Saturday, January 15, 2011

ತುಳು 8ನೇ ಪರಿಚ್ಛೇದಕ್ಕೆ : ಕೇರಳದ ಸಹಕಾರ

ತುಳು 8ನೇ ಪರಿಚ್ಛೇದಕ್ಕೆ : ಕೇರಳದ ಸಹಕಾರ
ಕೇರಳ ತುಳು ಅಕಾಡಮಿಯ ವತಿಯಿಂದ ನಡೆಯುತ್ತಿರುವ 'ದೆಸೋದ ತುಳು ಜಾತ್ರೆ' ಸಮ್ಮೇಳನದಲ್ಲಿ, ಕೇರಳ ಮುಖ್ಯಮಂತ್ರಿ ವಿ.ಎಸ್. ಅಚ್ಚುತಾನಂದನ್, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಭರವಸೆ ನೀಡಿದ್ದಾರೆ. ಇದು ನಿಜಕ್ಕೂ ಮೆಚ್ಚತಕ್ಕಂತಹ ವಿಚಾರ, ಆದರೆ ಈ ಸಮ್ಮೇಳನದಲ್ಲಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಗೈರುಹಾಜರಾಗಿರುವುದು ಮಾತ್ರ ವಿಪರ್ಯಾಸ.
ತುಳುವರು ಹೆಚ್ಚಿನ ಸಂಖ್ಯೆಯಲ್ಲಿರುವ, ಕರ್ನಾಟಕದ ಮುಖ್ಯಮಂತ್ರಿ ಈ ಕಾರ್ಯಕ್ರಮಕ್ಕೆ ಬರದಿರುವುದು ತೀರಾ ಕೆಟ್ಟದು, ಖಾಸಗಿ ಚಾನೆಲ್ ಒಂದರಲ್ಲಿ ಚಿತ್ರನಟನೊಬ್ಬನಿಗೆ ಸಂದರ್ಶನ ನೀಡಲು ಸಮಯವಿರುವ ಯಡಿಯೂರಪ್ಪನವರಿಗೆ, ಅವರದೇ ಪಕ್ಷವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೆಜಾರಿಟಿಯಲ್ಲಿ ಗೆಲ್ಲಿಸುವ ತುಳುವರ ಸಮ್ಮೇಳನಕ್ಕೆ ಬರಲು ಸಮಯವಿಲ್ಲ!
ಕೇರಳ ಮುಖ್ಯಮಂತ್ರಿ ಈ ನಿಟ್ಟಿನಲ್ಲಿ ಮೆಚ್ಚಲೇ ಬೇಕಾದವರು, ತುಳು ಭಾಷೆಯಲ್ಲಿಯೇ ಭಾಷಣ ಆರಂಭಿಸಿದ ಇವರು, ತುಳು ಭಾಷೆಯ ಅಭಿವೃದ್ದಿ ಗೆ  ವಿವಿಧ ಯೋಜನೆಗಳನ್ನು ಬಿಡುಗಡೆ ಮಾಡಿದ್ದಾರೆ. 
ತುಳು ಒಂದು ಸುಂದರ ಭಾಷೆ, ಮಲೆಯಾಳಂ ಭಾಷೆಗೆ ತುಳು ಲಿಪಿ ಮೂಲ ಎಂಬ ಅಭಿಪ್ರಾಯವಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ನಳಿನ್ ಕುಮಾರ್, ಸದಾನಂದ ಗೌಡ, ಇವರಲ್ಲದೆ ಕೇಂದ್ರ ಕಾನೂನು ಸಚಿವರಾಗಿರುವ ವೀರಪ್ಪ ಮೊಯ್ಲಿಯವರು ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಒತ್ತಡ ತರಬೇಕು. ಯಾರೋ ಒಬ್ಬ ಮಲೆಯಾಳಿ ಮುಖ್ಯಮಂತ್ರಿ ತುಳು ಭಾಷೆಯ ಬಗ್ಗೆ ಮಾತನಾಡುವಾಗ, ತುಳುವ ಜನ ನಾಯಕರು ಎಲ್ಲಿದ್ದಾರೆ?
ಹಾಗೇ ಸುಮ್ಮನೆ - ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಉಮೇಶ, ಯಡಿಯೂರಪ್ಪನವರ ಬಳಿ ಕೇಳಿದಾಗ ಡಿನೋಟಿಫಿಕೆಶನ್ ಶಬ್ದಕ್ಕೆ ಸಂವಾದಿಯಾಗಿ ಬರುವ ತುಳು ಶಬ್ದ ಯಾವುದು? ಅದಕ್ಕೆ ಸರಿ ಉತ್ತರ ನೀಡಿದರೆ, ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಪ್ರಧಾನಿಗೆ ಪತ್ರ ಬರೆಯುತ್ತೇನೆ ಎಂದರಂತೆ. ಇದನ್ನು ಕೇಳಿದ ಉಮೇಶ ತಲೆ ಕೆರೆದುಕೊಂಡು ಸದಾನಂದ ಗೌಡರ ಬಳಿ ಬಂದಿದ್ದಾನಂತೆ.
                                                                ಡಾ. ಶೆಟ್ಟಿ 

No comments:

Post a Comment