Thursday, January 6, 2011

ನಿರೀಕ್ಷೆಯಂತೆ ಫಲಿತಾಂಶ 

ಮೊನ್ನೆ ನಡೆದ ತಾಲೂಕು ಹಾಗು ಜಿಲ್ಲಾ ಪಂಚಾಯತ್ ಚುನಾವಣೆಯ ಫಲಿತಾಂಶ ಯಾವ ಅಚ್ಚರಿಗೂ ಎಡೆಮಾಡಿಕೊಟ್ಟಿಲ್ಲ ಎಂದರೆ  ಅತಿಶಯೋಕ್ತಿಯಲ್ಲ. ಇದು ನಮ್ಮ ನಾಯಕರಿಗೂ ಅರಿವಿದೆ. ಆದರೆ, ನಮ್ಮ ನಾಯಕರು ಬಹಳ ಸಭ್ಯ ವ್ಯಕ್ತಿಗಳಾಗಿರುವುದರಿಂದ, ವೈಚಾರಿಕತೆಯ ವಾಂತಿ ಮಾಡಿ ಊರೆಲ್ಲ ಗಲೀಜು ಮಾಡುವ ಮಡಿ ರಹಿತ ಜೀವನ ಅವರದಲ್ಲ.
ರಾಜ್ಯದಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ನಡೆದ ಬಳುವಳಿ ರಹಿತ , ಚಳುವಳಿ ನಿರತ  ರಾಜಕಾರಣವನ್ನು ಗಮನಿಸಿದ ಜನಕ್ಕೆ ಒಂದಂತ್ತು ಬಹಳ ಸ್ಪಷ್ಟವಾಗಿದೆ. ಜನತಾ ಸೇವೆಯ ಹೆಸರಲ್ಲಿ ಮೂರೂ ಪಕ್ಷಗಳು ಹಾಕಿಕೊಂಡಿರುವುದು ಮುಖವಾಡ ಎಂದು. ಪಕ್ಷಗಳು  'ಕೇವಲ' ರಾಜ್ಯದ ಆಡಳಿತ ಚುಕ್ಕಾಣಿಗಾಗಿಯೇ ಹೋರಾಟ, ಲಾಬಿಯ ರಾಜಕಾರಣ ನಡೆಸುತ್ತಿರುವುದು, ನಗ್ನವಾಗಿ ಜನರ ಮುಂದೆ ಬಿದ್ದಿದೆ.
ಇದರ ಫಲಿತಾಂಶವಾಗಿ, ಮತದಾರ ಪ್ರಭುಗಳ ಮನಸ್ಥಿತಿ ಸ್ವಲ್ಪ ಸ್ವಲ್ಪವಾಗಿಯೇ ಏನೋ, ಇನ್ನೂ ತಮಗೆ ಅರಿಯದ ಹೊಸತನದತ್ತ ನೆಟ್ಟಿದೆ ಎಂಬುವುದು, ತಾಲೂಕು ಹಾಗು ಗ್ರಾಮ ಪಂಚಾಯತ್ ಚುನಾವಣೆ ಸ್ಪಷ್ಟ ಪಡಿಸಿದೆ. ಯಡಿಯೂರಿಯಿಂದ ತೊಡಗಿ ಸಿದ್ದು, ರೆಡ್ಡಿ, ಕುಮಾರಣ್ಣ, ಪರಮಣ್ಣ ಇವರೆಲ್ಲರಿಗೂ ಅವರವರದೇ ಆದ ವ್ಯಾಪ್ತಿಯಲ್ಲಿ ಹಿನ್ನಡೆಯೇ ಆಗಿದೆ. ಮೂರು ಪಾಳು ಬಾವಿಯಂತಾಗಿರುವ ಪಕ್ಷಗಳಿಂದ ಜನ ಹೇಗೆ ನೀರೆತ್ತಲು ಸಾಧ್ಯ ಕಣ್ರೀ ? ಜನ ತೀರ ಕನ್ಫ್ಯೂಸ್ ಆಗಿದ್ದಾರೆ  ಎನ್ನುವುದಕ್ಕೆ, ತಾಲೂಕು ಪಂಚಾಯತ್ನಲ್ಲಿ 48  , ಗ್ರಾಮ ಪಂಚಾಯತ್ನಲ್ಲಿ  10 ಕ್ಷೇತ್ರಗಳನ್ನು ಅತಂತ್ರಸ್ಥಿತಿಯಲ್ಲಿ ಇರಿಸಿದ್ದೆ  ಸಾಕ್ಷಿ. 
ಮತದಾನ ಬಹಳ ವಿರಳ ಶೇಕಡಾ ಆಗಿರುವಾಗಲೇ ಈ ಫಲಿತಾಂಶ. ಇನ್ನೂ ಪೂರ್ತಿ ಮತದಾನ ನಡೆದಿದ್ದರೆ ಅದ್ಯಾವತರ ಅಂಕಿ ಅಂಶಗಳು ಬರುತ್ತಿತೋ ಆ ದೇವರಿಗೇ ಗೊತ್ತು. ಒಟ್ಟಾರೆಯಾಗಿ ಜನ ಬದಲಾವಣೆಯನ್ನು ಬಯಸಿರುವುದು ಸಂಪೂರ್ಣವಾಗಿ ಬಯಲಾಗಿದೆ. ಆದರೆ, ಬದಲಾವಣೆ ಯಾವ ರೀತಿಯದ್ದು ಮತ್ತು ಹೇಗೆ ಎಂಬುವುದು ನಿಜವಾಗಲು ಮಿಲಿಯನ್ ಡಾಲರ್ ಪ್ರಶ್ನೆಯೇ ಸರಿ. 
                                                                                                             - ಡಾ. ಶ್ರೇ

No comments:

Post a Comment