Wednesday, February 23, 2011

ಇಸ್ರೇಲ್ ಹುಟ್ಟಿದ ಕಥೆ 
ಇಸ್ರೇಲ್ ಎಂಬ ಪುಟ್ಟ ದೇಶವನ್ನು ನೆನಪು ಮಾಡಿಕೊಂಡರೆ ನಮ್ಮ ಕಣ್ಣೆದುರು ಯಹೂದಿ ಧರ್ಮ ಬಂದು ನಿಲ್ಲುತ್ತದೆ. ಯಹೂದಿಗಳನ್ನು ನೆನೆದರೆ ಕೈಗಾರಿಕೆ,ಉತ್ಪಾದನೆ, ವ್ಯಾಪಾರ ಮೊದಲಾದ ಚಟುವಟಿಕೆಗಳಲ್ಲಿ ಅವರು ನೀಡಿರುವ ಅಪಾರ ಕೊಡುಗೆ ನೆನಪಾಗುತ್ತದೆ. ಯಹೂದಿ ಧರ್ಮವೆಂದರೆ ಅದು ಛಲಕ್ಕೆ ಮತ್ತೊಂದು ಹೆಸರು. ನೀವೊಮ್ಮೆ ವಿಶ್ವದ ಭೂಪಟವನ್ನು ತೆಗೆದು ನೋಡಿ, ಇಸ್ರೇಲ್ ದೇಶದ ಅಕ್ಕ-ಪಕ್ಕದಲ್ಲಿ ಇರುವ ದೇಶಗಳ ಕಡೆಗೆ ಕಣ್ಣಾಡಿಸಿ: ಯಾಕೆಂದರೆ ಇಸ್ರೇಲಿನ ಸುತ್ತಮುತ್ತ ಅರಬ್ ದೇಶಗಳೇ ಮುತ್ತಿಕೊಂಡಿವೆ. ಆ ಎಲ್ಲಾ ದೇಶಗಳಿಗೆ ಇಸ್ರೇಲ್ ಶತ್ರು ರಾಷ್ಟ್ರ. ನಮ್ಮ ದೇಶದ ಪಕ್ಕ ಇರುವ ಒಂದು ಪಾಕಿಸ್ತಾನದ ಉಪಟಳವನ್ನೇ ನಮ್ಮಿಂದ ಸಹಿಸಲಾಗುತ್ತಿಲ್ಲ, ಅಂತಹದರಲ್ಲಿ ಇಸ್ರೇಲ್ ಎಷ್ಟು ಕಷ್ಟಪಟ್ಟಿರಬಹುದು ಊಹಿಸಿ.
ಆದರೂ ಇಸ್ರೇಲ್ ಎಂದು ಜಗತ್ತಿನ ಕಣ್ಣುಕುಕ್ಕುವಂತೆ ಬೆಳೆಯುತ್ತಿದೆ. ಸದಾ ಯುದ್ದ ಭೀತಿಯಲ್ಲಿದ್ದರು, ಈ ದೇಶ ಅಪಾರ ಅಭಿವೃದ್ಧಿ ಹೊಂದಿದೆ. ಈ ಅಭಿವೃದ್ಧಿಯ ಹಿಂದೆ ಯಹೂದಿ ಜನರ ಅನನ್ಯ ಉತ್ಸಾಹವಿದೆ, ಬೆವರು ಸುರಿಸಿದ ಶ್ರಮವಿದೆ, ಅವರ ರಕ್ತದ ಕಣ-ಕಣದಲ್ಲೂ ಹರಿಯುವ ದೇಶ ಭಕ್ತಿಯಿದೆ.
ಈ ಯಹೂದಿಗಳ ಇತಿಹಾಸ ಕೂಡ interesting ಆಗಿದೆ, ಎಲ್ಲೂ ಬೋರು ಹೊಡಿಯದ ಇವರ ಕಥೆಯನ್ನೊಮ್ಮೆ ಓದಿಕೊಳ್ಳಿ;
ಯಹೂದಿಗಳ ಪೂರ್ವಜರು ಅರಬ್ ಪ್ರಸ್ಥಭೂಮಿಯ ಮರಳುಗಾಡಿನಲ್ಲಿ ಗುಂಪಾಗಿ ವಾಸಿಸುತ್ತಿದ್ದರು. ಅವರನ್ನು ಇಸ್ರೇಲೈಟ್ ಕುಲದವರೆಂದು ಕರೆಯುತ್ತಿದ್ದರು. ಆ ಅಲೆಮಾರಿ ಗುಂಪಿನಲ್ಲಿ ಮುಖ್ಯವ್ಯಕ್ತಿ ಏಬ್ರಾಹಂ. ಇವನು ಸುಮಾರು ಕ್ರಿ.ಪೂ. 2000 ದ ಹೊತ್ತಿಗೆ ಹೀಬ್ರೂ ಕುಟುಂಬದ ಯಜಮಾನನಾಗಿದ್ದನು. ಒಂದು ದಿನ ಏಬ್ರಾಹಂ ಗೆ ಕನಸು ಬೀಳುತ್ತದೆ, ಆ ಕನಸಿನಲ್ಲಿ ಅವನು ಪೂಜಿಸುವ ದೇವರು ಯಹೂ ವಿಶೇಷ ಸಂದೇಶ ಪ್ರವಚಿಸುತ್ತಾನೆ. ಅದರ ಪ್ರಕಾರ ' ಯಹೂದಿಗಳು ಅಲೆಮಾರಿ ಬದುಕು ಬಿಟ್ಟು, ಕೆನಾನ್(ಇಂದಿನ ಪ್ಯಾಲಸ್ತೀನ್) ಎಂಬ ಪ್ರದೇಶಕ್ಕೆ ವಲಸೆ ಹೋಗಿ, ಖಾಯಂ ಆಗಿ ನೆಲೆಸಬೇಕು' ಎಂಬ ಆಜ್ಞೆ ಮಾಡುತ್ತಾನೆ.ಅಲ್ಲಿಂದ ಮುಂದೆ ಯಹೂದಿಗಳಿಗೆ ಪ್ಯಾಲಸ್ತೀನ್ 'God promised land'(ದೇವರು ಕೊಟ್ಟ ಭೂಮಿ) ಆಗುತ್ತದೆ. 
ಇಲ್ಲಿಂದ ಮುಂದೆ ಯಹೂದಿಗಳು, ತುಂಬಾ ಕಷ್ಟಪಟ್ಟು ಪ್ಯಾಲಸ್ತೀನ್ ತಲುಪಿ, ತಮ್ಮ ಸಾಮ್ರಾಜ್ಯ ಸ್ಥಾಪಿಸುತ್ತಾರೆ. ನೆನಪಿಡಿ ಇದು ಕ್ರಿಸ್ತಪೂರ್ವದಲ್ಲಿ ನಡೆದ ಘಟನೆ! ಆದರೆ ವಿಪರ್ಯಾಸವೆಂದರೆ, ರೋಮನ್ನರು ಮತ್ತು ಗ್ರೀಕರು ಪ್ಯಾಲಸ್ತೀನ್ ಅನ್ನು ಆಕ್ರಮಿಸಿ ಯಹೂದಿಗಳನ್ನು ಅಲ್ಲಿಂದ ಓಡಿಸುತ್ತಾರೆ. ಯಹೂದಿಗಳು ಪುನಃ ಬೇರೆ ಬೇರೆ ದೇಶಗಳಿಗೆ ಸೇರಿಕೊಂಡು ಬಲಿಷ್ಠ ಜನಾಂಗವಾಗಿ ರೂಪುಗೊಳ್ಳುತ್ತಾರೆ. 
ಆದರೆ ವಿಶೇಷವೆಂದರೆ ಯಹೂದಿಗಳು ಯಾವುದೇ ದೇಶಕ್ಕೆ ಹೋದರು, ಅವರ ಸಂಸ್ಕೃತಿ, ಭಾಷೆಯನ್ನು ಉಳಿಸಿಕೊಂಡಿರುತ್ತಾರೆ.ದ್ವಿತೀಯ ಮಹಾಯುದ್ದದ ಸಮಯದಲ್ಲಿ ಯಹೂದಿಗಳು ಪುನಃ ಸಂಘಟಿತರಾಗಿ, ಇಸ್ರೇಲ್ ಗೆ ಹೋಗಿ ನೆಲೆಸುತ್ತಾರೆ. ಅಲ್ಲಿಯ ಮೂಲನಿವಾಸಿಗಳ ಜೊತೆ ಯುದ್ದ ಮಾಡಿ, ಮೇ 14 , 1948 ರಲ್ಲಿ ಇಸ್ರೇಲ್ ಪುನಃ ಯಹೂದಿಗಳ ವಶವಾಗುತ್ತದೆ. 
ಅಂತೂ ಇಂತೂ 2000 ವರ್ಷಗಳ ಹಿಂದೆ ತಮ್ಮ ಪೂರ್ವಜರು ನೆಲೆಸಿದ್ದ ಪ್ಯಾಲಸ್ತೀನ್ ನಲ್ಲಿ,ತಮ್ಮ ಸಾಮ್ರಾಜ್ಯ ಬೆಳೆಸುತ್ತಾರೆ. ಇದು ಯಹೂದಿಗಳ ಯಶೋಗಾಥೆ.
ಜಗತ್ತಿನ ಯಾವ ಜನಾಂಗ ಕೂಡ ಇಷ್ಟು ಕಷ್ಟಪಟ್ಟು ತಮ್ಮ ಧರ್ಮದ ಪವಿತ್ರ ಸ್ಥಳವನ್ನು ಉಳಿಸಿಕೊಂಡ ಉದಾಹರಣೆಗಳಿಲ್ಲ. ಈ ನಿಟ್ಟಿನಲ್ಲಿ ಯಹೂದಿಗಳನ್ನು ಮೆಚ್ಚಲೇ ಬೇಕು. 
                                             -ಡಾ.ಶೆಟ್ಟಿ 

No comments:

Post a Comment