Wednesday, August 31, 2011

ಕೆಲಸಮಯದ ಬಿಡುವಿನ ನಂತರ ನಾವು ಮತ್ತೆ ಬರುತ್ತಿದ್ದೇವೆ....
ಸುದ್ದಿಗಳ ವಿಶ್ಲೇಷಣೆ ಮತ್ತೆ ಆರಂಭವಾಗುತ್ತದೆ ನಿರೀಕ್ಷಿಸಿ....

 

Thursday, May 5, 2011ಪ್ರಿಯ ಓದುಗ ಮಿತ್ರರೇ,
ನಾವು ೪ ಮಂದಿ ಗೆಳೆಯರು ಕಾಲೇಜು ಜೀವನಕ್ಕೆ ಕಣ್ಣೀರಿನೊಂದಿಗೆ ವಿದಾಯ ಹೇಳಿ ಬಂದಿದ್ದೇವೆ. ಆ  ಮೂಲಕ ,ಜೊತೆ-ಜೊತೆಯಾಗಿದ್ದ ನಾವು ದೂರ ದೂರವಾಗುವ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಇದರ ಜೊತೆ ನಮ್ಮಲ್ಲಿ ಕೆಲವರಿಗೆ ಅನ್ನಕ್ಕಾಗಿ ಉದ್ಯೋಗ ಹುಡುಕಬೇಕಾಗಿದೆ. ಇನ್ನು ಕೆಲವರು, ಹಲವರಿಗೆ ಉದ್ಯೋಗ ನೀಡುವ ಶಿಕ್ಷಣವೆಂಬ ವ್ಯಾಪಾರದ ಗಿರಾಕಿಗಳಾಗಲು ಹೊರಟಿದ್ದಾರೆ. ಇಷ್ಟೆಲ್ಲಾ ತೊಂದರೆಗಳ ನಡುವೆ, ನಮ್ಮ ಲೇಖನಗಳು ಇನ್ನುಮುಂದೆ ಪ್ರಕಟಗೊಳ್ಳಲಿಕ್ಕಿಲ್ಲ. ಅದಕ್ಕಾಗಿ ನಮ್ಮನ್ನು ದಯವಿಟ್ಟು ಕ್ಷಮಿಸಿ.. 
ನೆನಪಿಡಿ,ನಾವು ಒಂದು ದಿನ ಪುನಃ ಬರುತ್ತೇವೆ!!

ನಿರೀಕ್ಷಿಸಿ..

-NEW YORKER TIMES

Friday, April 1, 2011

ಪಾಠವಾಗಲಿ ತೀರ್ಪು... 
ಬಾಲಿವುಡ್ ಎಂಬ ಮಾಯಾ ಲೋಕದಲ್ಲಿ ಎಲ್ಲಾ ರೀತಿಯ ಜನರು ಸಿಗುತ್ತಾರೆ. ಉತ್ತಮರು, ಅಧಮರು, ಸಾಧುಗಳು ಹೀಗೆ ಎಲ್ಲಾ ರೀತಿಯ character ಗಳನ್ನೂ ನೀವು ಒಂದೇ ಕಡೆ ನೋಡಬೇಕೆಂದರೆ ಬಾಲಿವುಡ್ ಅನ್ನು ನೋಡಬೇಕು. ನಾನು ಈಗ ಹೇಳ ಹೊರಟಿರುವುದು ಉತ್ತಮರ ಬಗ್ಗೆ ಅಲ್ಲ, ಅಧಮನೊಬ್ಬನ ಬಗ್ಗೆ. ಮನೆ ಕೆಲಸದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿರುವ ಭೂಪನ ಬಗ್ಗೆ! ನಿಮಗೆ ಈಗಾಗಲೇ ಗೊತ್ತಾಗಿರಬಹುದು ಯಾರೆಂದು, ಅವನೇ ಶೈನಿ ಅಹುಜಾ ಎಂಬ ಉದಯೋನ್ಮುಕ ನಟ. ಮಾಜಿ ಸೈನ್ಯಾಧಿಕಾರಿಯ ಮಗನಾದ ಈತ, ಕಲಿತದ್ದೆಲ್ಲ ಸೈನ್ಯದ ಶಾಲೆಯಲ್ಲಿಯೇ, ಬಾಲ್ಯದಲ್ಲಿ ಸೈನ್ಯಕ್ಕೆ ಸೇರಬೇಕು ಎಂಬ ಆಸೆ ಹೊತ್ತುಕೊಂಡಿದ್ದ ಇವನು ಅದ್ಯಾವ ದುರಾದೃಷ್ಟಕ್ಕೆ ಬಾಲಿವುಡ್ ಎಂಟ್ರಿಯಾದನೋ ಏನೋ ಪಾಪ!
ಕಳೆದ 2009 ರಲ್ಲಿ ಶೈನಿ ಅಹುಜಾ, ಆತನ ಮನೆ ಕೆಲಸದ ಹುಡುಗಿ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಮಾಡಿದ್ದಳು. ಪೊಲೀಸರು ಆತನನ್ನು ಬಂಧಿಸಿದ್ದರು, ನಂತರ ಜಾಮೀನು ಪಡಕೊಂಡು ಹೊರಬಂದಿದ್ದ ಶೈನಿಗೆ, ಈಗ ಕೋರ್ಟ್ 7 ವರ್ಷ ಸಜೆ ನೀಡಿದೆ. ಈ ಮೂಲಕ ಶೈನಿಗೆ ಜೈಲಿನ ಊಟ ಗ್ಯಾರಂಟಿ ಆಗಿದೆ. 
ಶೈನಿಗೆ ದೊರೆತ ಈ ಶಿಕ್ಷೆ ಇತರರಿಗೂ ಪಾಠವಾಗಲಿ. ಬಡತನದ ಕಾರಣದಿಂದ ಮನೆಕೆಲಸ ಮಾಡಿ ಹೊಟ್ಟೆ ತುಂಬಿಸುವ ಹುಡುಗಿಯರನ್ನು, ಪುಸಲಾಯಿಸಿಯೋ, ದೌರ್ಜನ್ಯ ಮಾಡಿಯೋ ಬಳಸಿಕೊಳ್ಳುವವರಿಗೆ ಈ ತೀರ್ಪು ಎಚ್ಚರಿಕೆಯ ಘಂಟೆಯಾಗಲಿ.
ಹಾ'ಗೇ' ಸುಮ್ಮನೆ- ಶೈನಿಯ ಕಥೆ ಕೇಳಿದ ಉಮೇಶ, ಇನ್ನು ಮುಂದೆ ಮನೆ ಕೆಲಸಕ್ಕೆ ಹುಡುಗರನ್ನು ಇಡಬೇಕು ಎನ್ನುತ್ತಿದ್ದಾನೆ. ಹಾ'ಗೇ'  ಮಾಡಿದರೆ, ಹೀ'ಗೇ' ಆಗಲಿಕ್ಕಿಲ್ಲ ಎನ್ನುವುದು ಉಮೇಶನ ಅಭಿಪ್ರಾಯ.
                                             -ಡಾ.ಶೆಟ್ಟಿ 
ಎಲ್ಲ ಮುಗಿದಿದೆ. ಮತ್ತೊಂದು ಕನಸಿನ ಆರಂಭದೊಂದಿಗೆ 
ಒಂದೇ ಭಾರತ, ಒಂದೇ ಕನಸು, ಒಂದೇ ಭಯ ಒಂದೇ ಕುತೂಹಲ, ಒಂದೇ ಗುರಿ. ಇದು ನಿನ್ನೆ ಬಿಕೋ ಎನ್ನುತ್ತಿದ್ದ ಎಲ್ಲಾ ಬೀದಿಗಳ, ಎಲ್ಲಾ ಕಂಪೆನಿಗಳ ಎಲ್ಲ ಶಾಲಾ ಕಾಲೇಜುಗಳ ಮೌನದಲ್ಲಿದ್ದ ಒಂದೇ ಮಾತು. ಇತಿಹಾಸಕ್ಕೂ ಮೀರಿದ ಭಾರತ-ಪಾಕ್ ನಡುವಿನ ಕ್ರಿಕೆಟ್ ಪಂದ್ಯದ ಒಂದೇ ಉದ್ದೇಶ. 
ಮೊನ್ನೆ ಗಂಟೆ 2:30 ಯಿಂದ ಶುರುವಾದ ಪಂದ್ಯ, ಸೆಹ್ವಾಗ್ ಅನ್ನೇ ಟಾರ್ಗೆಟ್ ಎಂದು ಹೇಳಿಕೆ ನೀಡಿದ ಉಮ್ಮರ್ ಗುಲ್ ಬೌಲಿಂಗ್ ಅನ್ನು ಎಂದೂ ಯಾರೂ ಕೇಳರಿಯದಂತೆ  ಚಚ್ಚುವ ಮೂಲಕ ಪಾಕಿ Main seamer ನ ಕಾನ್ಫಿಡೆನ್ಸ್ ಕೆಳಗೆ ತಳ್ಳಿ ಅಫ್ರಿದಿಯನ್ನು ತಡಕಾಡುವಂತೆ  ಮಾಡಿ ಇನ್ನೇನು ಪಂದ್ಯ  One sided ಆಗಬಹುದೇ ಎಂಬ ಊಹೆ ಭಾರತೀಯರ ಮನದಲ್ಲಿ ಮೂಡುವ ಸಮಯಕ್ಕೆ ವಹಾಬ್ ನ ಮಾರಕ ಎಸೆತಕ್ಕೆ  ಎಲ್.ಬಿ ಯಾಗಿ ನಿರ್ಗಮಿಸಿದ ಸೆಹ್ವಾಗ್ ಜೊತೆ  One sided  ಪಂದ್ಯವೂ ಕೂಡ ಪೆವಿಲಿಯನ್ ಅಲ್ಲಿ ಕುಳಿತು ಮ್ಯಾಚ್ ವೀಕ್ಷಣೆ ಗೈಯ್ಯಲು ಪ್ರಾರಂಭಿಸಿತ್ತು ಎನ್ನಬಹುದು. ಮತ್ತೆ ಆರಂಭವಾಗಿತ್ತು Tension situation ಸದಾ ವಿಕೆಟ್ ಉರುಳುತ್ತಾ, ಸಣ್ಣ ಸಣ್ಣ Partnership ಜತೆಗೊಳ್ಳುತ್ತಾ ಭಾರತ 260 ರನ್ ಗಡಿ ತಲುಪಿತ್ತು.
ಕ್ರಿಕೆಟ್ ಆರಾಧ್ಯ ದೈವ ಸಚಿನ್ 85 ಮೌಲ್ಯಯುತವಾದ ರನ್ ಗಳಿಸಿ ಭಾರತವನ್ನು ಸುಸ್ಥಿತಿಯ ದಾರಿಗೆ ಹಾಕುವ ಸತತ ಪ್ರಯತ್ನ ಮಾಡುವಲ್ಲಿ 5 ಜೀವದಾನವನ್ನು ಪಡೆದರೆ, ಒಟ್ಟಾರೆಯಾಗಿ ಪಾಕಿಗಳು 6 ಕ್ಯಾಚ್ ಡ್ರಾಪ್ ಮಾಡಿ, ಅತ್ಯಂತ ಕಳಪೆ ಫೀಲ್ಡಿಂಗ್ ಪ್ರದರ್ಶನ ತೋರಿ ನಮಗೆ ಗುರಿ ತಲುಪುವಲ್ಲಿ ಸ್ವಲ್ಪ ಸಹಕಾರಿಯಾದರು  ಎಂದರೂ ತಪ್ಪಲ್ಲ. 
ತದನಂತರ ಶುರುವಾಗಿತ್ತು ವಾಸ್ತವ ಯುದ್ದ. ಬ್ಯಾಟ್ ಹಿಡಿದು ಪಾಕಿಗಳು ಭಾರತೀಯ   ಬೌಲರ್ ಗಳನ್ನೂ ದಂಡಿಸಲು ಪ್ರಾರಂಭಿಸಿದಾಗ, ಈ ಬಾರಿ ನಿರೀಕ್ಷೆ ಹುಸಿಯಾಗುತ್ತೋ ಎಂಬ ಗೊಂದಲ ಭಯ, ನೀರವ ಮೌನ. ಆದರೆ ಛಲ ಬಿಡದ ಭಾರತದ ಜಾಹಿರ್ ಖಾನ್ ಮೊದಲ ವಿಕೆಟ್ ಉರುಳಿಸುವ  ಮೂಲಕ ಭಾರತಕ್ಕೆ ಹೊಸ ಹುರುಪನ್ನು ನೀಡಿದರು. ಮುಂದೆ Regular intervals of time ನಲ್ಲಿ ಪಾಕಿ ವಿಕೆಟುಗಳನ್ನು ಉರುಳಿಸಿ, ಯಾವ ಬ್ಯಾಟ್ಸ್ ಮ್ಯಾನ್ ಗಳೂ ಸರಿಯಾದ Partnership ಮಾಡಲಾಗದಂತೆ ಭಾರತೀಯ ಬೌಲರ್ ಗಳು ಲೈನ್ ಅಂಡ್ ಲೆಂಥ್ ನಲ್ಲಿ ಬೌಲಿಂಗ್ ಮಾಡಿ ಗೆಲುವಿನ ಹಾದಿ ಸುಗಮವಾಗುವಂತೆ ಮಾಡಿದರು. 
ಮಿಸ್ಬಾ ಮತ್ತು ಅಕ್ಮಲ್ ಎಷ್ಟು ಪ್ರಯತ್ನ ಪಟ್ಟರೂ ಪಾಕ್ ಕೊನೆಗೆ ತನ್ನ ಸೋಲನ್ನು ಒಪ್ಪಿಕೊಳ್ಳ ಬೇಕಿತ್ತು. ಮಿಸ್ಬಾನ ವಿಕೆಟ್ ನೊಂದಿಗೆ ಭಾರತೀಯರ ಕನಸು ನನಸಾಗಿತ್ತು. ಅಬ್ಬಬ್ಬಾ! ಅದೆಂತಹ ರೋಮಾಂಚನದ ಕ್ಷಣ. ಕೊನೆಗೂ ಇತಿಹಾಸ ಮರುಕಳಿಸಿಯೇ ಬಿಟ್ಟಿತು. ಪಾಕ್ ಭಾರತದ ಎದುರು ಸೋತೆ ಬಿಟ್ಟಿತು. 
Democracy ವ್ಯವಸ್ಥೆಯಲ್ಲಿ 100 ಕೋಟಿ ಭಾರತೀಯ ಜನತೆ 200 ಕೋಟಿ  ಕನಸುಗಳನ್ನು ಕಾಣುವ ನಮ್ಮ ಜನ, ಒಂದೇ ಕನಸು ಕಾಣುವುದೆಂದರೆ! ಎಷ್ಟೊಂದು ಆನಂದ? ಈಗ ಎಲ್ಲ ಮುಗಿದಿದೆ. ಮತ್ತೊಂದು ಕನಸಿನ ಆರಂಭದೊಂದಿಗೆ. 
Best of luck India. For India vs Srilanka Match                                
                                                              -ಡಾ.ಶ್ರೇ.

Saturday, March 26, 2011

ಲಿಬಿಯಾದ ಗತಿ ಏನು?
ಅಮೆರಿಕಾ ಮಿತ್ರ ರಾಷ್ಟ್ರಗಳು ಲಿಬಿಯಾದಲ್ಲಿ 'ಶಾಂತಿ'ಗಾಗಿ ಹೋರಾಡುತ್ತಿವೆ. ನಾಗರಿಕರ ಪ್ರತಿಭಟನೆಯಿಂದಾಗಿ ಅರಾಜಕತೆ ಉಂಟಾಗಿದ್ದ ಲಿಬಿಯಾದಲ್ಲಿ ಮಿತ್ರರಾಷ್ಟ್ರಗಳ ಸೈನಿಕರ ಬೂಟಿನ ಸದ್ದು ಕೇಳಿಸುತ್ತಿದೆ. ಮಿತ್ರರಾಷ್ಟ್ರಗಳ ಹೋರಾಟಕ್ಕೆ ವಿಶ್ವಸಂಸ್ಥೆ ಕೂಡ ಹಸಿರು ನಿಶಾನೆ ತೋರಿದೆ. 
ಲಿಬಿಯಾದಲ್ಲಿ ಪ್ರಜಾಪ್ರಭುತ್ವದ ಹೋರಾಟಕ್ಕೆ ಬೆಂಬಲ ನೀಡುವುದು ಪ್ರಶಂಸನೀಯ, ಆದರೆ ಶಾಂತಿ ಸ್ಥಾಪನೆಯ ಹೆಸರು ಹೇಳಿಕೊಂಡು ಮುಗ್ದ ಜನರ ಹತ್ಯೆಯಾಗುವುದು ಎಷ್ಟು ಸರಿ?
ಲಿಬಿಯಾದಲ್ಲಿ ಶಾಂತಿ ಸ್ಥಾಪಿಸಲು ಅಮೆರಿಕಾ ಮಾಡಿಟ್ಟಿರುವ ಪ್ರಯತ್ನದಲ್ಲಿ ಸ್ವಹಿತಾಸಕ್ತಿ ಇರುವುದು ಮಾತ್ರ ಸ್ಪಷ್ಟ ಸಂಗತಿ, ಯಾಕೆಂದರೆ ಅಮೆರಿಕಾ ಎಂಬ ಕುತಂತ್ರಿ ರಾಷ್ಟ್ರ ಲಾಭವಿಲ್ಲದೆ ಯಾವ ಕೆಲಸವನ್ನು ಕೂಡ ಮಾಡುವುದಿಲ್ಲ! ಅಮೆರಿಕಾದ ಕುತಂತ್ರವನ್ನು ತಿಳಿದುಕೊಳ್ಳಲು ಸೌದಿ ಅರೇಬಿಯಾ ಎಂಬ ದೇಶದ ಇತಿಹಾಸವನ್ನು ಒಮ್ಮೆ ನೆನಪು ಮಾಡಿಕೊಳ್ಳಿ.. 
ಅದೊಂದು ಕಾಲ, ಸೌದಿ ಎಂಬ ಪುಟ್ಟ ರಾಷ್ಟದಲ್ಲಿ ತೈಲ ಸಂಪತ್ತು ಅಪಾರವಾಗಿದೆ ಎಂಬ ವಿಚಾರ ಜಗತ್ತಿನ ಯಾವ ದೇಶಕ್ಕೂ ಗೊತ್ತಿರಲಿಲ್ಲ, ಆಗ ಸೌದಿಯನ್ನು ಹಷಿಮೈತ್ ಮತ್ತು ಸೌದಿ ಎಂಬ ೨ ರಾಜ ವಂಶಗಳು ಆಳುತ್ತಿದ್ದವು. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟರೆ ಸೌದಿ ಶಾಂತವಾಗಿಯೇ ಇತ್ತು. ಆದರೆ ಯಾವಾಗ ಸೌದಿಯ ಗರ್ಭದಲ್ಲಿ ತೈಲ ನಿಕ್ಷೇಪಗಳು ಇದೆ ಎಂಬ ವಿಚಾರ ಗೊತ್ತಾಯಿತೋ, ಅಮೆರಿಕಾದ ಕಿವಿ ನೆಟ್ಟಗಾಯಿತು, ಹೇಗಾದರೂ ಮಾಡಿ ಸೌದಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದಿತು. ಅದಕ್ಕಾಗಿ ಹಷಿಮೈತ್ ರಾಜ ವಂಶದ ಮೇಲೆ ಸೌದಿಯ ರಾಜರನ್ನು ಎತ್ತಿ ಕಟ್ಟಿದರು, ಸೌದಿ ರಾಜ ವಂಶಕ್ಕೆ ಆಯುಧ, ಸೈನ್ಯ ಮುಂತಾದ ಬೆಂಬಲ ನೀಡಿ, ಹಷಿಮೈತ್ ಗಳನ್ನು ನಿರ್ನಾಮ ಮಾಡಿ ಬಿಟ್ಟರು. ಅದರ ಫಲವಾಗಿ ಇಂದಿಗೂ ಸೌದಿ ಎಂಬ ರಾಷ್ಟ್ರ ದೊಡ್ಡಣ್ಣನಿಗೆ ನಿಷ್ಠವಾಗಿಯೇ ಇದೆ! ಸೌದಿಯಲ್ಲಿ ನಡೆಯುವ ತೈಲ ವ್ಯವಹಾರದಲ್ಲಿ ಅಮೆರಿಕಾಕ್ಕೆ ಸಿಂಹಪಾಲು ದೊರೆಯುತ್ತಿದೆ, ಸೌದಿ ದೊರೆಯ ಆಸ್ಥಾನದಲ್ಲಿ ಅಮೆರಿಕಾದ ಪ್ರತಿನಿಧಿ ಇದ್ದಾನೆ, ಅವನು ಹೇಳಿದಕ್ಕೆಲ್ಲ ತಲೆಯಾಡಿಸುವುದೆ ಸೌದಿ ದೊರೆಯ ಕೆಲಸ!
ಲಿಬಿಯಾ ಎಂಬ ದೇಶ ಕೂಡ ತೈಲ ಸಂಪತ್ತಿನಿಂದ ಸಮೃದ್ಧವಾಗಿದೆ, ನಾಗರಿಕರ ದಂಗೆಯ ಹೆಸರು ಹೇಳಿಕೊಂಡು ಅಮೆರಿಕಾ ಅಲ್ಲಿ ತನ್ನ ಬೇಳೆ ಬೇಯಿಸುವ ಪ್ರಯತ್ನ ಮಾಡುತ್ತಿದೆ, ಅದರಲ್ಲಿ ಯಶಸ್ಸು ಕೂಡ ಪಡೆಯಬಹುದು. ಆದರೆ ಹಾಗಾಗದಿರಲಿ ಎಂಬುವುದೇ ಎಲ್ಲರ ಹಾರೈಕೆ. 
ಲಿಬಿಯಾದಲ್ಲಿ ಪ್ರಜಾಪ್ರಭುತ್ವ ಬರಲಿ, ಆದರೆ ಮುಗ್ಧ ನಾಗರಿಕರ ಮತ್ತು ಅಮೆರಿಕಾದ ಅಟ್ಟಹಾಸ ನಿಲ್ಲಲಿ.
ಹಾಗೇ ಸುಮ್ಮನೆ - ಜಪಾನ್ ನಲ್ಲಿ ಸುನಾಮಿ ಬರಲು ಅಮೆರಿಕಾ ಕಾರಣ ಎಂಬ ಹೊಸ ವಾದವನ್ನು ಕೇಳಿದ ಉಮೇಶ, ನಮ್ಮ ಉತ್ತರ ಕರ್ನಾಟಕದಲ್ಲಿ ಕೂಡ ನೆರೆ ಬರಲು ಅಮೆರಿಕಾವೇ ಕಾರಣವಾಗಿರಬಹುದು ಎಂದು ಶಂಕಿಸುತ್ತಿದ್ದಾನೆ.
                                                                         -ಡಾ.ಶೆಟ್ಟಿ 

ಯಪ್ಪಾ! ನಮ್ಮೂರಲ್ಲಿ ಹಿಂಗೆಲ್ಲಾ ಇಲ್ಲಪ್ಪಾ!!!
ಒಂದು ಕೆಲಸದಿಂದ ನುಸುಳಿಕೊಂಡು ನಾವು ಹಲವು ದಾರಿಗಳನ್ನು ಹುಡುಕುತ್ತೇವೆ. ಇದು ನಮ್ಮ ಸಂಸ್ಕೃತಿಯಲ್ಲೇ ಬಂದಿದೆ. ಇನ್ನೂ ರಸ್ತೆಗಳನ್ನು ಕಾಣದ ಅದೆಷ್ಟೋ ಊರುಗಳು ನಮ್ಮ ದೇಶದಲ್ಲಿ ಇದೆ. ಮೂಲಭೂತ ಸೌಕರ್ಯ ದೊರಕದ ಕುಟುಂಬಗಳಿವೆ. ಒಂದೂರಿನಿಂದ ಇನ್ನೊಂದು ಊರಿಗೆ ಸಂಬಂಧ ಕಲ್ಪಿಸುವ ಸೇತುವೆಗಳು ಶಿಫಾರಸ್ಸಾಗಿ ಹಾಗೆ ಉಳಿದಿವೆ. Family drama ನಡೆಸಲೆಂದೇ ಸಂಸತ್ತಿನಲ್ಲಿ ಅಧಿವೇಶನಗಳು ನಡೆಯುತ್ತಲೇ ಇರುತ್ತವೆ. ಒಂದು ಹೊತ್ತು ಸಾಮಾನ್ಯನ ಬಗ್ಗೆ ಯೋಚಿಸುವ ಲೀಡರ್ ಇಲ್ಲವೆಂದೇ ಹೇಳಬಹುದು. 
ಜಪಾನ್ನಲ್ಲಿ ಮಾರ್ಚ್ 11 ರಂದು ನಡೆದ ಸುನಾಮಿ ಭೂಕಂಪನಗಳಿಂದ ಜೀವ ಹಾನಿಯೊಂದಿಗೆ ಎದ್ದು ನಿಲ್ಲಲಾಗದ ರೀತಿಯಲ್ಲಿ ಕುಸಿದು ಬಿದ್ದಂತೆ ದೇಶದ ಸ್ಥಿತಿಯು ಕಾಣುತ್ತಿತ್ತು. ಆದರೆ ಅವರು ನಮ್ಮವರಂತಲ್ಲ. ಜಪಾನಿನ ನಾಕಾದ ಗ್ರೇಟ್ ಕಾಂಟೋ ಹೆದ್ದಾರಿ ಸುನಾಮಿ ಭೂಕಂಪದಿಂದ ಛಿದ್ರಗೊಂಡಿದ್ದರೂ ಮಾರ್ಚ್ 17 ರಂದು ಶುರು ಹಚ್ಚಿದ ದುರಸ್ತಿ ಕಾರ್ಯವು ಮತ್ತೆ ಆರೇ ದಿನಗಳಲ್ಲಿ ಪೂರ್ಣಗೊಂಡು ಮೊದಲಿನಂತೆ ಕಂಗೊಳಿಸುತ್ತಿದೆ. ಇದನ್ನು ಸರಿಯಾಗಿ ಗಮನಿಸಿದಾಗ ಜಪಾನ್ ಗೆ ಜಪಾನ್ ಮಾತ್ರ ಸಾಟಿ ಎನ್ನಬಹುದು. 
ಯಾವುದೇ ಕಾರ್ಯಗಳು ಆಗಬೇಕು ಎಂದಿದ್ದಲ್ಲಿ ದೃಢ ನಿಶ್ಚಯ ಮತ್ತು Hard work ಇದ್ದರೆ ಅದು ಆಗಿಯೇ ತೀರುತ್ತದೆ. 
ನಮ್ಮಲ್ಲಿ ಯಾಕೆ ಇಂತಹ ಚುರುಕು ಕೆಲಸಗಳು ನಡೆಯುತ್ತಿಲ್ಲ? ನಮ್ಮಲ್ಲಿರುವ ದೋಷವಾದರೂ ಏನು? ಮುಕ್ತಿಯಾದರೂ ಹೇಗೆ? ನಮ್ಮ ಜನರು ಕಣ್ಣಿಗೆ ಬ್ರಹ್ಮ ಗಂಟನ್ನೇ ಕಟ್ಟಿದ ಕಣ್ಣು ಪಟ್ಟಿಯನ್ನು ಕಟ್ಟಿ ಕುಳಿತ್ತಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ.
                                                                                 -ಕೆ.ಪಿ.ಭಟ್ 

Thursday, March 17, 2011

ಪುನಃ ಭಿನ್ನಮತ?
ಯಡಿಯೂರಪ್ಪನವರ ಗ್ರಹಗತಿ ಚೆನ್ನಾಗಿಲ್ಲವೋ? ಅಥವಾ ರಾಜ್ಯದ ಗ್ರಹಚಾರ ಸರಿಯಾಗಿಲ್ಲವೋ ಗೊತ್ತಿಲ್ಲ, ಒಟ್ಟಿನಲ್ಲಿ ರಾಜ್ಯದಲ್ಲಿ ಬಿ.ಜೆ.ಪಿ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದ, ದಿನಕ್ಕೊಂದು ವಿವಾದ ಹುಟ್ಟಿಕೊಳ್ಳುತ್ತಲೇ ಇದೆ. 
'ನಮ್ಮನ್ನು ಸರಿಯಾಗಿ ಆಡಳಿತ ನಡೆಸಲು ಪ್ರತಿಪಕ್ಷದವರು ಬಿಡುತ್ತಿಲ್ಲ' ಎಂದು ಯಡಿಯೂರಪ್ಪನವರು ಬೊಬ್ಬೆ ಹಾಕಿದರೆ, 'ನಿಮ್ಮಷ್ಟು ಭ್ರಷ್ಟ ಮುಖ್ಯಮಂತ್ರಿ ದೇಶದಲ್ಲೇ ಇಲ್ಲ' ಎಂದು ಪ್ರತಿಪಕ್ಷಗಳು ಕೂಗೆಬ್ಬಿಸುತ್ತಿವೆ. ಯಡಿಯೂರಪ್ಪನವರಿಗೆ ಪ್ರತಿಪಕ್ಷಗಳ ತೊಂದರೆ ಒಂದೆಡೆಯಾದರೆ, ಪಕ್ಷದಲ್ಲೇ ಇರುವ ಭಿನ್ನರದು ಇನ್ನೊಂದು ಕಿರಿಕಿರಿ. ಜನಾರ್ಧನ ರೆಡ್ಡಿಯವರು ಆರಂಭ ಮಾಡಿದ  ಭಿನ್ನಮತದ ಸಂಪ್ರದಾಯ, ನಿನ್ನೆ ಅನಂತ್ ಕುಮಾರ್, ಈಶ್ವರಪ್ಪ ರ ವರೆಗೆ ಮುಂದುವರೆದಿದೆ. 
ಪ್ರೇರಣಾ ಹಗರಣದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುತ್ತದೆ ಎಂದು, ಬಿ.ಜೆ.ಪಿಯ ಕೆಲ ಶಾಸಕರು ನಿನ್ನೆ ಮುಖ್ಯಮಂತ್ರಿಯವರನ್ನು ವಿರೋಧಿಸಿ ಗುಪ್ತ ಸಭೆ ನಡೆಸಿದರು. ಅಲ್ಲಿಗೆ ತನ್ನ ಬೆಂಬಲಿಗ ಶಾಸಕರೊಡನೆ ನುಗ್ಗಿ, ಅಲ್ಲಿ ಏನೇನೋ ಮಾಡಿ, ಹೊರ ಬಂದಾಗ ಸಿಕ್ಕ ಡ್ರೈವರ್ ಮಹಾಶಯನಿಗೆ ಬಡಿದ ಯಡ್ಡಿಯವರನ್ನು, ನಿನ್ನೆ ನೀವು ದೃಶ್ಯಮಾಧ್ಯಮದಲ್ಲಿ ನೋಡಿರುತ್ತೀರಿ. 
ಪ್ರೇರಣಾ ಟ್ರಸ್ಟ್ ವಿಚಾರದಲ್ಲಿ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಬೀಸುತ್ತಿದೆ. ಬಿ.ಜೆ.ಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ವಿಧಾನಸಭೆಯಲ್ಲಿ ಕೂಡ ಸುಗಮ ಕಲಾಪ ನಡೆಸಲು ಪ್ರತಿಪಕ್ಷಗಳು ಬಿಡುತ್ತಿಲ್ಲ. ಈ ಕಾರಣದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸದ್ಯಕ್ಕಂತೂ ಫುಲ್ ಸ್ಟಾಪ್. ಉಪಚುನಾವಣೆ ಕೂಡ ಹತ್ತಿರವಿರುವುದರಿಂದ, ಬಿ.ಜಿ.ಪಿ ಆಂತರಿಕ ಬಿಕ್ಕಟ್ಟನ್ನು ಹೇಗೆ ನಿರ್ವಹಿಸುತ್ತದೆ ಎಂಬುವುದು ಈಗ ಎಲ್ಲರ ಮುಂದಿರುವ ಪ್ರಶ್ನೆ.
ಹಾಗೇ ಸುಮ್ಮನೆ- 'ಪಕ್ಷದಲ್ಲಿ ಭಿನ್ನಮತವಿಲ್ಲ' ಎಂಬ ಯಡ್ಡಿಯವರ ಮಾತು ಕೇಳಿದ ಉಮೇಶನಿಗೆ ನಗು ಬಂತಂತೆ. ಯಾಕೆಂದರೆ ಎಲ್ಲವೂ ಸರಿಯಾಗಿರುವ ವ್ಯಕ್ತಿ 'ನಾನು ಸರಿಯಾಗಿದ್ದೇನೆ' ಎಂದು ಹೇಳಿಕೊಂಡು ತಿರುಗಿದಾಗ ತಾನೆ ಪಕ್ಕದವರಿಗೆ doubt ಬರೋದು, ಏನೋ ಚೂರು ಎಡವಟ್ಟಾಗಿದೆ ಎಂದು. 
                                                                                -ಡಾ.ಶೆಟ್ಟಿ 
ಕಹಿ ಕಹಿ ನೆನಪು..
ಮೋಪ್ಲಾ ಕಾಂಡದ ನೆನಪು ಮಾಡಿದ ಕೂಡಲೇ ಕಣ್ಣಿಗೆ ಕಟ್ಟಿದಂತೆ ಆಗುವುದು ಹಿಂದೂಗಳ ಮಾರಣ ಹೋಮ. ಇದರ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ ವಹಿಸಿದಂತೆ ವಿಕೃತಿಗಳು ಮತ್ತಷ್ಟು ಜನನವಾಗುತ್ತಲೇ ಹೋಗುತ್ತವೆ. ಇಲ್ಲಿ ಒಂದು ರೀತಿಯ ವಿಚಿತ್ರ ವಿಕೃತ ಮನೋಭಾವವನ್ನು ನಾವು ಕಾಣಬಹುದು. 
ಗಾಂಧೀ ಪ್ರವರ್ತಿತ ಕಿಲಾಫಾತ್ ಚಳುವಳಿಯ ನೇರ ಪರಿಣಾಮವಾಗಿ 1921 ರಲ್ಲಿ ಕೇರಳದಲ್ಲಿ ನಡೆದ ಮೋಪ್ಲಾ ಬಂಡಾಯದ ಚಿತ್ರಣ ಮುಂದೆ ಕಾಡ್ಗಿಚ್ಚಿನಂತೆ ಬೆಳೆಯುತ್ತಲೇ ಹೋಗುತ್ತದೆ. 
ಮೊಪ್ಲಾಗಳು(ಮಾಪಿಳ್ಳೆ) ಶ್ರೀಮಂತ ಹಿಂದೂ ಮಹಿಳೆಯರನ್ನು ಮುಸ್ಲಿಂ ಕೂಲಿಗಳಿಗೆ ಮದುವೆ ಮಾಡಿ ಕೊಟ್ಟರು. ನಂತರ ಅತ್ಯಾಚಾರವನ್ನು ದಿನದೂಟದಂತೆ ಮಾಡುತ್ತಿದ್ದರು. ಇದರ ಎಲ್ಲದರ ಎದುರುಗಡೆ ಹೋರಾಡಲಾಗದೆ ಮಹಿಳೆಯರು ಉಡಲು ಸರಿಯಾದ ಬಟ್ಟೆಗಳಿಲ್ಲದೆ ದಟ್ಟ ಕಾಡಿನಲ್ಲಿ ಅವಿತು ಕುಳಿತರು. ಆಗಿನ ವೈಸರಾಯ್ ಪತ್ನಿಗೆ ಪತ್ರಗಳ ಮೂಲಕ ತಮ್ಮ ಗೋಳನ್ನು ಹೇಳಿಕೊಂಡು ಅಂಗಲಾಚಿದರು. ಈ ರೀತಿ ಚಳುವಳಿಯ ಇನ್ನೊಂದು ಕರಾಳ ಮುಖ ನಮಗೆ ಕಾಣ ಸಿಗುತ್ತದೆ.
                                                               -ಕೆ.ಪಿ.ಭಟ್     

Tuesday, March 15, 2011

ಎಂದೂ ಮರೆಯದ ಮಹಾನ್ ಯೋಧ!
ಎಲ್ಲವೂ ಸರಿಯಾಗಿದ್ದರೆ ಆತ ಇಂದು ತನ್ನ ಬೆಂಗಳೂರಿನ ಮನೆಯಲ್ಲಿ, ಹುಟ್ಟು ಹಬ್ಬದ ಕೇಕು ಕತ್ತರಿಸುತ್ತಾ ಇರುತ್ತಿದ್ದ. ಎಲ್ಲರಂತೆ ಎಂಜಿನಿಯರಿಂಗ್, ಮೆಡಿಕಲ್ ಆಯ್ದುಕೊಂಡಿದ್ದರೆ ಇಂದು ಆತ ಅವನ ಗರ್ಲ್ ಫ್ರೆಂಡ್ ಜೊತೆ, ಕಾಫಿ ಡೇ ಯಲ್ಲಿ ಕಾಫಿ ಹೀರುತ್ತಿದ್ದ. ಆದರೆ ಆತ ಹಾಗಾಗಲಿಲ್ಲ, ದೇಶ ಸೇವೆಗೆ, ದೇಶಭಕ್ತಿಗೆ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟ. ದೇಶದ ಮಾನ ಕಾಪಾಡಲು ತನ್ನ ಪ್ರಾಣವನ್ನೇ ಬಲಿ ನೀಡಿದ, ಈತನೇ ದೇಶ ಕಂಡ  ಮಹಾನ್ ಯೋಧ, ಅಶೋಕಚಕ್ರ ದಿ.ಮೇಜರ್ ಸಂದೀಪ್ ಉನ್ನಿಕೃಷ್ಣನ್! 
ಅಂದು ನವೆಂಬರ್, 26 , 2008 ದೇಶದ ವಾಣಿಜ್ಯನಗರಿ ಮುಂಬೈ, ಪಾಕ್ ಉಗ್ರಗಾಮಿಗಳ ದಾಳಿಗೊಳಗಾಯಿತು. ಕೆಲ ಷಂಡ ಉಗ್ರಗಾಮಿಗಳ ಕುತಂತ್ರಕ್ಕೆ ದೇಶ ಮುಗ್ಧ ನಾಗರಿಕರ ಜೊತೆ ಕೆಲ ಧೀರ ಯೋಧರನ್ನು ಕೂಡ ಕಳಕೊಂಡಿತು. ಅದರಲ್ಲಿ N.S.G (national security guards) ನ ಯೋಧ ಸಂದೀಪ್ ಉನ್ನಿಕೃಷ್ಣನ್ ಒಬ್ಬರು.
ದೇಶದ ಯುವಕರು ಪಬ್ಬು, ಕ್ಲಬ್ಬು, ಹೆಣ್ಣು, ಹೆಂಡ ಎಂದು ತಿರುಗುವಾಗ, ಸಂದೀಪ್ ದೇಶ ಕಾಯುವ ಯೋಧನಾಗಬೇಕು ಎನ್ನುವ ಕನಸು ಕಂಡವರು. ಇವರಿಗೆ ಬಾಲ್ಯದಲ್ಲೇ ಅವರ ತಂದೆ ತಾಯಿಗಳು ದೇಶಭಕ್ತಿಯ ಶಿಕ್ಷಣವನ್ನು ಜೋಡಿಸಿದ್ದರು. ಸಂದೀಪ್ ಅವರು ಎಂಜಿನಿಯರ್, ಡಾಕ್ಟರ್ ಆಗಿ ಲಕ್ಷ ಲಕ್ಷ ಎನಿಸಬೇಕು ಎನ್ನುವ ಲಕ್ಷ್ಯವನ್ನು ಹೊಂದದೆ, ದೇಶದಲ್ಲೇ ಅತ್ಯುನ್ನತವಾದ N.S.G ಯಲ್ಲಿ ಯೋಧನಾಗಿ ಸೇರಿಕೊಂಡರು ಆದರೆ ದುರ್ಧೈವವೆಂದರೆ, ಸಂದೀಪ್ ಎನ್ನುವ ದೀಪ ಪ್ರಕಾಶಮಾನವಾಗಿ ಉರಿಯುತ್ತಿರುವಾಗಲೇ ನಂದಿ ಹೋಯಿತು. ಅದು ದೇಶಕ್ಕಾದ ಮಹಾನ್ ನಷ್ಟ.
ಇಂದು ಸಂದೀಪ್ ಅವರ 34 ನೇ ಹುಟ್ಟುಹಬ್ಬ, ಅವರಂತಹ ಧೀರ ಯೋಧ ನಮ್ಮೊಂದಿಗೆ ಇರದಿರುವುದು ದುರಂತ. ಬೆಂಗಳೂರಿನ ಸಂದೀಪ್ ಅವರ ಮನೆಯಲ್ಲಿ ತಂದೆ ತಾಯಿ, ಅವರ ಪೋಟೋದ ಎದುರು ಅಳುತ್ತಿದ್ದರೆ, ಇತ್ತ ಮುಂಬೈ ದಾಳಿಯ ಉಗ್ರ ಕಸಬ್; ನಮ್ಮ ದೇಶದ ಜೈಲಿನಲ್ಲಿ ಕೂತು ಹೊಟ್ಟೆಭರ್ತಿ ತಿನ್ನುತ್ತಿದ್ದಾನೆ! ನಿಜಕ್ಕೂ ನಮ್ಮ ಭಾರತ ಗ್ರೇಟ್!
                                                              -ಡಾ.ಶೆಟ್ಟಿ 

Thursday, March 10, 2011

ಮುಗ್ಧ ಮನಸ್ಸಿನ ಚಲಿಸುವ ದೇವತೆ 
ಅಮ್ಮ ಹೇಳಿದ 8 ಸುಳ್ಳುಗಳನ್ನು ಕೇಳಿದ ಮೇಲೆ ನನ್ನ ಕಣ್ಣುಗಳಲ್ಲಿ ನೀರು ತುಂಬಿತ್ತು. ಆಕೆ ಹರಿದ ಸೀರೆ ಉಟ್ಟಿದ್ದಾಳೆ, ಮನೆ ಕೆಲಸವೂ ಯಾವತ್ತೂ ಆಕೆಗೆ ಬೋರ್ ಅನಿಸಿಲ್ಲ. ಕೆಲವೊಮ್ಮೆ ಎದೆ ನೋವಿನಿಂದ ಬಳಲುತ್ತಾಳೆ. ಯಾವತ್ತೂ ಆ ನೋವಿನ ಬಗೆಗೆ ತನ್ನ ಅಳಲು ತೋರಿಲ್ಲ. ನಾವು ಯಾರೂ ಇನ್ನೂ ಆಕೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ. ಆದರು ಸದಾ ನಮ್ಮ ನೋವಿಗೆ ಹೆಗಲು ನೀಡುತ್ತಲೇ ಬಂದಿದ್ದಾಳೆ. 
ಓ ಅಮ್ಮ ನೀನೆಷ್ಟು ಒಳ್ಳೆಯವಳು? 
 ಅಮ್ಮನ ಬಗ್ಗೆ ನನಗೆ ಬರೆಯಬೇಕು ಎಂದೆನೆಸಿಯೇ ಇಲ್ಲ. ಆದರೆ 'ಅಮ್ಮ ಹೇಳಿದ 8 ಸುಳ್ಳುಗಳು' ಎಂಬ ಬರಹವನ್ನು ಓದಿದಾಗ ಮನಸ್ಸು ಕರಗಿ ಆಕೆಯ ಬಗ್ಗೆ ಬರೆಯುತ್ತಿದ್ದೇನೆ. 
Sorry ಅಮ್ಮ, ನಾನು ಹೊಟ್ಟೆ ಭರ್ತಿ ಉಂಡು ಬಂದಾಗಲೂ ಸ್ವಲ್ಪ ಅನ್ನ ಇದ್ದರೂ ನನಗೆ ಊಟ ಆಗಿದೆ, ನೀನು ಊಟ ಮಾಡು ಎಂದು ಯಾಕೆ ಹೇಳಿದೆ? ನೀನು ಎಂದೂ ನನ್ನ ಬಿಟ್ಟು ಉಂಡಿಲ್ಲ. ಕೇಳಿದರೆ ಹಸಿವಿಲ್ಲ ಎನ್ನುತ್ತೀಯ. ಮನೆಯ ಸಮಸ್ಯೆ ಬಗ್ಗೆ ಸಮಸ್ಯೆ ಇದೆ ಎಂದು ನಮ್ಮನ್ನು ಯಾವತ್ತೂ ಗಲಿಬಿಲಿಗೊಳಿಸಿಲ್ಲ.
ಅಪ್ಪ ತೀರಿಹೋದಾಗ ಅತ್ತಿದ್ದೀಯ. ನಿನ್ನ ಕಣ್ಣಿನ ನೀರಿನಲ್ಲಿ ನನ್ನ ಮತ್ತು ಅಕ್ಕನವರ ಪ್ರತಿಬಿಂಬ ನೋಡಿದ್ದೇನೆ. ನಂತರ ಯಾವತ್ತೂ ಅತ್ತಿಲ್ಲ ನೀನು. ಅಳುವ ಸಂದರ್ಭ ಅದೆಷ್ಟೋ ಬಂದಿದೆ. ಆ ಸಂದರ್ಭದಲ್ಲಿ ಮುಗುಳು ನಗು ನಕ್ಕಿದ್ದೀಯ. ಸಂಬಂಧಿಕರ ಕಟು ಮಾತುಗಳಿಗೆ  ಯಾವತ್ತೂ ತಿರುಗುತ್ತರ ನೀಡಿಲ್ಲ. ನಿನ್ನ ಮಕ್ಕಳ ಬೌದ್ದಿಕ ಬೆಳವಣಿಗೆಯನ್ನು ಎದುರು ನೋಡುತ್ತಿರುವ ನಿನಗೆ ಯಾವ ಸಮಸ್ಯೆಗಳೂ ಕಾಣಿಸುತ್ತಿಲ್ಲ.
ಇದು ನನ್ನ ಅನುಭವ. ಅನುಭವಗಳ ಪಟ್ಟಿಗಳನ್ನು ಹೀಗೇ ರಾಶಿ ಹಾಕಬಹುದು. ನಿಮ್ಮಲ್ಲೂ ಅದೆಷ್ಟೋ ಅಮ್ಮಂದಿರು ಹೀಗೇ ಇರಬಹುದು. ಅವರನ್ನು ಅರ್ಥ ಮಾಡಿಕೊಳ್ಳಿ. 
ನನ್ನ ಅಮ್ಮ ಮುಗ್ಧ ಮನಸ್ಸಿನ ಚಲಿಸುವ ದೇವತೆ.  
                                 -ಕೆ.ಪಿ.ಭಟ್ 
            ಹೃದಯ ವೈಶಾಲ್ಯತೆ ಅಗತ್ಯ 
ಇನ್ನೇನು ವಿಶ್ವ ಕನ್ನಡ ಸಮ್ಮೇಳನ ಪ್ರಾರಂಭವಾಗಲು ಕ್ಷಣಗಣನೆ ಆರಂಭವಾಗಿದೆ. ಬೆಳಗಾವಿಯು ಎಲ್ಲಾ ಪೂರ್ವ ತಯಾರಿಯೊಂದಿಗೆ ಸಮ್ಮೇಳನವನ್ನು ಆಯೋಜಿಸಲು ಸಂಪೂರ್ಣ ತಯಾರಿ ನಡೆಸಿ ಕನ್ನಡಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಸರಕಾರವು ವಿಶ್ವಕನ್ನಡ ಸಮ್ಮೇಳನವನ್ನು ಬಹಳ ಸೂಕ್ಷ್ಮವಾಗಿ ಪರಿಗಣಿಸಿದೆ ಎನ್ನಬಹುದು. ತಯಾರಿಯ ಸಂದರ್ಭದಿಂದಲೇ ವಿಶ್ವಕನ್ನಡ ಸಮ್ಮೇಳನದ ಸುದ್ದಿ ಪತ್ರಿಕೆಗಳಲ್ಲಿ ಬಿಖರಿಯಾಗಿತ್ತು. 'ಉತ್ತಮ ಮೌಲ್ಯದೊಂದಿಗೆ!' 
ಈಗ ಇದೇ ವಿಶ್ವಕನ್ನಡ ಸಮ್ಮೇಳನದಿಂದ ಪತ್ರಿಕೆಗಳಿಗೆ ಮತ್ತೆ ಮುಖಪುಟ ಸುದ್ದಿಯೊಂದು ದೊರೆತಿದೆ. ಏನೆಂದರೆ, ಸಮ್ಮೇಳನ ಸಂಘಟಕರ ಆಹ್ವಾನ ಅಧ್ವಾಂತ. ಸಮ್ಮೇಳನದ ಆಹ್ವಾನದ ವಿಚಾರದಲ್ಲಿ ಸಂಘಟಕರ ನಿರ್ಲಕ್ಷ್ಯ ಎದ್ದು ಕಂಡಿದೆ. ಇದಕ್ಕೆ ಮೊದಲನೆಯ ಕಾರಣ ಎಂದರೆ, ಬೆಳಗಾವಿಯ ಮೇಯರ್ ಎನ್.ಬಿ. ನಿರ್ವಾಣಿಯವರ ರಾಜಿನಾಮೆ. ತಮಗೆ ಸಮ್ಮೇಳನದ ಪೂರ್ವತಯಾರಿಯಲ್ಲಿ ಸರಿಯಾದ ಜವಾಬ್ದಾರಿ ನೀಡಿಲ್ಲ ಹಾಗು ಸಮ್ಮೇಳನಕ್ಕಾಗಿ 700 ಗೂಡಂಗಡಿಗಳನ್ನು ತೆರವು ಮಾಡುವಾಗ ಅಧಿಕಾರಿಗಳು ಮತ್ತು ಉಸ್ತುವಾರಿ ಸಚಿವರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಮತ್ತು ಎಲ್ಲದಕ್ಕಿಂತ ಮುಖ್ಯ ಕಾರಣವೆಂದರೆ, ವಿಶ್ವ ಕನ್ನಡ ಸಮ್ಮೇಳನಕ್ಕೆ ತಮಗೆ ಆಹ್ವಾನವೇ ನೀಡಿಲ್ಲದಕ್ಕಾಗಿ ರಾಜಿನಾಮೆ ನೀಡಿ, ಮೇಯರ್ ಆದಾಗಕ್ಕಿಂತ ತುಸು, ಯಾಕೆ? ಬಹಳವೇ ಸುದ್ದಿಯಾಗಿದ್ದಾರೆ. ಸಂಘಟಕರು ಯಾವುದನ್ನು ತಲೆಯಲ್ಲಿ ಇಟ್ಟುಕೊಂಡು ಇವರನ್ನು ಈ ರೀತಿ ನಡೆಸಿಕೊಂಡರೋ ಗೊತ್ತಿಲ್ಲ. ಆದರೆ, ಮೇಯರ್ ಆದವರಿಗೆ ಆಹ್ವಾನ ಪತ್ರಿಕೆಯನ್ನು ಮಾತ್ರ ಕಳುಹಿಸಬೇಕಿತ್ತು. ಇದು ಕಾರ್ಯಕ್ರಮದ ಶಿಸ್ತೂ ಹೌದು. 
ಇದೊಂದೇ ಆಗಿದ್ದರೆ, ಏನೋ ಮರೆತು ಬಿಟ್ಟಿದ್ದಾರೋ ಎಂದು ಊಹಿಸಬಹುದಿತ್ತು. ಆದರೆ ಆಹ್ವಾನದಿಂದ ವಂಚಿತರಾದವರ ಪಟ್ಟಿಯಲ್ಲಿ ಕನ್ನಡ ನುಡಿ ತೇರು ಮೂಲಕ ಜಾಗೃತಿ ಜಾಥಾ ನಡೆಸಿ, ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ರಮೇಶ್ ಝಾಳಕಿ ಇದ್ದಾರೆ. ಇವರನ್ನೂ ಮರೆತು ಹೋಗಿದ್ದಾರೆ ಎಂದರೆ ನಂಬಬಹುದು. ಆದರೆ, ಕನ್ನಡ ನಾಡಿನ ಅಭೂತಪೂರ್ವ ವ್ಯಕ್ತಿತ್ವ, ಸದಾ ಸಂಚಾರಿ ಭಾವದ, ಹುಚ್ಚು ಮುಂಡೆ ಮದುವೇಲಿ ಉಂಡೋನೆ ಜಾಣ ಎಂಬ ಪಾಲಿಸಿಯ, ವಟ ವಟ ಮಾತಿನ ವಾಟಾಳ್ ನಾಗರಾಜ್ ಅವರನ್ನು ನಿರ್ಲಕ್ಷಿಸಿರುವುದು Pre planned agenda ವೆ? ಎನ್ನುವ ಆಲೋಚನೆಯತ್ತ ನಮ್ಮನ್ನು ಕೊಂಡೊಯ್ಯುತ್ತದೆ. 
ಇದೆಲ್ಲದರ ನಡುವೆ, ಚಂದ್ರು ಅವರು ಈ ವಿಚಾರದ ಬಗೆಗೆ ಯಾವ ತಗಾದೆಯೂ ತೆಗೆಯದೆ ತಾವು ಸಮ್ಮೇಳನದಲ್ಲಿ ಭಾಗವಹಿಸಿ ಬರುತ್ತೇನೆ ಎಂದು ಹೃದಯ ವೈಶಾಲ್ಯತೆಯನ್ನು ಮೆರೆದು, ಆಯೋಜಕರಿಗೆ ಮುಜುಗರ ಆಗುವಂತೆ ಮಾಡಿದ್ದಾರೆ. ಯಾವುದೇ ರಾಜಿನಾಮೆ, ಪತ್ರಿಕೆಯಲ್ಲಿ ಬರೆಸುವುದು, ಆಹ್ವಾನದಿಂದ ವಂಚಿತರಾಗಿದ್ದಕ್ಕೆ ಹೋರಾಟ ಮಾಡುವುದರಿಂದ ಕೇವಲ ಪತ್ರಿಕೆಯಲ್ಲಿ ಬಹಳ ದೊಡ್ಡ 'ಸುದ್ದಿಯಾಗಿ' ಪತ್ರಿಕೆ ಮಾರಾಟ ಆಗುತ್ತದೆಯೇ ಹೊರತು ಬೇರೇನೂ ಆಗುವುದಿಲ್ಲ. ಆದರೆ ಹೃದಯ ವೈಶಾಲ್ಯತೆ ಮೆರೆದರೆ ಸನ್ನಿವೇಶಾನುಸಾರ ಯಾರಿಗೆ ಏನೇನು ಆಗಬೇಕೋ ಅದು ಆಗಿಯೇ ಆಗುತ್ತದೆ. ಈಗ ಹೇಳಿ, ಜನ ಯಾರನ್ನು ಹೊಗಳುತ್ತಾರೆ? ಚಂದ್ರು ಅವರನ್ನೋ? ನಿರ್ವಾಣಿಯವರನ್ನೋ? ಅಥವಾ ಇದೆಲ್ಲವನ್ನು ಬಿತ್ತರಿಸಿದ ಪತ್ರಿಕೆಯವರನ್ನೋ?       
                                     -ಡಾ.ಶ್ರೇ