Monday, January 24, 2011

ತ್ರಿವರ್ಣ ಧ್ವಜ ಹಾರಿಸಬಾರದಂತೆ!
ಗಣರಾಜೋತ್ಸವ ದ ದಿನ ಕಾಶ್ಮೀರದಲ್ಲಿ ಧ್ವಜಾರೋಹಣ ಮಾಡಬಾರದಂತೆ! ಈ ಮಾತನ್ನು ಯಾವುದೋ ಉಗ್ರಗಾಮಿ ಸಂಘಟನೆಗಳು ಹೇಳಿದ್ದಲ್ಲ, ಕಾಶ್ಮೀರದ ಮುಖ್ಯಮಂತ್ರಿ ಉಮರ್ ಮತ್ತು ದೇಶದ ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳಿದ್ದು.
ಕಾಶ್ಮೀರದಲ್ಲಿ ಧ್ವಜಾರೋಹಣ  ಮಾಡಿದರೆ ಶಾಂತಿ ಕದಡುತ್ತದೆ, ದೇಶದಲ್ಲಿ ಒಡಕು ಉಂಟಾಗುತ್ತದೆ ಎಂದು ಹೇಳಿರುವ ಪ್ರಧಾನಿ ಅವರ ಮಾತು ನಿಜಕ್ಕೂ ನಾಚಿಗೇಡಿನ ಸಂಗತಿ.
ಪ್ರಧಾನಿಯಾಗಿ,ದೇಶದ  ಅವಿಭಾಜ್ಯ ಅಂಗವಾದ ಕಾಶ್ಮೀರದಲ್ಲಿ ಧ್ವಜ ಹಾರಿಸಬಾರದು ಎನ್ನುವ ಇವರು ಯಾವ ರೀತಿ ದೇಶದ ಹಿತ ಕಾಯುತ್ತಾರೆ? ಕೆಲವೇ ಕೆಲವು ಪ್ರತ್ಯೇಕತಾವಾದಿಗಳ ಹಿತಾಸಕ್ತಿಗಾಗಿ, ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ. ಕಾಶ್ಮೀರ ದೇಶದ ಭಾಗವಲ್ಲವೇ? ಸ್ವತಂತ್ರ ಭಾರತದಲ್ಲಿ  ಧ್ವಜ ಹಾರಿಸುವ ಹಕ್ಕು ಎಲ್ಲರಿಗೂ ಇದೆ, ಅದರಲ್ಲೂ ರಾಜಕಾರಣ ಮಾಡುತ್ತಿರುವ ಉಮರ್, ಮನಮೋಹನ್ ಸಿಂಗ್ ಅವರು ಯಾವ ಸೀಮೆಯ ಜನನಾಯಕರು? 
ಅಷ್ಟರಲ್ಲೂ ಕಾಶ್ಮೀರದಲ್ಲಿ ಧ್ವಜ ಹಾರಿಸಿದರೆ, ದೇಶದಲ್ಲಿ ಒಡಕು ಉಂಟಾಗುತ್ತದೆ ಅನ್ನುತ್ತಾರಲ್ಲವೆ, ಅದು ಹೇಗೆ? ದೇಶದ ಮುಸಲ್ಮಾನರು ಅಷ್ಟು ಕೂಡಾ ಮೂಢರೇ? ಪ್ರತ್ಯೇಕತಾವಾದಿಗಳನ್ನು ನಿಯಂತ್ರಿಸಲಾಗದ ಹೇಡಿಗಳು ಇವರು ದೇಶದ ಹಿತ ಕಾಪಾಡುತ್ತಾರಂತೆ!
ಕಾಶ್ಮೀರದ ಲಾಲ್ ಚೌಕದಲ್ಲಿ ಪಾಕಿಸ್ತಾನದ ಧ್ವಜ ಹಾರಿಸುವಾಗ ಕಣ್ಣು ಮುಚ್ಚಿಕೊಂಡು ಕೂತ ಇವರಿಗೆ, ತ್ರಿವರ್ಣ ಧ್ವಜ ಹಾರಿಸುತ್ತೇವೆ ಎನ್ನುವಾಗ ದೇಶದಲ್ಲಿ ಒಡಕು ಉಂಟಾಗುತ್ತದೆ ಎಂಬ ಭೀತಿಯೇ?
ಯಾರದೋ ಹಿತ ಕಾಯಲು, ಜವಾಬ್ದಾರಿಯಿಂದ ನುಣುಚಿಕೊಳ್ಳಲು, ದೇಶದ ಹಿತವನ್ನು ಬಲಿ ಕೊಡುವುದು  ತೀರಾ ಬಾಲಿಷವಾದದ್ದು. ಕಾಶ್ಮೀರದಲ್ಲಿ  ತ್ರಿವರ್ಣ ಧ್ವಜ ಹಾರದಿದ್ದರೆ ಪ್ರತ್ಯೇಕತಾವಾದಿಗಳು  ಇನ್ನಷ್ಟು ಬಲಿಷ್ಠರಾಗುವುದರಲ್ಲಿ ಸಂಶಯವಿಲ್ಲ.
ಹಾಗೇ ಸುಮ್ಮನೆ - ಕಾಶ್ಮೀರದಲ್ಲಿ ಧ್ವಜ ಹಾರಿಸಬಾರದು ಎಂದು ಹೇಳಿದ ಪ್ರಧಾನಿಯವರ ಮಾತು ಕೇಳಿದ ಉಮೇಶನಿಗೆ ಈಗ ಮನಮೋಹನ್ ಸಿಂಗ್ ಅವರು ಕೋವಿ ಹಿಡಿದ ಮುಲ್ಲಾಉಮರ್ ನಂತೆ ಕಾಣಿಸುತಿದ್ದಾರಂತೆ..
                                                                -ಡಾ.ಶೆಟ್ಟಿ 

No comments:

Post a Comment