Saturday, February 5, 2011

ನಾ'ಕಾಣೆ'!
ಇನ್ನು ಮುಂದೆ ನಾವು ನಾಕಾಣೆ ಪಾವಲಿಯನ್ನು ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಕೇಂದ್ರ ಸರಕಾರದ ಕಾಯಿನೇಜ್ ಆಕ್ಟ್ ಸೆಕ್ಷನ್, ಜೂನ್ 30 ರಿಂದ ನಾಕಾಣೆ(25 ಪೈಸೆ) ಯ ಚಲಾವಣೆ ನಿಲ್ಲಿಸಲಾಗುತ್ತದೆ ಎಂಬ ಆದೇಶ ಹೊರಡಿಸಿದೆ.
ಇದರಿಂದಾಗಿ ಜನರ ಮನಸ್ಸಿನಲ್ಲಿ, ಒಂದು ರೀತಿಯ ಅನನ್ಯ ಭಾವನೆಯಲ್ಲಿ ಉಂಟು ಮಾಡುತ್ತಿದ್ದ ನಾಕಾಣೆ ಪಾವಲಿಯನ್ನು; ನಾವು ಇನ್ನುಮುಂದೆ ನಾಣ್ಯ ಸಂಗ್ರಾಹಕರು ಅಥವಾ ಯಾವುದಾದರು ವಸ್ತುಸಂಗ್ರಹಾಲಯ ಗಳಲ್ಲಿ ಮಾತ್ರ ಕಾಣಲು ಸಾಧ್ಯ.
'ನಾನು ಚಿಕ್ಕವನಿದ್ದಾಗ ನಾಕಣೆಯಲ್ಲಿ 4 ಜನರನ್ನು, ಹೋಟೆಲಿಗೆ ಕರೆದುಕೊಂಡು ಹೋಗಿ, ಚಾ ಕುಡಿಸುತ್ತಿದ್ದೆ'. ಎಂದು ಹೇಳುತ್ತಿದ್ದ ಮುದುಕರು ಇನ್ನು ಮುಂದೆ ಆ ಮಾತನ್ನು ಹೇಳಿದರೆ,ಮುಂದಿನ ತಲೆಮಾರಿನ ಜನರು ಮುಖ-ಮುಖ ನೋಡಬಹುದು. ಅವರಿಗೆ ನಾಕಾಣೆ ಎಂದರೆ ಕಾಲಗರ್ಭಕ್ಕೆ ಸೇರಿ ಹೋದ ಹಿರಿಯರ ಪುರಾತನ ಸೊತ್ತು ಅಷ್ಟೆ.
ರಿಸರ್ವ್ ಬ್ಯಾಂಕ್ ನಾಕಣೆಯ ಚಲಾವಣೆಯನ್ನು ನಿಲ್ಲಿಸಲು ಕಾರಣ, ಅದನ್ನು ಟ೦ಕಿಸ ಬೇಕಾದರೆ 50 ಪೈಸೆ ಖರ್ಚು ತಗಲುತ್ತಂತೆ!
ದೇವರ ಪೂಜೆಯಲ್ಲಿ ವಿಶೇಷ ಸ್ಥಾನಮಾನ ಪಡೆಯುತಿದ್ದ ನಾಕಾಣೆಯು, ಜನರ ಮನಸ್ಸಿನಿಂದ ದೂರ ಸರಿಯುತ್ತಿದೆ ಎಂಬುವುದು ನೋವಿನ ಸಂಗತಿ.25 ಪೈಸೆ ಗೆ ಬಂದೊದಗಿದ ಈ ಸ್ಥಿತಿಯನ್ನು ಕಂಡ 50 ಪೈಸೆ 'ಎಲ್ಲಾ ಮಾಯಾ ನಾಳೆ ನಾವು ಮಾಯಾ' ಎಂದು ಹಾಡುತ್ತಿರಬಹುದು.
ಹಾಗೇ ಸುಮ್ಮನೆ- ನಾಕಣೆಯ ಚಲಾವಣೆ ನಿಲ್ಲುತ್ತದೆ ಎಂಬ ಸುದ್ದಿಯನ್ನು ಕೇಳಿದ ಉಮೇಶ, ವಿಪರೀತ tension ಆಗಿದ್ದಾನೆ. ಯಾಕೆಂದರೆ ಆತನಿಗೆ ಪುರೋಹಿತರೊಬ್ಬರು, 1 ಕಾಲು ರೂಪಾಯಿ ಹರಕೆ ಹಾಕಿದರೆ, ಕುಡಿಯುವ  ಅಭ್ಯಾಸ ಬಿಟ್ಟು ಹೋಗುತ್ತದೆ ಎಂಬ ಸಲಹೆ ನೀಡಿದ್ದರಂತೆ. ನಾಕಣೆಯನ್ನು ನಿಲ್ಲಿಸಿದರೆ, ಜೂನ್ 30 ಕ್ಕಿಂತ  ಮೊದಲೇ ಕುಡಿಯೋದು ಬಿಡಬೇಕಲ್ಲವೇ, ಎಂಬುವುದು ಉಮೇಶನ ತಲೆಬಿಸಿಯಾಗಲು ಕಾರಣ.
                                                        -ಡಾ.ಶೆಟ್ಟಿ 

No comments:

Post a Comment