Saturday, February 19, 2011

ನಾನು ನನ್ನ ಕನಸು..
ದಟ್ಟ ಕಾಡಿನ ನಡುವೆ ಪುಟ್ಟಮನೆ, ಆ ಮನೆಯ ಎದುರು ಪ್ರಶಾಂತವಾಗಿ ಹರಿಯುತ್ತಿರುವ ನದಿ. ಒಟ್ಟಿನಲ್ಲಿ ಅದು ರೋಡೆ ಕಾಣದ ಊರು, ಕರೆಂಟೇ ಕಾಣದ ನಾಡು.
ದಿನಪತ್ರಿಕೆ, ಟಿ.ವಿ, ಕಂಪ್ಯೂಟರ್, ಮೊಬೈಲ್ ಯಾವುದು ಇಲ್ಲದ, ಮುಗ್ಧತೆಯೇ ಮುತ್ತಿಕೊಂಡಿರುವ ಪ್ರಶಾಂತವಾದ ಸ್ಥಳವದು. ಮೇಲೆ ಹೇಳಿದ ಅದೇ ಪುಟ್ಟ ಮನೆಯಲ್ಲಿ, ನಾನು ಕೂತು ಓದುತ್ತಿದ್ದೆ. ಮನೆಯ ಹಳೆಯ ಕಪಾಟಿನಲ್ಲಿ, ತುಂಬಿ ತುಳುಕಿ, ಇಡಲು ಜಾಗವಿಲ್ಲದೆ, ನನ್ನ ಆತ್ಮೀಯ ಸ್ನೇಹಿತರಾದ ಪುಸ್ತಕಗಳು ಬಿದ್ದುಕೊಂಡಿವೆ. ಅವು 'ನೀನು ನಿನ್ನ ಇಡೀ ಜನ್ಮಪೂರ್ತಿ ಓದಿದರು, ನಮ್ಮನ್ನು ಓದಿ ಮುಗಿಸಲು ಸಾಧ್ಯವಿಲ್ಲ'  ಎಂಬಂತೆ ಅಣಕಿಸುತ್ತಿದ್ದವು. ಯಾಕೋ ಸುಸ್ತಾದಂತೆ ಆಗಿ, ನಾನು ಎದ್ದು ನನ್ನ ಕೋಣೆಗೆ ಬಂದೆ, ಅಲ್ಲಿ ಬಂದು ನೋಡಿದಾಗ ಮನಸ್ಸಿಗೆ ಆನಂದವಾಯಿತು. ಯಾಕೆಂದರೆ ನನ್ನ ಕೋಣೆ ಪೂರ್ತಿ ಎಣ್ಣೆಯ ಬಾಟಲಿಗಳು, ಸಿಗರೇಟು ಪ್ಯಾಕುಗಳು ತುಂಬಿತ್ತು.
ಅಡುಗೆ ಕೋಣೆಯಲ್ಲಿ ನನ್ನ ಪ್ರೀತಿಯ ಹುಡುಗಿ ಅಡುಗೆ ಮಾಡುತ್ತಿದ್ದಳು. ನನ್ನ ತಾಯಿ ಮನೆಯ ಎದುರು ಕೂತು ಏನನ್ನೋ ಯೋಚನೆ ಮಾಡುತ್ತಿದ್ದರು. 
ಇದು ನನಗೆ ನಿನ್ನೆ ರಾತ್ರಿ ಬಿದ್ದ ಕನಸು, ನನಗೆ ಬಿದ್ದ ಕನಸ್ಸನ್ನು ಓದುಗರಿಗೆ ಹೇಳಿ ಬೋರು ಹೊಡೆಸುವ ಉದ್ದೇಶ ನನ್ನದಲ್ಲ. ಪ್ರತಿದಿನ ಅದೇ ಸುದ್ದಿಯೊಂದಿಗೆ ಗುದ್ದಾಡಿ, ಪದಗಳು ಸಿಗದೇ ನಲುಗಾಡಿ. ಇದ್ದವರನೆಲ್ಲ ಬೈದು, ಉಳಿದ ಕೆಲವರನ್ನು ಹೊಗಳಿ. ವ್ಯವಸ್ಥೆಯನ್ನು ದೂರಿ, ಬರೆದು ಬರೆದು ಸಾಕಾಯಿತು. ಇವತ್ತು ಏನಾದರು ಹೊಸತು ಬರೆಯೋಣ ಎನಿಸಿತು. ಅದಕ್ಕೆ ತಕ್ಕಂತೆ ನಿನ್ನೆ ನನಗೆ ಬಿದ್ದ ಕನಸು ಕೂಡ ಅದ್ಭುತವಾಗಿತ್ತು. ನನ್ನ ಕನಸನ್ನು ಪುನಃ ಒಂದು ಬಾರಿ ಓದಿಕೊಳ್ಳಿ, 'ಎಷ್ಟು ಚೆನ್ನಾಗಿದೆ' ಎಂದು ನಿಮಗೆ ಅನಿಸದೆ ಇರಲಾರದು. 
ಯಾವುದೋ ಒಂದು ದಟ್ಟ ಕಾಡಿನ ನಡುವೆ, ಪುಟ್ಟ ಮನೆಯ ಮಾಡಿ, ಮುದ್ದಿನ ಸಂಸಾರದ ಜೊತೆಗೆ ಜೀವನ ಮಾಡುವುದೆಂದರೆ ಅದು ಸ್ವರ್ಗವೇ ಅಲ್ಲವೇ? ಮನೆ ತುಂಬಾ ತುಂಬಿರುವ ಪುಸ್ತಕಗಳು, ಕುಡಿಯಲು ಬೇಕಾದಷ್ಟು ಎಣ್ಣೆ, ಸೇದಲು ಸಿಗರೇಟು ಇಷ್ಟಿದ್ದರೆ ಸಾಕಲ್ಲವೇ ಒಬ್ಬ ಬರಹಗಾರನಿಗೆ. ದಟ್ಟ ಕಾಡಿನ ನಡುವೆ ಪುಸ್ತಕಗಳನ್ನು ಓದಿಕೊಂಡು, ಏನನ್ನೋ ಧ್ಯಾನಿಸಿಕೊಂಡು, ಪ್ರಕೃತಿಯ ಜೊತೆ ಒಂದಾಗಿರುವುದು ಚಂದವಲ್ಲವೇ?
ನನಗಂತೂ ಈಗಿನ ಜೀವನದ ಜಂಜಾಟಗಳಿಂದ, ಕನಸಲ್ಲಿ ಕಂಡ ಲೋಕವೇ ಚೆನ್ನಾಗಿದೆ ಎನಿಸಿತು..
                                                -ಡಾ.ಶೆಟ್ಟಿ 

No comments:

Post a Comment