Saturday, January 22, 2011

ಬಂದೋ ರಕ್ಷತಿ ರಕ್ಷಿತಃ ?
ಬೆಳ್ಳಂಬೆಳಗ್ಗೆ  ಕಾದು ಕಾದು ಹೆಣವಾದ ಜನಗಳು, ಅಂಗಡಿ ಮುಂಗಟ್ಟುಗಳನ್ನು ತೆರೆಯಬೇಕೋ ಬೇಡವೋ ಎಂಬ ಗೊಂದಲ, ಕಾಸು ಸಿಗುತ್ತೋ ಇಲ್ಲವೊ ಎಂಬ ಲೇಬರ್ಸ್ ಕ್ಲಾಸ್ ತಲ್ಲಣ, ಶಾಲಾ ಮಕ್ಕಳ ಖುಷಿ, ಕಾಲೇಜು ವಿದ್ಯಾರ್ಥಿಗಳ ತರ್ಕದ ಮಾತುಗಳು, ಎಲ್ಲವನ್ನೂ ಮುಚ್ಚಿ ಎಂಬ ಕೂಗುಗಳು, 'ಶನಿ'ವಾರದ ಬಂದ್ ಗೆ ಸಾಕ್ಷಿಯಾದ 'ವಸ್ತುಗಳು'.
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾನ್ಯ ರಾಜ್ಯಪಾಲರ ನಡುವಿನ ತಾರಕ್ಕಕ್ಕೇರಿದ ಸಂಘರ್ಷ ನಿನ್ನೆ ರಾತ್ರಿ ಕೊನೆಯ ಹಂತ ತಲುಪಿ, ರಾಜ್ಯಪಾಲರು ಕೊನೆಗೂ ಕಾನೂನಾತ್ಮಕ ಮತ್ತು  ಸಂವಿಧಾನಾತ್ಮಕ  ಚೌಕಟ್ಟಿನಲ್ಲಿಯೇ; ವಕೀಲರಾದ ಸಿರಾಜಿನ್ ಬಾಷಾ, ಬಾಲರಾಜ್ ಅವರು ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಮುಖ್ಯಮಂತ್ರಿ ವಿರುದ್ದ ಕಾನೂನು ಕ್ರಮಕ್ಕೆ ತಥಾಸ್ತು ಎಂದಿದ್ದಾರೆ. ಈ ವಿಚಾರ ಹೊರಬೀಳುತ್ತಲೇ ಚುರುಕಾದ ಪಕ್ಷ'ವರ್ತಿ' ಗಳು ಅಲ್ಲಲ್ಲಿ ಪ್ರತಿಭಟನೆಯನ್ನು ಆರಂಭಿಸಿದರು. ಅದು ಗಲಭೆಯಾಗಿಯೂ ಪರಿವರ್ತನೆಗೊಂಡಿರುವುದು ಇನ್ನೊದು ವಿಚಾರ. ಯಾರದೋ ಸ್ವಾರ್ಥಕ್ಕೆ ಇವರ ಹೋರಾಟ ಬಹಳ ತೀವ್ರವಾಗಿಯೇ ಇತ್ತು. 
ಸಂಪುಟದಲ್ಲಿ ಬಂದ್ ಮಾಡುತ್ತೇವೆ ಎಂದು ಬೊಬ್ಬೆ ಹೊಡೆದ ಯಡಿಯೂರಪ್ಪರವರು ಶನಿವಾರ ಅದನ್ನು ಮಾಡಿಸಿಯೇ ತೀರಿದರು.ತಮಗೆ ರಾಜ್ಯ ಪಾಲರಿಂದ ಆದ ಅವಮಾನವನ್ನು, 'ಇದು ಮತದಾರರಿಗೆ ಮಾಡಿದ ಅವಮಾನ' ಎಂದು ವ್ಯಾಖ್ಯಾನಿಸಿ ನಮ್ಮನ್ನೂ ಅವರ 'ಪುಣ್ಯ'ದಲ್ಲಿ ಪಾಲುದಾರರನ್ನಾಗಿಸಿದ್ದಾರೆ. ತೊಂದರೆ ಇಲ್ಲ ಬಿಡಿ. ಹಾಗೇ ರಾಜ್ಯಪಾಲರು ರಾಜ್ಯದ 'ಹಿತಾ'ಸಕ್ತಿಯಿಂದ 'ಕಾನೂನಾ'(?)ತ್ಮಕವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ಎಂದು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಯಾರು ಸರಿ ಯಾರು 'ತಪ್ಪು' ಎಂಬ ವಿಮರ್ಶೆಯೇ ಬೇಡ.
ಆದರೆ ಇವರ ನಾಯಿ ಬೆಕ್ಕು ಕಚ್ಚಾಟದಲ್ಲಿ ಇವತ್ತು ತೊಂದರೆ ಅನುಭವಿಸಿದ್ದು ಮಾತ್ರ ರಾಜ್ಯದ ಅಮಾಯಕ ಮತದಾರರು ಹಾಗೂ 'ಮತದಾರೇತರರು'. ತಾವು ತಮ್ಮ ಕುರ್ಚಿ ಉಳಿಸಿಕೊಳ್ಳಲು, ತಮಗೆ ಬಲ ಇದೆ ಎಂದು ತೋರಿಸುವ 'ಹುಚ್ಚು' ಸಾಹಸದೊಂದಿಗೆ 'ಕಾರ್ಯ''ಕರ್ತ' ರನ್ನು ಬಳಸಿಕೊಂಡು ಬಂದ್ 'ಆಚರಣೆ' ಮಾಡಿಯೇ ಬಿಟ್ಟರು. ನಾಯಕರೆ ದಯವಿಟ್ಟು ಇಲ್ಲಿ ಕೇಳಿ 'ನಿಮ್ಮನ್ನು ಅಲ್ಲಿ ಕೂರಿಸಿರುವುದು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಲ್ಲ, ನಮ್ಮ ಸಮಸ್ಯೆಗಳನ್ನು ಆಲಿಸಿ ಪರಿಹರಿಸಿಕೊಡಲು'. ಸದಾ ಕನಸು(!) ಕಾಣುತ್ತಿರುವ ನಿಮಗೆ ಇದೆಲ್ಲ ಎಲ್ಲಿ ಅರ್ಥವಾಗುತ್ತೆ ಹೇಳಿ...
                                                            - ಡಾ.ಶ್ರೇ 

No comments:

Post a Comment