Monday, February 21, 2011

ಬಂಧನಗಳಿಂದ ವಿಮುಖರಾದಾಗ 
ಪ್ರತಿಯೊಬ್ಬನಿಗೂ ಜೀವನದಲ್ಲಿ success ಆಗಲು ಸಾಧ್ಯವಿಲ್ಲ. ಆದರೆ success  ಪದದ ಅರ್ಥವೇ ಬೇರೇ,ಹಣ ಗಳಿಸುವುದಕ್ಕು successಗು ಆಗಾದವಾದ ವ್ಯತ್ಯಾಸವಿದೆ. ಕೆಲವು ಜನರ ಪ್ರಕಾರ ಹಣಗಳಿಸುವುದು ಜೀವನದಲ್ಲಿ success ಅಂದುಕೊಂಡು ಬಿಡುತ್ತಾರೆ. ಅದು ಅವರು ಮಾಡುವ ದೊಡ್ಡ ತಪ್ಪು.
ಹಣವನ್ನು ಯಾರುಬೇಕಾದರು ಗಳಿಸಬಹುದು ಆದರೆsuccess  ಅನ್ನು ಅಲ್ಲ. success  ಯಾವಾಗ ದೊರೆಯಲು ಸಾಧ್ಯ?
ನಮ್ಮ ನಿರ್ದಿಷ್ಟ ಆಸಕ್ತಿಯ ಮೇಲೆ ಹಗಲು-ಇರುಳು ಎನ್ನದೇ ಅದರ ಗುಂಗಿನಲ್ಲೇ ಇದ್ದು ಜಗವನ್ನು ಮರೆತು ಮತ್ತು ಹೆಚ್ಚಿನ ಸಂದರ್ಭ ಎಲ್ಲಾ ಬಂಧನಗಳಿಂದ ವಿಮುಖರಾದಾಗ ಮಾತ್ರ ಸಾಧ್ಯ.
ಏಕಾಂತದಲ್ಲಿ ಹೊಳೆಯುವ ಹಲವು ಐಡಿಯಾಗಳಿಗೆ ಸರಿಯಾದ ಚೌಕಟ್ಟನ್ನು ನೀಡುವ ಅಗತ್ಯವಿದೆ.ಅಂದರೆ ಹುಟ್ಟುವಾಗಲೇ ಅನಾಥನಾದವನಿಗೆ ಬಂಧನ ಎಂಬ ಪದದ ಅರ್ಥವೇ ತಿಳಿದಿರುವುದಿಲ್ಲ.ಆದರೆ ಬಂಧನಗಳನ್ನು ಹೊಂದಿ ಅದರಿಂದ ವಿಮುಖರಾಗುವುದೆಂದರೆ ಅದು ಕಷ್ಟವೇ ಸರಿ. ಸಾಹಿತ್ಯದ ಬಗ್ಗೆ ಚಿಂತನೆಯನ್ನು ಮಾಡುವ ಸಂಧರ್ಭ ಎಲ್ಲಾ ಬಂಧನಗಳಿಂದ ವಿಮುಖರಾಗಬೇಕೆಂದು ಹೇಳುವುದಲ್ಲ. ಆದರೆ ಬಂಧನಗಳಿಂದ ವಿಮುಖರಾಗಿಹೊದಂತೆ ಮನಸ್ಸಿನ ನೋವು, ತೀವ್ರತೆಯೊಂದಿಗೆ ಸಾಹಿತ್ಯದಲ್ಲಿ ಆಳವಾದ ಪ್ರಭಾವವನ್ನು ಬೀರಿದವರನ್ನು ನಾವು ಕಾಣಬಹುದು.
ನಮ್ಮsuccess  ಇತರರಿಗೆ ಎತ್ತಿ ತೋರಬೇಕೆಂದಿಲ್ಲ. ಅದರ ಅರಿವು ನಮ್ಮ ಮನಸ್ಸಿನಲ್ಲಿ ಆಗಬೇಕು. ಇಂತಹವುಗಳ ಜೊತೆಗೆ ಮನಸ್ಸಿನಲ್ಲಿ ಸದಾ ಸಂಗರ್ಷದಲ್ಲಿ ಇದ್ದಾಗ success  ತಾನಾಗೇ ಬಂದು ನಮ್ಮ ಹೆಸರು ಅದೆಷ್ಟೋ  ಕೋಟಿಮಂದಿಯ ಬಾಯಿ ಮಾತಗಿರುತ್ತದೆ.
                                -ಕೆ.ಪಿ.ಭಟ್ 

Saturday, February 19, 2011

ನಾನು ನನ್ನ ಕನಸು..
ದಟ್ಟ ಕಾಡಿನ ನಡುವೆ ಪುಟ್ಟಮನೆ, ಆ ಮನೆಯ ಎದುರು ಪ್ರಶಾಂತವಾಗಿ ಹರಿಯುತ್ತಿರುವ ನದಿ. ಒಟ್ಟಿನಲ್ಲಿ ಅದು ರೋಡೆ ಕಾಣದ ಊರು, ಕರೆಂಟೇ ಕಾಣದ ನಾಡು.
ದಿನಪತ್ರಿಕೆ, ಟಿ.ವಿ, ಕಂಪ್ಯೂಟರ್, ಮೊಬೈಲ್ ಯಾವುದು ಇಲ್ಲದ, ಮುಗ್ಧತೆಯೇ ಮುತ್ತಿಕೊಂಡಿರುವ ಪ್ರಶಾಂತವಾದ ಸ್ಥಳವದು. ಮೇಲೆ ಹೇಳಿದ ಅದೇ ಪುಟ್ಟ ಮನೆಯಲ್ಲಿ, ನಾನು ಕೂತು ಓದುತ್ತಿದ್ದೆ. ಮನೆಯ ಹಳೆಯ ಕಪಾಟಿನಲ್ಲಿ, ತುಂಬಿ ತುಳುಕಿ, ಇಡಲು ಜಾಗವಿಲ್ಲದೆ, ನನ್ನ ಆತ್ಮೀಯ ಸ್ನೇಹಿತರಾದ ಪುಸ್ತಕಗಳು ಬಿದ್ದುಕೊಂಡಿವೆ. ಅವು 'ನೀನು ನಿನ್ನ ಇಡೀ ಜನ್ಮಪೂರ್ತಿ ಓದಿದರು, ನಮ್ಮನ್ನು ಓದಿ ಮುಗಿಸಲು ಸಾಧ್ಯವಿಲ್ಲ'  ಎಂಬಂತೆ ಅಣಕಿಸುತ್ತಿದ್ದವು. ಯಾಕೋ ಸುಸ್ತಾದಂತೆ ಆಗಿ, ನಾನು ಎದ್ದು ನನ್ನ ಕೋಣೆಗೆ ಬಂದೆ, ಅಲ್ಲಿ ಬಂದು ನೋಡಿದಾಗ ಮನಸ್ಸಿಗೆ ಆನಂದವಾಯಿತು. ಯಾಕೆಂದರೆ ನನ್ನ ಕೋಣೆ ಪೂರ್ತಿ ಎಣ್ಣೆಯ ಬಾಟಲಿಗಳು, ಸಿಗರೇಟು ಪ್ಯಾಕುಗಳು ತುಂಬಿತ್ತು.
ಅಡುಗೆ ಕೋಣೆಯಲ್ಲಿ ನನ್ನ ಪ್ರೀತಿಯ ಹುಡುಗಿ ಅಡುಗೆ ಮಾಡುತ್ತಿದ್ದಳು. ನನ್ನ ತಾಯಿ ಮನೆಯ ಎದುರು ಕೂತು ಏನನ್ನೋ ಯೋಚನೆ ಮಾಡುತ್ತಿದ್ದರು. 
ಇದು ನನಗೆ ನಿನ್ನೆ ರಾತ್ರಿ ಬಿದ್ದ ಕನಸು, ನನಗೆ ಬಿದ್ದ ಕನಸ್ಸನ್ನು ಓದುಗರಿಗೆ ಹೇಳಿ ಬೋರು ಹೊಡೆಸುವ ಉದ್ದೇಶ ನನ್ನದಲ್ಲ. ಪ್ರತಿದಿನ ಅದೇ ಸುದ್ದಿಯೊಂದಿಗೆ ಗುದ್ದಾಡಿ, ಪದಗಳು ಸಿಗದೇ ನಲುಗಾಡಿ. ಇದ್ದವರನೆಲ್ಲ ಬೈದು, ಉಳಿದ ಕೆಲವರನ್ನು ಹೊಗಳಿ. ವ್ಯವಸ್ಥೆಯನ್ನು ದೂರಿ, ಬರೆದು ಬರೆದು ಸಾಕಾಯಿತು. ಇವತ್ತು ಏನಾದರು ಹೊಸತು ಬರೆಯೋಣ ಎನಿಸಿತು. ಅದಕ್ಕೆ ತಕ್ಕಂತೆ ನಿನ್ನೆ ನನಗೆ ಬಿದ್ದ ಕನಸು ಕೂಡ ಅದ್ಭುತವಾಗಿತ್ತು. ನನ್ನ ಕನಸನ್ನು ಪುನಃ ಒಂದು ಬಾರಿ ಓದಿಕೊಳ್ಳಿ, 'ಎಷ್ಟು ಚೆನ್ನಾಗಿದೆ' ಎಂದು ನಿಮಗೆ ಅನಿಸದೆ ಇರಲಾರದು. 
ಯಾವುದೋ ಒಂದು ದಟ್ಟ ಕಾಡಿನ ನಡುವೆ, ಪುಟ್ಟ ಮನೆಯ ಮಾಡಿ, ಮುದ್ದಿನ ಸಂಸಾರದ ಜೊತೆಗೆ ಜೀವನ ಮಾಡುವುದೆಂದರೆ ಅದು ಸ್ವರ್ಗವೇ ಅಲ್ಲವೇ? ಮನೆ ತುಂಬಾ ತುಂಬಿರುವ ಪುಸ್ತಕಗಳು, ಕುಡಿಯಲು ಬೇಕಾದಷ್ಟು ಎಣ್ಣೆ, ಸೇದಲು ಸಿಗರೇಟು ಇಷ್ಟಿದ್ದರೆ ಸಾಕಲ್ಲವೇ ಒಬ್ಬ ಬರಹಗಾರನಿಗೆ. ದಟ್ಟ ಕಾಡಿನ ನಡುವೆ ಪುಸ್ತಕಗಳನ್ನು ಓದಿಕೊಂಡು, ಏನನ್ನೋ ಧ್ಯಾನಿಸಿಕೊಂಡು, ಪ್ರಕೃತಿಯ ಜೊತೆ ಒಂದಾಗಿರುವುದು ಚಂದವಲ್ಲವೇ?
ನನಗಂತೂ ಈಗಿನ ಜೀವನದ ಜಂಜಾಟಗಳಿಂದ, ಕನಸಲ್ಲಿ ಕಂಡ ಲೋಕವೇ ಚೆನ್ನಾಗಿದೆ ಎನಿಸಿತು..
                                                -ಡಾ.ಶೆಟ್ಟಿ 
ಗೆಲ್ಲಲಿ ಭಾರತ
ಅಭೂತಪೂರ್ವ ಆಶಾವಾದ, ಸಹಸ್ರ ಹಾರೈಕೆ, ನೂರಾರು ಕನಸು ಮತ್ತೆ ಜಯದ ಮನಸ್ಸು. ಇವೆಲ್ಲಕ್ಕೆ ಪೂರಕ ಎಂಬಂತೆ, ಸಾರ್ವತ್ರಿಕ ಸಮತೋಲನ, ಸಂಘಟಿತ, ಸಂಘರ್ಷ ರಹಿತ ತಂಡ. ಇದಕ್ಕೂ ಮೀರಿ ಆಯಾಯ ವಲಯದಲ್ಲಿ ಸೂಕ್ಷ್ಮ ಅರ್ಥ ವ್ಯಾಪ್ತಿಯನ್ನು ಹೊಂದಿರುವ ಪ್ರತಿಯೊಬ್ಬ ಆಟಗಾರ. ಇದು ನಮ್ಮ ಈ ಸಾಲಿನ ವಿಶ್ವ ಕಪ್ ಸರಣಿಯ ಭಾರತ ತಂಡ.
ಗಂಗೂಲಿ, ನಾಯಕ ವಿಹೀನತೆಯ ಬಳಿಕ, ಕೇವಲ ಕಹಿ ಅನುಭವವನ್ನೇ ಅನುಭವಿಸಿದ ಭಾರತ ತಂಡ ಈ ಬಾರಿ ಪೂರ್ಣ ಪ್ರಮಾಣದಲ್ಲಿ ವಿಶ್ವ ಕಪ್ ಗೆದ್ದುಕೊಳ್ಳಲು ಸಜ್ಜಾಗಿದೆ. ಕಳೆದ ಪಂದ್ಯಗಳತ್ತ ಕಣ್ಣು ಹಾಯಿಸಿ ವಿಶ್ಲೇಷಣೆಗೆ ತೊಡಗಿದರೆ, ತಂಡ ಎಲ್ಲಾ ಸಮಸ್ಯೆಗಳನ್ನು ಮೀರಿ ಉತ್ತಮ ಫಲಿತಾಂಶವನ್ನೇ ಕಂಡಿದೆ. ಈ ಪರಿಪೂರ್ಣ ಗೆಲುವುಗಳು ಇಂದು ಶುರುವಾಗುವ ವಿಶ್ವಕಪ್ ಮೇಲೆ ಶೇ 100 ರಷ್ಟು ಪರಿಣಾಮ ಬಿದ್ದೇ ಬೀಳುತ್ತದೆ ಎನ್ನುವುದು ನಂಬಿಕೆ.
ಧೋನಿಯಿಂದ ತೊಡಗಿ ಶ್ರೀಶಾಂತ್ ವರೆಗೆ ಎಲ್ಲರೂ ಗೆಲುವಿನ ಹಸಿವಿನಲ್ಲಿ ಬೇಯುತ್ತಿದ್ದು, ವಿಶ್ವಕಪ್ Ikon ಎಂದೇ  ಕರೆಯಲ್ಪಡುವ ಸಚಿನ್ ಮತ್ತೆ ಯಾವತ್ತಿನಂತೆ ತಮ್ಮ ರನ್ ಹಸಿವೆಯನ್ನು ಜಾಸ್ತಿ ಮಾಡಿಕೊಂಡಿದ್ದಾರೆ. ಇವೆಲ್ಲವೂ ತಂಡಕ್ಕೆ ಡಬಲ್ + ಆಗಲಿದೆ.ಇದೆಲ್ಲವನ್ನೂ ಗಮನಿಸಿ, ನಾವು ಹಿಂದೆಗೂ ಇಂದಿಗೂ ಇತರ ತಂಡಕ್ಕೂ ತಾಳೆ ಹಾಕಿ ನೋಡಿದಾಗ ನಮ್ಮ ತಂಡ ಈ ಬಾರಿಯ ವಿನ್ನಿಂಗ್ ಫೇವರಿಟ್. ಸೊ ಈ ಬಾರಿ ದೇಶ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆ ತಂಡಕ್ಕೆ ಹಾಗು ಅಭಿಮಾನಿಗಳಿಗೆ ಬಹಳವಾಗಿ ಇದೆ. ಆದರೂ ಕೆಲವೊಮ್ಮೆ ಎಡವುದು ಮಾಮೂಲು. ಈ ಬಾರಿ ಈ ರೀತಿ ಆಗದೆ ತಂಡ  ಕಪ್ ತೆಗೆದುಕೊಳ್ಳಲಿ ಎಂದು ಹೃದಯ ಪೂರ್ವಕವಾಗಿ ಆಶಿಸೋಣ.
                                              -ಡಾ.ಶ್ರೇ 
ಅಂತಿಮ ಉಪನ್ಯಾಸ 
ನನಗೆ ನನ್ನ ಸಾವು ಯಾವಾಗ ಬರುತ್ತದೆ ಎಂದು ತಿಳಿಯುತ್ತಿದ್ದರೆ ಚೆನ್ನಾಗಿರುತ್ತಿತ್ತು! ಆ counting ದಿನಗಳು ಜೀವನದ ಮಹೋನ್ನತ ಕಾರ್ಯಕ್ಕೆ ಎಡೆಮಾಡಿಕೊಡುತ್ತಿತ್ತು. ಎನ್ನುವುದು ನನ್ನ ಭಾವನೆ. ಹೀಗೆ ಅನಿಸಲು ಕಾರಣ Randy pausch ರವರ ಅಂತಿಮ ಉಪನ್ಯಾಸ (last lecture) ಓದಿದ ಬಳಿಕ. 
ಇವರು ಜಠರದ  ಹುಣ್ಣುಗಳಿಂದ ತತ್ತರಿಸಿ ಸಾವು ಇನ್ನೂ 6 ತಿಂಗಳ ಒಳಗೆ ಬರುವುದು ಖಚಿತವಾಗಿತ್ತು. ಇದಾದ ಬಳಿಕ ನಂತರದ ದಿನಗಳಲ್ಲಿ ಒಂದು ಉಪನ್ಯಾಸ ಕರೆ ಬಂದಿತ್ತು. ಅದು ಅವರ ಅಂತಿಮ ಉಪನ್ಯಾಸ. ಆ ಉಪನ್ಯಾಸವು ಪ್ರತಿಯೊಬ್ಬನ ಜೀವನಕ್ಕೂ ಮಾದರಿಯಾಗುವ ರೀತಿಯಲ್ಲಿ ಮೂಡಿ ಬಂದಿದೆ. 
ತುಂಬಾ ಚಿಕ್ಕ ಮಕ್ಕಳನ್ನು ಹೊಂದಿದ್ದ ಇವರು ಈ ಅಂತಿಮ ಉಪನ್ಯಾಸದ ಮೂಲಕ ಜೀವನ, ಸಮಯ ಮತ್ತು ಹೇಗೆ ಬಾಳಿ ಬದುಕಿ ಸಾಧಿಸಬೇಕು ಎಂಬುವುದರ ಬಗ್ಗೆ ಸವಿಸ್ತಾರವಾಗಿ ಬಿಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಮಕ್ಕಳಿಗೆ ಈ ಉಪನ್ಯಾಸ ಉತ್ತಮ ಜೀವನಕ್ಕೆ ಸಾಕ್ಷಿಯಾಗುವುದರಲ್ಲಿ ಸಂಶಯವಿಲ್ಲ. ಉತ್ತಮ ಸಾಧನೆಯನ್ನು ಬಯಸುವ ಬದುಕಿಗೆ ಸಮಯ ಕ್ಷಣಿಕ ಎಂದು ಕಂಡು ಬರುತ್ತದೆ. ಪ್ರತಿಯೊಬ್ಬನ ಜೀವನದಲ್ಲೂ ಎಂದಾದರು ಸಮಯ ಕ್ಷಣಿಕ ಎಂಬ ಭಾವನೆ ಬಂದೇ ಬರುತ್ತದೆ. ಈ ಮಾತು ನೂರಕ್ಕೆ ನೂರು ಸತ್ಯ . 
ಭರವಸೆಯೊಂದಿಗೆ, ಆತ್ಮವಿಶ್ವಾಸ ಬೆಳೆಸಿಕೊಂಡು ರೋಗದ ಗುರುತೇ ಸಿಗದಂತೆ ಬಾಳಿದ ವ್ಯಕ್ತಿ Randy. ತಮ್ಮ ಅಂತಿಮ ಉಪನ್ಯಾಸದಲ್ಲಿ ಅವರು, ಏನಾದರು ಸಾಧಿಸ ಬೇಕು ಎಂಬ ಮಹಾತ್ವಾಕಾಂಕ್ಷೆ ಹೊಂದಿದವರಿಗೆ ಒಳ್ಳೆಯ ಆಶಾ ಭಾವನೆಯನ್ನು ಒದಗಿಸಿದ್ದಾರೆ. 
ಒಬ್ಬ ಉತ್ತಮ ಫುಟ್ಬಾಲ್  ಆಟಗಾರನಾಗಲು ಆಸೆ ಪಡುವವರು ಮೊದಲು ಚೆಂಡನ್ನು ಕೇಳಬಾರದು, ಆಟ ಆಡುವ ನಿಗದಿತ ಸಮಯದಲ್ಲಿ  ಓರ್ವನ ಬಳಿ ಚೆಂಡಿರುತ್ತದೆ. ಉಳಿದ ಆಟಗಾರರು ಆ ಸಮಯದಲ್ಲಿ ಏನು ಮಾಡುತ್ತಾರೆ  ಎಂಬುವುದನ್ನು ಮೊದಲು  ಕಲಿಯಬೇಕು. ಅಂದರೆ ನಾವು ಮೂಲವನ್ನು ಶೋಧಿಸುವ ಅಗತ್ಯವಿದೆ. 
ಕೇವಲ Randy ಅವರನ್ನು ನಮ್ಮ ಬದುಕಿಗೆ ಅಳವಡಿಸಿಕೊಂಡರೆ ಸಾಧನೆಯ ಮೊದಲ ಮೆಟ್ಟಿಲನ್ನು ಹತ್ತಬಹುದು.
ಸಮಯಾವಕಾಶವನ್ನು ಮಾಡಿಕೊಂಡು the last lecture ಪುಸ್ತಕವನ್ನು ಓದಿ. ತಮಗೆ ಪುಸ್ತಕ ದೊರೆಯದೆ ಹೋದ ಸಂಧರ್ಭದಲ್ಲಿ 8105975357 ಈ ನಂಬರ್ ಗೆ ಕರೆ ಮಾಡಿ. newyorker times ತಂಡ ಒದಗಿಸುವ ವ್ಯವಸ್ಥೆಯನ್ನು ಮಾಡುತ್ತದೆ.
                                                 -ಕೆ.ಪಿ.ಭಟ್  

Thursday, February 17, 2011

ಜಾನ್- ಬಿಪಾಶ Break up!
ಅವರಿಬ್ಬರು ಅಮರ ಪ್ರೇಮಿಗಳು, ಅವರ ಪ್ರೀತಿಗೆ ಸರಿ ಸುಮಾರು 10 ವರ್ಷಗಳೇ ಸಂದಿವೆ. ಬಾಲಿವುಡ್ ನ  ಯಾವುದೇ ಪಾರ್ಟಿ ಇರಲಿ, ಯಾವುದೇ ಚಿತ್ರದ ಸಂಗೀತ ಬಿಡುಗಡೆ ಇರಲಿ, ಬಾಲಿವುಡ್ಡಿನ ಯಾವುದೇ ಸಮಾರಂಭಗಳಲ್ಲಿ ಇವರಿಬ್ಬರು ಜೊತೆಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಬಾಲಿವುಡ್ಡಿನಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಪ್ರೇಮ ಕಥೆಗಳಿಗಿಂತ, ಇವರ ಪ್ರೇಮ ಕಥೆ ತೀರಾ ವಿಭಿನ್ನವಾದದ್ದು.ಯಾಕೆಂದರೆ ಬಾಲಿವುಡ್ ಎಂಬ ರಂಗು-ರಂಗಿನ ದುನಿಯಾದಲ್ಲಿ, 1 ದಶಕಗಳ ಕಾಲ ಒಬ್ಬನ(ಳ) ಜೊತೆಯಲ್ಲೇ ಕಾಲ ಕಳೆಯುದು ಎಂದರೆ ಅಸಾಧ್ಯವೇ! ಆದರೆ ಜಾನ್ ಅಬ್ರಹಾಂ ಮತ್ತು ಬಿಪಾಶ ಬಸು ಇದನ್ನು ಮಾಡಿ ತೋರಿಸಿದ್ದರು.
ಆದರೆ ಅದ್ಯಾರ ಕೆಟ್ಟ ದೃಷ್ಟಿ ಇವರ ಮೇಲೆ ಬಿತ್ತೋ ಗೊತ್ತಿಲ್ಲ, ಇವರಿಬ್ಬರು ಈಗ ಬೇರೆ-ಬೇರೆಯಾಗಿದ್ದಾರೆ. ಎಷ್ಟೋ ವರ್ಷದಿಂದ ಜನರು ಕುತೂಹಲದ ಕಣ್ಣಿನಿಂದ ನೋಡುತ್ತಿದ್ದ ಇವರ ಪ್ರೇಮ ಕಥೆಗೆ ಕೊನೆಗೂ ಪೂರ್ಣವಿರಾಮ ಬಿದ್ದಿದೆ.
ಬಾಲಿವುಡ್ಡಿನಲ್ಲಿ ಪ್ರೀತಿ ಹುಟ್ಟುವುದು, ನಂತರ ಬಿಟ್ಟು ಹೋಗುವುದು ಸಾಮಾನ್ಯ ಸಂಗತಿಯೆನ್ನಿ. ಯಾರು, ಯಾರನ್ನು, ಯಾವಾಗ ಪ್ರೀತಿಸುತ್ತಾರೆ, ಅದ್ಯಾವಾಗ ಬಿಟ್ಟು ಹೋಗುತ್ತಾರೆ ಎನ್ನುವುದು ಗೊತ್ತೇ ಆಗುವುದಿಲ್ಲ! 
ಆದರೆ ಜಾನ್-ಬಿಪಾಶ ಪ್ರೀತಿ ತುಂಬಾ ಹಳೆಯದು, ತುಂಬಾ ಗಾಢವಾದದ್ದು ಎಂಬ ಅಭಿಪ್ರಾಯ ಎಲ್ಲರಲ್ಲೂ ಇತ್ತು. ಇದರ ಜೊತೆಗೆ ಈ ಜೋಡಿ ಲಿವಿಂಗ್-ಟುಗೆದರ್ ಸಂಬಂಧ ಹೊಂದಿತ್ತು. ಆದರೆ ಇವರ ಪ್ರೀತಿ ಅಂತ್ಯವಾದದ್ದು ಮಾತ್ರ ಕ್ಷುಲ್ಲಕ ಕಾರಣಕ್ಕಾಗಿ. ಬಿಪಾಶ  ಜಾನ್ ನ ಬಳಿ ಮದುವೆಯಾಗುವಂತೆ ಒತ್ತಾಯಿಸಿದಳಂತೆ, ಪ್ರತಿ ದಿನ ಅದೇ ಮುಖ ನೋಡಿ ನೋಡಿ ಸಾಕಾಗಿ ಹೋಗಿತ್ತೋ ಏನೋ, ಜಾನ್ ಅದನ್ನು ನಿರಾಕರಿಸಿದ. ಅಲ್ಲಿಗೆ ಇವರಿಬ್ಬರ ಪ್ರೀತಿಯ ಸುಂದರಕಾಂಡ ಮುಗಿಯಿತು. ಈಗ ಇಬ್ಬರು 'ನಾನೊಂದು ತೀರ, ನೀನೊಂದು ತೀರ'. 
ಒಟ್ಟೊಟ್ಟಿಗೆ ಪಾರ್ಟಿಗಳಿಗೆ ಹೋಗುತ್ತಿದ್ದವರು, ಈಗ ಬೇರೆ-ಬೇರೆಯಾಗಿ ಪಾರ್ಟಿ attend ಮಾಡುತ್ತಿದ್ದಾರಂತೆ. ಒಂದೇ flat ನಲ್ಲಿ ವಾಸಿಸುತ್ತಿದ್ದವರು, ಈಗ ಬೇರೆ-ಬೇರೆ ಗೂಡು ಸೇರಿಕೊಂಡಿದ್ದಾರೆ. 
ಏನೇ ಆಗಲಿ ಬಾಲಿವುಡ್ಡಿನ 'ಜಾದು ಹೆ ನಶಾ ಹೆ' ಜೋಡಿ ಈಗ 'ತಡಪ್ ತಡಪ್ ಸೆ, ಇಸ್ ದಿಲ್ ಸೆ ಆಗ್ ನಿಕಾಲ್ತಿ ರಹೀ' ಹಾಡು ಗುನುಗುತ್ತಿದೆ. ಛೆ! ಹೀಗಾಗಬಾರದಿತ್ತು ಪಾಪ!
ಹಾಗೇ ಸುಮ್ಮನೆ- ನಮ್ಮ ಉಮೇಶ, ಬಿಪಾಶನಿಗೆ ಬಾಳು ಕೊಡಲು ready ಇದ್ದಾನೆ. ಆದರೆ ಬಿಪಾಶ, ಜಾನ್ ಗೆ ಕೊಟ್ಟ 6 ಲಕ್ಷದ ಬೈಕ್ ಅನ್ನು, ಉಮೇಶನಿಗೆ ಕೊಡಬೇಕಂತೆ.
                                                   -ಡಾ.ಶೆಟ್ಟಿ  
ಈಜಿಪ್ಟ್ ನಿಂದ ಇತರೆಡೆಗೆ 
30 ವರ್ಷದ ಧೀರ್ಘ ಸರ್ವಾಧಿಕಾರಿ, ಈಜಿಪ್ಟ್ ನ ಹೋಸ್ನಿ ಮುಬಾರಕ್ ಪ್ರಜೆಗಳ ಬ್ರಹತ್ ಒತ್ತಾಯದ ಮೇರೆಗೆ ಪದತ್ಯಾಗಕ್ಕೆ ಮಣಿದು ರಾಜಿನಾಮೆ ನೀಡಿ ಬಿಟ್ಟರು. ಅಲ್ಲಿನ ಪ್ರಜೆಗಳ ನಿರಂತರ ಹೋರಾಟದ ಪರಿಣಾಮವೇ ಇಂತಹ ಉತ್ತಮ ಬದಲಾವಣೆಗೆ ನಾಂದಿ. 
ಪ್ರಜಾಪ್ರಭುತ್ವವೇ ವಿಶ್ವದಾಧ್ಯಂತ ಚಾಲ್ತಿಯಲ್ಲಿರಬೇಕು ಎನ್ನುವ ನೈತಿಕ ಬುದ್ದಿವಂತರ ನಡುವೆ, ಇನ್ನೂ ಹಲವು ರಾಷ್ಟ್ರಗಳಲ್ಲಿ ಸರ್ವಾಧಿಕಾರ ಸಾಂಗವಾಗಿ ಮೆರೆಯುತ್ತಿದೆ. ಇಂತಹ ರಾಷ್ಟ್ರಗಳಲ್ಲಿ ಈಜಿಪ್ಟ್ ಒಂದಾಗಿತ್ತು. ಈಗ ಜನರ ತೀವ್ರ ಹೋರಾಟದ ನಡುವೆ ಪರಿಸ್ಥಿತಿ ಬದಲಾಗಿದೆ. ವಿಷಯ ಇಷ್ಟೇ ಆಗಿದ್ದರೆ ಬಹಳಷ್ಟು ಸಂತಸ ಪಡಬೇಕಾದ ಅವಶ್ಯಕತೆ ಇರಲಿಲ್ಲ. ಆದರೆ, ಅಲ್ಲಿನ ತೀವ್ರ ಹೋರಾಟದ ಬಿಸಿ ಈಗ ಮಧ್ಯಪ್ರಾಚ್ಯದ ಇನ್ನಿತರ ರಾಷ್ಟ್ರಗಳಿಗೂ ತಾಗಿರುವ ಹಿನ್ನೆಲೆಯಲ್ಲಿ ಅಲ್ಲೂ ಈಗ ಹೋರಾಟಕ್ಕೆ ಅಖಾಡ ಸಿದ್ದವಾಗಿದೆ. 
ಬಹರೇನ್, ಇರಾನ್, ಯಮನ್, ಲಿಬಿಯಾದಲ್ಲಿ ಸರ್ವಾಧಿಕಾರವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ, ಬುಧವಾರ ಪ್ರತಿಭಟನೆ ತೀವ್ರಗೊಂಡಿದೆ. ಬಹರೇನ್ ನ ದೊರೆ ಶೇಖ್ ಹಮಾದ್ ಬಿನ್ ಇಶಾ ಆಲ್- ಖಲೀಫಾ ಹಾಗು 33 ವರ್ಷಗಳಿಂದ ಅಧಿಕಾರದಲ್ಲಿಯೇ ಜಡ್ಡು ಹಿಡಿದ ಸೂಳೆ ಹುಳದಂತೆ ಅಂಟಿಕೊಂಡಿರುವ ಯಮನ್ ನ ಅಧ್ಯಕ್ಷ, ಅಲಿ ಅಬ್ದುಲ್ಲಾ ಸಲೆಹ್ ತರ ತರ ನಡುಗಲು ಪ್ರಾರಂಭಿಸಿದ್ದಾರೆ. 
ಅಂತೂ ಈಜಿಪ್ಟ್ ನ  ಅಗತ್ಯ ಹೋರಾಟದ ಫಲವಾಗಿ ಮಧ್ಯ ಪ್ರಾಚೀಯರು ಎಚ್ಚೆತ್ತು ಕೊಂಡಿದ್ದಾರೆ. ಇವರ ಈ ಹೋರಾಟ, ಗುರಿ ಮುಟ್ಟುವವರೆಗೆ ಯಾವುದೇ ಅಡೆ ತಡೆಗೆ ಬಗ್ಗದೆ ಸಾಂಗವಾಗಿ ಸಾಗಿ ಸರ್ವಾಧಿಕಾರ ಪರಂಪರೆ ಕೊನೆಗೊಂಡರೆ, ಪ್ರತಿ ವ್ಯಕ್ತಿ ಅಸ್ಥಿತ್ವ ಎಂಬ ಹೊಸ ಪರಂಪರೆಯತ್ತ ವ್ಯವಸ್ಥೆ ತೆರೆದುಕೊಂಡು ನಿರ್ಮಲ ಮತ್ತು ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯವಾಗುವುದರಲ್ಲಿ ಸಂಶಯವಿಲ್ಲ.
The great ಮಹಮ್ಮದ್    
ಪ್ರವಾದಿ ಮಹಮ್ಮದ್ ರ ಬಗ್ಗೆ ಜಗತ್ತಿನಾಧ್ಯಂತ ನಡೆಯುತ್ತಿರುವ ಅವಹೇಳನಗಳು ಅಪ ಪ್ರಚಾರ ಏನೆ ಆಗಿರಬಹುದು, ಅವರುಗಳು ಮಹಮ್ಮದರ ಜೀವನ ಮತ್ತು ನಡೆದು ಬಂದ ಹಾದಿಯ ಬಗ್ಗೆ ತಿಳಿಯುವುದು ಬಹಳವಿದೆ ಮತ್ತು ಅಗತ್ಯವಿದೆ. 
ಪ್ರವಾದಿ ಮಹಮ್ಮದರ ಬಾಲ್ಯವನ್ನು ತಿಳಿದವರು ಯಾರೂ ಅವರ ಬಗ್ಗೆ ಕೇವಲವಾಗಿ ಮಾತನಾಡುವುದಿಲ್ಲ. ಅಜ್ಞಾನ ತಲೆಗೆ ಅಂಟಿ ಹೋದವರು ಇಂತಹ ಅನಂತ ವ್ಯಕ್ತಿತ್ವವನ್ನು ಕೀಳಾಗಿ ಕಾಣುವುದು ಸರ್ವೇ ಸಾಮಾನ್ಯ. 
ಇವರ ಬಾಲ್ಯ ಕಣ್ಣಲ್ಲಿ ನೀರು ಸುರಿಸುವಂತದ್ದು. ಅತಿ ಬೇಗನೆ ತಂದೆ ತಾಯಿಯನ್ನು ಕಳಕೊಂಡ ಇವರ ಬದುಕಿನ ಭವಣೆ ಹೇಳ ತೀರದು. ಭವಿಷ್ಯ ವಾಣಿ ನುಡಿಯುವವರು ಇವರನ್ನು ಕಂಡೊಡನೆ ಇವರ ಶ್ರೇಷ್ಟತೆಯನ್ನು ಅರಿಯುತ್ತಿದ್ದರು. 
ಹೋದಲೆಲ್ಲಾ ಪವಾಡದ ರೀತಿಯ ಛಾಪನ್ನು ಇವರು ಹೊಮ್ಮಿಸಿದ್ದಾರೆ. ಇದಕ್ಕೆಲ್ಲಾ ಮೀರಿದ ಅವರ ಮನದ ಹತೋಟಿಯನ್ನು  ಮೆಚ್ಚುವಂತಹದ್ದು  ಯಾಕೆಂದರೆ, ಮಧ್ಯಪಾನ ಮತ್ತು ವೇಶ್ಯಾವಾಟಿಕೆ ಗಳೇ ತುಂಬಿ ಪಾಪ ಕೂಪದಲ್ಲಿ ಬಿದ್ದು ಜನರು ಹೊರಳುತ್ತಿದ್ದ ಸಂದರ್ಭದಲ್ಲಿ ಪ್ರತ್ಯೇಕವಾಗಿ ತನ್ನದೇ ಚಿಂತನೆಯಲ್ಲಿ ತೊಡಗಿದ್ದ  ವ್ಯಕ್ತಿ ಇವರು. 
ಯಾರೇ ಆಗಲಿ ತಾನು ತನ್ನದು ಶ್ರೇಷ್ಠ ಎನ್ನುವ ಮುಂಚೆ ಈ ರೀತಿಯ ವ್ಯಕ್ತಿತ್ವವನ್ನು ಪರಿಚಯ ಮಾಡಿಕೊಳ್ಳವ ಅಗತ್ಯವಿದೆ. ಪ್ರತಿಯೊಬ್ಬನ ಮನಸ್ಸಿನಲ್ಲಿ ಮೂಡ ಬೇಕಾದ ಮನಶಕ್ತಿ ಇವರು.
                                                                ಕೆ.ಪಿ. ಭಟ್    

Tuesday, February 15, 2011

ತಂಬಾಕು ರಹಿತ ಕ್ಯಾಂಪಸ್ 
ಇನ್ನು ಒಂದು ವಾರದೊಳಗೆ, ಶಾಲಾ ಕಾಲೇಜು ಆವರಣದಲ್ಲಿ ತಂಬಾಕು ಉತ್ಪನ್ನಗಳು ದೊರೆಯುವುದಿಲ್ಲ. ಹಿಂದೆ ಒಮ್ಮೆ ಇದೇ ರೀತಿಯ ಆದೇಶ ಬಂದು ನಂತರ ಟುಸ್ ಆಗಿತ್ತು. ಆದರೆ ಈ ಬಾರಿ ಹೈಕೋರ್ಟ್, ಆದೇಶ ನೀಡಿರುವುದರಿಂದ ಈ ಆದೇಶವು ಕಟ್ಟುನಿಟ್ಟಾಗಿ ಪಾಲನೆಯಾಗುವ ಲಕ್ಷಣ ಕಾಣುತ್ತಿದೆ.
ಹೈಕೋರ್ಟಿನ ಹೊಸ ಆದೇಶದ ಪ್ರಕಾರ, ಶೈಕ್ಷಣಿಕ ಸಂಸ್ಥೆಯಿಂದ 100 ಮೀಟರ್ ಆವರಣದಲ್ಲಿ ತಂಬಾಕು ಉತ್ಪನ್ನಗಳ ಮಾರಟಕ್ಕೆ ಕಡಿವಾಣ ಹಾಕಬೇಕು ಮತ್ತು 'ತಂಬಾಕು ಮಾರಾಟ ನಿಷೇದ' ಎಂಬ ನಾಮಫಲಕ ಹಾಕಬೇಕು ಎಂಬ ಸೂಚನೆ ನೀಡಿದೆ. ಇದರ ಜೊತೆಗೆ ಈ ಆದೇಶವನ್ನು ಉಲ್ಲಂಘಿಸಿದರೆ, ಆ ಶೈಕ್ಷಣಿಕ ಸಂಸ್ಥೆಯ ಮಾನ್ಯತೆಯನ್ನು ರದ್ದುಗೊಳಿಸುವ ಎಚ್ಚರಿಕೆಯನ್ನು ಕೂಡಾ ನೀಡಿದೆ.
ಹೈಕೋರ್ಟಿನ ಈ ಕ್ರಮದಿಂದಾಗಿ, ಒಂದು period ಆದ ಕೂಡಲೇ ಹೊರಗೆ ಬಂದು ದಮ್ ಎಳೆಯುತ್ತಿದ್ದವರು; ಕೈಗೆ ಸಿಕ್ಕಿದ ಗುಟ್ಕಾ ಜಗಿದುಕೊಂಡು, ಅದನ್ನು ಸಿಕ್ಕ ಸಿಕ್ಕಲ್ಲಿ ಉಗಿಯುತ್ತಿದ್ದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವುದರಲ್ಲಿ ಅನುಮಾನವಿಲ್ಲ.ಕೆಲ ಉಪನ್ಯಾಸಕರು ಕೂಡಾ ತೊಂದರೆ ಅನುಭವಿಸಬಹುದು ಪಾಪ!
ಹೈಕೋರ್ಟ್ ಈ ಆದೇಶ ನಿಜಕ್ಕೂ ಪರಿಣಾಮಕಾರಿಯಾಗಿದೆ. ಇದರಿಂದಾಗಿ ಕೆಲ ವಿದ್ಯಾರ್ಥಿಗಳಾದರು ದುಶ್ಚಟಗಳ ದಾಸರಾಗುವುದು ತಪ್ಪಬಹುದು. ಯಾಕೆಂದರೆ 'ತನ್ನ ಗೆಳೆಯ ಸಿಗರೇಟು ಸೇದುತ್ತಾನೆ.ತಾನು ಸೇದಿದರೆ ಏನು ತಪ್ಪು?' ಎಂಬ ಮನಸ್ಥಿತಿಯಲ್ಲಿ ದುಶ್ಚಟಗಳಿಗೆ ಬಲಿಯಾಗುವ ವಿದ್ಯಾರ್ಥಿಗಳು ಬಹಳಷ್ಟಿದ್ದಾರೆ.
ಹೈಕೋರ್ಟಿನ ಈ ಕ್ರಮದಿಂದಾಗಿ ಕಾಲೇಜಿನ ಪಕ್ಕದ ಗೂಡಂಗಡಿಗಳಲ್ಲಿ ಹೊಗೆ ಏಳುವುದು ತಪ್ಪಬಹುದು ಅಲ್ಲವೇ?
ಹಾಗೇ ಸುಮ್ಮನೆ - '24 ಗಂಟೆ kick ನಲ್ಲಿ ಇರಬೇಕು' ಎಂಬ ಮನೋಭಾವದ ಉಮೇಶ, ತಂಬಾಕು ನಿಷೇದದಿಂದಾಗಿ ಬೇಜಾರಾಗಿದ್ದಾನೆ. ಆದರೆ  ಇನ್ನು ಮುಂದೆ ಸಿಗರೇಟು ಬಿಟ್ಟು, ಕಾಲೇಜಿಗೆ ವಾಟರ್ ಕ್ಯಾನಿನಲ್ಲಿ, ಎಣ್ಣೆ ಕೊಂಡೊಯ್ಯಬೇಕು ಎನ್ನುತ್ತಿದ್ದಾನೆ.
                                                     -ಡಾ.ಶೆಟ್ಟಿ   
ಸೋತವರು 
ಕೊನೆಗೂ ನಮ್ಮ ಪಕ್ಷೇತರು ಪಕ್ಕೆ ಮುರಿದುಕೊಂಡು ಬಿಟ್ಟಿದ್ದಾರೆ. ಅಂದು ತಾರಕಕ್ಕೇರಿದ ರಾಜಕೀಯ ತೆವಲಿನ ಸಮಯದಲ್ಲಿ ಮುಖ್ಯಮಂತ್ರಿಗಳ ವಿರುದ್ದ ದೂರು ಹಾಗೂ ಸರಕಾರ ಬೀಳಿಸಲು ಪ್ರಯತ್ನ ಮಾಡಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ವಿಧಾನ ಸಭಾ ಸದಸ್ಯತ್ವದಿಂದ ಸಭಾಪತಿ ಅಂದು ಐವರು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ್ದಾರೆ.
ಇದನ್ನು ಪ್ರಶ್ನಿಸಿ ಹೈ ಕೋರ್ಟ್ ಮೆಟ್ಟಿಲೇರಿದ ಪಕ್ಷೆತರರಿಗೆ, ಹೈ ಕೋರ್ಟ್ ತಮ್ಮ ಪರ ತೀರ್ಪು ನೀಡುವುದು ಎಂದು ಆತ್ಮವಿಶ್ವಾಸದಿಂದ ಬೀಗಿದ್ದರು. ಆದರೆ ನಿನ್ನೆ ಹೊರಬಂದ ತೀರ್ಪಿನಲ್ಲಿ, ಕೋರ್ಟ್ ವಿಧಾನ ಸಭಾ ಅಧ್ಯಕ್ಷರ ನಿಲುವನ್ನು ಸ್ಪಷ್ಟವಾಗಿ ಬೆಂಬಲಿಸಿದೆ. ತುಲನಾತ್ಮಕವಾಗಿ, ತಳ ಸ್ಪರ್ಶವಾಗಿ ಇದನ್ನು ಗಮನಿಸಿದರೆ, ತೀರ್ಪು ಸರಿ ಎಂದು ಅನಿಸಿಬಿಡುತ್ತದೆ. 5 ವರ್ಷಗಳ ಕಾಲ ಆಡಳಿತ ನಡೆಸಲು ಜನ ಒಪ್ಪಿಗೆ ಕೊಟ್ಟ ಮೇಲೆ ಒಂದು ಪಕ್ಷ 5 ವರ್ಷ ಆಡಳಿತ ನಡೆಸಿದರೆ ಎಲ್ಲರಿಗೂ ಒಳಿತು. ಇಲ್ಲವಾದರೆ, ಮತ್ತೆ ರಾಜ್ಯದ ಬೊಕ್ಕಸವೇ ಹಾಳಾಗುವುದು. ಒಂದು ಚುನಾವಣೆ ಎಂದರೆ ಅದೆಷ್ಟು ದುಡ್ಡು ಖರ್ಚಾಗುತ್ತದೆ ಎಂದರೆ, ಅದು ಹೇಳಿ ಸುಖವಿಲ್ಲ. 
ಈ ಹಿನ್ನೆಲೆಯಲ್ಲಿ ಕೇವಲ 10 -16  ಶಾಸಕರಿಂದ ಇಡೀ ಸರಕಾರ ಉಳಿಯುವುದು-ಉರುಳುವುದು ಎಂದರೆ ಇದು ರಾಜಕೀಯ ದುರಂತ. ಇದನ್ನು ಗಮನಿಸಿದರೆ ತೀರ್ಪು ನಿಜವಾಗಿಯೂ ಸಮಂಜಸವಾಗಿದೆ. ಆದರೆ ಈ ತೀರ್ಪನ್ನು ಬದಿಗಿಟ್ಟು ನಾವು ಇಡೀ ಬೆಳವಣಿಗೆಯನ್ನು ಗಮನಿಸಿದರೆ, ಈ ಅನರ್ಹತೆಯ ಕಥೆಯ ಭಾಗ-1 (ಹೈ ಕೋರ್ಟ್), ಭಾಗ-2 (ಸುಪ್ರೀಂ ಕೋರ್ಟ್) ಎಪಿಸೋಡುಗಳಿಂದ ಬಡವಾಗುವುದು, ಅವರು ಗೆದ್ದ ಕ್ಷೇತ್ರ ಮತ್ತು ಕ್ಷೇತ್ರದ ಜನತೆ. ಯಾವತ್ತೂ ಹೀಗೆಯೇ, ರಾಜಕೀಯದಲ್ಲಿ ಯಾರಿಗೆ ಲಾಭವಾದರೂ ಯಾರಿಗೆ ನಷ್ಟವಾದರೂ ಬೇಸತ್ತ ಭಾವ ಮಾತ್ರ ಜನತೆಗೆ ಮುಡಿಪು.
                                           -ಡಾ.ಶ್ರೇ 
ಬರೇ ಲಂಚ 
ಲಂಚದ ಅವತಾರ ಆರಂಭ ಎಲ್ಲಿಂದ? ಅದು ನಮ್ಮ ಹುಟ್ಟಿನಿಂದ ಶುರುವಾಗುತ್ತದೆ ಎಂದರೆ ನಂಬುತ್ತೀರಾ? ಮಗು ಹುಟ್ಟಿದಾಗ ಅದನ್ನು ನೋಡಲು ಬರುವ ಮಂದಿ ಮಗುವಿನ ಕೈಯಲ್ಲಿ ತೂರಿಸುವ ನೋಟುಗಳಿಗೆ ಏನೆಂದು ಕರೆಯಬಹುದು? ಈ ಪದ್ಧತಿ ಸಂಪ್ರದಾಯವಾಗಿದ್ದರು, ಒಂದು ರೀತಿಯ ಸ್ವಾರ್ಥದ ಪರಿಯಲ್ಲಿ ನಡೆದು ಹೋಗುತ್ತದೆ.
ವೇದ ಪುರಾಣಗಳಲ್ಲಿ ಲಂಚದ ಎಷ್ಟೋ ಹಗರಣಗಳನ್ನು ನೋಡಬಹುದು. ಲಂಚ ಹೀಗೆ ಇರಬೇಕೆಂಬ ನಿರ್ದಿಷ್ಟ ನಿಲುವಿಲ್ಲ. ರಾಜನು ತನ್ನ ರಾಜ್ಯದ ಯಾವುದಾದರು ಹುಡುಗಿಯನ್ನು ಇಷ್ಟಪಟ್ಟರೆ ಅವಳ ಜೊತೆ ತನ್ನ ದಾಹ ತೀರಿಸಲು ಆಕೆಯ ಮನೆಮಂದಿಗೆ ಕೊಡುವುದೇನು?  ಆಸ್ತಿ! ಇದು ಕೂಡಾ ಲಂಚದ ಸ್ವರೂಪವಲ್ಲವೇ?
ಈ ನಿಟ್ಟಿನಲ್ಲಿ ಏನೇ ಕಾನೂನು ಬಂದರೂ ತನ್ನ ಕೆಲಸ ಕಾರ್ಯಕ್ಕಾಗಿ, ಲಂಚ ಕೊಡುವ ಮಂದಿ ಹೆಚ್ಚು.  ಆ ಬಗ್ಗೆ ಯಾರೇ ಎಷ್ಟೇ ಭಾಷಣ ಮಾಡಿದರೂ ತಮ್ಮ ಸ್ವಾರ್ಥಕ್ಕಾಗಿ ಲಂಚದಾಟ ನಡೆಯುತ್ತಲೇ ಇರುತ್ತದೆ. 
                                                       -ಕೆ.ಪಿ.ಭಟ್ 

Monday, February 14, 2011

ಜೈ ಹೋ!
ನಿನ್ನೆ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ ರೋಚಕ ಜಯ ಗಳಿಸಿದೆ. ಗೆಲುವಿನ ಹತ್ತಿರ ಹತ್ತಿರ ಹೋಗಿದ್ದ ಆಸ್ಟ್ರೇಲಿಯಾ ಕೊನೆಯ ಹಂತದಲ್ಲಿ ಮುಗ್ಗರಿಸಿತು. ಭಾರತದ ಈ ಗೆಲುವು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ನಿನ್ನೆ ನಡೆದ ಪಂದ್ಯವನ್ನು ಕಂಡಾಗ, ಈ ಬಾರಿ ಭಾರತ ವಿಶ್ವಕಪ್ ಗೆಲ್ಲುತ್ತದೆ ಎಂಬ ನಂಬಿಕೆ ಮೂಡಿದೆ. ನಿನ್ನೆಯ ಪಂದ್ಯದಲ್ಲಿ ತಂಡದ ಬ್ಯಾಟಿಂಗ್ ಶಕ್ತಿ ಕೈ ಕೊಟ್ಟರೂ, ಬೌಲರ್ ಗಳು ಅದರಲ್ಲೂ ವಿಶೇಷವಾಗಿ ಸ್ಪಿನ್ನರುಗಳು ತಮ್ಮ ಮಾಂತ್ರಿಕ ಎಸೆತಗಳಿಂದ ಗಮನ ಸೆಳೆದಿದ್ದಾರೆ. 
ವಿಶ್ವಕಪ್ ಗೆ ತಂಡ ಆಯ್ಕೆಯಾದಾಗ, ಟೀಕಾಕಾರರ ಬಾಯಿಗೆ ಆಹಾರವಾಗಿದ್ದ ಪಿಯೂಶ್ ಚಾವ್ಲ ಉತ್ತಮ ಬೌಲಿಂಗ್ ನಡೆಸಿ, ಪಂದ್ಯಕ್ಕೆ ರೋಚಕ ತಿರುವು ತಂದು ಕೊಟ್ಟರು. ಹರ್ಭಜನ್ ಮತ್ತು ಅಶ್ವಿನ್ ಕೂಡ ತಮ್ಮ ಕೆಲಸವನ್ನು ಪರಿಪೂರ್ಣವಾಗಿ ನಿರ್ವಹಿಸಿದ್ದಾರೆ. 
ನಿನ್ನೆ ನಡೆದ ಪಂದ್ಯವನ್ನು ವೀಕ್ಷಿಸಿದರೆ, ಭಾರತಕ್ಕೆ ವಿಶ್ವಕಪ್ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಉಂಟಾಗಿದೆ. ಅದಲ್ಲದೆ ಈ ಬಾರಿ ವಿಶ್ವಕಪ್ ಭಾರತ ಉಪಖಂಡದಲ್ಲಿ ನಡೆಯುತ್ತಿರುವುದರಿಂದ ಭಾರತ ತಂಡಕ್ಕೆ ಉಪಕಾರಿಯಾಗಿ ಪರಿಣಮಿಸಬಹುದು. ಏನೇ ಆಗಲಿ 1983 ನಂತೆ ಈ ಬಾರಿ ಕೂಡಾ  ಭಾರತಕ್ಕೆ ವಿಶ್ವಕಪ್ ಸಿಗಲಿ ಎನ್ನುವುದು ಕೋಟಿ-ಕೋಟಿ ಕ್ರಿಕೆಟ್ ಅಭಿಮಾನಿಗಳ ಮನದ ಬಯಕೆಯಾಗಿದೆ.
ನಿನ್ನೆಯ ಪಂದ್ಯದಿಂದಾಗಿ ತಂಡದ ಆತ್ಮವಿಶ್ವಾಸ ಇಮ್ಮಡಿಯಾಗಿದೆ, ಅದು over confidence ಆಗದಿರಲಿ ಎಂದು ಆಶಿಸೋಣ.
All the best team india.
ಹಾಗೇ ಸುಮ್ಮನೆ- ಪಿಯೂಶ್ ಚಾವ್ಲನ ಸ್ಪಿನ್ ಬಾಲುಗಳನ್ನು ಕಂಡ ಉಮೇಶ, ತುಂಬಾ ಖುಷಿಯಾಗಿ 'ಲಗಾನ್ ಚಿತ್ರದಲ್ಲಿ, ಲೆಗ್ ಸ್ಪಿನ್ ಹಾಕುತ್ತಿದ್ದವನು ಇವನೇ ಇರಬೇಕು' ಎಂಬ ಸಂಶಯ ವ್ಯಕ್ತಪಡಿಸುತ್ತಿದ್ದಾನೆ.
                                                                 -ಡಾ.ಶೆಟ್ಟಿ  
So called 'ತೀರಾ ಮುಕ್ತ'ರಾಗಬೇಡಿ 
ಇಂದಿನ ಯುಗದಲ್ಲಿ 'ನಾವೆಲ್ಲರೂ ಮುಕ್ತರು' ಎಂಬ ಹಣೆಪಟ್ಟಿಯ ಬದಲಾವಣೆ, ದೇಶದಲ್ಲಿ ಬಹಳ ತ್ವರಿತಗತಿಯಲ್ಲಿ ಆಗುತ್ತಿದೆ. ಎಲ್ಲರೂ ತಮ್ಮ  ಮನಬಯಕೆಯಂತೆ ಬಾಳುವುದೂ ಒಂದು Fashion ಆಗಿ ಬಿಟ್ಟಿದೆ. ಮನಸ್ಸಿಗೆ ಬಂದಂತೆ ಬದುಕುವುದು ಸರಿಯೋ ತಪ್ಪೋ ಅನ್ನುವ ವಿಮರ್ಶೆ ಇದಲ್ಲ. ಆದರೆ ಕೇವಲ ಶೋಕಿಗಾಗಿ ಅಂತೆಯೇ ಬಾಳುವುದು ಮಾತ್ರ ತಪ್ಪು. ಮತ್ತು ಅದೊಂದು ಶುದ್ಧ ಮೂರ್ಖತನ. ಯಾಕೆಂದರೆ, ಅದೂ ಒಂದು ರೀತಿಯ ಮುಖವಾಡವೇ ಸರಿ. 
ಇವತ್ತು ಪ್ರೇಮಿಗಳ ದಿನ. ಆ ಸೇನೆ ಈ ಸೇನೆ ಇವೆಲ್ಲದರ ಅಬ್ಬರವನ್ನೆಲ್ಲ ಮೀರಿ; ಅಲ್ಲಿ, ಇಲ್ಲಿ, ಎಲ್ಲೆಲ್ಲು  ಯುವ ಪ್ರೇಮಿಗಳು ತಮ್ಮ ಭಾವಾಂತರಂಗದ ಭೇಗುದಿ ಮತ್ತು ನವಿರಾದ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಇದು ನಿಜವಾಗಿಯೂ ತಪ್ಪು ಅಂತ ನಾನು ಹೇಳುವುದೇ ಇಲ್ಲ. ಸಮಷ್ಠಿ ವಿಕಾಸ ಇದರಿಂದ ನಿಜವಾಗಿಯೂ ಸಾಧ್ಯ. 'ಮುಕ್ತತೆಯೇ ಮಾನವನ ಸಮಷ್ಠಿ ವಿಕಾಸಕ್ಕೆ ನಾಂದಿ' . ಆದರೆ ತೀರಾ ಮುಕ್ತತೆ ಮಾತ್ರ ಸರಿ ಅಲ್ಲ. ಅದು ಮತ್ತೊಮ್ಮೆ ಮುಖವಾಡದಂತೆ ಗೋಚರಿಸುತ್ತದೆ. ಯಾಕೆಂದರೆ? , ಇವತ್ತಿನ ದಿನ ಅದೆಷ್ಟೋ ಪ್ರೇಮಿಗಳು ಪ್ರೇಮ ವಿವಾಹ ಆಗಿ ಮಕ್ಕಳಾಗುವಷ್ಟರ ಸಮಯಕ್ಕೆ ಸಂಬಂಧ ಮುರಿದುಕೊಂಡು ಬಿಡುತ್ತಾರೆ. ಮದುವೆಯ ಬಂಧನದ ಮುಂಚಿತವಾಗಿ ಹಲವು ಸ್ಯಾಂಪಲ್ ಮುಟ್ಟಿ ಅಭ್ಯಾಸ ಕೂಡಾ ಇವರಿಗೆ ಆಗಿರುತ್ತದೆ. ಇದಕ್ಕೆ ಕಾರಣವೇ 'ತೀರಾ ಮುಕ್ತತೆ'.

ಈ ಪರಿಸ್ಥಿತಿ ಮನಸ್ಸಿನ ಆಳದಲ್ಲಿ ಒಂದು ಅನಿರೀಕ್ಷಿತ ಅಸಂತ್ರಪ್ತಿಯನ್ನು  ಉಂಟುಮಾಡಿ ಅವರ ನೈತಿಕ ಬದುಕು ಹದಗೆಡುವಂತೆ ಮಾಡುತ್ತದೆ. ಇದೇ ಬೆಂಗಳೂರಿನಲ್ಲಿ ಒಂದು ದಿನಕ್ಕೆ ಸರಾಸರಿ 30 ಜೋಡಿ ಪ್ರತಿ ದಿನ ಕುಟುಂಬ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿದ್ದು, ಮದುವೆಯಿಂದ ಮುಕ್ತಿ ಪಡೆಯಲು ಮನವಿ ಸಲ್ಲಿಸುತ್ತಿದ್ದಾರೆ. ಒಟ್ಟಾರೆಯಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ಒಟ್ಟು 17000 ಕುಟುಂಬಗಳು ವಿಚ್ಚೇದನಕ್ಕಾಗಿ  ಕೋರ್ಟ್ ಮೆಟ್ಟಿಲೇರಿದೆ. 
ಪ್ರೇಮಿಗಳು ಪ್ರೀತಿಸುವುದು, ಮುಕ್ತವಾಗಿ ಸಮಾಜದಲ್ಲಿ ತಲ್ಲೀನರಾಗುವುದು, ಪ್ರೇಮಿಗಳ ದಿನವನ್ನು ವಿಜ್ರಂಭಣೆಯಿಂದ ಆಚರಿಸುವುದು ತಪ್ಪು ಅಲ್ಲವೇ ಅಲ್ಲ; ಇದೆಲ್ಲವನ್ನು ಮಾಡುವುದಕ್ಕೆ ಬದುಕಿನ ಆಳದಲ್ಲಿ ಒಂದು ಬಲವಾದ ನೈತಿಕ ಕಾರಣವಿದ್ದರೆ ಮಾತ್ರ. ಬೇಕಾ ಬಿಟ್ಟಿ ಅವರು ಮಾಡಿದರು ಇವರು ಮಾಡಿದರು ಎಂದು ತೀಟೆಗಾಗಿಯೋ, ಇನ್ನೊಬ್ಬರ ಕಣ್ಣು ಕುಕ್ಕಿಸುವುದಕ್ಕಾಗಿಯೋ ಮಾಡಿದರೆ, So called ತೀರಾ ಮುಕ್ತರಾಗಿ ಬಾಳಿನಲ್ಲಿ ಅವನತಿ ಹೊಂದುವುದಂತು ಸತ್ಯ. 
ಇದೆಲ್ಲದರ ಹೊರತಾಗಿ, ಎಲ್ಲರಿಗೂ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.
                                               -ಡಾ.ಶ್ರೇ  
ಸಂಸ್ಕಾರ?
ಯಾವುದು ಸಂಸ್ಕಾರ? ಜಪ ತಪ ಮಾಡಿ, ಸಿಕ್ಕ ಸಿಕ್ಕವರ ಕಾಲಿಗೆ ಸಾಷ್ಟಾಂಗವಾಗಿ ಅಡ್ಡ ಬಿದ್ದು, ಅಲ್ಲಿ ಇಲ್ಲಿ ತಾನು ನಿಷ್ಠಾವಂತನೆಂಬ ಮುಖವಾಡ ಧರಿಸುವುದು  ಸಂಸ್ಕಾರವೇ? 
ಸಹಸ್ರ ದೇವರ ನಾಮವನ್ನು ಇರುಳು ಹಗಲು ಕುಳಿತು ಬಾಯಿ ಪಾಠ ಮಾಡಿ, ಅಡಿಗಡಿಗೆ ಮಡಿ ತೊಟ್ಟು ಕೂರುವ ಇವರು ಸಂಸ್ಕಾರವಂತರೆ?
ಇವರ ಸಂಸ್ಕಾರದ ಇನ್ನೊಂದು ಮುಖ ನನಗೆ ಗೊತ್ತು. ಗರ್ಭಗುಡಿಯಲ್ಲಿ ಕುಳಿತು ಕಾಮದ ವಾಸನೆ ಹುಡುಕುವ ಇವರುಗಳು ಮಡಿಯಾಗಿದ್ದು ಎಲ್ಲಿ? ಡೀಸೆಂಟ್ ಎಂಬ ಪದಕ್ಕೆ ಅಚ್ಚಿನಂತೆ ಕಂಡುಬರುವ ಇವರುಗಳು, ಅದು ಯಾವ ಸೀಮೆ ಸಂಸ್ಕಾರ ಹೊಂದಿದ್ದಾರೆ? 
ಸಿಗರೇಟು, ಮಧ್ಯಪಾನ ಡೀಸೆಂಟ್ ನ ಲಕ್ಷಣ ಅಲ್ಲ ಎಂದು ಬಾಯಿ ಬಡಿದುಕೊಳ್ಳುವವರಿಗೆ ಇದರ ಅರಿವಾಗುತ್ತಿಲ್ಲವೇ? ವಯಕ್ತಿಕ ವಿಚಾರಗಳನ್ನು ಬಿಟ್ಟು ಹಾಕಿ ನಾವು ಮಾಡುವ ಕೆಲಸಕ್ಕೆ ಸರಿಯಾದ ಗೌರವ ತೋರಿಸಬೇಕು. ಸಂಪ್ರದಾಯವನ್ನು ರೂಡಿಸಿಕೊಳ್ಳುವ ಕೊಳ್ಳುವ ಜೊತೆಗೆ ಮನಸ್ಸಿನಲ್ಲಿ ಉತ್ತಮವಾದ ಸಂಸ್ಕಾರವನ್ನು ಬೆಳೆಸಿಕೊಳ್ಳಿ.
ಮನಸ್ಸಿನಲ್ಲಿ  decency ಅಗತ್ಯ. ಈ ಹುಡುಕಾಟ ಸರಿಯಾಗಿ ಆದಲ್ಲಿ, ಸ್ನೇಹವು ಗಟ್ಟಿಯಾಗಲು ಸಾಧ್ಯ. ಜಾತಿ ಧರ್ಮದ ಹೊರಗಡೆ ನಿಂತು ನೋಡೋಣ. ಯಾವುದೋ ನಿರ್ಧಿಷ್ಟ ಪಂಕ್ತಿಯಲ್ಲಿ ನಿಂತು ನಾನು ಶ್ರೇಷ್ಠ ಎನ್ನುವ ಬದಲು, ಮೊದಲು ಮಾನವರಾಗೋಣ. ಇದೇ ನಿಜವಾದ ಸಂಸ್ಕಾರ.  
                                        - ಕೆ.ಪಿ. ಭಟ್ 

Saturday, February 12, 2011

ಅಫ್ಜಲ್ ಗೆ ಕಾಶ್ಮೀರ ಜೈಲೇ ಬೇಕಂತೆ!
ಸಂಸತ್ ಭವನದ ಮೇಲಿನ ದಾಳಿಯ ಆರೋಪಿ ಅಫ್ಜಲ್ ಗುರು, ತನ್ನನ್ನು ತಿಹಾರ್ ಜೈಲಿನಿಂದ ಕಾಶ್ಮೀರದ ಜೈಲಿಗೆ ವರ್ಗಾಹಿಸಬೇಕೆಂದು ಕೇಳಿಕೊಂಡಿದ್ದಾನೆ. 'ತಾನು ತಿಹಾರ್ ಜೈಲಿನಲ್ಲಿ ಇರುವುದರಿಂದ, ನನ್ನ ತಾಯಿಗೆ, ಕುಟುಂಬದ ಸದಸ್ಯರಿಗೆ ನನ್ನನ್ನು ಭೇಟಿಯಾಗಲು ಕಷ್ಟವಾಗುತ್ತದೆ' ಎಂಬ ಕಾರಣ ನೀಡಿದ್ದಾನೆ. 
ಈ ಅಫ್ಜಲ್ ಸಾಮಾನ್ಯದವನಲ್ಲ, ಈತ 2001 ರಲ್ಲಿ ಸಂಸತ್ ಭವನದ ಮೇಲೆ ಮಾಡಿದ ದಾಳಿಯ ಪ್ರಮುಖ ಆರೋಪಿ. ಇವನು ಮಾಡಿದ ಈ ಕೆಲಸದಿಂದಾಗಿ ಅಂದು 7 ಜನ ಪೊಲೀಸರು, ತಮ್ಮ ಪ್ರಾಣವನ್ನು  ಅರ್ಪಿಸಿ ದೇಶದ ಮಾನ ಕಾಪಾಡಿದ್ದರು. ಅಫ್ಜಲ್ ಗುರುವಿಗೆ ಸುಪ್ರೀಂ ಕೋರ್ಟ್ 2004 ರಲ್ಲಿ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ ಕೆಲ ಮಾನವ ಹಕ್ಕು ಹೋರಾಟಗಾರರ 'ಶ್ರಮ'ದಿಂದಾಗಿ ಈತ ಇನ್ನು ಉಳಿದುಕೊಂಡಿದ್ದಾನೆ.
ಅಫ್ಜಲ್ ಗುರು ತನ್ನನ್ನು ಕಾಶ್ಮೀರ ಜೈಲಿಗೆ ವರ್ಗಾಹಿಸಬೇಕೆಂದು, ಹೊಸ ರಾಗವನ್ನು ತೆಗೆಯುತ್ತಿದ್ದಾನೆ. ಖಂಡಿತವಾಗಿಯೂ ಅದರಲ್ಲಿ ಒಳ್ಳೆ ಉದ್ದೇಶ ಇರಲಿಕ್ಕಿಲ್ಲ. ಅಮಾಯಕರ ಪ್ರಾಣವನ್ನು ತೆಗೆಯುವ ಈತನಿಗೆ ತನ್ನ ಕುಟುಂಬದ ಮೇಲೆ ಕಾಳಜಿಯಂತೆ!
ಎಂತೂ ಕಾಶ್ಮೀರದ ಪರಿಸ್ಥಿತಿ ಚೆನ್ನಾಗಿಲ್ಲ, ಅದರ ಲಾಭವನ್ನು ಪಡೆದುಕೊಂಡು ಪಾಕಿಸ್ತಾನಕ್ಕೆ ತಪ್ಪಿಸಿಕೊಂಡು ಓಡಿ ಹೋಗುವ ಯೋಜನೆ ಇರಬಹುದು. 
ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರಕಾರ ಈ ಕುರಿತಾಗಿ ಸರಿಯಾಗಿ ಯೋಚಿಸಬೇಕಾದ ಅಗತ್ಯವಿದೆ. ಅಫ್ಜಲ್ ಅನ್ನು ಇಷ್ಟು ಸಮಯ ಬದುಕ ಬಿಟ್ಟದ್ದೇ ನಮ್ಮ ತಪ್ಪು ಇನ್ನು ಆತ ಕೇಳುವ ಸೌಲಭ್ಯಗಳನ್ನು ಒದಗಿಸುವುದು ಅದಕ್ಕಿಂತ ದೊಡ್ಡ ತಪ್ಪಲ್ಲವೇ? ಏನಂತೀರಿ? 
                                                                                     -ಡಾ.ಶೆಟ್ಟಿ 

Tuesday, February 8, 2011

ಪ್ರಿಯ ಓದುಗರೇ, ಅನಿವಾರ್ಯ ಕಾರಣಗಳಿಂದ, ಶನಿವಾರದವರೆಗೆ ನಮ್ಮ ಲೇಖನಗಳು ಪ್ರಕಟಗೊಳ್ಳುವುದಿಲ್ಲ. ಅಡಚಣೆಗಾಗಿ ಕ್ಷಮೆ ಇರಲಿ.. 
                                                -New Yorker Times

Monday, February 7, 2011

ಹ(ಧ್ವ)೦ಸರಾಜ್ ಹೊಸ ರಾಗ
'ಹೆಮ್ಮೆಯ ಕಾಂಗ್ರೆಸಿಗ' ಮತ್ತೊಮ್ಮೆ ವಿವಾದ ಎಬ್ಬಿಸಿದ್ದಾರೆ. ರಾಜ್ಯದ ರಾಜ್ಯಪಾಲರಾಗಿ ಬಂದ ನಂತರ ಸದಾ ಒಂದಿಲ್ಲೊಂದು ವಿಷಯಗಳಿಗೆ ಸುದ್ದಿಯಲ್ಲಿದ ಹಂಸರಾಜ್ ಭಾರದ್ವಾಜ್ ಅವರು ಈಗ ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.
ರಾಜ್ಯಪಾಲರಾದವರು ರಾಜಕೀಯಕ್ಕೆ ಇಳಿಯಬಾರದು, ಅದೇ ತರ ರಾಜಕಾರಣ ಮಾಡಬಾರದು ಎಂಬುವುದು ನಿಯಮ. ಆದರೆ ರಾಜ್ಯಪಾಲರು ಏನೇನ್ನನ್ನೋ ಮಾಡಿದ್ದಾರೆ, ಮಾಡಿದರೆ ಮಾಡಲಿ ಬಿಡಿ, ಅದು ಅವರ ಪ್ರಾರಬ್ಧ! ಆದರೆ ಗೌರವ ಡಾಕ್ಟರೇಟ್ ನೀಡುವ ವಿಚಾರದಲ್ಲೂ ಕೂಡಾ ರಾಜಕಾರಣ ಮಾಡುತ್ತಿರುವುದು ನಾಚಿಗೇಡಿನ ಸಂಗತಿ. 
ಚಿದಾನಂದ ಮೂರ್ತಿಯವರು, 'ಚರ್ಚ್ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರಂತೆ, ಹಾಗೂ ಅದರಿಂದ ಅಲ್ಪಸಂಖ್ಯಾತರಿಗೆ ನೋವಾಗಿದೆಯಂತೆ.' ಇದು ಚಿದಾನಂದ ಮೂರ್ತಿ ಅವರಿಗೆ ಡಾಕ್ಟರೇಟ್ ನೀಡದಿರಲು ಕಾರಣ. ಅಲ್ಪಸಂಖ್ಯಾತರೆಲ್ಲ ಸೇರಿಕೊಂಡು, ರಾಜ್ಯಪಾಲರ ಬಳಿ ' ದಮ್ಮಯ್ಯ, ಚಿದಾನಂದ ಮೂರ್ತಿಯವರಿಗೆ ಡಾಕ್ಟರೇಟ್ ನೀಡಬೇಡಿ' ಎಂದು ಕೇಳಿಕೊಂಡಂತೆ ವರ್ತಿಸುತಿದ್ದಾರೆ ರಾಜ್ಯಪಾಲರು.
ಅಲ್ಪಸಂಖ್ಯಾತರ ಆಯೋಗವಾಗಲಿ, ಸಂಘಟನೆಗಳಾಗಲಿ ಯಾವುದು ಕೂಡಾ ಚಿದಾನಂದ ಮೂರ್ತಿಯವರಿಗೆ ಡಾಕ್ಟರೇಟ್ ನೀಡಬಾರದೆಂದು ಹೇಳಿಲ್ಲ. ಯಾರಿಗೂ  ಗೊತ್ತಾಗದ ಹೊಸ ವಿಚಾರವೊಂದು ನಮ್ಮ ಘನತೆವೆತ್ತರಿಗೆ ಹೊಳೆದಿದೆ.
ಚಿದಾನಂದಮೂರ್ತಿಯವರು ಸಾಮಾನ್ಯ ಸಾಧಕರೇನಲ್ಲ. ಕನ್ನಡ ಸಾಹಿತ್ಯದಲ್ಲಿ, ಸಾಹಿತ್ಯ ಸಂಶೋಧನೆಯಲ್ಲಿ ಅವರೊಬ್ಬರು ಧ್ರುವ ನಕ್ಷತ್ರದಂತೆ. ಅವರಿಗೆ ಡಾಕ್ಟರೇಟ್ ನೀಡದರೆ, ಆ ಪ್ರಶಸ್ತಿಗೆ ಗೌರವವೇ ವಿನಹ ಆ ಡಾಕ್ಟರೇಟ್ ನಿಂದ ಸಿಗುವ ಗೌರವ, ಅವರಿಗೆ ಬೇಕಿಲ್ಲ.
ವಾಸ್ತವದಲ್ಲಿ  ಚಿದಾನಂದ ಮೂರ್ತಿಯವರು, 'ನನಗೆ ಡಾಕ್ಟರೇಟ್ ನೀಡಿ' ಎಂದು ಎಲ್ಲೂ ಕೇಳಿಕೊಂಡಿಲ್ಲ. ಬೆಂಗಳೂರು ವಿ.ವಿ ಆ ಕುರಿತಾಗಿ ಚಿಂತಿಸಿ, ಮೂರ್ತಿಯವರಿಗೆ ಗೌರವ ಡಾಕ್ಟರೇಟ್ ನೀಡಬೇಕೆಂದು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿತ್ತು. ಆದರೆ ಚಿದಾನಂದ ಮೂರ್ತಿಯವರು ಬಲಪಂಥೀಯರು ಎಂಬ ಒಂದೇ ಕಾರಣಕ್ಕೆ ಡಾಕ್ಟರೇಟ್ ನಿರಾಕರಿಸಿದ್ದಾರೆ.
ವೈಯುಕ್ತಿಕ ವಿಚಾರಗಳು ಬೇರೆ, ಸಾಧನೆ ಬೇರೆ. ಚಿದಾನಂದ ಮೂರ್ತಿಯವರ ವೈಯುಕ್ತಿಕ ವಿಚಾರಗಳು ಏನೇ ಇರಲಿ, ಅವರೊಬ್ಬ ಸಾಧಕ. ಇಡೀ ಕರ್ನಾಟಕ ಹೆಮ್ಮೆ ಪಡುವಂತಹ ಸಾಧಕ. ಇಲ್ಲವಾದರೆ ಅವರಿಗೆ ಆದ ಅನ್ಯಾಯವನ್ನು, ಅನಂತಮೂರ್ತಿಯಂತವರು ಖಂಡಿಸುತ್ತಿರಲಿಲ್ಲ.
ರಾಜ್ಯಪಾಲರು ಯಾರದೋ ಹಿತ ಕಾಯಲು ಹೋಗಿ, 6 ಕೋಟಿ ಕನ್ನಡಿಗರನ್ನು ಅವಮಾನಿಸಿದ್ದಾರೆ.
ಹಾಗೇ ಸುಮ್ಮನೆ- ಚಿದಾನಂದ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರಾಕರಿಸಿದ ರಾಜ್ಯಪಾಲರ ಕ್ರಮದಿಂದ, ಉಮೇಶ ವಿಪರೀತ ಸಿಟ್ಟಾಗಿದ್ದಾನೆ. ಅವನಿಗೆ ಸಿಕ್ಕಿದ 'ಕುಡಿಯರ ಕುಲ ತಿಲಕ' ಪ್ರಶಸ್ತಿಯನ್ನು, ಸರಕಾರಕ್ಕೆ ಹಿಂದುರುಗಿಸಿ ತನ್ನ ಪ್ರತಿಭಟನೆ ವ್ಯಕ್ತಪಡಿಸಿದ್ದಾನೆ.
                                                             -ಡಾ.ಶೆಟ್ಟಿ 
ಇಂಗ್ಲೀಷ್ ಎಂಬ ಭೂತ ಹೊಕ್ಕವರಿಗೆ ! 
ಆಂಗ್ಲ ಉಪನ್ಯಾಸಕರು ಕನ್ನಡವೆಂದರೆ ಕಾಲಿನ ಧೂಳಿನಂತೆ ಮಾಡುತ್ತಿರುವುದನ್ನು ನಾನು ದಿನೇ ನೋಡುತ್ತಿದ್ದೇನೆ. ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ಇವರಿಗೆ ಇಂದು ಕನ್ನಡ ಎಂದರೆ ಏನೋ ಒಂದು ರೀತಿಯ ತಾತ್ಸಾರ.
ಇವತ್ತು ಏನಾಗಿದೆ ಎಂದರೆ ಇಂಗ್ಲೀಷ್ ನಲ್ಲಿ ಮಾತನಾಡುವುದು standard ಎಂದಾಗಿದೆ. 77 ನೇ ಕನ್ನಡ ಸಾಹಿತ್ಯ ಸಮ್ಮೇಳನದ ದಿನಗಳು ಕಳೆಯುತ್ತಿರಬೇಕಾದರೆ,ಇಂತಹುಗಳ ಬಗ್ಗೆ ಗಮನಿಸುವ ಅಗತ್ಯವಿದೆ.
shekespeare, shelley, wordsworth ರ ಸಾಹಿತ್ಯ ಓದಿದ ಕೂಡಲೇ ಎಲ್ಲಾ ತಿಳಿದುಕೊಂಡೆ ಎಂಬ ಭಾವನೆಯು ಇರುವುದರಿಂದ ಇಂತಹ ಅಲ್ಪವ್ಯಕ್ತಿತ್ವ ಹೊರಹೊಮ್ಮಲು ಸಾಧ್ಯ. ಬಿ.ಯಂ.ಶ್ರೀ, ಯು.ಆರ್. ಅನಂತಮೂರ್ತಿ ಅದೇನೇ ಇಂಗ್ಲೀಷ್ ಸಾಹಿತ್ಯ ಓದಿ ತಿಳಿದಿದ್ದರೂ, ಕನ್ನಡದಲ್ಲಿ ಹೆಮ್ಮೆಯಿಂದ ಬರಹಗಳನ್ನು ಸೃಷ್ಟಿಸಿದ್ದಾರೆ.
ಅಹಂನೊಂದಿಗೆ ಸಾಹಿತ್ಯಭ್ಯಾಸ ಬೇಡ, ಸಾಹಿತ್ಯ ಸಹಿತ ತಾಳ್ಮೆ ಅಗತ್ಯ. ಗಡ್ಡ ಬಿಟ್ಟು,ಅದನ್ನು ಕೆರೆದುಕೊಂಡ ಕೂಡಲೇ ಎಲ್ಲಾ ತಿಳಿದುಕೊಂಡವರೆಂದು ಭಾವಿಸಬೇಡಿ. ಓದುವುದು ತಿಳಿಯುವುದು ಬಹಳವಿದೆ. ನೀವು ನಿಮ್ಮ ಓದುವಿಕೆಯನ್ನು ನಿಲ್ಲಿಸಿ ದಶಕಗಳೇ ಕಳೆದಿವೆ, ಈಗ ಇನ್ನಷ್ಟು ಸಾಹಿತ್ಯ ಸೃಷ್ಟಿಯಾಗಿ ರಾಶಿ ಬಿದ್ದಿವೆ. ಕಣ್ಣು ಬಿಟ್ಟು ನೋಡಿ, ಮೂಗಿನ ನೇರಕ್ಕೆ ಮಾತನಾಡುವುದನ್ನು ಬಿಟ್ಟುಬಿಡಿ.
                                                                           ಕೆ.ಪಿ.ಭಟ್  
ಪುಸ್ತಕ ಪ್ರೇಮ 
ಪುಸ್ತಕ ಪ್ರೇಮ ಇವತ್ತಿನ ಆಧುನಿಕತೆಯ  ಬೆಳವಣಿಗೆಯ ಹೊಡೆತಕ್ಕೆ ಸಿಕ್ಕಿ ಮುಳುಗುತ್ತಿದೆ. ಇನ್ನು ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತ ತದನಂತರದ ದಿನಗಳಲ್ಲಿ ಇದೇ ಪುಸ್ತಕಗಳು ಆಧುನಿಕತೆಯ ಭರಾಟೆಯಲ್ಲಿ E-book ಆಗಿಯೇ ಉಳಿದುಬಿಡುತ್ತದೆ ಎಂಬ ಭಯ ಕೂಡಾ ವ್ಯಕ್ತಪಡಿಸಿದ್ದಾರೆ. ಬಿದಿರು ಖಾಲಿಯಾಗುತ್ತಿರುವುದು ಇದಕ್ಕೆ ಮತ್ತೊಂದು ಕಾರಣ ಎಂದು ಹೇಳಬಹುದು. 
ಇದಕ್ಕೂ ಮಿಗಿಲಾಗಿ ಇವತ್ತಿನ ಕಾಲದ ಜನತೆಗೆ ಎಲ್ಲವೂ Instant ಆಗಿ ಆಗಬೇಕು; ಸಮಯ ಇಲ್ಲದೆ! ಈ ಕಾರಣದಿಂದಾಗಿ ತಾಳ್ಮೆ ಎಂಬ ಅಂಶ ಇವತ್ತಿನ ಜನರಲ್ಲಿ ತೀರಾ ಕಡಿಮೆಯಾಗಿರುವುದರಿಂದ ಪುಸ್ತಕ ಓದಲು Patience ಇಲ್ಲ. ಕೆಲವರಿಗೆ ಪುಸ್ತಕ ಕೊಳ್ಳಲೇ ಸಮಯವಿಲ್ಲ ಬಿಡಿ, ಇನ್ನು ಓದುವುದು ಎಲ್ಲಿ ಬಂತು? 
ಆದರೆ ಇವಕ್ಕೆಲ್ಲ ವ್ಯತಿರಿಕ್ತ ಎಂಬಂತೆ ಮೊನ್ನೆ ನಡೆದ 77 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಸರಿ ಸುಮಾರು 8 ಕೋಟಿ ಮೌಲ್ಯದ ಪುಸ್ತಕಗಳು ಮಾರಾಟವಾಗಿದೆ. ಕನ್ನಡದ ಜನತೆ ತಮಗಿರುವ ಪುಸ್ತಕ ಪ್ರೇಮವನ್ನು ಯಥೇಚ್ಚವಾಗಿ ತೋರಿಸಿದ್ದಾರೆ. ಕೇವಲ ಮೂರು ದಿನದಲ್ಲಿ 8 ಕೋಟಿ ಮೌಲ್ಯದ ಪುಸ್ತಕ ಮಾರಾಟವಾಗುವುದೆಂದರೆ ಸಣ್ಣ ಮಾತಲ್ಲ. ಕನ್ನಡದಲ್ಲಿ ಇನ್ನೂ ಬಹಳಷ್ಟು ಮಂದಿ ಸಾಹಿತ್ಯಾಸಕ್ತರು ಇದ್ದಾರೆ; ನಮ್ಮದು ಸಾಹಿತ್ಯದ ನೆಲೆವೀಡು  ಎಂಬುವುದು ಈ ಮೂರು ದಿನಗಳಲ್ಲಿ ಸಂಪೂರ್ಣವಾಗಿ ಅರಿವಿಗೆ ಬಂದಿದೆ. 
ಪುಸ್ತಕ ಪ್ರಕಾಶಕರು ಮೂರು ದಿನ ಪ್ರಕಾಶಿಸಿದ್ದು ಸಂತಸದ ವಿಚಾರ. ಈ ಪುಸ್ತಕ ಪ್ರೇಮ ಇದೆ ರೀತಿ ಮುಂದುವರಿಯಲಿ ಊಹಾಪೋಹಗಳೆಲ್ಲ ಸುಳ್ಳಾಗಲಿ ಎಂದು ಈ ಮೂಲಕ ಆಶಿಸೋಣ.
                                                     - ಡಾ.ಶ್ರೇ.

Saturday, February 5, 2011

ನಾ'ಕಾಣೆ'!
ಇನ್ನು ಮುಂದೆ ನಾವು ನಾಕಾಣೆ ಪಾವಲಿಯನ್ನು ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಕೇಂದ್ರ ಸರಕಾರದ ಕಾಯಿನೇಜ್ ಆಕ್ಟ್ ಸೆಕ್ಷನ್, ಜೂನ್ 30 ರಿಂದ ನಾಕಾಣೆ(25 ಪೈಸೆ) ಯ ಚಲಾವಣೆ ನಿಲ್ಲಿಸಲಾಗುತ್ತದೆ ಎಂಬ ಆದೇಶ ಹೊರಡಿಸಿದೆ.
ಇದರಿಂದಾಗಿ ಜನರ ಮನಸ್ಸಿನಲ್ಲಿ, ಒಂದು ರೀತಿಯ ಅನನ್ಯ ಭಾವನೆಯಲ್ಲಿ ಉಂಟು ಮಾಡುತ್ತಿದ್ದ ನಾಕಾಣೆ ಪಾವಲಿಯನ್ನು; ನಾವು ಇನ್ನುಮುಂದೆ ನಾಣ್ಯ ಸಂಗ್ರಾಹಕರು ಅಥವಾ ಯಾವುದಾದರು ವಸ್ತುಸಂಗ್ರಹಾಲಯ ಗಳಲ್ಲಿ ಮಾತ್ರ ಕಾಣಲು ಸಾಧ್ಯ.
'ನಾನು ಚಿಕ್ಕವನಿದ್ದಾಗ ನಾಕಣೆಯಲ್ಲಿ 4 ಜನರನ್ನು, ಹೋಟೆಲಿಗೆ ಕರೆದುಕೊಂಡು ಹೋಗಿ, ಚಾ ಕುಡಿಸುತ್ತಿದ್ದೆ'. ಎಂದು ಹೇಳುತ್ತಿದ್ದ ಮುದುಕರು ಇನ್ನು ಮುಂದೆ ಆ ಮಾತನ್ನು ಹೇಳಿದರೆ,ಮುಂದಿನ ತಲೆಮಾರಿನ ಜನರು ಮುಖ-ಮುಖ ನೋಡಬಹುದು. ಅವರಿಗೆ ನಾಕಾಣೆ ಎಂದರೆ ಕಾಲಗರ್ಭಕ್ಕೆ ಸೇರಿ ಹೋದ ಹಿರಿಯರ ಪುರಾತನ ಸೊತ್ತು ಅಷ್ಟೆ.
ರಿಸರ್ವ್ ಬ್ಯಾಂಕ್ ನಾಕಣೆಯ ಚಲಾವಣೆಯನ್ನು ನಿಲ್ಲಿಸಲು ಕಾರಣ, ಅದನ್ನು ಟ೦ಕಿಸ ಬೇಕಾದರೆ 50 ಪೈಸೆ ಖರ್ಚು ತಗಲುತ್ತಂತೆ!
ದೇವರ ಪೂಜೆಯಲ್ಲಿ ವಿಶೇಷ ಸ್ಥಾನಮಾನ ಪಡೆಯುತಿದ್ದ ನಾಕಾಣೆಯು, ಜನರ ಮನಸ್ಸಿನಿಂದ ದೂರ ಸರಿಯುತ್ತಿದೆ ಎಂಬುವುದು ನೋವಿನ ಸಂಗತಿ.25 ಪೈಸೆ ಗೆ ಬಂದೊದಗಿದ ಈ ಸ್ಥಿತಿಯನ್ನು ಕಂಡ 50 ಪೈಸೆ 'ಎಲ್ಲಾ ಮಾಯಾ ನಾಳೆ ನಾವು ಮಾಯಾ' ಎಂದು ಹಾಡುತ್ತಿರಬಹುದು.
ಹಾಗೇ ಸುಮ್ಮನೆ- ನಾಕಣೆಯ ಚಲಾವಣೆ ನಿಲ್ಲುತ್ತದೆ ಎಂಬ ಸುದ್ದಿಯನ್ನು ಕೇಳಿದ ಉಮೇಶ, ವಿಪರೀತ tension ಆಗಿದ್ದಾನೆ. ಯಾಕೆಂದರೆ ಆತನಿಗೆ ಪುರೋಹಿತರೊಬ್ಬರು, 1 ಕಾಲು ರೂಪಾಯಿ ಹರಕೆ ಹಾಕಿದರೆ, ಕುಡಿಯುವ  ಅಭ್ಯಾಸ ಬಿಟ್ಟು ಹೋಗುತ್ತದೆ ಎಂಬ ಸಲಹೆ ನೀಡಿದ್ದರಂತೆ. ನಾಕಣೆಯನ್ನು ನಿಲ್ಲಿಸಿದರೆ, ಜೂನ್ 30 ಕ್ಕಿಂತ  ಮೊದಲೇ ಕುಡಿಯೋದು ಬಿಡಬೇಕಲ್ಲವೇ, ಎಂಬುವುದು ಉಮೇಶನ ತಲೆಬಿಸಿಯಾಗಲು ಕಾರಣ.
                                                        -ಡಾ.ಶೆಟ್ಟಿ 
ಮೂರ್ತಿಗೆ ಕೀರುತಿ?
ಸಾಧನೆ ಬೇರೆ, ವೈಯುಕ್ತಿಕ ವಿಚಾರ ಬೇರೆ. ವ್ಯಕ್ತಿಯ ವೈಯುಕ್ತಿಕ ಸಿದ್ಧಾಂತಗಳು ಏನೇ ಆಗಿರಲಿ, ಆದರೆ ಆ ವ್ಯಕ್ತಿ ಮಹಾನ್ ಸಾಧನೆ ಮಾಡಿದರೆ, ಗೌರವಿಸುವುದು ನಮ್ಮ ನೈತಿಕ ಕರ್ತವ್ಯ. ವೈಯುಕ್ತಿಕ ನೆಲೆಯಲ್ಲಿ ನಮಗೆ ಆ ವ್ಯಕ್ತಿ  ಇಷ್ಟವಾಗದಿದ್ದರೆ, ನಿಮ್ಮ ವೈಯುಕ್ತಿಕ ಸಿದ್ಧಾಂತಕ್ಕೆ ಅವರದ್ದು ಸರಿ ಹೊಂದುವುದಿಲ್ಲ ಎಂದು ಸುಮ್ಮನೆ ಕೂರುವುದು ಉತ್ತಮ ವ್ಯಕ್ತಿತ್ವಕ್ಕೆ ಉದಾಹರಣೆ.
ಚಿದಾನಂದ ಮೂರ್ತಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದವರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ಅವರು ನೀಡಿದ್ದಾರೆ.ತುಸು ರೈಟ್ ಪರ ಎಂಬ ಕಾರಣಕ್ಕೆ ನಾವು ಅವರ ಈ ವಿಚಾರವನ್ನು ಸಾಧನೆಯ ವಿಚಾರಕ್ಕೆ ಇಟ್ಟು ತುಲನೆ ಮಾಡಬಾರದು.ಆದರೆ ಗೌರವ ಡಾಕ್ಟರೇಟ್ ಕೊಡುವ ವಿಚಾರದಲ್ಲಿ ಮೂರ್ತಿಯವರಿಗೆ ಅನ್ಯಾಯವಾಗಿದೆ. ಇವರು 1960 ರ ಕಾಲದಲ್ಲಿ ಛಂದಸ್ಸು, ಪ್ರಾಚೀನ ಕಾವ್ಯ, ಶಾಸನದ ವಿಷಯಗಳಲ್ಲಿ ಸಂಪೂರ್ಣ ಸಂಶೋಧನೆ ಗೈದಿದ್ದಾರೆ. ಇವರ ಕನ್ನಡ ಶಾಸನಗಳ ಸಾಂಸ್ಕ್ರತಿಕ ಅಧ್ಯಯನ ಒಂದು Monument work.   ಭಾಷಾ ವಿಜ್ಞಾನಕ್ಕೆ ಇವರ ಕೊಡುಗೆ ಹಲವಾರು.  ಇವರ ಲೇಖನಗಳ ಸಂಗ್ರಹ, 8-10 ಸಂಪುಟಗಳ ಸೀರೀಸ್ ಆಗಿ ಪ್ರಕಟಗೊಂಡಿದೆ. ಪ್ರತಿ ಸಂಪುಟ 600 -700 ಪುಟಗಳನ್ನು ಹೊಂದಿದೆ. ಇಲ್ಲೇ ನಮಗೆ ಮನವರಿಕೆ ಆಗಬೇಕು;ಅವರ ಸಾಧನೆ ಏನು ಎಂಬುವುದು. 
ಆದರೆ ವೈಯುಕ್ತಿಕ ಸಿದ್ದಾಂತಕ್ಕೆ ಇದನ್ನು ತುಲನೆ ಮಾಡಿ, ಗೌರವ ಡಾಕ್ಟರೇಟ್ ಆಯ್ಕೆಯಲ್ಲಿ ಹೊಲಸು ರಾಜಕೀಯವನ್ನು ಕೆಲವು ಘನ ಸಂಬಂಧಿ ವ್ಯಕ್ತಿಗಳು ಮಾಡಿರುವುದು, ಸಾಮಾಜಿಕ ಸಾರ್ಥಕತೆಯ ಸೋಲು ಎಂದು ವ್ಯಾಖ್ಯಾನಿಸ ಬಹುದು.
                        -ಡಾ.ಶ್ರೇ