Wednesday, January 19, 2011

ಚಿಲ್ಲರೆ ಜಗಳ..
ಅಲ್ಲೊಂದು ಕಡೆ ಬಸ್ಸಿನ ಕಂಡೆಕ್ಟರ್ ಮತ್ತು ಪ್ರಯಾಣಿಕ  ಜಗಳವಾಡುತ್ತಿದ್ದಾರೆ, ಇನ್ನೊಂದು ಕಡೆ ಹೋಟೆಲಿನ ಮಾಲೀಕ ಮತ್ತು ಗಿರಾಕಿಯ ಜೊತೆ ಜಟಾ-ಪಟಿ ನಡಯುತ್ತಿದೆ; ಮತ್ತೊಂದು ಕಡೆ ವೈನ್ ಶಾಪಿನಲ್ಲಿ ಪಾನಮತ್ತ ಗಿರಾಕಿ  ದೊಡ್ಡ ದನಿಯಲ್ಲಿ ಬೊಬ್ಬೆ ಹಾಕುತ್ತಿದ್ದಾನೆ. ಏನಪ್ಪಾ ಇದು? ಎಂದು ಅಂದುಕೊಂಡಿರ? ನಮ್ಮಲ್ಲಿ ದಿನಕಳೆದಂತೆ ಚಿಲ್ಲರೆ ಸಮಸ್ಯೆ ಬಿಗಡಾಯಿಸುತ್ತಿದೆ ಎಂದು ನಿಮಗೆ ಅನಿಸುತಿಲ್ಲವೇ?
ಈ ಚಿಲ್ಲರೆಯ ಸಮಸ್ಯೆ ದಿನಕಳೆದಂತೆ ನಮಗೆ ತೊಂದರೆ ಕೊಡುತ್ತಿದೆ. ಎಲ್ಲಿ ಹೋದರು 'ಹೇ ಚಿಲ್ರೆ ಕೊಡ್ರಿ' ಅನ್ನುವ ವ್ಯಕ್ತಿಗಳು ನಮ್ಮ ಸುತ್ತಮುತ್ತ ತುಂಬಾ ಇದ್ದಾರೆ. ಪ್ರಸ್ತುತ ದಿನಗಳಲ್ಲಿ ಜನರ ಪರ್ಸಿನಿಂದ 1 ರೂಪಾಯಿ, 2 ರೂಪಾಯಿ ನಾಣ್ಯಗಳು ಕಾಣೆಯಾಗಿ, ಆ ಜಾಗದಲ್ಲಿ ಗರಿ ಗರಿ ನೋಟುಗಳು ಬಂದು ಕುಳಿತಿವೆ. ಜನರಲ್ಲಿ ಬಡತನ ನಿವಾರಣೆಯಾಗಿದೆಯೋ ಇಲ್ಲವೋ ಆದರೆ ಜನರಲ್ಲಿ ಚಿಲ್ಲರೆ ಕಾಣುವುದು ವಿರಳ. ಜನ  5 ರೂಪಾಯಿ ಸಾಮಾನು ಕೊಂಡುಕೊಂಡರು 50 ರೂಪಾಯಿ ನೋಟು ನೀಡುತ್ತಾರೆ, ಇದರಿಂದಾಗಿ ಅಂಗಡಿಯ ಮಾಲಕ, ಬಸ್ಸಿನ ನಿರ್ವಾಹಕ ಮುಂತಾದವರು ಗಿರಾಕಿಗಳ ಜೊತೆ ಹೋದಲ್ಲಿ ಬಂದಲ್ಲಿ ಜಗಳವಾಡುವುದನ್ನು ಕಾಣಬಹುದು. ಕೆಲವೊಮ್ಮೆ ಈ ಜಗಳಗಳು ತಾರಕಕ್ಕೇರಿ ಹೊಡೆದಾಟ ನಡೆಯುವುದುಂಟು.
ಈ ಚಿಲ್ಲರೆ ಸಮಸ್ಯೆ ಎಲ್ಲಿಯವರೆಗೆ ಬಿಗಡಾಯಿಸಿದೆ ಎಂದರೆ ಬ್ಯಾಂಕಿನಲ್ಲಿರುವ ಅಧಿಕಾರಿಗಳು ಕೂಡ ಗ್ರಾಹಕರ ಜೊತೆ ಚಿಲ್ಲರೆ ಕೇಳುವ ಹಂತಕ್ಕೆ ತಲುಪಿದ್ದಾರೆ. ಈ ಸಮಸ್ಯೆಗೆ ಪರಿಹಾರವಂತೂ ಸದ್ಯದಲ್ಲಿ ಕಾಣುತ್ತಿಲ್ಲ, ಕಾರಣ ಹುಡುಕ ಹೊರಟರೆ ಸಮರ್ಪಕವಾದ ಕಾರಣವು ಸಿಗುತ್ತಿಲ್ಲ. ಇನ್ನು ಜನ ಹೆಣ್ಣು, ಹೊನ್ನು, ಮಣ್ಣಿಗಾಗಿ ಜಗಳವಾಡುವುದರ ಜೊತೆಗೆ ಚಿಲ್ಲರೆಗಾಗಿ ಯುದ್ದ ಮಾಡಿದರು ಸಂಶಯವಿಲ್ಲ.
ಹಾಗೇ ಸುಮ್ಮನೆ- ಚಿಲ್ಲರೆ ಸಮಸ್ಯೆಯಿಂದ ತೊಂದರೆ ಅನುಭವಿಸಿದ ಉಮೇಶ, ದೇಶದಲ್ಲಿ  coin-box ಗಳನ್ನು ನಿಷೇಧಿಸಬೇಕು ಎಂಬ ಸಲಹೆ ನೀಡಿದ್ದಾನೆ. ಚಿಲ್ಲರೆಗಳು ಇದರಲ್ಲೇ ಬಂಧಿಯಾಗಿದೆ ಎಂಬುವುದು ಈತನ ಭಾವನೆ. ಜನರಲ್ಲಿ 2,3 ಮೊಬೈಲ್ ಇರುವಾಗ coin-box ಗಳ ಅವಶ್ಯಕತೆಯಾದರು ಏನು? ಎಂಬ ಪ್ರಶ್ನೆ ಉಮೇಶನದು.
                                          ಡಾ. ಶೆಟ್ಟಿ 

No comments:

Post a Comment