Friday, February 4, 2011

ಕನ್ನಡ ಕನಿಷ್ಠವೇ?
'you are unfit to learn the civilized language' ಇದು ನನ್ನ ಗೆಳೆಯನೊಬ್ಬನಿಗೆ ಇಂಗ್ಲೀಷ್ ಉಪನ್ಯಾಸಕರೊಬ್ಬರು ಬೈದಿದ್ದ ಬೈಗಳಾಗಿತ್ತು. ಈ ಒಂದು ಹೇಳಿಕೆಯನ್ನು ಸರಿಯಾಗಿ ಗಮನಿಸಿದರೆ ಪ್ರಸ್ತುತ ಕನ್ನಡಿಗರ ಮನಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಈ ದಿನಗಳಲ್ಲಿ ಇಂಗ್ಲೀಷ್ ಮಾತ್ರ civilized ಅಥವಾ standard ಎಂಬ ಅಭಿಪ್ರಾಯ ಕನ್ನಡಿಗರ ಮನದಲ್ಲಿ ಅಚ್ಚೊತ್ತಿಬಿಟ್ಟಿದೆ. ಇಂಗ್ಲೀಷಿನಲ್ಲಿ ಮಾತನಾಡಿದರೆ ಶ್ರೇಷ್ಠ ಕನ್ನಡದಲ್ಲಿ  ಮಾತನಾಡಿದರೆ ಕನಿಷ್ಠ ಎಂಬ ಭಾವನೆ ನಮ್ಮ ಮನದಲ್ಲಿ ಬಂದು ಬಿಟ್ಟಿದೆ.
ಆದರೆ ಇಂದು civilized language ಎಂದು ಕರೆಯಲ್ಪಡುವ ಇಂಗ್ಲೀಷ್, 10 -11 ನೇ ಶತಮಾನದ ವೇಳೆಗೆ ಈ ಸ್ಥಿತಿಯಲ್ಲಿರಲಿಲ್ಲ. ಬದಲಾಗಿ ಆಗಿನ  ಕಾಲಘಟ್ಟದಲ್ಲಿ ಇಂಗ್ಲೀಷ್ ಭಾಷೆ, ಬಡವರ ಭಾಷೆಯಾಗಿ, ಆಡು ಭಾಷೆಯಾಗಿ ಮಾತ್ರ ಪ್ರಚಲಿತದಲ್ಲಿತ್ತು. ಇದಕ್ಕೆ ಕಾರಣವು ಇದೆ 5 ನೇ ಶತಮಾನದ ಆರಂಭದಲ್ಲಿ ಡೆನ್ಮಾರ್ಕ್ ಮತ್ತು ಉತ್ತರ ಜರ್ಮನಿಯಿಂದ ಇಂಗ್ಲೆಂಡ್ ಗೆ ವಲಸೆ ಬಂದ ಬುಡಕಟ್ಟು ಜನಾಂಗಗಳಾದ ಸಾಕ್ಸನ್ ಮತ್ತು ಜೂಟರ ಮೂಲಕ ಈ ಭಾಷೆ ಪ್ರವರ್ಧಮಾನಕ್ಕೆ ಬಂತು. ಮುಂದೆ ಇಂಗ್ಲೀಷ್, ಲ್ಯಾಟಿನ್ ಮತ್ತು  ಫ್ರೆಂಚ್ ಭಾಷೆಗಳ ಶಬ್ದಗಳನ್ನು ಸೇರಿಸಿಕೊಂಡು ಸಮೃದ್ಧ ಭಾಷೆಯಾಗಿ ಬೆಳೆಯುವ ಹೊತ್ತಿಗೆ 12 ನೇ ಶತಮಾನ ಆರಂಭವಾಗಿತ್ತು!
ಹೀಗೆ ವಲಸೆಗಾರರ,ಬುಡಕಟ್ಟು ಜನಾಂಗದ ಭಾಷೆಯಾಗಿದ್ದ ಇಂಗ್ಲೀಷ್ ನನ್ನು ಯೂರೋಪಿನ ಜನ ಬೇಗ ತಮ್ಮ ಬಳಿಗೆ ಸೇರಿಸಿಕೊಳ್ಳಲಿಲ್ಲ. ಬದಲಾಗಿ ನಿಕೃಷ್ಟವಾಗಿ ಕಾಣುತ್ತಿದ್ದರು.
ಇನ್ನು ಸಾಹಿತ್ಯದ  ವಿಷಯಕ್ಕೆ ಬಂದರೆ ಇಂಗ್ಲೀಷಿನಲ್ಲಿ ಗಂಭೀರ ಸಾಹಿತ್ಯ ಆರಂಭವಾದದ್ದು 12 ನೇ ಶತಮಾನದ ನಂತರ ಎಂಬುವುದು ಗಮನಿಸಬೇಕಾದ ಸಂಗತಿ. ಚೌಸರನ 'the canterbury tales' ಬರುವಾಗ 14 ನೇ ಶತಮಾನವಾಗಿತ್ತು, ಇದರ ಪ್ರಬುದ್ದ ಮಹಾಕಾವ್ಯವಾದ ಮಿಲ್ಟನ್ ಕವಿಯ 'paradise lost' 17 ನೇ ಶತಮಾನಕ್ಕೆ ಸೇರಿದ ಕೃತಿ, Shakespeare  ಕೂಡಾ ಇದೆ ಕಾಲಕ್ಕೆ ಸೇರಿದವನು. ಇಂಗ್ಲೀಷ್ ನಲ್ಲಿ ಸಾಹಿತ್ಯ ತಡವಾಗಿ ಪ್ರಾರಂಭವಾದರೂ Shakespeare ನಂತರದ ಕಾಲದಲ್ಲಿ ಸಮುದ್ರೋಪಾದಿಯಾಗಿ ಬೆಳೆಯಿತು.
ಆದರೆ ಇಂಗ್ಲೀಷ್ ಸಾಹಿತ್ಯಕ್ಕೆ ಹೋಲಿಸಿದರೆ ಕನ್ನಡ ಸಾಹಿತ್ಯವು ಅತ್ಯಂತ ಪುರಾತನವಾದದ್ದು. ಕನ್ನಡದ ಪ್ರಬುದ್ದ ಅಲಂಕಾರ ಗ್ರಂಥ 'ಕವಿರಾಜ ಮಾರ್ಗ' ದ ಕಾಲ, 9 ನೇ ಶತಮಾನ. ಈ ಗ್ರಂಥ ರಚನೆಯಾಗುವ ವೇಳೆಗೆ ಕನ್ನಡ ಸಾಹಿತ್ಯವು ಪ್ರೌಡವಸ್ಥೆ ಯನ್ನು ತಲುಪಿತ್ತು ಎಂಬುವುದು ಉಲ್ಲೇಖನೀಯ.ಆದರೆ ಈ ಕಾಲದಲ್ಲಿ ಇಂಗ್ಲೀಷ್ ಆಡುಭಾಷೆಯಾಗಿಯೇ ಇತ್ತು, ಹೊರತಾಗಿ ಸಾಹಿತ್ಯಿಕವಾಗಿ ಬೆಳೆದಿರಲಿಲ್ಲ.
shakespeare, milton ನಂತಹ ಕವಿಗಳು(16 -17 ನೇ ಶತಮಾನ) ತಮ್ಮ ಸಾಹಿತ್ಯ ಆರಂಭಿಸುವ ಮೊದಲೇ ಅಥವಾ ಇಂಗ್ಲೀಷ್ ತನ್ನ ಅಸ್ತಿತ್ವವನ್ನು ಜಗತ್ತಿಗೆ ತೋರಿಸುವ ಮೊದಲೇ ಕನ್ನಡದಲ್ಲಿ ಪಂಪ,ರನ್ನ,ಜನ್ನ(10 ನೇ ಶತಮಾನ) ಮೊದಲಾದ ಮಹಾಕವಿಗಳು ಬಂದು  ಹೋಗಿದ್ದರು.
ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಕನ್ನಡವೂ ಇಂಗ್ಲೀಷ್ ಗಿಂತ ಅತ್ಯಂತ ಹಳೆಯದು, ಗೌರವಪೂರ್ಣವು ಆದುದಾಗಿದೆ. ಯಾವ ರೀತಿ  Shakespeare,milton ಗಿಂತ ಕನ್ನಡದ  ಕುವೆಂಪು, ಕಾರಂತರು ಕನಿಷ್ಠರಲ್ಲವೋ ಅದೇ ರೀತಿ ಕನ್ನಡ ಭಾಷೆ ಇಂಗ್ಲೀಷ್ ಗಿಂತ ಕನಿಷ್ಠವಲ್ಲ.
ಇಂಗ್ಲೀಷ್ ಜಗತ್ತಿನ ಕಣ್ಣು ಕುಕ್ಕುವಂತೆ ಬೆಳೆಯುವಲ್ಲಿ, ಆಂಗ್ಲ ಜನರ ವಸಾಹತುಶಾಯಿ ಆಡಳಿತ ನೇರ ಕಾರಣವಾಗಿದೆ. ಭಾರತದಲ್ಲಿ ಬೆಳೆಯಲು ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರ ಆಡಳಿತ ಮತ್ತು ಸ್ವತಂತ್ರ ನಂತರ ಭಾರತೀಯರ ಇಂಗ್ಲೀಷ್ ಮೋಹ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಿಂದಾಗಿದೆ .
ಭಾರತದಲ್ಲಿ ಇಂಗ್ಲೀಷ್ ಶಿಕ್ಷಣ ಪದ್ಧತಿ ಜಾರಿಗೆ ತಂದ ಮೆಕಾಲೆ 'ಭಾರತದಲ್ಲಿ ಕಪ್ಪು ಚರ್ಮದ ಬ್ರಿಟಿಷರನ್ನು ಉತ್ಪಾದಿಸುತ್ತೇನೆ' ಎಂದದ್ದು ಈ ದಿನಗಳಲ್ಲಿ ನಿಜವಾಗುತ್ತಿದೆ. 
ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತು, ಅಮೇರಿಕನ್ ಕಂಪೆನಿಯಲ್ಲಿ ಉದ್ಯೋಗ ಪಡಕೊಂಡು ಮತ್ತು  ಆಂಗ್ಲರಂತೆ ಯೋಚಿಸುವ, ಬದುಕುವ ಎಲ್ಲಾ ವಿಚಾರಗಳಲ್ಲಿ ಆಂಗ್ಲರ ಅನುಕರಣೆ  ಮಾಡುತ್ತಿರುವ ನಮ್ಮವರು ಮೆಕಾಲೆಯ ಮಾತಿಗೆ ಅನ್ವರ್ಥದಂತೆ ಕಾಣುತ್ತಿದ್ದಾರೆ. ನಮ್ಮ ಯುವ ಜನರ, ಶ್ರೀಮಂತರ, ಸ್ವಯಂಘೋಷಿತ ಬುದ್ದಿ ಜೀವಿಗಳ ಮಾನಸಿಕ ಸ್ಥಿತಿ ಹೇಗಿದೆ ಎಂದರೆ 'ಇಂಗ್ಲೀಷ್ ನಲ್ಲಿ ಮಾತನಾಡುವುದು ನಾಗರಿಕತೆ, ಕನ್ನಡದಲ್ಲಿ ಮಾತನಾಡಿದರೆ ಹಳ್ಳಿ ಗಮಾರ' ಎಂಬ ನಿಲುವು ಇವರದ್ದು. 
ಇಂಗ್ಲೀಷ್ ಭಾಷೆಯ ಜ್ಞಾನ, ಉತ್ತಮ ಸಾಹಿತ್ಯ, ವಿಜ್ಞಾನ ಮುಂತಾದ ಉತ್ತಮ ವಿಚಾರಗಳು ನಮಗೆ ಬೇಕಾಗಿರುವುದು ಅಗತ್ಯ. ಆದರೆ ನಮ್ಮತನ, ಸಂಸ್ಕೃತಿ, ಭಾಷೆಯನ್ನು ಉಳಿಸುವುದು ನಮ್ಮ ಕರ್ತವ್ಯ. 
ಜೀವನದಲ್ಲಿ ಇಂಗ್ಲೀಷ್ ಇರಲಿ, ಆದರೆ ಜೀವನವೇ ಇಂಗ್ಲೀಷ್ ಆಗಬಾರದಲ್ಲವೇ? 
                                                               -ಡಾ.ಶೆಟ್ಟಿ 

No comments:

Post a Comment