Thursday, March 17, 2011

ಪುನಃ ಭಿನ್ನಮತ?
ಯಡಿಯೂರಪ್ಪನವರ ಗ್ರಹಗತಿ ಚೆನ್ನಾಗಿಲ್ಲವೋ? ಅಥವಾ ರಾಜ್ಯದ ಗ್ರಹಚಾರ ಸರಿಯಾಗಿಲ್ಲವೋ ಗೊತ್ತಿಲ್ಲ, ಒಟ್ಟಿನಲ್ಲಿ ರಾಜ್ಯದಲ್ಲಿ ಬಿ.ಜೆ.ಪಿ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದ, ದಿನಕ್ಕೊಂದು ವಿವಾದ ಹುಟ್ಟಿಕೊಳ್ಳುತ್ತಲೇ ಇದೆ. 
'ನಮ್ಮನ್ನು ಸರಿಯಾಗಿ ಆಡಳಿತ ನಡೆಸಲು ಪ್ರತಿಪಕ್ಷದವರು ಬಿಡುತ್ತಿಲ್ಲ' ಎಂದು ಯಡಿಯೂರಪ್ಪನವರು ಬೊಬ್ಬೆ ಹಾಕಿದರೆ, 'ನಿಮ್ಮಷ್ಟು ಭ್ರಷ್ಟ ಮುಖ್ಯಮಂತ್ರಿ ದೇಶದಲ್ಲೇ ಇಲ್ಲ' ಎಂದು ಪ್ರತಿಪಕ್ಷಗಳು ಕೂಗೆಬ್ಬಿಸುತ್ತಿವೆ. ಯಡಿಯೂರಪ್ಪನವರಿಗೆ ಪ್ರತಿಪಕ್ಷಗಳ ತೊಂದರೆ ಒಂದೆಡೆಯಾದರೆ, ಪಕ್ಷದಲ್ಲೇ ಇರುವ ಭಿನ್ನರದು ಇನ್ನೊಂದು ಕಿರಿಕಿರಿ. ಜನಾರ್ಧನ ರೆಡ್ಡಿಯವರು ಆರಂಭ ಮಾಡಿದ  ಭಿನ್ನಮತದ ಸಂಪ್ರದಾಯ, ನಿನ್ನೆ ಅನಂತ್ ಕುಮಾರ್, ಈಶ್ವರಪ್ಪ ರ ವರೆಗೆ ಮುಂದುವರೆದಿದೆ. 
ಪ್ರೇರಣಾ ಹಗರಣದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುತ್ತದೆ ಎಂದು, ಬಿ.ಜೆ.ಪಿಯ ಕೆಲ ಶಾಸಕರು ನಿನ್ನೆ ಮುಖ್ಯಮಂತ್ರಿಯವರನ್ನು ವಿರೋಧಿಸಿ ಗುಪ್ತ ಸಭೆ ನಡೆಸಿದರು. ಅಲ್ಲಿಗೆ ತನ್ನ ಬೆಂಬಲಿಗ ಶಾಸಕರೊಡನೆ ನುಗ್ಗಿ, ಅಲ್ಲಿ ಏನೇನೋ ಮಾಡಿ, ಹೊರ ಬಂದಾಗ ಸಿಕ್ಕ ಡ್ರೈವರ್ ಮಹಾಶಯನಿಗೆ ಬಡಿದ ಯಡ್ಡಿಯವರನ್ನು, ನಿನ್ನೆ ನೀವು ದೃಶ್ಯಮಾಧ್ಯಮದಲ್ಲಿ ನೋಡಿರುತ್ತೀರಿ. 
ಪ್ರೇರಣಾ ಟ್ರಸ್ಟ್ ವಿಚಾರದಲ್ಲಿ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಬೀಸುತ್ತಿದೆ. ಬಿ.ಜೆ.ಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ವಿಧಾನಸಭೆಯಲ್ಲಿ ಕೂಡ ಸುಗಮ ಕಲಾಪ ನಡೆಸಲು ಪ್ರತಿಪಕ್ಷಗಳು ಬಿಡುತ್ತಿಲ್ಲ. ಈ ಕಾರಣದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸದ್ಯಕ್ಕಂತೂ ಫುಲ್ ಸ್ಟಾಪ್. ಉಪಚುನಾವಣೆ ಕೂಡ ಹತ್ತಿರವಿರುವುದರಿಂದ, ಬಿ.ಜಿ.ಪಿ ಆಂತರಿಕ ಬಿಕ್ಕಟ್ಟನ್ನು ಹೇಗೆ ನಿರ್ವಹಿಸುತ್ತದೆ ಎಂಬುವುದು ಈಗ ಎಲ್ಲರ ಮುಂದಿರುವ ಪ್ರಶ್ನೆ.
ಹಾಗೇ ಸುಮ್ಮನೆ- 'ಪಕ್ಷದಲ್ಲಿ ಭಿನ್ನಮತವಿಲ್ಲ' ಎಂಬ ಯಡ್ಡಿಯವರ ಮಾತು ಕೇಳಿದ ಉಮೇಶನಿಗೆ ನಗು ಬಂತಂತೆ. ಯಾಕೆಂದರೆ ಎಲ್ಲವೂ ಸರಿಯಾಗಿರುವ ವ್ಯಕ್ತಿ 'ನಾನು ಸರಿಯಾಗಿದ್ದೇನೆ' ಎಂದು ಹೇಳಿಕೊಂಡು ತಿರುಗಿದಾಗ ತಾನೆ ಪಕ್ಕದವರಿಗೆ doubt ಬರೋದು, ಏನೋ ಚೂರು ಎಡವಟ್ಟಾಗಿದೆ ಎಂದು. 
                                                                                -ಡಾ.ಶೆಟ್ಟಿ 

No comments:

Post a Comment