Monday, February 28, 2011

ವಿಧಾನಮಂಡಲದಲ್ಲಿ ಕದನ ವಿರಾಮ
ನಮ್ಮ ರಾಜಕಾರಣಿಗಳ ಬಾಕ್ಸಿಂಗ್ ಫೀಲ್ಡ್, ವಿಧಾನಸೌಧ ಶಾಂತವಾಗುವ ಲಕ್ಷಣ ಕಾಣುತ್ತಿದೆ. ಎಷ್ಟೋ ಸಮಯದಿಂದ ವಿಧಾನಸಭೆಯ ಅಧಿವೇಶನಗಳು ಯುದ್ಧರಂಗದಂತೆ ಕಾಣುತ್ತಿತ್ತೇ ವಿನಃ ಅಲ್ಲಿ ರಾಜ್ಯದ ಜನತೆಯ ಸಂಭಂದಿಸಿದ ಚರ್ಚೆ ನಡೆಯುತ್ತಿರಲಿಲ್ಲ.
ಯಾವುದೋ ಹಾಳುಹಿಡಿದ ಭೂಹಗರಣ, ರೆಡ್ಡಿಗಳ ಗಣಿ ಗಲಭೆ, ಮುಂತಾದ ಕೆಲಸಕ್ಕೆ ಬಾರದ ಚರ್ಚೆ ನಡೆದು, ಚರ್ಚೆ ಅತಿರೇಕಕ್ಕೆ ಹೋಗಿ, ಅವಾಚ್ಯ ಪದಗಳ ಬಳಕೆಯಾಗುತ್ತಿತ್ತು. ರಾಜ್ಯದ ಜನರ ಕಣ್ಣಿಗೆ ಕರ್ನಾಟಕ ವಿಧಾನಸಭೆ ಕಾರ್ಗಿಲ್ ಯುದ್ಧ ಭೂಮಿಯಂತೆ ಗೋಚರಿಸುತ್ತಿತ್ತು. ಮನೆಮನೆಗೆ ವೋಟು ಕೇಳಿಕೊಂಡು ಬರುವಾಗ, 'ಅಣ್ಣಯ್ಯ, ದಮ್ಮಯ್ಯ' ಅನ್ನುತ್ತಿದ್ದವರು, ವಿಧಾನಸಭೆಯಲ್ಲಿ 'ಬೊ ಮಗ, ಸೂ ಮಗ' ಪದಗಳ ಬಳಕೆ ಮಾಡುವಾಗ; ಜನರಿಗೆ ಪುಕ್ಕಟೆ ಮನರಂಜನೆ ಸಿಗುತ್ತಿತ್ತೇ ವಿನಃ ಉಪಯೋಗವಂತೂ ಏನೂ ಇಲ್ಲ.
ಅಂತೂ ಇಂತೂ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಯಾಕೋ ಚೂರು ಚಿಂತೆ ಮಾಡಿ, 'ನಮ್ಮ ಡೊಂಬರಾಟ ಇನ್ನು ಸಾಕು. ಎಂತೂ ವೋಟು ಹತ್ತಿರವಾಗುತ್ತಿದೆ, ಇನ್ನಾದರೂ ಸ್ವಲ್ಪ ಬಡವರ ಬಗ್ಗೆ ಮಾತನಾಡೋಣ' ಎಂದು ಭಾವಿಸಿದರೋ ಏನೋ, ಒಟ್ಟಿನಲ್ಲಿ ಇನ್ನು ಮುಂದೆ ವಿಧಾನಮಂಡಲದಲ್ಲಿ ಸುಗಮ ಚರ್ಚೆಯಾಗುತ್ತದೆ ಎಂಬ ನಿರೀಕ್ಷೆ ಮೂಡಿದೆ.
ಯಡಿಯೂರಪ್ಪನವರ ಭೂಹಗರಣವನ್ನು ಕೋರ್ಟ್ ನೋಡಿಕೊಳ್ಳುತ್ತದೆ. ರೆಡ್ಡಿಗಳಿಗೆ C.B.I ಕಾಯುತ್ತಿದೆ. ಇನ್ನಾದರೂ ಸರಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಪ್ರತಿಪಕ್ಷಗಳು ಆರೋಗ್ಯಪೂರ್ಣ ಚರ್ಚೆ ನಡೆಸಬೇಕು. 
ಹಾಗೇ ಸುಮ್ಮನೆ - ಮಾತು ಮಾತಿಗೆ 'ನನ್ನ ಬಳಿ ಸಿ.ಡಿ ಇದೆ' ಎನ್ನುತ್ತಿದ್ದ ಕುಮಾರಣ್ಣನವರಿಗೆ, ನಮ್ಮ ಯಡ್ಡಿಯವರು 'ಹಿಂದೆ ಸಂಸತ್ತಿನಲ್ಲಿ, ಗೌಡರ ಪಂಚೆ ಜಾರಿದ ವಿಡಿಯೋವನ್ನು You tube ಗೆ ಹಾಕುತ್ತೇನೆ' ಎಂದು ಹೆದರಿಸುತ್ತಿರಬೇಕು. ಹಾಗೇ ಕದನವಿರಾಮ ಆಗಿರಬೇಕು ಎಂಬುವುದು ಉಮೇಶನ ಊಹೆ.
                                                                               -ಡಾ.ಶೆಟ್ಟಿ

No comments:

Post a Comment