Thursday, March 3, 2011

ಸೋರುತಿಹುದು ಮನಿಯಾ ಮಾಳಿಗೆ! 
ನಿಮ್ಮ ಒಂದು ಕೈಯಲ್ಲಿ 'ಸೋರುತಿಹುದು ಮನಿಯಾ ಮಾಳಿಗೆ, ಅಜ್ಞಾನದಿಂದ' ಕವಿತೆಯನ್ನು ಹಿಡಿದುಕೊಳ್ಳಿ. ಅದೇ ರೀತಿ ಈಗಿನ ಕಾಲದಲ್ಲಿ ತಮ್ಮನ್ನು ತಾವು 
ಕ(ಪಿ)ವಿಗಳೆಂದು ಕರೆಸಿಕೊಳ್ಳುವವರ ಕವಿತೆಗಳನ್ನು ಇನ್ನೊಂದು ಕೈಯಲ್ಲಿ ಹಿಡಿದುಕೊಳ್ಳಿ, ನಿಮಗೆ ಯಾವ ಕವಿತೆಗಳು ಹೆಚ್ಚು ಪ್ರಸ್ತುತ ಎಂದು ಕಾಣುತ್ತದೆ?
'ನಾನು ಸುಂದರ, ನೀನು ಸುಂದರಿ, ನಿನ್ನ ಅಮ್ಮ ಇನ್ನೂ ಸುಂದರಿ' ಎಂದು ಕವನ ಬರೆದು, ಅದನ್ನೇ ದೊಡ್ಡ ಸಾಹಿತ್ಯದ ಸೇವೆಯೆಂದು ಭಾವಿಸುವ ಈಗಿನ ಕವಿಗಳು, ಸಂತ ಶಿಶುನಾಳ ಶರೀಫರ ಕವನಗಳನೊಮ್ಮೆ ಓದಿ ನೋಡಬೇಕು. ಅವರು ಬರೆದ ಕವನಗಳು ಯಾವ ಕಾಲಕ್ಕೂ ಪ್ರಸ್ತುತ. ಇನ್ನು ಒಂದು 20 ವರ್ಷ ಬಿಟ್ಟು ಓದಿದರೂ ಅವರ ಕವನಗಳಿಗೆ ತನ್ನದೇ ಆದ ಮಹತ್ವವಿದೆ. 
'ಸೋರುತಿಹುದು ಮನಿಯಾ ಮಾಳಿಗೆ', 'ಕೋಡಗಾನ ಕೋಳಿ ನುಂಗಿತ್ತಾ', 'ಗುಡುಗುಡಿಯಾ ಸೇದಿ ನೋಡೋ' ಮುಂತಾದ ತತ್ವದ ಪದಗಳಲ್ಲಿ ಜಗದ ಡೊಂಕನ್ನು, ಪ್ರಪಂಚದ ವಾಸ್ತವತೆಯನ್ನು, ಜೀವನದ ಕ್ಷಣಿಕತೆಯನ್ನು ಮನಮುಟ್ಟುವಂತೆ ಕಟ್ಟಿಕೊಟ್ಟ, ಶಿಶುನಾಳ ಶರೀಫರು ನಿಜವಾಗಿಯೂ ಗ್ರೇಟ್!
ಶಿಶುವಿನಹಾಳ ಎಂಬ ಹಳ್ಳಿಯಲ್ಲಿ(ಹಾವೇರಿ ಜಿಲ್ಲೆ), ಮಾರ್ಚ್ ೭, ೧೮೧೯ ರಂದು, ಸಾಮಾನ್ಯ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಇವರು, ನಂತರ ಕಳಸದ ಗುರು ಗೋವಿಂದ ಭಟ್ಟರ ಶಿಷ್ಯರಾದರು. ನಂತರದ ದಿನಗಳಲ್ಲಿ ಇವರು ಹಿಂದೂ-ಮುಸ್ಲಿಂ ಐಕ್ಯತೆಯ ಸಂಕೇತವಾಗಿ ಬೆಳೆದರು. 
ಪ್ರಸ್ತುತ ದಿನಗಳಲ್ಲಿ ಕವಿಗಳೆಂದು ತಮ್ಮನ್ನು ತಾವು ಕರೆಸಿಕೊಳ್ಳುವವರು ಹೆಚ್ಚಾಗಿದ್ದರೆ. ಅರ್ಥವಾಗದ ಕವಿತೆಗಳನ್ನು ಬರೆದು, ಧರ್ಮ-ಧರ್ಮಗಳ ನಡುವೆ ಒಡಕು ಉಂಟುಮಾಡುವ ಈಗಿನ ಕವಿಗಳಿಗೆ, ಶಿಶುನಾಳ ಸಾಹೇಬರು ಆದರ್ಶವಾಗಬೇಕು. ದೇಶದಲ್ಲಿ ಕೋಮು ಸೌಹಾರ್ದ ಮೂಡಬೇಕಾದರೆ, ಶಿಶುನಾಳರಂತ ಕವಿಗಳು, ದಾರ್ಶನಿಕರು ಮತ್ತೆ ಹುಟ್ಟಬೇಕು.
                                         -ಡಾ.ಶೆಟ್ಟಿ  

No comments:

Post a Comment