ಸಂಜೆಯ ಹೊತ್ತು ಕೆಲಸ ಮುಗಿಸಿ, ಅದು ಯಾವುದೋ ಆಲೋಚನೆಗಳನ್ನು ಹೊತ್ತುಕೊಂಡು ಮನೆಗೆ ತೆರಳಬೇಕಾದರೆ ಮನೆಯ ಹೆಂಗಸರು ಟಿ.ವಿ. ಮುಂದೆ ನಿಂತ ನೀರಂತೆ ಸ್ವಲ್ಪವೂ ಕದಲದೆ ಒಂದೇ ಚಿತ್ತದಲ್ಲಿ ಟಿ.ವಿ ವೀಕ್ಷಣೆಯಲ್ಲಿ ತೊಡಗಿರುತ್ತಾರೆ.
ಖಡಾಖಂಡಿತವಾಗಿ ಈ ಮಾತನ್ನು ಹೆಂಗಸರ ಮೇಲೆ ಹೊರಿಸುವುದು ತಪ್ಪಾದರೂ ಹೆಚ್ಚಾಗಿ ಈ ಸಮಸ್ಯೆಗಳು ಇರುವುದೇ ಅವರುಗಳಲ್ಲಿ. ಆಲೋಚನೆಗಳಿಗೆ ಸಾಥ್ ನೀಡುವುದು ಬಿಡಿ. ಕಡೆ ಪಕ್ಷ ಒಂದು ಲೋಟ ನೀರು ತಂದುಕೊಡಲು ಸಮಯದ ಅಭಾವ ಇರುತ್ತದೆ. ಮನೆಯ ಗಂಡಸರಿಗೆ ಇಂತಹ ನೋವುಗಳು ಸಾಮಾನ್ಯವಾಗಿರಬಹುದು. ಆದರೆ ಮನೆಗೆ ಅತಿಥಿಗಳು ಬರುವ ಸಂಧರ್ಭವೂ ಇದೆ ಚಾಳಿ ಕೆಲವು ಮನೆಗಳಲ್ಲಿ ಮುಂದುವರಿಯುತ್ತಿರುತ್ತದೆ.
ಮನೆಗೆ ಬರುವ ಅತಿಥಿಗೆ ಕಾಫಿ ತಿಂಡಿ ಕೊಟ್ಟು ಸತ್ಕಾರ ಮಾಡುವುದಕ್ಕಿಂತಲೂ ಮನಸ್ಸಿನಿಂದ ಬಾಯಿ ತುಂಬಾ ಮಾತನಾಡಿ ಗೌರವ ಸಲ್ಲಿಸುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಬುವುದು ನಮ್ಮ ಭಾವನೆ. ಮನೆಯೊಳಗೆ ತಿಂಡಿ ತಿನಿಸುಗಳ ಗೋದಾಮು ಇರಬೇಕೆಂದೇನಿಲ್ಲ. ಮಡಿಕೆ ತುಂಬಾ ನೀರಿದ್ದರೆ ಸಾಕು!
ಮನಸ್ಸನ್ನು ಹಾಳು ಮಾಡುವ ಧಾರಾವಾಹಿಯನ್ನು ನೋಡಿ ನಾಳೆ ಏನಾಗಬಹುದು ಎಂದು ಇಂದೇ ಊಹಿಸಿ ಚಿಂತನೆಯಲ್ಲಿ ಮಗ್ನರಾಗಿ, ಮನೆಯವರ ಚಿಂತೆಗೆ ಸಮಯ ದೊರಕದೆ ಹೋದರೆ ಆ ಕುಟುಂಬವು ಅದು ಯಾವ ನೆಮ್ಮದಿಯನ್ನು ಕಾಣಲು ಸಾಧ್ಯ? ನೀವೇ ಹೇಳಿ
ಇದರ ಅರ್ಥ ಧಾರಾವಾಹಿಗಳನ್ನು ನೋಡುವುದನ್ನು ಬಿಟ್ಟು ಬಿಡಿ ಎನ್ನುವುದಲ್ಲ. ಹೆಚ್ಚಿನ ಧಾರಾವಾಹಿಗಳ ಕಥೆಯಂತೆ ನಿಮ್ಮ ಜೀವನವೂ ಆಗುವುದು ಬೇಡವೆಂಬುದು ನಮ್ಮ ಬಯಕೆ.
-ಕೆ.ಪಿ.ಭಟ್
No comments:
Post a Comment