Tuesday, March 8, 2011

ಸರಕಾರದ ರೂಲ್ಸುಗಳು..
ಸರಕಾರದ ರೂಲ್ಸುಗಳೇ ಹೀಗೆ.. ಅರ್ಥವೇ ಇಲ್ಲದ, ಮೂರು ಕಾಸಿಗೂ ಪ್ರಯೋಜನಕ್ಕೆ ಬಾರದ ಆದೇಶಗಳನ್ನು ಜಾರಿಗೆ ತರುವುದರಲ್ಲಿ ನಮ್ಮ ರಾಜಕಾರಣಿಗಳು ಸಿದ್ದಹಸ್ತರು. ಈಗ ನಮ್ಮ ಹೋಂ ಮಿನಿಸ್ಟರ್ ಕಂ ಸಾರಿಗೆ ಸಚಿವ ಆರ್.ಅಶೋಕ್, ಹೊಸತೊಂದು ರೂಲ್ಸು ತರಲು ಹೊರಟಿದ್ದಾರೆ, ಅದೇನೆಂದರೆ ಸ್ವಾತಂತ್ಯ ಹೋರಾಟಗಾರರಿಗೆ ಎ.ಸಿ ಬಸ್ಸಿನಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಒದಗಿಸುವುದು. ಆದರೆ ವಿಪರ್ಯಾಸವೆಂದರೆ ಅದನ್ನು ಕೂಡ ಪರಿಶೀಲಿಸಿ ನೋಡಬೇಕಂತೆ! ಸ್ವಾತಂತ್ರ್ಯ ಹೋರಾಟಗಾರರಲ್ಲಿ ಹೆಚ್ಚಿನವರು ಈಗ ಬದುಕಿಲ್ಲ, ಅದರಲ್ಲೂ ಬದುಕಿದ್ದರೂ ಅವರು ಯಾರು ಬಸ್ಸಿನಲ್ಲಿ ಓಡಾಡುವ ಸ್ಥಿತಿಯಲ್ಲಿ ಇರಲಿಕ್ಕಿಲ್ಲ. ಒಂದು ವೇಳೆ ಇದ್ದರೂ ಅವರು ಇನ್ನು ಎಷ್ಟು ಸಮಯ ಬದುಕಬಹುದು? ಇರುವ ಸ್ವಲ್ಪ ಸಮಯವಾದರೂ ನೆಮ್ಮದಿಯಿಂದ ಎ.ಸಿ ಬಸ್ಸಿನಲ್ಲಿ ಓಡಾಡಲಿ ಎಂದರೆ, ಅದಕ್ಕೂ ಪರಿಶೀಲನೆ ನಡೆಸಬೇಕಂತೆ!
ಇನ್ನು ಇವರು ಅದನ್ನು ಪರಿಶೀಲಿಸಿ, ಚರ್ಚೆ ನಡೆಸಿ, ಆ ಆದೇಶ ಜಾರಿಗೆ ಬರುವಾಗ; ಪಾಪದ ಸ್ವಾತಂತ್ರ್ಯ ಹೋರಾಟಗಾರರು ಶಿವನ ಪಾದ ಸೇರಿರುತ್ತಾರೆ. ಇನ್ನು ಎ.ಸಿ ಬಸ್ಸಿನಲ್ಲಿ ಸಂಚರಿಸೋದು ಎಲ್ಲಿಂದ ಬಂತು?
ಇನ್ನೊಂದು ತಮಾಷೆಯ ಸಂಗತಿಯಿದೆ, ಗ್ರಾಮಾಂತರ ಪ್ರದೇಶಗಳಲ್ಲಿ ಓಡಾಡುವ ಬಸ್ಸುಗಳಲ್ಲಿ 'ಸ್ವಾತಂತ್ರ್ಯ ಹೋರಾಟಗಾರರಿಗೆ' ಎಂಬ ಸೀಟು ಇರುತ್ತದೆ. ಆದರೆ ಆ ಸೀಟಿನ ಗತಿಯನ್ನು ನೋಡಿದರೆ, ಈಗಾಗಲೇ ವೃದ್ಧರಾಗಿರುವ ಸ್ವಾತಂತ್ರ್ಯ  ಹೋರಾಟಗಾರರು ಕೂತುಕೊಳ್ಳಲು ಸಾಧ್ಯವೇ ಇಲ್ಲ. ತೂತು ಬಿದ್ದು, ಹರಿದು ಚಿಂದಿ ಚಿಂದಿಯಾಗಿರುವ ಈ ಸೀಟುಗಳಲ್ಲಿ ಬಾಯಿಗೆ ಗುಟ್ಕಾ ಹಾಕಿಕೊಂಡು, ಸಿಕ್ಕಸಿಕ್ಕಲ್ಲಿ ಉಗಿಯುವವರೇ ಕೂತಿರುತ್ತಾರೆ. 
ಒಟ್ಟಿನಲ್ಲಿ ' ಸರಕಾರದ ಈ ರೂಲ್ಸುಗಳು ಬಲ್ಬು ಇಲ್ಲದ ಕಂಬಗಳು' ಎನ್ನುವ ಕನ್ನಡ ಚಿತ್ರವೊಂದರ ಸಾಲು ಸಾರ್ವಕಾಲಿಕ ಸತ್ಯ!
ಹಾಗೇ ಸುಮ್ಮನೆ - ಸ್ವಾತಂತ್ರ್ಯ ಹೋರಾಟಗಾರರಿಗೆ ಎ.ಸಿ ಬಸ್ಸಿನಲ್ಲಿ ಉಚಿತ ಪ್ರಯಾಣ ನೀಡಲಾಗುತ್ತದೆ ಎಂಬುವುದನ್ನು ಕೇಳಿದ ಉಮೇಶ, 'ನಮ್ಮ ವಾಟಳಪ್ಪನವರಿಗೂ ಆ ಸೌಲಭ್ಯವನ್ನು ಒದಗಿಸಬೇಕು, ಅವರೂ ಕೂಡ 'ಹಲವು' ತರಹದ ಸ್ವಾತಂತ್ರ್ಯಕ್ಕೆ  ಹೋರಾಡಿದ್ದಾರೆ' ಎನ್ನುತ್ತಿದ್ದಾನೆ.
                                             -ಡಾ.ಶೆಟ್ಟಿ 

No comments:

Post a Comment