Thursday, February 24, 2011

ವಾರ್ಷಿಕೋತ್ಸವ ವರ್ಷಾ೦ತಿಕವಾಗದಿರಲಿ  
ಕಾಲೇಜಿನ ವಾರ್ಷಿಕೋತ್ಸವದಿಂದ ನಮ್ಮ ಉಮೇಶ ಎದ್ದು ಬಿದ್ದು ಓಡುತ್ತಿದ್ದ. 'ಯಾಕಯ್ಯ ಈ ರೀತಿ ಓಡುತ್ತಿದ್ದೀಯ?'. ಎಂದು ನಾನು ಕೇಳಿದಾಗ ನನಗೂ ನಗು ತಡೆದುಕೊಳ್ಳಲಾಗಲಿಲ್ಲ. ಯಾಕೆಂದರೆ, ಕಾಲೇಜಿನಲ್ಲಿ ವಾರ್ಷಿಕೋತ್ಸವ ಎಂದು ನಮ್ಮ ಉಮೇಶ ಫುಲ್ ಸಿಂಗಾರಗೊಂಡು ಹೋಗಿದ್ದನಂತೆ. ಕಾಲೇಜಿನಲ್ಲಿ 'ಈ ದಿನ ವೈವಿಧ್ಯಮಯ ಡ್ಯಾನ್ಸ್ ಗಳನ್ನೂ ಹಾಡುಗಳನ್ನು ನೋಡಬಹುದು, ಯಾವತ್ತಿನಂತೆ ಪಾಠದ ಟೆನ್ಶನ್ ಇಲ್ಲ' ಎಂಬ ಭಾವನೆಯಲ್ಲಿ ಉಮೇಶ ಕಾಲೇಜಿಗೆ ಹೋಗಿದ್ದಂತೆ. ಆದರೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಯಾರೋ 4,5  ಜನ ಮುದುಕರು ಸೇರಿಕೊಂಡು ಮಧ್ಯಾನದ ವರೆಗೆ ಭರ್ಜರಿ ಭಾಷಣ ಹೊಡೆದರಂತೆ, ಅದನ್ನು ಸಹಿಸಿಕೊಂಡು ಇನ್ನಾದರು ಕಾರ್ಯಕ್ರಮಗಳು ಆರಂಭವಾಗಬಹುದು ಎಂದುಕೊಂಡ ಉಮೇಶ, ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದ್ದನಂತೆ. ಆದರೆ ಯಾವುದೋ ಒಬ್ಬಳು ಹುಡುಗಿ ಚಿತ್ರ ವಿಚಿತ್ರ ವೇಷ ಧರಿಸಿ, ಕುಣಿದಾಡಲು ಆರಂಭಿಸಿದಳಂತೆ. ಅದನ್ನು ಕಂಡವನಿಗೆ ತನ್ನ ಊರಿನ ಮಾರಮ್ಮನ ಜಾತ್ರೆಯ ನೆನಪಾಗಿ ಹೆದರಿ ಓಡಿ ಹೋಗುತ್ತಿದ್ದ. ಪಾಪ ಅವನಿಗೆ ಕೊನೆಯ ವರೆಗೂ ಆ ಹುಡುಗಿ ಮಾಡಿದ್ದು ಭರತನಾಟ್ಯವೆಂದು ಗೊತ್ತೇ ಆಗಲಿಲ್ಲ!
ಇಂತಹ ಕಾಲೇಜು ವಾರ್ಷಿಕೋತ್ಸವಗಳು ಬೇಕೇ ಓದುಗರೇ? ನೀವೊಮ್ಮೆ ಕೆಲ ಕಾಲೇಜಿನ ವಾರ್ಷಿಕೋತ್ಸವಗಳಿಗೆ ಹೋಗಿ ನೋಡಿ ಇಡೀ ಕಾರ್ಯಕ್ರಮಗಳು ಬೋರು ಹೊಡೆಸುತ್ತವೆ. ಈಗಿನ ವಿದ್ಯಾರ್ಥಿಗಳಿಗೆ ಭರತನಾಟ್ಯ, ತಾಳಮದ್ದಳೆ, ಹರಿ ಕಥೆಯನ್ನು ಕಂಡರೆ ಅಷ್ಟಕಷ್ಟೆ. ಆ ಕಾರ್ಯಕ್ರಮಗಳಿಗೆ ಖಾಲಿ ಕುರ್ಚಿಗಳೇ ವೀಕ್ಷಕರು. ಅಂತಹದರಲ್ಲಿ ಅದನ್ನೇ ಹೆಚ್ಚು ಹೆಚ್ಚು ಹಾಕಿ ವಿಧ್ಯಾರ್ಥಿಗಳಿಗೆ ಬೋರು ಹೊಡೆಸಿ ಬಿಡುತ್ತಾರೆ. ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳೇ ಮುಖ್ಯಪಾತ್ರ ವಹಿಸುವವರು. ಆದರೆ ಅವರ ಭಾವನೆಗಳಿಗೆ ಬೆಲೆ ಕೊಡದೆ, ಸಂಸ್ಕೃತಿ, ಸಭ್ಯತೆ ಎಂದುಕೊಂಡು, ಓಬಿರಾಯನ ಕಾಲದ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇನ್ನಾದರೂ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ತಮ್ಮ ಸೀಮಿತ ಮನಸ್ಸನ್ನು ಬದಿಗಿಟ್ಟು, ಒಂದು ದಿನವಾದರೂ ಉದಾರವಾಗುವುದು ಒಳಿತು.
                                                 -ಡಾ.ಶೆಟ್ಟಿ 

No comments:

Post a Comment