Friday, January 7, 2011

                   ಎರಡು ನಿಮಿಷದ ಅಧಿವೇಶನ
ವಿಧಾನ ಸಭೆಯ ಅಧಿವೇಶನ ಮತ್ತೆ ಆರಂಭವಾಗಿದೆ. ನಿರೀಕ್ಷೆಯಂತೆ ಗದ್ದಲ ನಡೆದು ಅಧಿವೇಶನ ಹಾಳಾಗಿದೆ. ಕೇವಲ ಎರಡು ನಿಮಿಷ ಅಧಿವೇಶನ ಮಾಡೋದಾದರೆ ಜನರ ತೆರಿಗೆ ಹಣವನ್ನು ಖರ್ಚು ಮಾಡಿ ಅಧಿವೇಶನ ಮಾಡಬೇಕೆ? ಯಾರಿಗೂ ಬೇಡದ ಭೂ ಹಗರಣದ ಚರ್ಚೆಗೆ ಅಧಿವೇಶನ ಆಹುತಿಯಾಯಿತು, ಕಾಂಗ್ರೆಸ್-ಜೆ.ಡಿ.ಎಸ್ ಗೆ ಯಾವ ನೈತಿಕತೆ ಇದೆ ಎಂದು ಭೂ ಹಗರಣದ ಬಗ್ಗೆ ಮಾತನಾಡುವುದು? ಇವರು ನುಂಗಿದ್ದು ಕಡಿಮೆಯೇ? 
ಕಳೆದ ಬಾರಿ ಅಧಿವೇಶನ ಗಣಿ ಧೂಳಿನಲ್ಲಿಯೇ ಕಳೆದು ಹೋಯಿತು, ಇಂತಹ ಅಧಿವೇಶನಗಳು ಯಾರ ಹಿತಕ್ಕಾಗಿ ನಡೆಯುವುದು? ನಾವು ಓಟು ಹಾಕಿದ ಸರಕಾರ ಇದರ ಜೊತೆಗೆ ಪ್ರತಿಪಕ್ಷಗಳಿಗೆ ಸಾಮಾನ್ಯ ಜನರ ಬಗೆ ಹರಿಯದ ಸಮಸ್ಯೆಗಳಾದ, ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳ, ವಿದ್ಯುತ್ ದರ ಹೆಚ್ಚಳ , ದುಬಾರಿಯಾದ ಹಾಲು ಇತ್ಯಾದಿಗಳು ಕಣ್ಣಿಗೆ ಕಾಣುತ್ತಿಲ್ಲವೇ? 
ಕೇವಲ ಸ್ವ ಪ್ರತಿಷ್ಠೆಗಾಗಿ, ಹಿಂದಿನ ಬಾಗಿಲಿನ ಮೂಲಕ ಅಧಿಕಾರ ಪಡೆಯುವುದಕ್ಕಾಗಿ ಸಭೆಯ ಅಮೂಲ್ಯ ಸಮಯವನ್ನು ಹಾಳು ಮಾಡುವುದು ಎಷ್ಟು ಸರಿ? 
ರಾಜ್ಯದ ಜನ ಕಷ್ಟ ಪಡುತ್ತಿದ್ದಾರೆ ಸ್ವಾಮಿ! ಅವರ ಕಷ್ಟಗಳ ಕಡೆಗೆ ಗಮನ ಹರಿಸಿ. ಕೇವಲ ದೊಡ್ಡ ದನಿಯಲ್ಲಿ ಬೊಬ್ಬೆ ಹಾಕುವುದು, ಸಭೆಗೆ ಅಡ್ಡಿ ಪಡಿಸುವುದರ ಮೂಲಕ ಯಾವ ಸಮಸ್ಯೆಯು ಬಗೆ ಹರಿಯುವುದಿಲ್ಲ. 
ಪ್ರತಿ ಪಕ್ಷದವರು ಎಷ್ಟೇ ಗುದ್ದಾಡಿದರೂ ಯಡಿಯೂರಪ್ಪ ರಾಜೀನಾಮೆ ನೀಡುವುದಿಲ್ಲ, ಬಿ.ಜೆ.ಪಿ ಯ ಅಗ್ರ ನಾಯಕರನ್ನೇ  ಗಣನೆಗೆ ತೆಗೆಯದ ಯಡಿಯೂರಪ್ಪನಿಗೆ ಕುಮಾರ ಸ್ವಾಮಿ, ಸಿದ್ದರಾಮಯ್ಯನ ಬೊಬ್ಬೆ ಕೇಳಲು ಸಾಧ್ಯವೇ ಇಲ್ಲ. ಇನ್ನಾದರೂ ಆ ಹಾಳು ಭೂ ಹಗರಣವನ್ನು ಬಿಟ್ಟು ಜನರ ಸಮಸ್ಯೆಯ ಕಡೆಗೆ ಗಮನ ಹರಿಸಿ.
ಹಾಗೇ ಸುಮ್ಮನೆ- ವಿಧಾನ ಸೌಧದಲ್ಲಿ ಯಾವುದೇ ಪ್ರಯೋಜನಕಾರಿ ಕೆಲಸಗಳು ನಡೆಯದ ಕಾರಣದಿಂದ, ನಮ್ಮ ಉಮೇಶ ಅದನ್ನು ಲೀಸಿಗೆ ಕೇಳುತ್ತಿದ್ದಾನಂತೆ. ಅಲ್ಲಿ ರೆಸಾರ್ಟ್ ಮಾಡುವ ಯೋಜನೆ ಆತನದು.
                                                                                ಡಾ.ಶೆಟ್ಟಿ 
 

1 comment: