Tuesday, January 25, 2011


ಸಾಧಕನಿಗೆ ನಮನ
ಅಲಾಪಗಳ ಅರಸ, ತಾಳ ಜ್ಞಾನಿ, ರಾಗ ವಿಜ್ಞಾನಿ, ರಾಗ ತಾಳದ ನಡುವಿನ ಭಾವ ಸೂಕ್ಷ್ಮಿ. ೧೧ ರ ವಯಸ್ಸಿನಲ್ಲಿಯೇ ಸಂಗೀತದಿಂದ ಪ್ರೇರೇಪಿತರಾಗಿ ಹುಟ್ಟೂರು ರೋಣವನ್ನು ತ್ಯಜಿಸಿ ಸಂಗೀತಕ್ಕಾಗಿ ಪೂರ್ತಿ ಭಾರತ ದೇಶವನ್ನೇ ಅಲೆದು, ಪುಣೆಯನ್ನು ಸೇರಿ ಉಸ್ತಾದ್ ಹಫೀಜ್ ಆಲಿಖಾನ್ ಅವರ ಗಾನ ಗಾರುಡಿಯ ಗರಡಿಯಲ್ಲಿ ಪಳಗಿ, ಅಲ್ಲಿ ಹಿಂದೂಸ್ಥಾನಿ ಸಂಗೀತದಲ್ಲಿ ಉನ್ನತ ಅಭ್ಯಾಸವನ್ನು ಗೈದು; ಸ್ವರ, ತಾಳ, ಲಯ, ಭಾವ, ಹಾಗೂ ಇದೆಲ್ಲವನ್ನು ಮೀರಿದ, ಅಂದರೆ ಇವೆಲ್ಲವನ್ನೂ ಒಂದೇ ಅಲೆಯಲ್ಲಿ ಸಮತೋಲನದಲ್ಲಿ ಇಡುವ ಅದೇನೋ ಅದ್ಭುತ ಶಕ್ತಿಯನ್ನು ತನ್ನೊಳಗಿಂದ ಹೊರತಂದು ೧೯೩೧ ರಿಂದ ಇಡೀ ದೇಶದ ಜನತೆಯನ್ನು ರಾಗ ಸಾಗರದಲ್ಲಿನ ಹಡಗಿನಲ್ಲಿ ನಲ್ಮೆಯ ನಾವಿಕನನ್ನಾಗಿಸಿದ್ದಾರೆ.
ಉಸಿರು ಬಿಗಿ ಹಿಡಿದು ಸಂಗೀತದಲ್ಲಿ ಸೇರಿ ಆಲಾಪದ ಅಲೆಯನ್ನು ಶ್ರೋತೃಗಳ ಹೃದಯ ರಂಗಕ್ಕೇ ತಾಕಿಸಿ ಅವರ ಹೆಸರನ್ನು ಸಮಸ್ತರ ಮನದಲ್ಲಿ ಅಜರಾಮರವಾಗುವಂತೆ ಮಾಡಿದ್ದಾರೆ ಪಂಡಿತ್ ಭೀಮ್ ಸೇನ್ ಜೋಶಿ.
ಅವರ ಧೀರ್ಘಕಾಲದ ಅಸ್ವಸ್ಥತೆಯಿಂದ ನಿನ್ನೆ ವಿಧಿವಶರಾದರು. ವ್ಯಕ್ತಿ ಈಗ ನಮ್ಮ ಮುಂದೆ ಬಿಟ್ಟು ಹೋಗಿರುವುದು ಅವರ ಅಮೋಘ ಸಾಧನೆ. 
ಇವರ ಬದುಕೇ ಒಂದು ಪ್ರಾಯೋಗಿಕ ಪಾಠ. ಸಾಧಕನ ಭೂ ಲೋಕ ರಹಿತತ್ವಕ್ಕೆ ಸಂತಾಪ ಸೂಚಿಸುತ್ತಾ, ಅವರ ಸಾಧನೆಯ ಗತಿಗೆ ನಮನ ಗೈಯುತ್ತಾ, ಇವರ ರವ್ವಷ್ಟು ಛಲ ನಮ್ಮಲ್ಲಿ ಬರಲಿ ಎಂಬುದೇ ಅಗಲಿದ ಸಾಧಕನಲ್ಲಿ ನಮ್ಮ ಪ್ರಾರ್ಥನೆ.
                                                -ಡಾ.ಶ್ರೇ.

No comments:

Post a Comment