Thursday, March 10, 2011

            ಹೃದಯ ವೈಶಾಲ್ಯತೆ ಅಗತ್ಯ 
ಇನ್ನೇನು ವಿಶ್ವ ಕನ್ನಡ ಸಮ್ಮೇಳನ ಪ್ರಾರಂಭವಾಗಲು ಕ್ಷಣಗಣನೆ ಆರಂಭವಾಗಿದೆ. ಬೆಳಗಾವಿಯು ಎಲ್ಲಾ ಪೂರ್ವ ತಯಾರಿಯೊಂದಿಗೆ ಸಮ್ಮೇಳನವನ್ನು ಆಯೋಜಿಸಲು ಸಂಪೂರ್ಣ ತಯಾರಿ ನಡೆಸಿ ಕನ್ನಡಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಸರಕಾರವು ವಿಶ್ವಕನ್ನಡ ಸಮ್ಮೇಳನವನ್ನು ಬಹಳ ಸೂಕ್ಷ್ಮವಾಗಿ ಪರಿಗಣಿಸಿದೆ ಎನ್ನಬಹುದು. ತಯಾರಿಯ ಸಂದರ್ಭದಿಂದಲೇ ವಿಶ್ವಕನ್ನಡ ಸಮ್ಮೇಳನದ ಸುದ್ದಿ ಪತ್ರಿಕೆಗಳಲ್ಲಿ ಬಿಖರಿಯಾಗಿತ್ತು. 'ಉತ್ತಮ ಮೌಲ್ಯದೊಂದಿಗೆ!' 
ಈಗ ಇದೇ ವಿಶ್ವಕನ್ನಡ ಸಮ್ಮೇಳನದಿಂದ ಪತ್ರಿಕೆಗಳಿಗೆ ಮತ್ತೆ ಮುಖಪುಟ ಸುದ್ದಿಯೊಂದು ದೊರೆತಿದೆ. ಏನೆಂದರೆ, ಸಮ್ಮೇಳನ ಸಂಘಟಕರ ಆಹ್ವಾನ ಅಧ್ವಾಂತ. ಸಮ್ಮೇಳನದ ಆಹ್ವಾನದ ವಿಚಾರದಲ್ಲಿ ಸಂಘಟಕರ ನಿರ್ಲಕ್ಷ್ಯ ಎದ್ದು ಕಂಡಿದೆ. ಇದಕ್ಕೆ ಮೊದಲನೆಯ ಕಾರಣ ಎಂದರೆ, ಬೆಳಗಾವಿಯ ಮೇಯರ್ ಎನ್.ಬಿ. ನಿರ್ವಾಣಿಯವರ ರಾಜಿನಾಮೆ. ತಮಗೆ ಸಮ್ಮೇಳನದ ಪೂರ್ವತಯಾರಿಯಲ್ಲಿ ಸರಿಯಾದ ಜವಾಬ್ದಾರಿ ನೀಡಿಲ್ಲ ಹಾಗು ಸಮ್ಮೇಳನಕ್ಕಾಗಿ 700 ಗೂಡಂಗಡಿಗಳನ್ನು ತೆರವು ಮಾಡುವಾಗ ಅಧಿಕಾರಿಗಳು ಮತ್ತು ಉಸ್ತುವಾರಿ ಸಚಿವರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಮತ್ತು ಎಲ್ಲದಕ್ಕಿಂತ ಮುಖ್ಯ ಕಾರಣವೆಂದರೆ, ವಿಶ್ವ ಕನ್ನಡ ಸಮ್ಮೇಳನಕ್ಕೆ ತಮಗೆ ಆಹ್ವಾನವೇ ನೀಡಿಲ್ಲದಕ್ಕಾಗಿ ರಾಜಿನಾಮೆ ನೀಡಿ, ಮೇಯರ್ ಆದಾಗಕ್ಕಿಂತ ತುಸು, ಯಾಕೆ? ಬಹಳವೇ ಸುದ್ದಿಯಾಗಿದ್ದಾರೆ. ಸಂಘಟಕರು ಯಾವುದನ್ನು ತಲೆಯಲ್ಲಿ ಇಟ್ಟುಕೊಂಡು ಇವರನ್ನು ಈ ರೀತಿ ನಡೆಸಿಕೊಂಡರೋ ಗೊತ್ತಿಲ್ಲ. ಆದರೆ, ಮೇಯರ್ ಆದವರಿಗೆ ಆಹ್ವಾನ ಪತ್ರಿಕೆಯನ್ನು ಮಾತ್ರ ಕಳುಹಿಸಬೇಕಿತ್ತು. ಇದು ಕಾರ್ಯಕ್ರಮದ ಶಿಸ್ತೂ ಹೌದು. 
ಇದೊಂದೇ ಆಗಿದ್ದರೆ, ಏನೋ ಮರೆತು ಬಿಟ್ಟಿದ್ದಾರೋ ಎಂದು ಊಹಿಸಬಹುದಿತ್ತು. ಆದರೆ ಆಹ್ವಾನದಿಂದ ವಂಚಿತರಾದವರ ಪಟ್ಟಿಯಲ್ಲಿ ಕನ್ನಡ ನುಡಿ ತೇರು ಮೂಲಕ ಜಾಗೃತಿ ಜಾಥಾ ನಡೆಸಿ, ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ರಮೇಶ್ ಝಾಳಕಿ ಇದ್ದಾರೆ. ಇವರನ್ನೂ ಮರೆತು ಹೋಗಿದ್ದಾರೆ ಎಂದರೆ ನಂಬಬಹುದು. ಆದರೆ, ಕನ್ನಡ ನಾಡಿನ ಅಭೂತಪೂರ್ವ ವ್ಯಕ್ತಿತ್ವ, ಸದಾ ಸಂಚಾರಿ ಭಾವದ, ಹುಚ್ಚು ಮುಂಡೆ ಮದುವೇಲಿ ಉಂಡೋನೆ ಜಾಣ ಎಂಬ ಪಾಲಿಸಿಯ, ವಟ ವಟ ಮಾತಿನ ವಾಟಾಳ್ ನಾಗರಾಜ್ ಅವರನ್ನು ನಿರ್ಲಕ್ಷಿಸಿರುವುದು Pre planned agenda ವೆ? ಎನ್ನುವ ಆಲೋಚನೆಯತ್ತ ನಮ್ಮನ್ನು ಕೊಂಡೊಯ್ಯುತ್ತದೆ. 
ಇದೆಲ್ಲದರ ನಡುವೆ, ಚಂದ್ರು ಅವರು ಈ ವಿಚಾರದ ಬಗೆಗೆ ಯಾವ ತಗಾದೆಯೂ ತೆಗೆಯದೆ ತಾವು ಸಮ್ಮೇಳನದಲ್ಲಿ ಭಾಗವಹಿಸಿ ಬರುತ್ತೇನೆ ಎಂದು ಹೃದಯ ವೈಶಾಲ್ಯತೆಯನ್ನು ಮೆರೆದು, ಆಯೋಜಕರಿಗೆ ಮುಜುಗರ ಆಗುವಂತೆ ಮಾಡಿದ್ದಾರೆ. ಯಾವುದೇ ರಾಜಿನಾಮೆ, ಪತ್ರಿಕೆಯಲ್ಲಿ ಬರೆಸುವುದು, ಆಹ್ವಾನದಿಂದ ವಂಚಿತರಾಗಿದ್ದಕ್ಕೆ ಹೋರಾಟ ಮಾಡುವುದರಿಂದ ಕೇವಲ ಪತ್ರಿಕೆಯಲ್ಲಿ ಬಹಳ ದೊಡ್ಡ 'ಸುದ್ದಿಯಾಗಿ' ಪತ್ರಿಕೆ ಮಾರಾಟ ಆಗುತ್ತದೆಯೇ ಹೊರತು ಬೇರೇನೂ ಆಗುವುದಿಲ್ಲ. ಆದರೆ ಹೃದಯ ವೈಶಾಲ್ಯತೆ ಮೆರೆದರೆ ಸನ್ನಿವೇಶಾನುಸಾರ ಯಾರಿಗೆ ಏನೇನು ಆಗಬೇಕೋ ಅದು ಆಗಿಯೇ ಆಗುತ್ತದೆ. ಈಗ ಹೇಳಿ, ಜನ ಯಾರನ್ನು ಹೊಗಳುತ್ತಾರೆ? ಚಂದ್ರು ಅವರನ್ನೋ? ನಿರ್ವಾಣಿಯವರನ್ನೋ? ಅಥವಾ ಇದೆಲ್ಲವನ್ನು ಬಿತ್ತರಿಸಿದ ಪತ್ರಿಕೆಯವರನ್ನೋ?       
                                     -ಡಾ.ಶ್ರೇ 

No comments:

Post a Comment