ಅಲ್ಲೊಂದು ಕಡೆ ಬಸ್ಸಿನ ಕಂಡೆಕ್ಟರ್ ಮತ್ತು ಪ್ರಯಾಣಿಕ ಜಗಳವಾಡುತ್ತಿದ್ದಾರೆ, ಇನ್ನೊಂದು ಕಡೆ ಹೋಟೆಲಿನ ಮಾಲೀಕ ಮತ್ತು ಗಿರಾಕಿಯ ಜೊತೆ ಜಟಾ-ಪಟಿ ನಡಯುತ್ತಿದೆ; ಮತ್ತೊಂದು ಕಡೆ ವೈನ್ ಶಾಪಿನಲ್ಲಿ ಪಾನಮತ್ತ ಗಿರಾಕಿ ದೊಡ್ಡ ದನಿಯಲ್ಲಿ ಬೊಬ್ಬೆ ಹಾಕುತ್ತಿದ್ದಾನೆ. ಏನಪ್ಪಾ ಇದು? ಎಂದು ಅಂದುಕೊಂಡಿರ? ನಮ್ಮಲ್ಲಿ ದಿನಕಳೆದಂತೆ ಚಿಲ್ಲರೆ ಸಮಸ್ಯೆ ಬಿಗಡಾಯಿಸುತ್ತಿದೆ ಎಂದು ನಿಮಗೆ ಅನಿಸುತಿಲ್ಲವೇ?ಈ ಚಿಲ್ಲರೆಯ ಸಮಸ್ಯೆ ದಿನಕಳೆದಂತೆ ನಮಗೆ ತೊಂದರೆ ಕೊಡುತ್ತಿದೆ. ಎಲ್ಲಿ ಹೋದರು 'ಹೇ ಚಿಲ್ರೆ ಕೊಡ್ರಿ' ಅನ್ನುವ ವ್ಯಕ್ತಿಗಳು ನಮ್ಮ ಸುತ್ತಮುತ್ತ ತುಂಬಾ ಇದ್ದಾರೆ. ಪ್ರಸ್ತುತ ದಿನಗಳಲ್ಲಿ ಜನರ ಪರ್ಸಿನಿಂದ 1 ರೂಪಾಯಿ, 2 ರೂಪಾಯಿ ನಾಣ್ಯಗಳು ಕಾಣೆಯಾಗಿ, ಆ ಜಾಗದಲ್ಲಿ ಗರಿ ಗರಿ ನೋಟುಗಳು ಬಂದು ಕುಳಿತಿವೆ. ಜನರಲ್ಲಿ ಬಡತನ ನಿವಾರಣೆಯಾಗಿದೆಯೋ ಇಲ್ಲವೋ ಆದರೆ ಜನರಲ್ಲಿ ಚಿಲ್ಲರೆ ಕಾಣುವುದು ವಿರಳ. ಜನ 5 ರೂಪಾಯಿ ಸಾಮಾನು ಕೊಂಡುಕೊಂಡರು 50 ರೂಪಾಯಿ ನೋಟು ನೀಡುತ್ತಾರೆ, ಇದರಿಂದಾಗಿ ಅಂಗಡಿಯ ಮಾಲಕ, ಬಸ್ಸಿನ ನಿರ್ವಾಹಕ ಮುಂತಾದವರು ಗಿರಾಕಿಗಳ ಜೊತೆ ಹೋದಲ್ಲಿ ಬಂದಲ್ಲಿ ಜಗಳವಾಡುವುದನ್ನು ಕಾಣಬಹುದು. ಕೆಲವೊಮ್ಮೆ ಈ ಜಗಳಗಳು ತಾರಕಕ್ಕೇರಿ ಹೊಡೆದಾಟ ನಡೆಯುವುದುಂಟು.
ಈ ಚಿಲ್ಲರೆ ಸಮಸ್ಯೆ ಎಲ್ಲಿಯವರೆಗೆ ಬಿಗಡಾಯಿಸಿದೆ ಎಂದರೆ ಬ್ಯಾಂಕಿನಲ್ಲಿರುವ ಅಧಿಕಾರಿಗಳು ಕೂಡ ಗ್ರಾಹಕರ ಜೊತೆ ಚಿಲ್ಲರೆ ಕೇಳುವ ಹಂತಕ್ಕೆ ತಲುಪಿದ್ದಾರೆ. ಈ ಸಮಸ್ಯೆಗೆ ಪರಿಹಾರವಂತೂ ಸದ್ಯದಲ್ಲಿ ಕಾಣುತ್ತಿಲ್ಲ, ಕಾರಣ ಹುಡುಕ ಹೊರಟರೆ ಸಮರ್ಪಕವಾದ ಕಾರಣವು ಸಿಗುತ್ತಿಲ್ಲ. ಇನ್ನು ಜನ ಹೆಣ್ಣು, ಹೊನ್ನು, ಮಣ್ಣಿಗಾಗಿ ಜಗಳವಾಡುವುದರ ಜೊತೆಗೆ ಚಿಲ್ಲರೆಗಾಗಿ ಯುದ್ದ ಮಾಡಿದರು ಸಂಶಯವಿಲ್ಲ.
ಹಾಗೇ ಸುಮ್ಮನೆ- ಚಿಲ್ಲರೆ ಸಮಸ್ಯೆಯಿಂದ ತೊಂದರೆ ಅನುಭವಿಸಿದ ಉಮೇಶ, ದೇಶದಲ್ಲಿ coin-box ಗಳನ್ನು ನಿಷೇಧಿಸಬೇಕು ಎಂಬ ಸಲಹೆ ನೀಡಿದ್ದಾನೆ. ಚಿಲ್ಲರೆಗಳು ಇದರಲ್ಲೇ ಬಂಧಿಯಾಗಿದೆ ಎಂಬುವುದು ಈತನ ಭಾವನೆ. ಜನರಲ್ಲಿ 2,3 ಮೊಬೈಲ್ ಇರುವಾಗ coin-box ಗಳ ಅವಶ್ಯಕತೆಯಾದರು ಏನು? ಎಂಬ ಪ್ರಶ್ನೆ ಉಮೇಶನದು.
ಡಾ. ಶೆಟ್ಟಿ
No comments:
Post a Comment