ಈ ಯೋಜನೆಗಳು ಇದೇ ರೀತಿ ಪ್ರಕಟಗೊಂಡು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ಬಂದರೆ, ಇದರಿಂದ ಯಾರಿಗೆ ಲಾಭವಾಗುತ್ತದೆಯೋ, ನಷ್ಟವಾಗುತ್ತದೆಯೋ ಎಂಬ ಚರ್ಚೆಯೇ ಬೇಡ. ಯಾಕೆಂದರೆ?  ಇದು ಸಂಪೂರ್ಣ ಜನ ಪರ ಬಜೆಟ್. ಮೇಲೆ ಹೇಳಿರುವ ಎಲ್ಲಾ ಯೋಜನೆಗಳಿಂದ ಜನರಿಗೆ ಅತ್ಯಂತ ಲಾಭವಿದೆ. ಆದರೆ ಪ್ರಶ್ನೆ ಇರುವುದು , ಈ ಎಲ್ಲಾ ಯೋಜನೆಗಳು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ಬರುತ್ತದೆಯೋ ಇಲ್ಲವೋ ಎಂದು.ಏಕೆಂದರೆ, ಕಳೆದ ಬಾರಿ ಬಜೆಟ್ ನಲ್ಲಿ ಪ್ರಕಟಗೊಂಡ 'ಕೆಲವು' ಯೋಜನೆಗಳು ನೆನೆಗುದಿಗೆ ಬಿದ್ದಿದೆ. ಇನ್ನೂ ಕೆಲವು ಯೋಜನೆಗಳು ಜಾರಿಗೆ ಬರಲಿಲ್ಲ. ಬರೀ ಆರಂಭಶೂರತನಕ್ಕೆ  ಮತ್ತು ಮತಗಳಿಕೆಗೆ ಮಾಡುವ ಗಿಮಿಕ್ನಂತೆ ಆವತ್ತಿನ ಬಜೆಟ್ ಆಗಿದೆ ಎಂದರೂ ತಪ್ಪಲ್ಲ. ಈ ಬಾರಿಯೂ ಹಾಗೇ ಆಗದಿರಲಿ ಎಂದು ನಾವು ಆಶಿಸೋಣ. 
ನಾವು ಯಾವತ್ತೂ ಆಶಾವಾದಿಗಳಾಗಿರಬೇಕು. ಆದರೆ ರಾಜ್ಯದ ತಲೆಯ ಮೇಲಿರುವ ಸಾಲಕ್ಕಿಂತ ಅಧಿಕ ಮೊತ್ತದ ಬಜೆಟ್ ಮಂಡಿಸುತ್ತೇವೆ ಎಂದು ಬೊಂಬಡ ಬಡೆದರೆ ಯಾರಿಗೆ ನಗು ಬರಲ್ಲ ಹೇಳಿ ? ಇದರಿಂದ ಜನ ಯಾವತ್ತಿನಂತೆ ನಿರಾಶಾವಾದಿಗಳಾಗುತ್ತಾರೆ. ನಾವೇ ಮಾಡಿದ ತಪ್ಪಿಗೆ ನಾವೇ ಶಿಕ್ಷೆ ಅನುಭವಿಸ ಬೇಕು ಬಿಡಿ.
                                  -ಡಾ.ಶ್ರೇ 
ದಶಮುಖ ಮುಂಡ
ಹೆಂಡತಿಯನ್ನು ಕೊಂದನೋ ಅಥವಾ ಅವಳೇ ಆತ್ಮಹತ್ಯೆ ಮಾಡಿದಳೋ ತಿಳಿಯದು. ಸರಕಾರದ ಕ್ರಪಾಶಯ ಇರುವುದರಿಂದ, ಬೇಲಿಯನ್ನೇ ಹಾವಿನ ಮೇಲೆ ಹರಿಸಬಹುದು. ಅಲ್ಲವೇ? ಉಡುಪಿ ಶಾಸಕ ರಘುಪತಿ ಭಟ್ ಪತ್ನಿಯ ಸಾವಿನ ಸಂಧರ್ಭ ಬಹಳಷ್ಟು ಬೆಳಕಿಗೆ ಬಂದಿದ್ದರು. ತದ ನಂತರ ಈದಿನಗಳಲ್ಲಿ ಹೊಸ ರೀತಿಯಲ್ಲಿ ತನ್ನ ಮಾನವಿಯಾತೆ ಮೆರೆಯುತ್ತಿದ್ದಾನೆ. 
ಅಥಿತಿ ಉಪನ್ಯಾಸಕರಿಗೆ ವರ್ಷಕೊಮ್ಮೆ ದೊರಕುವ ವೇತನದಿಂದ ಕುಟುಂಬ ವೆಚ್ಚ ಭರಿಸುವುದು ಕಷ್ಟ ಈ ನಿಟ್ಟಿನಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಇದರ ನಡುವೆ ರಘುಪತಿ ಭಟ್ ಉಡುಪಿಯ ಎರಡು ಕಾಲೇಜುಗಳಿಗೆ ಪುನಃ ಹೊಸ ಅಥಿತಿ ಉಪನ್ಯಾಸಕರನ್ನು ನೇಮಕ ಮಾಡಲು ದಿನಪತ್ರಿಕೆಗಳಲ್ಲಿ ಜಾಹಿರಾತು ಕೊಟ್ಟಿದ್ದಾನೆ. ಪ್ರಸ್ತುತ ಸರಕಾರಿ ಕಾಲೇಜುಗಳಲ್ಲಿರುವ ಅಥಿತಿ ಉಪನ್ಯಾಸಕರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಎಳ್ಳಷ್ಟು ಮಾನವೀಯತೆಯನ್ನು ತೋರದೆ ಇರುವುದು ಆತನ ನೀಚ ವ್ಯಕ್ತಿತ್ವವನ್ನು ಎತ್ತಿ ತೋರುತ್ತದೆ. 
ಹೆಂಡತಿ ಸತ್ತು ಮುಂಡನಾಗಿರುವ ಇವನು ಅದು ಯಾವ ಸೀಮೆ ಉದ್ದಾರ ಮಾಡಲು ಈತನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದರೋ ಅರ್ಥವಾಗುತ್ತಿಲ್ಲ. ಮಾನವೀಯತೆ ಪದದ ಅರ್ಥವೇ ತಿಳಿಯದ ತನ್ನ ಹೆಂಡತಿ ಸತ್ತ ಸಂಧರ್ಭದಲ್ಲಿ ಒಂದೇ ಸಮನೆ ಮಳೆ ಬಂದಂತೆ ಕಣ್ಣೀರು ಧಾರೆಯನ್ನು ಹರಿಸಿದ್ದ. 
ನಾನಾ ರೀತಿಯ ಮುಖವಾಡಗಳನ್ನು ಧರಿಸಿರುವ ವ್ಯಕ್ತಿಗಳಿಂದಲೇ ಇಂದು ಹೆಚ್ಚಿನ ಮನೆಯಲ್ಲಿ ನೆಮ್ಮದಿ ಮಾಯವಾಗಿದೆ. ನ್ಯಾಯದೇವತೆಯ ಕಣ್ಣಿನಿಂದ ಕಪ್ಪು ಪಟ್ಟಿಯನ್ನು ತೆಗೆದು ಸೋಡಾ ಗ್ಲಾಸ್ ಹಾಕುವ ತವಕದಲ್ಲಿ ನಾನಿದ್ದೇನೆ. 
                                            -ಕೆ.ಪಿ.ಭಟ್ 

Wednesday, February 23, 2011

ಇಸ್ರೇಲ್ ಹುಟ್ಟಿದ ಕಥೆ 
ಇಸ್ರೇಲ್ ಎಂಬ ಪುಟ್ಟ ದೇಶವನ್ನು ನೆನಪು ಮಾಡಿಕೊಂಡರೆ ನಮ್ಮ ಕಣ್ಣೆದುರು ಯಹೂದಿ ಧರ್ಮ ಬಂದು ನಿಲ್ಲುತ್ತದೆ. ಯಹೂದಿಗಳನ್ನು ನೆನೆದರೆ ಕೈಗಾರಿಕೆ,ಉತ್ಪಾದನೆ, ವ್ಯಾಪಾರ ಮೊದಲಾದ ಚಟುವಟಿಕೆಗಳಲ್ಲಿ ಅವರು ನೀಡಿರುವ ಅಪಾರ ಕೊಡುಗೆ ನೆನಪಾಗುತ್ತದೆ. ಯಹೂದಿ ಧರ್ಮವೆಂದರೆ ಅದು ಛಲಕ್ಕೆ ಮತ್ತೊಂದು ಹೆಸರು. ನೀವೊಮ್ಮೆ ವಿಶ್ವದ ಭೂಪಟವನ್ನು ತೆಗೆದು ನೋಡಿ, ಇಸ್ರೇಲ್ ದೇಶದ ಅಕ್ಕ-ಪಕ್ಕದಲ್ಲಿ ಇರುವ ದೇಶಗಳ ಕಡೆಗೆ ಕಣ್ಣಾಡಿಸಿ: ಯಾಕೆಂದರೆ ಇಸ್ರೇಲಿನ ಸುತ್ತಮುತ್ತ ಅರಬ್ ದೇಶಗಳೇ ಮುತ್ತಿಕೊಂಡಿವೆ. ಆ ಎಲ್ಲಾ ದೇಶಗಳಿಗೆ ಇಸ್ರೇಲ್ ಶತ್ರು ರಾಷ್ಟ್ರ. ನಮ್ಮ ದೇಶದ ಪಕ್ಕ ಇರುವ ಒಂದು ಪಾಕಿಸ್ತಾನದ ಉಪಟಳವನ್ನೇ ನಮ್ಮಿಂದ ಸಹಿಸಲಾಗುತ್ತಿಲ್ಲ, ಅಂತಹದರಲ್ಲಿ ಇಸ್ರೇಲ್ ಎಷ್ಟು ಕಷ್ಟಪಟ್ಟಿರಬಹುದು ಊಹಿಸಿ.
ಆದರೂ ಇಸ್ರೇಲ್ ಎಂದು ಜಗತ್ತಿನ ಕಣ್ಣುಕುಕ್ಕುವಂತೆ ಬೆಳೆಯುತ್ತಿದೆ. ಸದಾ ಯುದ್ದ ಭೀತಿಯಲ್ಲಿದ್ದರು, ಈ ದೇಶ ಅಪಾರ ಅಭಿವೃದ್ಧಿ ಹೊಂದಿದೆ. ಈ ಅಭಿವೃದ್ಧಿಯ ಹಿಂದೆ ಯಹೂದಿ ಜನರ ಅನನ್ಯ ಉತ್ಸಾಹವಿದೆ, ಬೆವರು ಸುರಿಸಿದ ಶ್ರಮವಿದೆ, ಅವರ ರಕ್ತದ ಕಣ-ಕಣದಲ್ಲೂ ಹರಿಯುವ ದೇಶ ಭಕ್ತಿಯಿದೆ.
ಈ ಯಹೂದಿಗಳ ಇತಿಹಾಸ ಕೂಡ interesting ಆಗಿದೆ, ಎಲ್ಲೂ ಬೋರು ಹೊಡಿಯದ ಇವರ ಕಥೆಯನ್ನೊಮ್ಮೆ ಓದಿಕೊಳ್ಳಿ;
ಯಹೂದಿಗಳ ಪೂರ್ವಜರು ಅರಬ್ ಪ್ರಸ್ಥಭೂಮಿಯ ಮರಳುಗಾಡಿನಲ್ಲಿ ಗುಂಪಾಗಿ ವಾಸಿಸುತ್ತಿದ್ದರು. ಅವರನ್ನು ಇಸ್ರೇಲೈಟ್ ಕುಲದವರೆಂದು ಕರೆಯುತ್ತಿದ್ದರು. ಆ ಅಲೆಮಾರಿ ಗುಂಪಿನಲ್ಲಿ ಮುಖ್ಯವ್ಯಕ್ತಿ ಏಬ್ರಾಹಂ. ಇವನು ಸುಮಾರು ಕ್ರಿ.ಪೂ. 2000 ದ ಹೊತ್ತಿಗೆ ಹೀಬ್ರೂ ಕುಟುಂಬದ ಯಜಮಾನನಾಗಿದ್ದನು. ಒಂದು ದಿನ ಏಬ್ರಾಹಂ ಗೆ ಕನಸು ಬೀಳುತ್ತದೆ, ಆ ಕನಸಿನಲ್ಲಿ ಅವನು ಪೂಜಿಸುವ ದೇವರು ಯಹೂ ವಿಶೇಷ ಸಂದೇಶ ಪ್ರವಚಿಸುತ್ತಾನೆ. ಅದರ ಪ್ರಕಾರ ' ಯಹೂದಿಗಳು ಅಲೆಮಾರಿ ಬದುಕು ಬಿಟ್ಟು, ಕೆನಾನ್(ಇಂದಿನ ಪ್ಯಾಲಸ್ತೀನ್) ಎಂಬ ಪ್ರದೇಶಕ್ಕೆ ವಲಸೆ ಹೋಗಿ, ಖಾಯಂ ಆಗಿ ನೆಲೆಸಬೇಕು' ಎಂಬ ಆಜ್ಞೆ ಮಾಡುತ್ತಾನೆ.ಅಲ್ಲಿಂದ ಮುಂದೆ ಯಹೂದಿಗಳಿಗೆ ಪ್ಯಾಲಸ್ತೀನ್ 'God promised land'(ದೇವರು ಕೊಟ್ಟ ಭೂಮಿ) ಆಗುತ್ತದೆ. 
ಇಲ್ಲಿಂದ ಮುಂದೆ ಯಹೂದಿಗಳು, ತುಂಬಾ ಕಷ್ಟಪಟ್ಟು ಪ್ಯಾಲಸ್ತೀನ್ ತಲುಪಿ, ತಮ್ಮ ಸಾಮ್ರಾಜ್ಯ ಸ್ಥಾಪಿಸುತ್ತಾರೆ. ನೆನಪಿಡಿ ಇದು ಕ್ರಿಸ್ತಪೂರ್ವದಲ್ಲಿ ನಡೆದ ಘಟನೆ! ಆದರೆ ವಿಪರ್ಯಾಸವೆಂದರೆ, ರೋಮನ್ನರು ಮತ್ತು ಗ್ರೀಕರು ಪ್ಯಾಲಸ್ತೀನ್ ಅನ್ನು ಆಕ್ರಮಿಸಿ ಯಹೂದಿಗಳನ್ನು ಅಲ್ಲಿಂದ ಓಡಿಸುತ್ತಾರೆ. ಯಹೂದಿಗಳು ಪುನಃ ಬೇರೆ ಬೇರೆ ದೇಶಗಳಿಗೆ ಸೇರಿಕೊಂಡು ಬಲಿಷ್ಠ ಜನಾಂಗವಾಗಿ ರೂಪುಗೊಳ್ಳುತ್ತಾರೆ. 
ಆದರೆ ವಿಶೇಷವೆಂದರೆ ಯಹೂದಿಗಳು ಯಾವುದೇ ದೇಶಕ್ಕೆ ಹೋದರು, ಅವರ ಸಂಸ್ಕೃತಿ, ಭಾಷೆಯನ್ನು ಉಳಿಸಿಕೊಂಡಿರುತ್ತಾರೆ.ದ್ವಿತೀಯ ಮಹಾಯುದ್ದದ ಸಮಯದಲ್ಲಿ ಯಹೂದಿಗಳು ಪುನಃ ಸಂಘಟಿತರಾಗಿ, ಇಸ್ರೇಲ್ ಗೆ ಹೋಗಿ ನೆಲೆಸುತ್ತಾರೆ. ಅಲ್ಲಿಯ ಮೂಲನಿವಾಸಿಗಳ ಜೊತೆ ಯುದ್ದ ಮಾಡಿ, ಮೇ 14 , 1948 ರಲ್ಲಿ ಇಸ್ರೇಲ್ ಪುನಃ ಯಹೂದಿಗಳ ವಶವಾಗುತ್ತದೆ. 
ಅಂತೂ ಇಂತೂ 2000 ವರ್ಷಗಳ ಹಿಂದೆ ತಮ್ಮ ಪೂರ್ವಜರು ನೆಲೆಸಿದ್ದ ಪ್ಯಾಲಸ್ತೀನ್ ನಲ್ಲಿ,ತಮ್ಮ ಸಾಮ್ರಾಜ್ಯ ಬೆಳೆಸುತ್ತಾರೆ. ಇದು ಯಹೂದಿಗಳ ಯಶೋಗಾಥೆ.
ಜಗತ್ತಿನ ಯಾವ ಜನಾಂಗ ಕೂಡ ಇಷ್ಟು ಕಷ್ಟಪಟ್ಟು ತಮ್ಮ ಧರ್ಮದ ಪವಿತ್ರ ಸ್ಥಳವನ್ನು ಉಳಿಸಿಕೊಂಡ ಉದಾಹರಣೆಗಳಿಲ್ಲ. ಈ ನಿಟ್ಟಿನಲ್ಲಿ ಯಹೂದಿಗಳನ್ನು ಮೆಚ್ಚಲೇ ಬೇಕು. 
                                             -ಡಾ.ಶೆಟ್ಟಿ 
ಭವಾಂತರ ಸಾಧಕರು 
ಅದೊಂದು ಅದ್ಬುತ ಲೋಕ, ಲೋಕ ಎಂದು ಅದನ್ನು ಹೇಳುವುದೇ ತಪ್ಪು. ಭವ ಮತ್ತು ಸ್ವರ್ಗದ ನಡುವಿನ Trance ಅದು ಎಂದು ಹೇಳುವುದೇ ಸೂಕ್ತ. ಭವದ ಎಲ್ಲಾ ಸೂಕ್ಷ್ಮತೆಗಳನ್ನು ಅರಿದು ಕುಡಿದು, ಮದ್ದು ಮಾಡಿ ಅದನ್ನು ಕಕ್ಕಿ, ಭವದ ಜನರೆಲ್ಲರೂ ಕಕ್ಕಾಬಿಕ್ಕಿಯಾಗುವಂತೆ ಮಾಡುವ ಭವ್ಯಾಂತರ ಲೋಕ. ಅತ್ತಕಡೆ, ಸ್ವರ್ಗದ  ಸ್ವರೂಪಗಳಲ್ಲಿ, ನೈಪುಣ್ಯತೆಗಳಲ್ಲಿ, ನಲಿದು ಕುಣಿದು ಅದನ್ನು ಸಾಧನೆಯಿಂದ ಆರಾಧಿಸಿ, ಸ್ವರ್ಗಾಂತರದ ಲೋಕದಲ್ಲಿ ಭವ್ಯವಾಗಿ ಬಾಳುತ್ತಾರೆ. ಯಾರಿವರು? ಇಷ್ಟು ಅತಿ ಸೂಕ್ಷ್ಮ ಭಾವನೆಯನ್ನು ಬರೆದಾಗಲಾದರೂ ಎಲ್ಲರಿಗೂ ಅರ್ಥವಾಗಬೇಕು. ಅರ್ಥವಾಗದಿದ್ದರೆ ಬಿಡಿ. ನಾನೇ ಹೇಳುತ್ತೇನೆ. ಇವರೇ ರುದ್ರನ ಆರಾಧಕರು, ಅರ್ಥಾತ್ ಶಿವನ ಮೂರನೇ ಮುಖವಾಗಿರುವ ರುದ್ರರು ಇವರು.  Yes ಇವರೇ ಅಘೋರಿಗಳು.
ಜೀವನದ  ಜಂಜಾಟದಿಂದ  ವಿಮುಖರಾಗಿ, ನಾಮ  ಬಳಿದು, ಶಿವನನ್ನು ಬದುಕೇ ಅಲ್ಲದ ಬದುಕಿನ ದೇವರನ್ನಾಗಿಸಿ ವಿಚಿತ್ರವಾಗಿ ಆರಾಧಿಸುತ್ತಾರೆ. ಅವರ ಆರಾಧನೆಯೇ ಒಂದು ವಿಸ್ಮಯ,ವಿಚಿತ್ರ, ನಿಗೂಢ, ಭಯಾನಕ. ಗಂಗೆಯಲ್ಲಿ ತೇಲಿ ಬಂದ ಹೆಣ ಭಕ್ಷಣಾ ವಿಧಿ , ಮಸಣದಲ್ಲಿ  ನಾಯಿಯನ್ನು ತಿನ್ನುವುದು, ಮಸಣದಲ್ಲಿ ಅರ್ಧ ಬೆಂದ ಹೆಣವನ್ನು ತಿನ್ನುವುದು, ಕೋಳಿಯನ್ನು ತಿನ್ನುವುದು, ಅವರ ಮೂತ್ರವನ್ನೇ ಕುಡಿಯುವುದು. ಸಾಧನಾ ಸುತ ಯೋಗದ ಮೂಲಕ ಆತ್ಮದ ಹಿಡಿತ, ಜತೆಗೆ ಇದೆಲ್ಲವನ್ನೂ ಮಾಡಲು ಬೇಕಾಗಿರುವ ರಾಗವನ್ನು ಮನದಲ್ಲಿ ಉದಿಸಲು ಸಹಾಯಕವಾಗುವ  ಆಯುರ್ ಪುತ್ರ ಗಾಂಜಾದ ಸೇವನೆ. 
ಇವರು ಮನುಜನಿಂದ ದೂರವಿದ್ದು ಗಂಗೆಯಲ್ಲಿಯೋ ಕಾಶಿಯಲ್ಲಿಯೋ, ಮತ್ತೆ ಹಲವು ಅಜ್ಞಾತ ಸ್ಥಳಗಳಲ್ಲಿ ಅವಿತು ಕುಳಿತುಕೊಂಡು ಸಾಧನೆ ಮಾಡುತ್ತಿರುತ್ತಾರೆ. ಪರಮಾತ್ಮನನ್ನು ಸೇರಲು. ಭವದ ಎಲ್ಲಾ ಸಂಭಂಧಗಳನ್ನು ಕಡಿದು ಜ್ಞಾನ ಸಾಗರವನ್ನು ತಲುಪಿ, ಸ್ವರ್ಗಾವಸ್ಥೆಯ ಅವಸ್ಥೆಯಲ್ಲಿ ಮುಕ್ತಿ ಸಂಕೇತವಾಗಲು ಯೋಗ ನಿರತರಾಗಿರುತ್ತಾರೆ. 
ಭವಕ್ಕೆ ಎಲ್ಲಾ ಸಂದೇಶವನ್ನು ಸಾರುವ ಹಾಗು ಯಾವ ಸಂದೇಶವನ್ನೂ ಸಾರದೆ ಇರುವ ಅವಸ್ಥೆಯಲ್ಲಿ ಜನರಿಗೆ ಅರ್ಥವಾಗುವ ಇವರ ಬದುಕನ್ನು ಅಧ್ಯಯನ ಮಾಡುವುದೇ ಮತ್ತೊಂದು ಸಾಧನೆ. ಅಂದರೆ ಎಲ್ಲರೂ ಇದೆ ಬದುಕನ್ನು ಬದುಕಬೇಕು ಎಂದು ಹೇಳುವುದಲ್ಲ, ಆದರೆ ಅವರ ಬದುಕನ್ನು ಅವಹೇಳನವಂತೂ ಮಾಡುವುದು ಶುದ್ಧ ತಪ್ಪು. ಒಮ್ಮೊಮ್ಮೆ ಆಗಾಗ ಬದುಕಲ್ಲಿ ತೀರಾ ನಿರಾಶರಾದಾಗ, 'ಅವರ ಹಾಗೆ ಆದರೆ' ಎಂದು ಅನಿಸುವುದಂತೂ  ಸತ್ಯ 
                                           -ಡಾ.ಶ್ರೇ 

Tuesday, February 22, 2011

ಪ್ಲಾನಿಂಗ್ ಅಗತ್ಯ 
ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು, ಎಷ್ಟು ಬೊಬ್ಬೆ ಹೊಡೆದು, ತಾವು ಕರ್ನಾಟಕವನ್ನು ಪ್ರಕಾಶಿಸುತ್ತೇವೆ ಎಂದರೂ ಇನ್ನೂ 3 ರಿಂದ 4 ವರ್ಷಗಳ ಕಾಲ ರಾಜ್ಯ ಬಹಳಷ್ಟರಮಟ್ಟಿಗೆ ವಿದ್ಯುತ್ ಕೊರತೆಯನ್ನು ಎದುರಿಸಲಿದೆ. ಸಚಿವೆ ಕರಂದ್ಲಾಜೆ ಏನೂ ಕೆಲಸ ಮಾಡದೆ ಸುಮ್ಮನೆ ಕುರ್ಚಿಯಲ್ಲಿ ಕೂತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅವರು ಸರಿಯಾದ ರೀತಿಯ ಪ್ಲಾನಿಂಗ್ ಇಲ್ಲದೆ ಯೋಜನೆಯನ್ನು ಹೊರಡಿಸಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎನ್ನಬಹುದು.
ಯಾವೊದೋ ವಿರೋಧ ಪಕ್ಷ, ವೋಟ್ ಬ್ಯಾಂಕ್ ಇನ್ನಿತರ ಒತ್ತಡಗಳಿಂದ ಮಣಿದು ಕರಂದ್ಲಾಜೆಯವರು, ಶಾಕಿನಿಂದ ಹೊರಬರಲು ತ್ವರಿತ ಯೋಜನೆಗಳನ್ನು ಹೊರಡಿಸಿರುವುದೇ ಇದಕ್ಕೆ ಮೂಲ ಕಾರಣ. ಒಬ್ಬ ವ್ಯಕ್ತಿ ಯಾವತ್ತೂ ಸಮಯವನ್ನು ಚೇಸ್ ಮಾಡಿ ಆಲೋಚನೆ ಮಾಡಿ ಗೆಲ್ಲುತ್ತೇನೆ ಎಂದು ಹೋದರೆ ಗೆಲುವು ಸಾಧ್ಯವಿಲ್ಲ. ಒಂದು ವೇಳೆ ಗೆಲುವು ದೊರೆತರೂ ಆ ಗೆಲುವು ಸ್ವಲ್ಪ ದಿನದ ಮಟ್ಟಿಗೆ ಮಾತ್ರ ಸೀಮಿತವಾಗಿರುತ್ತದೆ. ಶೋಭಾ ಅವರ ಸ್ಥಿತಿಯೂ ಹೀಗೆ ಆಗಿದೆ. ಮೊನ್ನೆ ಮೊನ್ನೆ ಅವರು ಹೊಸ ಮನೆಗಳಿಗೆ ಸೋಲಾರ್ ಕಡ್ಡಾಯ ಎಂಬ ಯೋಜನೆಯನ್ನು ಹೊರಡಿಸಿ ಮಾಧ್ಯಮ ಮಿತ್ರರಿಂದ ಹಾಗು ಜನಗಳಿಂದ ಹೊಗಳಿಕೆ ಪಡೆದುಕೊಂಡರು. ಆದರೆ ವಾಸ್ತವದಲ್ಲಿ ಆ ಯೋಜನೆ ನೆನೆಗುದಿಗೆ ಬಿದ್ದಿದೆ. It is just because of failure in proper planning.
ರಾಜ್ಯದಲ್ಲಿ ಇವತ್ತು 165 ದಶಲಕ್ಷ ಯುನಿಟ್ ಅಷ್ಟರಮಟ್ಟಿಗೆ ವಿದ್ಯುತ್ ಬೇಡಿಕೆ ಇದೆ. ಒಟ್ಟು ರಾಜ್ಯ ಈಗ 8 ರಿಂದ 10 ದಶ ಲಕ್ಷ ಯುನಿಟ್ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ. ಆದರೆ 2010-11  ರ ಬಜೆಟ್ ನಲ್ಲಿ ಇಂಧನಕ್ಕೆ ಮೀಸಲಿರಿಸಿದ ಹಣ ಕೇವಲ 3547 ಕೋಟಿ. ವಿಶ್ಲೇಷಣಾತ್ಮಕವಾಗಿ ಹೇಳುವುದಾದರೆ ಈ ಹಣ ಎಲ್ಲಿಗೂ ಸಾಲುವುದಿಲ್ಲ. ಏಕೆಂದರೆ, ಇದರ ಅರ್ಧದಷ್ಟು ಹಣವನ್ನು ರಾಜ್ಯ ಕಳೆದ 10 ತಿಂಗಳಿನಿಂದ ವಿದ್ಯುತ್ ಖರೀದಿಗೆಂದೇ ವ್ಯಯಿಸಿದೆ. ಹಣ ಮುಡಿಪು ಇಡಬೇಕು ಎಂಬ ಕೇವಲ ಕಾರಣಕ್ಕೆ ಮಾತ್ರ ಹಣವನ್ನು ಮೀಸಲಿಟ್ಟಿದ್ದಾರೆ ಎಂದೆನಿಸುತ್ತದೆ. ರಾಜ್ಯದಲ್ಲಿ ಸಾಕಷ್ಟು ವಿದ್ಯುತ್ ಘಟಕ ಸ್ಥಾಪನೆಯ ಯೋಜನೆಗೆ ಹಸಿರು ನಿಶಾನೆ ದೊರೆತಿದ್ದರೂ, ಅಲ್ಲಿನ ಕಾಮಗಾರಿಯೂ ಬಹಳ ವಿಳಂಬವಾಗುತ್ತಿದೆ. ಮತ್ತೆ ಬೇಜಾವಾಬ್ಧಾರಿ.
ಒಟ್ಟಾರೆಯಾಗಿ, ಇಂಧನ ಸಚಿವರು ಇವೆಲ್ಲವನ್ನು ಕೂಲಂಕುಷವಾಗಿ ಗಮನಿಸಿ, ಕುಳಿತು ಸರಿಯಾದ ಪೂರ್ವತಯಾರಿ ಮಾಡಿ, ಅದಕ್ಕೆ  ತಕ್ಕ ಹಣ ವ್ಯಯಿಸಿ ಪ್ರಾಮಾಣಿಕವಾಗಿ ಮುಂದುವರೆದರೆ ಸಮಸ್ಯೆ ಬಗೆಹರಿದೀತು ಎಂಬುವುದು ನಮ್ಮ ಭಾವನೆ. ಆದರೆ ಇದೆ ರೀತಿ ಮುಂದುವರೆದರೆ, ಸಮಸ್ಯೆ ಉಲ್ಬಣಿಸುತ್ತದೆ ಹೊರತು ಕಡಿಮೆಯಾಗುವುದು ಸಾಧ್ಯವಿಲ್ಲ.
                                           -ಡಾ.ಶ್ರೇ 
ಮಸ್ತಕದಲ್ಲಿ ಪುಸ್ತಕದ ರಾಶಿ ಬಂದಾಗ
ಬರದದ್ದೆಲ್ಲ  ಬರಹವಾಗುವುದಿಲ್ಲ, ಭಾಷೆ ಒಲಿದು ಪದಗಳು ನಾವು ಹೇಳಿದಂತೆ ಕೇಳುತ್ತಿರಬೇಕು. ಬರಹದಲ್ಲಿ ಸೂಕ್ಷ್ಮತೆಯೊಂದಿಗೆ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಗೀಜಗನ ಗೂಡಿನಂತೆ ಸುಂದರವಾಗಿ ಮತ್ತು ಮನಸ್ಸಿನಲ್ಲಿ ನೆಲೆಯೂರುವ ರೀತಿಯಲ್ಲಿ ಮೂಡಿ ಬರಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ  ಬರಹವೇ ಮೂಲವಾಗಿರುವುದರಿಂದ ಬರವಣಿಗೆಯು ಓದುಗನಿಗೆ knowledge  ಕೊಡುವ ರೀತಿಯಲ್ಲಿ ಬರಬೇಕು ಎನ್ನುವುದು ನನ್ನ ಅಭಿಪ್ರಾಯ. 
ಅಮೇರಿಕಾದ ಜೇಮ್ಸ್ ಹ್ಯಾಡ್ಲಿ ಚೇಸ್ ಒಬ್ಬ ಉತ್ತಮ ಕಾದಂಬರಿಗಾರ. ಇವರು 63 ಸ್ವನಾಮಾಕಿಂತ  ಕಾದಂಬರಿಗಳನ್ನು ಹಾಗು ಸ್ವನಾಮಾಕಿಂತ ವಲ್ಲದೆ ಬೇರೆ ಹೆಸರಿನಲ್ಲಿ 18 ಕಾದಂಬರಿಗಳನ್ನು ಬರೆದಿದ್ದಾರೆ. ಜೊತೆಗೆ ನಾಟಕವನ್ನು ರಚಿಸಿದ್ದಾರೆ. ಇವರ ಕಥೆಗಳನ್ನು ನಾವು ಓದಲು ಶುರು ಹಚ್ಚಿದರೆ ನಾವು ನಮ್ಮ ಓದಿನ ವೇಗವನ್ನು ಹಿಡಿಯಲು ಸಾಧ್ಯವಿಲ್ಲ. ಇವರ ಕಥೆಗಳು ಸರಳತೆಯೊಂದಿಗೆ ಸಾಮಾನ್ಯ ಜೀವನದ ಅದ್ಭುತ ರೋಚಕಗಳನ್ನು ಹೊಂದಿರುವ ಇವರ ಬರವಣಿಗೆಯು ಶ್ರೇಷ್ಠತೆಯನ್ನು  ಪಡೆದಿವೆ. 
ನಾನು ಈ ಕುತೂಹಲಕ್ಕಾಗಿ ಚೇಸ್ ರವರ ಒಂದೆರಡು ಪುಸ್ತಕಗಳನ್ನು ಸುಮ್ಮನೆ ತಿರುವು ಹಾಕಿ ಬರವಣಿಗೆಯ ಶೈಲಿಯನ್ನು ಗಮನಿಸಿ ರುಚಿಯನ್ನು ಹಿಡಿಯುವ ಪ್ರಯತ್ನದಲ್ಲಿದ್ದೇನೆ. ಅವರ ಬರವಣಿಗೆಯು ಹೆಚ್ಚಿನ ಮಟ್ಟಿಗೆ ನನ್ನನ್ನು ಆಕರ್ಷಿಸಿದೆ. ವ್ಯಾಪಾರಿಗಳಿಗೆ ಪುಸ್ತಕ ಪೂರೈಸುವ ಕೆಲಸ ನಿರ್ವಹಿಸುತ್ತಿದ್ದ ಇವರು ಪುಸ್ತಕ ರಾಶಿಯ ಮೇಲೆ ಇದ್ದುದ್ದರಿಂದ ಓದುವ ಗೀಳಿನೊಂದಿಗೆ ಬರವಣಿಗೆಯಲ್ಲಿ ಯಶಸ್ಸು ಕಂಡರೂ ಎನ್ನಬಹುದು. 
ಒಂದಿಷ್ಟು ಗೊಂದಲಗಳು, ಮನಸ್ಸಲ್ಲಿ ಮೂಡುವ ಹೊಸ ರೀತಿಯ ಸಂಘರ್ಷಗಳೊಂದಿಗೆ ಓದುವಿಕೆ ಎಂಬ ಹುಚ್ಚನ್ನು ಹಿಡಿಸಿಕೊಂಡು, ಬರವಣಿಗೆಯಲ್ಲಿ ತೊಡಗಿದಾಗ ಜನರ ಮನದಲ್ಲಿ ನೆಲೆಯೂರಲು ಸಾಧ್ಯ. 
                                                               -ಕೆ.ಪಿ.ಭಟ್ 

Monday, February 21, 2011

ಜೆ.ಡಿ.ಎಸ್- ಬಿಜೆಪಿ ಮತ್ತೆ ಮೈತ್ರಿಯಂತೆ!
'ಪರಿಸ್ಥಿತಿ ಬಂದರೆ ನಾವು ಜೆ.ಡಿ.ಎಸ್ ಜೊತೆ ಮತ್ತೆ ಕೈ ಜೋಡಿಸಲು ಸಿದ್ಧ' ಎಂಬ ಮಾತುಗಳನ್ನು ಬಿ.ಜೆ.ಪಿ ರಾಜ್ಯಾಧ್ಯಕ್ಷ ಈಶ್ವರಪ್ಪನವರು ಹೇಳಿದ್ದಾರೆ. ಈ ಮೂಲಕ ರಾಜ್ಯದ ಎಲ್ಲಾ ಪಕ್ಷಗಳು ಅವಕಾಶವಾದಿ ರಾಜಕಾರಣ ಮಾಡುವುದರಲ್ಲಿ ಎತ್ತಿದ ಕೈ. ಎಂಬ ಅಂಶ ಸ್ಪಷ್ಟವಾಗುತ್ತದೆ. 
ಹಿಂದೊಮ್ಮೆ ಜೆ.ಡಿ.ಎಸ್ ಜೊತೆ ಹನಿಮೂನ್ ಮಾಡಿ ನಂತರ ಡೈವೋರ್ಸ್ ಆಗಿದ್ದ ಬಿ.ಜೆ.ಪಿ ನಂತರ ಅದೇ ವಿಚಾರವನ್ನು ಮತದಾರರ ಮುಂದೆ ಇಟ್ಟು ಅಧಿಕಾರಕ್ಕೆ ಬಂದಿತ್ತು. ಯಡಿಯೂರಪ್ಪನವರಂತು ' ನಮಗೆ ನಂಬಿಕೆ ದ್ರೋಹವಾಗಿದೆ' ಎಂದೇ ಮಾಧ್ಯಮಗಳ ಎದುರು ಕಣ್ಣೀರಿಟ್ಟಿದ್ದರು. ಅವರ ಕಣ್ಣೀರು ಕಂಡವರಿಗೆ ಗಂಡ ಕೈ ಕೊಟ್ಟ ಹೆಂಡತಿಯಂತೆ ಕಾಣುತ್ತಿತ್ತು. 
ನಮ್ಮ ಮತದಾರರು ಕರುಣೆ ತೋರಿ ಬಿ.ಜೆ.ಪಿ ಯನ್ನು ಅಧಿಕಾರಕ್ಕೆ ಏರಿಸಿದ್ದರು. ಆದರೆ ಈಶ್ವರಪ್ಪನವರು ಪುನಃ ಜೆ.ಡಿ.ಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮಾತನಾಡುತ್ತಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡು! 
ಇನ್ನು ಮುಂದೆ ಸರಕಾರಕ್ಕೆ ಆಪತ್ತಿನ ಪರಿಸ್ಥಿತಿ ಬಂದರೆ ಜೆ.ಡಿ.ಎಸ್ ಜೊತೆ ಕೈ ಜೋಡಿಸುವ ಸಾಧ್ಯತೆ ಇದೆ ಎಂಬ ವಿಚಾರ ಜನರಿಗೆ ಮನದಟ್ಟಾಗಿರುವುದು ಯಾವಾಗ ಎಂದರೆ; ಬಿ.ಜೆ.ಪಿ ಮೈಸೂರು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜೆ.ಡಿ.ಎಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಾಗ. 
ಅಧಿಕಾರ ಬೇಕೆಂದರೆ ಹೊಲಸು ತಿನ್ನಲೂ ರೆಡಿ ಇರುವ ನೀಚ ರಾಜಕಾರಣಿಗಳಿಂದಲೇ ರಾಜಕಾರಣ ಇಂತಹ ದುಸ್ಥಿತಿಗೆ ಇಳಿದಿರುವುದು. ಈಶ್ವರಪ್ಪ ಅವರ ಮಾತಿನಿಂದ ರಾಜಕಾರಣದಲ್ಲಿ ಯಾರು ಯಾರಿಗೂ ಶತ್ರುಗಳಲ್ಲ, ಮಿತ್ರರೂ ಅಲ್ಲ ಎಂಬ ವಿಚಾರ ಸ್ಪಷ್ಟವಾಗುತ್ತದೆ. ಈಶ್ವರಪ್ಪನವರ ಈ ಮಾತು ಪಕ್ಷದಲ್ಲಿ ಇನ್ನೂ ಉಳಿದಿರುವ ಅತೃಪ್ತರಿಗೆ ಎಚ್ಚರಿಕೆಯ ಸಂದೇಶವೂ ಆಗಿರಬಹುದು. ಸಂಪುಟ ಪುನರ್ ರಚನೆ ಮಾಡುವಾಗ ಕಿರಿಕ್ ಮಾಡುವ ಶಾಸಕರೇ ಎಚ್ಚರವಾಗಿರಿ! ಬಿ.ಜೆ.ಪಿ ಗೆ ನಿಮ್ಮ ಅಗತ್ಯವಿಲ್ಲ ಎಂತೂ ಜೆ.ಡಿ.ಎಸ್ ಶಾಸಕರು ಮಾಡಲು ಕೆಲಸವಿಲ್ಲದೆ ಬಿದ್ದಿದ್ದಾರೆ.
ಹಾಗೇ ಸುಮ್ಮನೆ- ಜೆ.ಡಿ.ಎಸ್ ನೊಂದಿಗೆ ಪುನಃ ಮೈತ್ರಿ ಮಾಡುತ್ತೇವೆ ಎಂಬ ಮಾತು ಕೇಳಿದ ಉಮೇಶ, 'ನಮ್ಮ ಕಮಲ ಪಕ್ಷದವರು ಅಧಿಕಾರಕ್ಕೆ ಬೇಕಾಗಿ ನಕ್ಸಲರ ಜತೆ ಕೂಡ ಮೈತ್ರಿ ಮಾಡಿಕೊಳ್ಳಬಹುದು' ಎಂದು ಹೇಳುತ್ತಿದ್ದಾನೆ.
                                               -ಡಾ.ಶೆಟ್ಟಿ 
   
ಬಂಧನಗಳಿಂದ ವಿಮುಖರಾದಾಗ 
ಪ್ರತಿಯೊಬ್ಬನಿಗೂ ಜೀವನದಲ್ಲಿ success ಆಗಲು ಸಾಧ್ಯವಿಲ್ಲ. ಆದರೆ success  ಪದದ ಅರ್ಥವೇ ಬೇರೇ,ಹಣ ಗಳಿಸುವುದಕ್ಕು successಗು ಆಗಾದವಾದ ವ್ಯತ್ಯಾಸವಿದೆ. ಕೆಲವು ಜನರ ಪ್ರಕಾರ ಹಣಗಳಿಸುವುದು ಜೀವನದಲ್ಲಿ success ಅಂದುಕೊಂಡು ಬಿಡುತ್ತಾರೆ. ಅದು ಅವರು ಮಾಡುವ ದೊಡ್ಡ ತಪ್ಪು.
ಹಣವನ್ನು ಯಾರುಬೇಕಾದರು ಗಳಿಸಬಹುದು ಆದರೆsuccess  ಅನ್ನು ಅಲ್ಲ. success  ಯಾವಾಗ ದೊರೆಯಲು ಸಾಧ್ಯ?
ನಮ್ಮ ನಿರ್ದಿಷ್ಟ ಆಸಕ್ತಿಯ ಮೇಲೆ ಹಗಲು-ಇರುಳು ಎನ್ನದೇ ಅದರ ಗುಂಗಿನಲ್ಲೇ ಇದ್ದು ಜಗವನ್ನು ಮರೆತು ಮತ್ತು ಹೆಚ್ಚಿನ ಸಂದರ್ಭ ಎಲ್ಲಾ ಬಂಧನಗಳಿಂದ ವಿಮುಖರಾದಾಗ ಮಾತ್ರ ಸಾಧ್ಯ.
ಏಕಾಂತದಲ್ಲಿ ಹೊಳೆಯುವ ಹಲವು ಐಡಿಯಾಗಳಿಗೆ ಸರಿಯಾದ ಚೌಕಟ್ಟನ್ನು ನೀಡುವ ಅಗತ್ಯವಿದೆ.ಅಂದರೆ ಹುಟ್ಟುವಾಗಲೇ ಅನಾಥನಾದವನಿಗೆ ಬಂಧನ ಎಂಬ ಪದದ ಅರ್ಥವೇ ತಿಳಿದಿರುವುದಿಲ್ಲ.ಆದರೆ ಬಂಧನಗಳನ್ನು ಹೊಂದಿ ಅದರಿಂದ ವಿಮುಖರಾಗುವುದೆಂದರೆ ಅದು ಕಷ್ಟವೇ ಸರಿ. ಸಾಹಿತ್ಯದ ಬಗ್ಗೆ ಚಿಂತನೆಯನ್ನು ಮಾಡುವ ಸಂಧರ್ಭ ಎಲ್ಲಾ ಬಂಧನಗಳಿಂದ ವಿಮುಖರಾಗಬೇಕೆಂದು ಹೇಳುವುದಲ್ಲ. ಆದರೆ ಬಂಧನಗಳಿಂದ ವಿಮುಖರಾಗಿಹೊದಂತೆ ಮನಸ್ಸಿನ ನೋವು, ತೀವ್ರತೆಯೊಂದಿಗೆ ಸಾಹಿತ್ಯದಲ್ಲಿ ಆಳವಾದ ಪ್ರಭಾವವನ್ನು ಬೀರಿದವರನ್ನು ನಾವು ಕಾಣಬಹುದು.
ನಮ್ಮsuccess  ಇತರರಿಗೆ ಎತ್ತಿ ತೋರಬೇಕೆಂದಿಲ್ಲ. ಅದರ ಅರಿವು ನಮ್ಮ ಮನಸ್ಸಿನಲ್ಲಿ ಆಗಬೇಕು. ಇಂತಹವುಗಳ ಜೊತೆಗೆ ಮನಸ್ಸಿನಲ್ಲಿ ಸದಾ ಸಂಗರ್ಷದಲ್ಲಿ ಇದ್ದಾಗ success  ತಾನಾಗೇ ಬಂದು ನಮ್ಮ ಹೆಸರು ಅದೆಷ್ಟೋ  ಕೋಟಿಮಂದಿಯ ಬಾಯಿ ಮಾತಗಿರುತ್ತದೆ.
                                -ಕೆ.ಪಿ.ಭಟ್ 

Saturday, February 19, 2011

ನಾನು ನನ್ನ ಕನಸು..
ದಟ್ಟ ಕಾಡಿನ ನಡುವೆ ಪುಟ್ಟಮನೆ, ಆ ಮನೆಯ ಎದುರು ಪ್ರಶಾಂತವಾಗಿ ಹರಿಯುತ್ತಿರುವ ನದಿ. ಒಟ್ಟಿನಲ್ಲಿ ಅದು ರೋಡೆ ಕಾಣದ ಊರು, ಕರೆಂಟೇ ಕಾಣದ ನಾಡು.
ದಿನಪತ್ರಿಕೆ, ಟಿ.ವಿ, ಕಂಪ್ಯೂಟರ್, ಮೊಬೈಲ್ ಯಾವುದು ಇಲ್ಲದ, ಮುಗ್ಧತೆಯೇ ಮುತ್ತಿಕೊಂಡಿರುವ ಪ್ರಶಾಂತವಾದ ಸ್ಥಳವದು. ಮೇಲೆ ಹೇಳಿದ ಅದೇ ಪುಟ್ಟ ಮನೆಯಲ್ಲಿ, ನಾನು ಕೂತು ಓದುತ್ತಿದ್ದೆ. ಮನೆಯ ಹಳೆಯ ಕಪಾಟಿನಲ್ಲಿ, ತುಂಬಿ ತುಳುಕಿ, ಇಡಲು ಜಾಗವಿಲ್ಲದೆ, ನನ್ನ ಆತ್ಮೀಯ ಸ್ನೇಹಿತರಾದ ಪುಸ್ತಕಗಳು ಬಿದ್ದುಕೊಂಡಿವೆ. ಅವು 'ನೀನು ನಿನ್ನ ಇಡೀ ಜನ್ಮಪೂರ್ತಿ ಓದಿದರು, ನಮ್ಮನ್ನು ಓದಿ ಮುಗಿಸಲು ಸಾಧ್ಯವಿಲ್ಲ'  ಎಂಬಂತೆ ಅಣಕಿಸುತ್ತಿದ್ದವು. ಯಾಕೋ ಸುಸ್ತಾದಂತೆ ಆಗಿ, ನಾನು ಎದ್ದು ನನ್ನ ಕೋಣೆಗೆ ಬಂದೆ, ಅಲ್ಲಿ ಬಂದು ನೋಡಿದಾಗ ಮನಸ್ಸಿಗೆ ಆನಂದವಾಯಿತು. ಯಾಕೆಂದರೆ ನನ್ನ ಕೋಣೆ ಪೂರ್ತಿ ಎಣ್ಣೆಯ ಬಾಟಲಿಗಳು, ಸಿಗರೇಟು ಪ್ಯಾಕುಗಳು ತುಂಬಿತ್ತು.
ಅಡುಗೆ ಕೋಣೆಯಲ್ಲಿ ನನ್ನ ಪ್ರೀತಿಯ ಹುಡುಗಿ ಅಡುಗೆ ಮಾಡುತ್ತಿದ್ದಳು. ನನ್ನ ತಾಯಿ ಮನೆಯ ಎದುರು ಕೂತು ಏನನ್ನೋ ಯೋಚನೆ ಮಾಡುತ್ತಿದ್ದರು. 
ಇದು ನನಗೆ ನಿನ್ನೆ ರಾತ್ರಿ ಬಿದ್ದ ಕನಸು, ನನಗೆ ಬಿದ್ದ ಕನಸ್ಸನ್ನು ಓದುಗರಿಗೆ ಹೇಳಿ ಬೋರು ಹೊಡೆಸುವ ಉದ್ದೇಶ ನನ್ನದಲ್ಲ. ಪ್ರತಿದಿನ ಅದೇ ಸುದ್ದಿಯೊಂದಿಗೆ ಗುದ್ದಾಡಿ, ಪದಗಳು ಸಿಗದೇ ನಲುಗಾಡಿ. ಇದ್ದವರನೆಲ್ಲ ಬೈದು, ಉಳಿದ ಕೆಲವರನ್ನು ಹೊಗಳಿ. ವ್ಯವಸ್ಥೆಯನ್ನು ದೂರಿ, ಬರೆದು ಬರೆದು ಸಾಕಾಯಿತು. ಇವತ್ತು ಏನಾದರು ಹೊಸತು ಬರೆಯೋಣ ಎನಿಸಿತು. ಅದಕ್ಕೆ ತಕ್ಕಂತೆ ನಿನ್ನೆ ನನಗೆ ಬಿದ್ದ ಕನಸು ಕೂಡ ಅದ್ಭುತವಾಗಿತ್ತು. ನನ್ನ ಕನಸನ್ನು ಪುನಃ ಒಂದು ಬಾರಿ ಓದಿಕೊಳ್ಳಿ, 'ಎಷ್ಟು ಚೆನ್ನಾಗಿದೆ' ಎಂದು ನಿಮಗೆ ಅನಿಸದೆ ಇರಲಾರದು. 
ಯಾವುದೋ ಒಂದು ದಟ್ಟ ಕಾಡಿನ ನಡುವೆ, ಪುಟ್ಟ ಮನೆಯ ಮಾಡಿ, ಮುದ್ದಿನ ಸಂಸಾರದ ಜೊತೆಗೆ ಜೀವನ ಮಾಡುವುದೆಂದರೆ ಅದು ಸ್ವರ್ಗವೇ ಅಲ್ಲವೇ? ಮನೆ ತುಂಬಾ ತುಂಬಿರುವ ಪುಸ್ತಕಗಳು, ಕುಡಿಯಲು ಬೇಕಾದಷ್ಟು ಎಣ್ಣೆ, ಸೇದಲು ಸಿಗರೇಟು ಇಷ್ಟಿದ್ದರೆ ಸಾಕಲ್ಲವೇ ಒಬ್ಬ ಬರಹಗಾರನಿಗೆ. ದಟ್ಟ ಕಾಡಿನ ನಡುವೆ ಪುಸ್ತಕಗಳನ್ನು ಓದಿಕೊಂಡು, ಏನನ್ನೋ ಧ್ಯಾನಿಸಿಕೊಂಡು, ಪ್ರಕೃತಿಯ ಜೊತೆ ಒಂದಾಗಿರುವುದು ಚಂದವಲ್ಲವೇ?
ನನಗಂತೂ ಈಗಿನ ಜೀವನದ ಜಂಜಾಟಗಳಿಂದ, ಕನಸಲ್ಲಿ ಕಂಡ ಲೋಕವೇ ಚೆನ್ನಾಗಿದೆ ಎನಿಸಿತು..
                                                -ಡಾ.ಶೆಟ್ಟಿ 
ಗೆಲ್ಲಲಿ ಭಾರತ
ಅಭೂತಪೂರ್ವ ಆಶಾವಾದ, ಸಹಸ್ರ ಹಾರೈಕೆ, ನೂರಾರು ಕನಸು ಮತ್ತೆ ಜಯದ ಮನಸ್ಸು. ಇವೆಲ್ಲಕ್ಕೆ ಪೂರಕ ಎಂಬಂತೆ, ಸಾರ್ವತ್ರಿಕ ಸಮತೋಲನ, ಸಂಘಟಿತ, ಸಂಘರ್ಷ ರಹಿತ ತಂಡ. ಇದಕ್ಕೂ ಮೀರಿ ಆಯಾಯ ವಲಯದಲ್ಲಿ ಸೂಕ್ಷ್ಮ ಅರ್ಥ ವ್ಯಾಪ್ತಿಯನ್ನು ಹೊಂದಿರುವ ಪ್ರತಿಯೊಬ್ಬ ಆಟಗಾರ. ಇದು ನಮ್ಮ ಈ ಸಾಲಿನ ವಿಶ್ವ ಕಪ್ ಸರಣಿಯ ಭಾರತ ತಂಡ.
ಗಂಗೂಲಿ, ನಾಯಕ ವಿಹೀನತೆಯ ಬಳಿಕ, ಕೇವಲ ಕಹಿ ಅನುಭವವನ್ನೇ ಅನುಭವಿಸಿದ ಭಾರತ ತಂಡ ಈ ಬಾರಿ ಪೂರ್ಣ ಪ್ರಮಾಣದಲ್ಲಿ ವಿಶ್ವ ಕಪ್ ಗೆದ್ದುಕೊಳ್ಳಲು ಸಜ್ಜಾಗಿದೆ. ಕಳೆದ ಪಂದ್ಯಗಳತ್ತ ಕಣ್ಣು ಹಾಯಿಸಿ ವಿಶ್ಲೇಷಣೆಗೆ ತೊಡಗಿದರೆ, ತಂಡ ಎಲ್ಲಾ ಸಮಸ್ಯೆಗಳನ್ನು ಮೀರಿ ಉತ್ತಮ ಫಲಿತಾಂಶವನ್ನೇ ಕಂಡಿದೆ. ಈ ಪರಿಪೂರ್ಣ ಗೆಲುವುಗಳು ಇಂದು ಶುರುವಾಗುವ ವಿಶ್ವಕಪ್ ಮೇಲೆ ಶೇ 100 ರಷ್ಟು ಪರಿಣಾಮ ಬಿದ್ದೇ ಬೀಳುತ್ತದೆ ಎನ್ನುವುದು ನಂಬಿಕೆ.
ಧೋನಿಯಿಂದ ತೊಡಗಿ ಶ್ರೀಶಾಂತ್ ವರೆಗೆ ಎಲ್ಲರೂ ಗೆಲುವಿನ ಹಸಿವಿನಲ್ಲಿ ಬೇಯುತ್ತಿದ್ದು, ವಿಶ್ವಕಪ್ Ikon ಎಂದೇ  ಕರೆಯಲ್ಪಡುವ ಸಚಿನ್ ಮತ್ತೆ ಯಾವತ್ತಿನಂತೆ ತಮ್ಮ ರನ್ ಹಸಿವೆಯನ್ನು ಜಾಸ್ತಿ ಮಾಡಿಕೊಂಡಿದ್ದಾರೆ. ಇವೆಲ್ಲವೂ ತಂಡಕ್ಕೆ ಡಬಲ್ + ಆಗಲಿದೆ.ಇದೆಲ್ಲವನ್ನೂ ಗಮನಿಸಿ, ನಾವು ಹಿಂದೆಗೂ ಇಂದಿಗೂ ಇತರ ತಂಡಕ್ಕೂ ತಾಳೆ ಹಾಕಿ ನೋಡಿದಾಗ ನಮ್ಮ ತಂಡ ಈ ಬಾರಿಯ ವಿನ್ನಿಂಗ್ ಫೇವರಿಟ್. ಸೊ ಈ ಬಾರಿ ದೇಶ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆ ತಂಡಕ್ಕೆ ಹಾಗು ಅಭಿಮಾನಿಗಳಿಗೆ ಬಹಳವಾಗಿ ಇದೆ. ಆದರೂ ಕೆಲವೊಮ್ಮೆ ಎಡವುದು ಮಾಮೂಲು. ಈ ಬಾರಿ ಈ ರೀತಿ ಆಗದೆ ತಂಡ  ಕಪ್ ತೆಗೆದುಕೊಳ್ಳಲಿ ಎಂದು ಹೃದಯ ಪೂರ್ವಕವಾಗಿ ಆಶಿಸೋಣ.
                                              -ಡಾ.ಶ್ರೇ