Monday, January 31, 2011

ನಾವೂ ಮಾಡಬೇಕು ಕಟಾವು 
ಮತ್ತೆ ಇದನ್ನೇ ಬರೆಯಲು ಮನಸ್ಸಿನ ಮೂಲೆಯಲ್ಲೆಲ್ಲೋ ಮೆತ್ತಗಿನ ನೋವು ಕಾಡುತ್ತದೆ. ಯಾಕಾದರೂ ಸದಾ ಈ ವಿಚಾರದ ಬಗ್ಗೆಯೇ ನಾವು ತಲೆಕೆಡಿಸಿಕೊಳ್ಳುತ್ತಿರಬೇಕು? ಅವರುಗಳು ಅವರಷ್ಟಕ್ಕೆ ಹಾರಾಡಿಕೊಂಡೋ ತೂರಾಡಿಕೊಂಡೋ  ಇರಲಿ ಎಂದು ಒಮ್ಮೊಮ್ಮೆ ಮಿಂಚಿನಂತೆ ಸಣ್ಣ ಆಲೋಚನೆ ಹೊಳೆದರೂ, ಮತ್ತೆ ಈ ಆಲೋಚನೆಗಳನೆಲ್ಲ ಬದಿಗಿಟ್ಟು, ಬರೆಯಲೇ ಬೇಕೆನಿಸುವಷ್ಟರಮಟ್ಟಿಗಿನ  ತುಡಿತ. ಕಾರಣ ಇಷ್ಟೇ; ಇದರ ಬಗ್ಗೆ ದ್ವನಿ ಎತ್ತದಿದ್ದರೆ ಎಲ್ಲಿ ನಾವು ಜವಾಬ್ದಾರಿಯಿಂದ ನುಣುಚಿಕೊಂಡು, ಪಲಾಯನ ಮಾಡಿದಂತೆ ಆಗುವುದೋ ಎಂಬ ಸಣ್ಣ ನಾಚಿಕೆ. ಈಗಂತೂ ಎಲ್ಲರಿಗೂ ಅರಿವಾಗಿರುತ್ತದೆ. ಯಾವ ವಿಚಾರದ ಬಗ್ಗೆ ಈತ ಬರೆಯಲು ಹೊರಟಿದ್ದಾನೆ ಎಂದು. 'ಮತ್ತದೇ ರಾಜಕೀಯ ಗುರು'.
ನಿನ್ನೆ ಬೆಂಗಳೂರಿನ ಜಕ್ಕರಾಯನಕೆರೆ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ,  ಬಿ.ಜೆ.ಪಿ ಹಟಾವೋ-ಕರ್ನಾಟಕ ಬಚಾವೋ ಎಂಬ ಬ್ರಹತ್ ಕಾರ್ಯಕ್ರಮವನ್ನು ಸಿದ್ದರಾಮಯ್ಯನವರ ಮುಂದಾಳತ್ವದಲ್ಲಿ ಆಯೋಜಿಸಿತ್ತು.  ಅಲ್ಲಿ ನಾವು ಕೇಳಿದ್ದು ಕೇವಲ ಅಂಧಸಹಿತ-ಸಹಿಷ್ಣು ವಿಹೀನ ಅರಚಾಟ,ಬೈಗುಳ ಹಾಗೂ ಅದಕ್ಕೂ ಮೀರಿದ್ದು. 
ಬಿ.ಜೆ.ಪಿ ಸಾಚಾ ಪಕ್ಷ ಅಂತ ಇಲ್ಲಿ ಹೇಳುವುದು ನನ್ನ ಉದ್ದೇಶವೇ ಅಲ್ಲ. ಅದು ಅತ್ಯಂತ ನೀಚ ಪಕ್ಷ ಎಂದು ಅದೇ ಸ್ವಯಂ ಪ್ರೇರೇಪಿತವಾಗಿ ಜನತೆಗೆ ತೋರಿಸಿಯಾಗಿದೆ. ಅದಕ್ಕೆ ಜನತೆಯೇ ತಕ್ಕ ಪಾಠ ಕಲಿಸುತ್ತದೆ. ಯಾಕೆಂದರೆ ನಮ್ಮ ಜನ ಅಷ್ಟೊಂದು ದಡ್ಡರಲ್ಲ ಬಿಡಿ. ಆದರೆ ಕಾಂಗ್ರೆಸ್  ಪಕ್ಷದ ಹೋರಾಟದ ಪರಿ ನಿನ್ನೆ ನಿಜವಾಗಲೂ ಅರ್ಥಗರ್ಭಿತವಾಗಿರಲಿಲ್ಲ. ನಿಜವಾಗಿಯೂ ಕರ್ನಾಟಕ ರಾಜ್ಯದ ಬಗೆಗೆ ತುಂಬು ಹೃದಯದ ಪ್ರೀತಿ ಇದ್ದಿದ್ದರೆ, ಈ ಪೊಳ್ಳು ಹೋರಾಟವನ್ನು ಬಿಟ್ಟು ಅವರ ಅಧಿಕಾರ ವ್ಯಾಪ್ತಿಯಲ್ಲಿ ರಾಜ್ಯದ ಒಳಿತಿಗೆ ಅದೇನೇನು ಮಾಡಬೇಕೋ ಅದನ್ನು ಮಾಡಬೇಕಿತ್ತು. ಆದರೆ ಅದರ ಹೊರತಾಗಿ ಪಕ್ಷ ಎಲ್ಲಾ ಮಾಡುತ್ತಿದೆ. ಹೇಗೆ ಅವಧಿಗೆ ಮುನ್ನ ರಾಜ್ಯದ ಚುಕ್ಕಾಣಿ ಹಿಡಿಯುವುದು ಎಂಬ ಏಕ ಮಾತ್ರ ಆಲೋಚನೆಯಲ್ಲಿ ನಿರತರಾಗಿದ್ದಾರೆ ಪಕ್ಷದ ಪರಿಚಾರಕರು.
ನಿನ್ನೆಯ ಇವರ ಪರಾಕ್ರಮ ಯಾವರೀತಿಯದ್ದಾಗಿತ್ತೆಂದರೆ, ಬಿ.ಜೆ.ಪಿ ಹಟಾವೋ-ಕರ್ನಾಟಕದ ಹಣ ಬಚಾವೋ-ನಾವೂ ಮಾಡ್ಬೇಕು ಕಟಾವು ಎಂಬಂತಿತ್ತು.
                                                               ಡಾ.ಶ್ರೇ   

No comments:

Post a Comment