Thursday, February 3, 2011

ರಾಜನಿಗೆ ಬಿತ್ತು ಕೋಳ!
2ಜಿ ಸ್ಪೆಕ್ಟ್ರಂ ಹಗರಣದ ರೂವಾರಿ ಎ.ರಾಜ ಅವರನ್ನು C.B.I ಅಧಿಕಾರಿಗಳು ಕೊನೆಗೂ ಬಂಧಿಸಿದ್ದಾರೆ. ಅವರ ಜೊತೆ ಅವರ ಆಪ್ತ ಕಾರ್ಯದರ್ಶಿಗಳಾದ ಚಾಂಡೋಲಿಯ ಮತ್ತು ಸಿದ್ದಾರ್ಥ ಬೆಹುರಾ ಕೂಡಾ ಬಂಧನಕೊಳಗಾಗಿದ್ದಾರೆ.
ಈ ಮೂಲಕ ದೇಶದ ರಾಜಕಾರಣದಲ್ಲಿನ ಕಪ್ಪುಚುಕ್ಕೆಯೊಂದು ಮರೆಯಾಗಿದೆ. ದೇಶದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ನಷ್ಟ ಉಂಟುಮಾಡಿ, ತನ್ನ ಜೇಬನ್ನು ಭದ್ರಪಡಿಸಿಕೊಂಡ ರಾಜ ಜೈಲಿನಲ್ಲಿ ಕೂಡಾ ಭದ್ರವಾಗಿರಬಹುದು. 'ವಿಶೇಷ ಸೌಲಭ್ಯ' ಪಡೆದುಕೊಂಡು ಜೈಲಿನಲ್ಲಿ ಕೂಡಾ 'ರಾಜ'ನಂತೆ ಇರಬಹುದು.
ಯಾಕೆಂದರೆ ಯು.ಪಿ.ಎ ಸರಕಾರಕ್ಕೆ ಬೆಂಬಲ ನೀಡಿ ಕಾಯುತ್ತಿರುವ, ಕೀರಲು ಸ್ವರದ ಮುದುಕ ಕರುಣಾನಿಧಿಯವರ ಬಂಟನಲ್ಲವೇ ಈತ! ನಿಜವಾಗಿ ನೋಡಿದರೆ ರಾಜನನ್ನು ಬಂಧಿಸುವುದರ ಜೊತೆಗೆ ಕರುಣಾನಿಧಿಯನ್ನು ಕೂಡಾ ಬಂಧಿಸಬೇಕು. ರಾಜ ಆರೋಪಿಯೆಂದು ಗೊತ್ತಿದ್ದರು ನಾಚಿಕೆ ಬಿಟ್ಟು ಆತನ ಬೆಂಬಲಕ್ಕೆ ನಿಂತ ತಮಿಳುನಾಡಿನ ಮುಖ್ಯಮಂತ್ರಿಯ ವ್ಯಕ್ತಿತ್ವ ಮೆಚ್ಚತಕ್ಕದಲ್ಲ.
ಇನ್ನೂ ಕೂಡಾ ಅದೇ ಹಳಸಿದ ದ್ರಾವಿಡ- ಆರ್ಯ ಸಂಘರ್ಷದ ಕಥೆ ಹೇಳಿಕೊಂಡು, ತಮಿಳರನ್ನು ಮೂರ್ಖರನ್ನಾಗಿ ಮಾಡುತ್ತಿರುವ ಕರುಣಾನಿಧಿ, ಎಂತವರೆಂದು ಭ್ರಷ್ಟ ರಾಜನಿಗೆ ಬೆಂಬಲ ಕೊಟ್ಟಾಗಲೇ ನಾವು ತಿಳಿದುಕೊಳ್ಳಬಹುದು.
ರಾಜನನ್ನು ಬಂಧಿಸಿಯಾಗಿದೆ, ಇನ್ನು ಮಾಡಬೇಕಾದ ತುರ್ತು ಕೆಲಸವೆಂದರೆ; ಆತನನ್ನು ಸರಿಯಾಗಿ ತನಿಖೆ ನಡೆಸಿ ಯಾರ-ಯಾರ ಬಳಿ ಎಷ್ಟೆಷ್ಟು ತೆಗೆದುಕೊಂಡಿದ್ದಾನೆ ಎಂಬುವುದನ್ನು ಹೊರಹಾಕಿಸಬೇಕು. ಸಾಧ್ಯವಾದರೆ ದೇಶಕ್ಕೆ ಆದ ನಷ್ಟವನ್ನು ತುಂಬಿಸುವ ಪ್ರಯತ್ನ ಮಾಡಬೇಕು.
ಹಾಗೇ ಸುಮ್ಮನೆ - 2ಜಿ ಸ್ಪೆಕ್ಟ್ರಂ ಹಗರಣದ ನಷ್ಟ 1.76 ಲಕ್ಷ ಕೋಟಿ ಎಂದು ಕೇಳಿದ ಉಮೇಶ, 'ಛೇ ಅದರಲ್ಲಿ ನನಗೆ 1 ಕೋಟಿ ಕೊಟ್ಟರೆ ಸಾಕಿತ್ತು, ಜೀವಮಾನ ಪೂರ್ತಿ ರಾಜನ ಹೆಸರು ಹೇಳಿಕೊಂಡು ತಿನ್ನುತ್ತಿದ್ದೆ' ಎಂದು ಹೇಳುತ್ತಿದ್ದಾನೆ.
                                                                -ಡಾ.ಶೆಟ್ಟಿ 

No comments:

Post a Comment