Monday, February 28, 2011

ವಿಧಾನಮಂಡಲದಲ್ಲಿ ಕದನ ವಿರಾಮ
ನಮ್ಮ ರಾಜಕಾರಣಿಗಳ ಬಾಕ್ಸಿಂಗ್ ಫೀಲ್ಡ್, ವಿಧಾನಸೌಧ ಶಾಂತವಾಗುವ ಲಕ್ಷಣ ಕಾಣುತ್ತಿದೆ. ಎಷ್ಟೋ ಸಮಯದಿಂದ ವಿಧಾನಸಭೆಯ ಅಧಿವೇಶನಗಳು ಯುದ್ಧರಂಗದಂತೆ ಕಾಣುತ್ತಿತ್ತೇ ವಿನಃ ಅಲ್ಲಿ ರಾಜ್ಯದ ಜನತೆಯ ಸಂಭಂದಿಸಿದ ಚರ್ಚೆ ನಡೆಯುತ್ತಿರಲಿಲ್ಲ.
ಯಾವುದೋ ಹಾಳುಹಿಡಿದ ಭೂಹಗರಣ, ರೆಡ್ಡಿಗಳ ಗಣಿ ಗಲಭೆ, ಮುಂತಾದ ಕೆಲಸಕ್ಕೆ ಬಾರದ ಚರ್ಚೆ ನಡೆದು, ಚರ್ಚೆ ಅತಿರೇಕಕ್ಕೆ ಹೋಗಿ, ಅವಾಚ್ಯ ಪದಗಳ ಬಳಕೆಯಾಗುತ್ತಿತ್ತು. ರಾಜ್ಯದ ಜನರ ಕಣ್ಣಿಗೆ ಕರ್ನಾಟಕ ವಿಧಾನಸಭೆ ಕಾರ್ಗಿಲ್ ಯುದ್ಧ ಭೂಮಿಯಂತೆ ಗೋಚರಿಸುತ್ತಿತ್ತು. ಮನೆಮನೆಗೆ ವೋಟು ಕೇಳಿಕೊಂಡು ಬರುವಾಗ, 'ಅಣ್ಣಯ್ಯ, ದಮ್ಮಯ್ಯ' ಅನ್ನುತ್ತಿದ್ದವರು, ವಿಧಾನಸಭೆಯಲ್ಲಿ 'ಬೊ ಮಗ, ಸೂ ಮಗ' ಪದಗಳ ಬಳಕೆ ಮಾಡುವಾಗ; ಜನರಿಗೆ ಪುಕ್ಕಟೆ ಮನರಂಜನೆ ಸಿಗುತ್ತಿತ್ತೇ ವಿನಃ ಉಪಯೋಗವಂತೂ ಏನೂ ಇಲ್ಲ.
ಅಂತೂ ಇಂತೂ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಯಾಕೋ ಚೂರು ಚಿಂತೆ ಮಾಡಿ, 'ನಮ್ಮ ಡೊಂಬರಾಟ ಇನ್ನು ಸಾಕು. ಎಂತೂ ವೋಟು ಹತ್ತಿರವಾಗುತ್ತಿದೆ, ಇನ್ನಾದರೂ ಸ್ವಲ್ಪ ಬಡವರ ಬಗ್ಗೆ ಮಾತನಾಡೋಣ' ಎಂದು ಭಾವಿಸಿದರೋ ಏನೋ, ಒಟ್ಟಿನಲ್ಲಿ ಇನ್ನು ಮುಂದೆ ವಿಧಾನಮಂಡಲದಲ್ಲಿ ಸುಗಮ ಚರ್ಚೆಯಾಗುತ್ತದೆ ಎಂಬ ನಿರೀಕ್ಷೆ ಮೂಡಿದೆ.
ಯಡಿಯೂರಪ್ಪನವರ ಭೂಹಗರಣವನ್ನು ಕೋರ್ಟ್ ನೋಡಿಕೊಳ್ಳುತ್ತದೆ. ರೆಡ್ಡಿಗಳಿಗೆ C.B.I ಕಾಯುತ್ತಿದೆ. ಇನ್ನಾದರೂ ಸರಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಪ್ರತಿಪಕ್ಷಗಳು ಆರೋಗ್ಯಪೂರ್ಣ ಚರ್ಚೆ ನಡೆಸಬೇಕು. 
ಹಾಗೇ ಸುಮ್ಮನೆ - ಮಾತು ಮಾತಿಗೆ 'ನನ್ನ ಬಳಿ ಸಿ.ಡಿ ಇದೆ' ಎನ್ನುತ್ತಿದ್ದ ಕುಮಾರಣ್ಣನವರಿಗೆ, ನಮ್ಮ ಯಡ್ಡಿಯವರು 'ಹಿಂದೆ ಸಂಸತ್ತಿನಲ್ಲಿ, ಗೌಡರ ಪಂಚೆ ಜಾರಿದ ವಿಡಿಯೋವನ್ನು You tube ಗೆ ಹಾಕುತ್ತೇನೆ' ಎಂದು ಹೆದರಿಸುತ್ತಿರಬೇಕು. ಹಾಗೇ ಕದನವಿರಾಮ ಆಗಿರಬೇಕು ಎಂಬುವುದು ಉಮೇಶನ ಊಹೆ.
                                                                               -ಡಾ.ಶೆಟ್ಟಿ
ಸ್ವಲ್ಪ ಸಮಯ
ಸಂಜೆಯ ಹೊತ್ತು ಕೆಲಸ ಮುಗಿಸಿ, ಅದು ಯಾವುದೋ ಆಲೋಚನೆಗಳನ್ನು ಹೊತ್ತುಕೊಂಡು ಮನೆಗೆ ತೆರಳಬೇಕಾದರೆ ಮನೆಯ ಹೆಂಗಸರು ಟಿ.ವಿ. ಮುಂದೆ ನಿಂತ ನೀರಂತೆ  ಸ್ವಲ್ಪವೂ ಕದಲದೆ ಒಂದೇ ಚಿತ್ತದಲ್ಲಿ ಟಿ.ವಿ ವೀಕ್ಷಣೆಯಲ್ಲಿ ತೊಡಗಿರುತ್ತಾರೆ. 
ಖಡಾಖಂಡಿತವಾಗಿ ಈ ಮಾತನ್ನು ಹೆಂಗಸರ ಮೇಲೆ ಹೊರಿಸುವುದು ತಪ್ಪಾದರೂ ಹೆಚ್ಚಾಗಿ ಈ ಸಮಸ್ಯೆಗಳು ಇರುವುದೇ ಅವರುಗಳಲ್ಲಿ. ಆಲೋಚನೆಗಳಿಗೆ ಸಾಥ್ ನೀಡುವುದು ಬಿಡಿ. ಕಡೆ ಪಕ್ಷ ಒಂದು ಲೋಟ ನೀರು ತಂದುಕೊಡಲು ಸಮಯದ ಅಭಾವ ಇರುತ್ತದೆ. ಮನೆಯ ಗಂಡಸರಿಗೆ ಇಂತಹ ನೋವುಗಳು ಸಾಮಾನ್ಯವಾಗಿರಬಹುದು. ಆದರೆ ಮನೆಗೆ ಅತಿಥಿಗಳು ಬರುವ ಸಂಧರ್ಭವೂ ಇದೆ ಚಾಳಿ ಕೆಲವು ಮನೆಗಳಲ್ಲಿ  ಮುಂದುವರಿಯುತ್ತಿರುತ್ತದೆ. 
ಮನೆಗೆ ಬರುವ ಅತಿಥಿಗೆ ಕಾಫಿ ತಿಂಡಿ ಕೊಟ್ಟು ಸತ್ಕಾರ ಮಾಡುವುದಕ್ಕಿಂತಲೂ ಮನಸ್ಸಿನಿಂದ ಬಾಯಿ ತುಂಬಾ ಮಾತನಾಡಿ ಗೌರವ ಸಲ್ಲಿಸುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಬುವುದು ನಮ್ಮ ಭಾವನೆ. ಮನೆಯೊಳಗೆ ತಿಂಡಿ ತಿನಿಸುಗಳ ಗೋದಾಮು ಇರಬೇಕೆಂದೇನಿಲ್ಲ. ಮಡಿಕೆ ತುಂಬಾ ನೀರಿದ್ದರೆ ಸಾಕು! 
ಮನಸ್ಸನ್ನು ಹಾಳು ಮಾಡುವ ಧಾರಾವಾಹಿಯನ್ನು ನೋಡಿ ನಾಳೆ ಏನಾಗಬಹುದು ಎಂದು ಇಂದೇ ಊಹಿಸಿ ಚಿಂತನೆಯಲ್ಲಿ ಮಗ್ನರಾಗಿ, ಮನೆಯವರ ಚಿಂತೆಗೆ ಸಮಯ ದೊರಕದೆ ಹೋದರೆ ಆ ಕುಟುಂಬವು ಅದು ಯಾವ ನೆಮ್ಮದಿಯನ್ನು ಕಾಣಲು ಸಾಧ್ಯ? ನೀವೇ ಹೇಳಿ 
ಇದರ ಅರ್ಥ ಧಾರಾವಾಹಿಗಳನ್ನು ನೋಡುವುದನ್ನು ಬಿಟ್ಟು ಬಿಡಿ ಎನ್ನುವುದಲ್ಲ. ಹೆಚ್ಚಿನ ಧಾರಾವಾಹಿಗಳ ಕಥೆಯಂತೆ ನಿಮ್ಮ ಜೀವನವೂ ಆಗುವುದು ಬೇಡವೆಂಬುದು ನಮ್ಮ ಬಯಕೆ.
                                      -ಕೆ.ಪಿ.ಭಟ್

Thursday, February 24, 2011

ವಾರ್ಷಿಕೋತ್ಸವ ವರ್ಷಾ೦ತಿಕವಾಗದಿರಲಿ  
ಕಾಲೇಜಿನ ವಾರ್ಷಿಕೋತ್ಸವದಿಂದ ನಮ್ಮ ಉಮೇಶ ಎದ್ದು ಬಿದ್ದು ಓಡುತ್ತಿದ್ದ. 'ಯಾಕಯ್ಯ ಈ ರೀತಿ ಓಡುತ್ತಿದ್ದೀಯ?'. ಎಂದು ನಾನು ಕೇಳಿದಾಗ ನನಗೂ ನಗು ತಡೆದುಕೊಳ್ಳಲಾಗಲಿಲ್ಲ. ಯಾಕೆಂದರೆ, ಕಾಲೇಜಿನಲ್ಲಿ ವಾರ್ಷಿಕೋತ್ಸವ ಎಂದು ನಮ್ಮ ಉಮೇಶ ಫುಲ್ ಸಿಂಗಾರಗೊಂಡು ಹೋಗಿದ್ದನಂತೆ. ಕಾಲೇಜಿನಲ್ಲಿ 'ಈ ದಿನ ವೈವಿಧ್ಯಮಯ ಡ್ಯಾನ್ಸ್ ಗಳನ್ನೂ ಹಾಡುಗಳನ್ನು ನೋಡಬಹುದು, ಯಾವತ್ತಿನಂತೆ ಪಾಠದ ಟೆನ್ಶನ್ ಇಲ್ಲ' ಎಂಬ ಭಾವನೆಯಲ್ಲಿ ಉಮೇಶ ಕಾಲೇಜಿಗೆ ಹೋಗಿದ್ದಂತೆ. ಆದರೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಯಾರೋ 4,5  ಜನ ಮುದುಕರು ಸೇರಿಕೊಂಡು ಮಧ್ಯಾನದ ವರೆಗೆ ಭರ್ಜರಿ ಭಾಷಣ ಹೊಡೆದರಂತೆ, ಅದನ್ನು ಸಹಿಸಿಕೊಂಡು ಇನ್ನಾದರು ಕಾರ್ಯಕ್ರಮಗಳು ಆರಂಭವಾಗಬಹುದು ಎಂದುಕೊಂಡ ಉಮೇಶ, ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದ್ದನಂತೆ. ಆದರೆ ಯಾವುದೋ ಒಬ್ಬಳು ಹುಡುಗಿ ಚಿತ್ರ ವಿಚಿತ್ರ ವೇಷ ಧರಿಸಿ, ಕುಣಿದಾಡಲು ಆರಂಭಿಸಿದಳಂತೆ. ಅದನ್ನು ಕಂಡವನಿಗೆ ತನ್ನ ಊರಿನ ಮಾರಮ್ಮನ ಜಾತ್ರೆಯ ನೆನಪಾಗಿ ಹೆದರಿ ಓಡಿ ಹೋಗುತ್ತಿದ್ದ. ಪಾಪ ಅವನಿಗೆ ಕೊನೆಯ ವರೆಗೂ ಆ ಹುಡುಗಿ ಮಾಡಿದ್ದು ಭರತನಾಟ್ಯವೆಂದು ಗೊತ್ತೇ ಆಗಲಿಲ್ಲ!
ಇಂತಹ ಕಾಲೇಜು ವಾರ್ಷಿಕೋತ್ಸವಗಳು ಬೇಕೇ ಓದುಗರೇ? ನೀವೊಮ್ಮೆ ಕೆಲ ಕಾಲೇಜಿನ ವಾರ್ಷಿಕೋತ್ಸವಗಳಿಗೆ ಹೋಗಿ ನೋಡಿ ಇಡೀ ಕಾರ್ಯಕ್ರಮಗಳು ಬೋರು ಹೊಡೆಸುತ್ತವೆ. ಈಗಿನ ವಿದ್ಯಾರ್ಥಿಗಳಿಗೆ ಭರತನಾಟ್ಯ, ತಾಳಮದ್ದಳೆ, ಹರಿ ಕಥೆಯನ್ನು ಕಂಡರೆ ಅಷ್ಟಕಷ್ಟೆ. ಆ ಕಾರ್ಯಕ್ರಮಗಳಿಗೆ ಖಾಲಿ ಕುರ್ಚಿಗಳೇ ವೀಕ್ಷಕರು. ಅಂತಹದರಲ್ಲಿ ಅದನ್ನೇ ಹೆಚ್ಚು ಹೆಚ್ಚು ಹಾಕಿ ವಿಧ್ಯಾರ್ಥಿಗಳಿಗೆ ಬೋರು ಹೊಡೆಸಿ ಬಿಡುತ್ತಾರೆ. ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳೇ ಮುಖ್ಯಪಾತ್ರ ವಹಿಸುವವರು. ಆದರೆ ಅವರ ಭಾವನೆಗಳಿಗೆ ಬೆಲೆ ಕೊಡದೆ, ಸಂಸ್ಕೃತಿ, ಸಭ್ಯತೆ ಎಂದುಕೊಂಡು, ಓಬಿರಾಯನ ಕಾಲದ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇನ್ನಾದರೂ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ತಮ್ಮ ಸೀಮಿತ ಮನಸ್ಸನ್ನು ಬದಿಗಿಟ್ಟು, ಒಂದು ದಿನವಾದರೂ ಉದಾರವಾಗುವುದು ಒಳಿತು.
                                                 -ಡಾ.ಶೆಟ್ಟಿ 
ಮತ್ತೆ ಅಂತೆಯೇ ಆಗದಿರಲಿ 
ಈ ಬಾರಿ ಯಡಿಯೂರಪ್ಪನವರು ತಮ್ಮ ಸೋಲುಗಳು ಮತ್ತು ಸೋಲಿನಿಂದ ಹೊರಬರುವ ಯೋಜನೆಯನ್ನು ಮನನ ಮಾಡಿ ಬಜೆಟ್ ಮಂಡನೆ ಮಾಡಲಿದ್ದಾರೆ. ಒಂದು ವೇಳೆ ಮಧ್ಯಂತರ ಚುನಾವಣೆ ಎದುರಾದರೆ, ಅದಕ್ಕೂ ಪೂರಕವಾಗುವಂತೆ ಬಜೆಟ್ ಅನ್ನು ತಯಾರಿಸಿ ಜನರ ಮನವೊಲಿಸಲಿದ್ದಾರೆ ಎನ್ನಬಹುದು.
ಕೃಷಿಕರಿಗೆ ಶೇ 1ರ ಬಡ್ಡಿ ದರದಲ್ಲಿ ಬೆಳೆ ಸಾಲ, ಒಣಭೂಮಿ ಅಭಿವ್ರದ್ದಿ  ಯೋಜನೆ, ಭತ್ತ-ಕಬ್ಬು ನಾಟಿ ಮತ್ತು ಕಟಾವು ಯಂತ್ರಗಳಿಗೆ ಸಬ್ಸೀಡಿ, ಬಸವೇಶ್ವರ ವಿ.ವಿ ಸ್ಥಾಪನೆ, ಶಾಸಕರ ನಿಧಿ 2 ಕೋಟಿ ರೂ ಗೆ  ಹೆಚ್ಚಳ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕೃತಿಗಳು ಕಡಿಮೆ ಬೆಲೆಗೆ ಮಾರಾಟ, ವಾಜಪೇಯಿ ಆರೋಗ್ಯಶ್ರೀ ಯೋಜನೆ ಮೈಸೂರು ವಿಭಾಗಕ್ಕೆ ವಿಸ್ತರಣೆ, ಅಕ್ಕಿ-ಬೇಳೆ ಕಾಳು ಮೇಲಿನ ತೆರಿಗೆ ಕಡಿತ. ಇವು ಮುಂಗಡ ಪತ್ರದಲ್ಲಿ ಪ್ರಕಟಣೆ ಹೊರಬೀಳುವ ನಿರೀಕ್ಷೆಯಲ್ಲಿರುವ ಪ್ರಮುಖ ಯೋಜನೆಗಳು.
ಈ ಯೋಜನೆಗಳು ಇದೇ ರೀತಿ ಪ್ರಕಟಗೊಂಡು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ಬಂದರೆ, ಇದರಿಂದ ಯಾರಿಗೆ ಲಾಭವಾಗುತ್ತದೆಯೋ, ನಷ್ಟವಾಗುತ್ತದೆಯೋ ಎಂಬ ಚರ್ಚೆಯೇ ಬೇಡ. ಯಾಕೆಂದರೆ?  ಇದು ಸಂಪೂರ್ಣ ಜನ ಪರ ಬಜೆಟ್. ಮೇಲೆ ಹೇಳಿರುವ ಎಲ್ಲಾ ಯೋಜನೆಗಳಿಂದ ಜನರಿಗೆ ಅತ್ಯಂತ ಲಾಭವಿದೆ. ಆದರೆ ಪ್ರಶ್ನೆ ಇರುವುದು , ಈ ಎಲ್ಲಾ ಯೋಜನೆಗಳು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ಬರುತ್ತದೆಯೋ ಇಲ್ಲವೋ ಎಂದು.ಏಕೆಂದರೆ, ಕಳೆದ ಬಾರಿ ಬಜೆಟ್ ನಲ್ಲಿ ಪ್ರಕಟಗೊಂಡ 'ಕೆಲವು' ಯೋಜನೆಗಳು ನೆನೆಗುದಿಗೆ ಬಿದ್ದಿದೆ. ಇನ್ನೂ ಕೆಲವು ಯೋಜನೆಗಳು ಜಾರಿಗೆ ಬರಲಿಲ್ಲ. ಬರೀ ಆರಂಭಶೂರತನಕ್ಕೆ  ಮತ್ತು ಮತಗಳಿಕೆಗೆ ಮಾಡುವ ಗಿಮಿಕ್ನಂತೆ ಆವತ್ತಿನ ಬಜೆಟ್ ಆಗಿದೆ ಎಂದರೂ ತಪ್ಪಲ್ಲ. ಈ ಬಾರಿಯೂ ಹಾಗೇ ಆಗದಿರಲಿ ಎಂದು ನಾವು ಆಶಿಸೋಣ. 
ನಾವು ಯಾವತ್ತೂ ಆಶಾವಾದಿಗಳಾಗಿರಬೇಕು. ಆದರೆ ರಾಜ್ಯದ ತಲೆಯ ಮೇಲಿರುವ ಸಾಲಕ್ಕಿಂತ ಅಧಿಕ ಮೊತ್ತದ ಬಜೆಟ್ ಮಂಡಿಸುತ್ತೇವೆ ಎಂದು ಬೊಂಬಡ ಬಡೆದರೆ ಯಾರಿಗೆ ನಗು ಬರಲ್ಲ ಹೇಳಿ ? ಇದರಿಂದ ಜನ ಯಾವತ್ತಿನಂತೆ ನಿರಾಶಾವಾದಿಗಳಾಗುತ್ತಾರೆ. ನಾವೇ ಮಾಡಿದ ತಪ್ಪಿಗೆ ನಾವೇ ಶಿಕ್ಷೆ ಅನುಭವಿಸ ಬೇಕು ಬಿಡಿ.
                                  -ಡಾ.ಶ್ರೇ 
ದಶಮುಖ ಮುಂಡ
ಹೆಂಡತಿಯನ್ನು ಕೊಂದನೋ ಅಥವಾ ಅವಳೇ ಆತ್ಮಹತ್ಯೆ ಮಾಡಿದಳೋ ತಿಳಿಯದು. ಸರಕಾರದ ಕ್ರಪಾಶಯ ಇರುವುದರಿಂದ, ಬೇಲಿಯನ್ನೇ ಹಾವಿನ ಮೇಲೆ ಹರಿಸಬಹುದು. ಅಲ್ಲವೇ? ಉಡುಪಿ ಶಾಸಕ ರಘುಪತಿ ಭಟ್ ಪತ್ನಿಯ ಸಾವಿನ ಸಂಧರ್ಭ ಬಹಳಷ್ಟು ಬೆಳಕಿಗೆ ಬಂದಿದ್ದರು. ತದ ನಂತರ ಈದಿನಗಳಲ್ಲಿ ಹೊಸ ರೀತಿಯಲ್ಲಿ ತನ್ನ ಮಾನವಿಯಾತೆ ಮೆರೆಯುತ್ತಿದ್ದಾನೆ. 
ಅಥಿತಿ ಉಪನ್ಯಾಸಕರಿಗೆ ವರ್ಷಕೊಮ್ಮೆ ದೊರಕುವ ವೇತನದಿಂದ ಕುಟುಂಬ ವೆಚ್ಚ ಭರಿಸುವುದು ಕಷ್ಟ ಈ ನಿಟ್ಟಿನಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಇದರ ನಡುವೆ ರಘುಪತಿ ಭಟ್ ಉಡುಪಿಯ ಎರಡು ಕಾಲೇಜುಗಳಿಗೆ ಪುನಃ ಹೊಸ ಅಥಿತಿ ಉಪನ್ಯಾಸಕರನ್ನು ನೇಮಕ ಮಾಡಲು ದಿನಪತ್ರಿಕೆಗಳಲ್ಲಿ ಜಾಹಿರಾತು ಕೊಟ್ಟಿದ್ದಾನೆ. ಪ್ರಸ್ತುತ ಸರಕಾರಿ ಕಾಲೇಜುಗಳಲ್ಲಿರುವ ಅಥಿತಿ ಉಪನ್ಯಾಸಕರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಎಳ್ಳಷ್ಟು ಮಾನವೀಯತೆಯನ್ನು ತೋರದೆ ಇರುವುದು ಆತನ ನೀಚ ವ್ಯಕ್ತಿತ್ವವನ್ನು ಎತ್ತಿ ತೋರುತ್ತದೆ. 
ಹೆಂಡತಿ ಸತ್ತು ಮುಂಡನಾಗಿರುವ ಇವನು ಅದು ಯಾವ ಸೀಮೆ ಉದ್ದಾರ ಮಾಡಲು ಈತನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದರೋ ಅರ್ಥವಾಗುತ್ತಿಲ್ಲ. ಮಾನವೀಯತೆ ಪದದ ಅರ್ಥವೇ ತಿಳಿಯದ ತನ್ನ ಹೆಂಡತಿ ಸತ್ತ ಸಂಧರ್ಭದಲ್ಲಿ ಒಂದೇ ಸಮನೆ ಮಳೆ ಬಂದಂತೆ ಕಣ್ಣೀರು ಧಾರೆಯನ್ನು ಹರಿಸಿದ್ದ. 
ನಾನಾ ರೀತಿಯ ಮುಖವಾಡಗಳನ್ನು ಧರಿಸಿರುವ ವ್ಯಕ್ತಿಗಳಿಂದಲೇ ಇಂದು ಹೆಚ್ಚಿನ ಮನೆಯಲ್ಲಿ ನೆಮ್ಮದಿ ಮಾಯವಾಗಿದೆ. ನ್ಯಾಯದೇವತೆಯ ಕಣ್ಣಿನಿಂದ ಕಪ್ಪು ಪಟ್ಟಿಯನ್ನು ತೆಗೆದು ಸೋಡಾ ಗ್ಲಾಸ್ ಹಾಕುವ ತವಕದಲ್ಲಿ ನಾನಿದ್ದೇನೆ. 
                                            -ಕೆ.ಪಿ.ಭಟ್ 

Wednesday, February 23, 2011

ಇಸ್ರೇಲ್ ಹುಟ್ಟಿದ ಕಥೆ 
ಇಸ್ರೇಲ್ ಎಂಬ ಪುಟ್ಟ ದೇಶವನ್ನು ನೆನಪು ಮಾಡಿಕೊಂಡರೆ ನಮ್ಮ ಕಣ್ಣೆದುರು ಯಹೂದಿ ಧರ್ಮ ಬಂದು ನಿಲ್ಲುತ್ತದೆ. ಯಹೂದಿಗಳನ್ನು ನೆನೆದರೆ ಕೈಗಾರಿಕೆ,ಉತ್ಪಾದನೆ, ವ್ಯಾಪಾರ ಮೊದಲಾದ ಚಟುವಟಿಕೆಗಳಲ್ಲಿ ಅವರು ನೀಡಿರುವ ಅಪಾರ ಕೊಡುಗೆ ನೆನಪಾಗುತ್ತದೆ. ಯಹೂದಿ ಧರ್ಮವೆಂದರೆ ಅದು ಛಲಕ್ಕೆ ಮತ್ತೊಂದು ಹೆಸರು. ನೀವೊಮ್ಮೆ ವಿಶ್ವದ ಭೂಪಟವನ್ನು ತೆಗೆದು ನೋಡಿ, ಇಸ್ರೇಲ್ ದೇಶದ ಅಕ್ಕ-ಪಕ್ಕದಲ್ಲಿ ಇರುವ ದೇಶಗಳ ಕಡೆಗೆ ಕಣ್ಣಾಡಿಸಿ: ಯಾಕೆಂದರೆ ಇಸ್ರೇಲಿನ ಸುತ್ತಮುತ್ತ ಅರಬ್ ದೇಶಗಳೇ ಮುತ್ತಿಕೊಂಡಿವೆ. ಆ ಎಲ್ಲಾ ದೇಶಗಳಿಗೆ ಇಸ್ರೇಲ್ ಶತ್ರು ರಾಷ್ಟ್ರ. ನಮ್ಮ ದೇಶದ ಪಕ್ಕ ಇರುವ ಒಂದು ಪಾಕಿಸ್ತಾನದ ಉಪಟಳವನ್ನೇ ನಮ್ಮಿಂದ ಸಹಿಸಲಾಗುತ್ತಿಲ್ಲ, ಅಂತಹದರಲ್ಲಿ ಇಸ್ರೇಲ್ ಎಷ್ಟು ಕಷ್ಟಪಟ್ಟಿರಬಹುದು ಊಹಿಸಿ.
ಆದರೂ ಇಸ್ರೇಲ್ ಎಂದು ಜಗತ್ತಿನ ಕಣ್ಣುಕುಕ್ಕುವಂತೆ ಬೆಳೆಯುತ್ತಿದೆ. ಸದಾ ಯುದ್ದ ಭೀತಿಯಲ್ಲಿದ್ದರು, ಈ ದೇಶ ಅಪಾರ ಅಭಿವೃದ್ಧಿ ಹೊಂದಿದೆ. ಈ ಅಭಿವೃದ್ಧಿಯ ಹಿಂದೆ ಯಹೂದಿ ಜನರ ಅನನ್ಯ ಉತ್ಸಾಹವಿದೆ, ಬೆವರು ಸುರಿಸಿದ ಶ್ರಮವಿದೆ, ಅವರ ರಕ್ತದ ಕಣ-ಕಣದಲ್ಲೂ ಹರಿಯುವ ದೇಶ ಭಕ್ತಿಯಿದೆ.
ಈ ಯಹೂದಿಗಳ ಇತಿಹಾಸ ಕೂಡ interesting ಆಗಿದೆ, ಎಲ್ಲೂ ಬೋರು ಹೊಡಿಯದ ಇವರ ಕಥೆಯನ್ನೊಮ್ಮೆ ಓದಿಕೊಳ್ಳಿ;
ಯಹೂದಿಗಳ ಪೂರ್ವಜರು ಅರಬ್ ಪ್ರಸ್ಥಭೂಮಿಯ ಮರಳುಗಾಡಿನಲ್ಲಿ ಗುಂಪಾಗಿ ವಾಸಿಸುತ್ತಿದ್ದರು. ಅವರನ್ನು ಇಸ್ರೇಲೈಟ್ ಕುಲದವರೆಂದು ಕರೆಯುತ್ತಿದ್ದರು. ಆ ಅಲೆಮಾರಿ ಗುಂಪಿನಲ್ಲಿ ಮುಖ್ಯವ್ಯಕ್ತಿ ಏಬ್ರಾಹಂ. ಇವನು ಸುಮಾರು ಕ್ರಿ.ಪೂ. 2000 ದ ಹೊತ್ತಿಗೆ ಹೀಬ್ರೂ ಕುಟುಂಬದ ಯಜಮಾನನಾಗಿದ್ದನು. ಒಂದು ದಿನ ಏಬ್ರಾಹಂ ಗೆ ಕನಸು ಬೀಳುತ್ತದೆ, ಆ ಕನಸಿನಲ್ಲಿ ಅವನು ಪೂಜಿಸುವ ದೇವರು ಯಹೂ ವಿಶೇಷ ಸಂದೇಶ ಪ್ರವಚಿಸುತ್ತಾನೆ. ಅದರ ಪ್ರಕಾರ ' ಯಹೂದಿಗಳು ಅಲೆಮಾರಿ ಬದುಕು ಬಿಟ್ಟು, ಕೆನಾನ್(ಇಂದಿನ ಪ್ಯಾಲಸ್ತೀನ್) ಎಂಬ ಪ್ರದೇಶಕ್ಕೆ ವಲಸೆ ಹೋಗಿ, ಖಾಯಂ ಆಗಿ ನೆಲೆಸಬೇಕು' ಎಂಬ ಆಜ್ಞೆ ಮಾಡುತ್ತಾನೆ.ಅಲ್ಲಿಂದ ಮುಂದೆ ಯಹೂದಿಗಳಿಗೆ ಪ್ಯಾಲಸ್ತೀನ್ 'God promised land'(ದೇವರು ಕೊಟ್ಟ ಭೂಮಿ) ಆಗುತ್ತದೆ. 
ಇಲ್ಲಿಂದ ಮುಂದೆ ಯಹೂದಿಗಳು, ತುಂಬಾ ಕಷ್ಟಪಟ್ಟು ಪ್ಯಾಲಸ್ತೀನ್ ತಲುಪಿ, ತಮ್ಮ ಸಾಮ್ರಾಜ್ಯ ಸ್ಥಾಪಿಸುತ್ತಾರೆ. ನೆನಪಿಡಿ ಇದು ಕ್ರಿಸ್ತಪೂರ್ವದಲ್ಲಿ ನಡೆದ ಘಟನೆ! ಆದರೆ ವಿಪರ್ಯಾಸವೆಂದರೆ, ರೋಮನ್ನರು ಮತ್ತು ಗ್ರೀಕರು ಪ್ಯಾಲಸ್ತೀನ್ ಅನ್ನು ಆಕ್ರಮಿಸಿ ಯಹೂದಿಗಳನ್ನು ಅಲ್ಲಿಂದ ಓಡಿಸುತ್ತಾರೆ. ಯಹೂದಿಗಳು ಪುನಃ ಬೇರೆ ಬೇರೆ ದೇಶಗಳಿಗೆ ಸೇರಿಕೊಂಡು ಬಲಿಷ್ಠ ಜನಾಂಗವಾಗಿ ರೂಪುಗೊಳ್ಳುತ್ತಾರೆ. 
ಆದರೆ ವಿಶೇಷವೆಂದರೆ ಯಹೂದಿಗಳು ಯಾವುದೇ ದೇಶಕ್ಕೆ ಹೋದರು, ಅವರ ಸಂಸ್ಕೃತಿ, ಭಾಷೆಯನ್ನು ಉಳಿಸಿಕೊಂಡಿರುತ್ತಾರೆ.ದ್ವಿತೀಯ ಮಹಾಯುದ್ದದ ಸಮಯದಲ್ಲಿ ಯಹೂದಿಗಳು ಪುನಃ ಸಂಘಟಿತರಾಗಿ, ಇಸ್ರೇಲ್ ಗೆ ಹೋಗಿ ನೆಲೆಸುತ್ತಾರೆ. ಅಲ್ಲಿಯ ಮೂಲನಿವಾಸಿಗಳ ಜೊತೆ ಯುದ್ದ ಮಾಡಿ, ಮೇ 14 , 1948 ರಲ್ಲಿ ಇಸ್ರೇಲ್ ಪುನಃ ಯಹೂದಿಗಳ ವಶವಾಗುತ್ತದೆ. 
ಅಂತೂ ಇಂತೂ 2000 ವರ್ಷಗಳ ಹಿಂದೆ ತಮ್ಮ ಪೂರ್ವಜರು ನೆಲೆಸಿದ್ದ ಪ್ಯಾಲಸ್ತೀನ್ ನಲ್ಲಿ,ತಮ್ಮ ಸಾಮ್ರಾಜ್ಯ ಬೆಳೆಸುತ್ತಾರೆ. ಇದು ಯಹೂದಿಗಳ ಯಶೋಗಾಥೆ.
ಜಗತ್ತಿನ ಯಾವ ಜನಾಂಗ ಕೂಡ ಇಷ್ಟು ಕಷ್ಟಪಟ್ಟು ತಮ್ಮ ಧರ್ಮದ ಪವಿತ್ರ ಸ್ಥಳವನ್ನು ಉಳಿಸಿಕೊಂಡ ಉದಾಹರಣೆಗಳಿಲ್ಲ. ಈ ನಿಟ್ಟಿನಲ್ಲಿ ಯಹೂದಿಗಳನ್ನು ಮೆಚ್ಚಲೇ ಬೇಕು. 
                                             -ಡಾ.ಶೆಟ್ಟಿ 
ಭವಾಂತರ ಸಾಧಕರು 
ಅದೊಂದು ಅದ್ಬುತ ಲೋಕ, ಲೋಕ ಎಂದು ಅದನ್ನು ಹೇಳುವುದೇ ತಪ್ಪು. ಭವ ಮತ್ತು ಸ್ವರ್ಗದ ನಡುವಿನ Trance ಅದು ಎಂದು ಹೇಳುವುದೇ ಸೂಕ್ತ. ಭವದ ಎಲ್ಲಾ ಸೂಕ್ಷ್ಮತೆಗಳನ್ನು ಅರಿದು ಕುಡಿದು, ಮದ್ದು ಮಾಡಿ ಅದನ್ನು ಕಕ್ಕಿ, ಭವದ ಜನರೆಲ್ಲರೂ ಕಕ್ಕಾಬಿಕ್ಕಿಯಾಗುವಂತೆ ಮಾಡುವ ಭವ್ಯಾಂತರ ಲೋಕ. ಅತ್ತಕಡೆ, ಸ್ವರ್ಗದ  ಸ್ವರೂಪಗಳಲ್ಲಿ, ನೈಪುಣ್ಯತೆಗಳಲ್ಲಿ, ನಲಿದು ಕುಣಿದು ಅದನ್ನು ಸಾಧನೆಯಿಂದ ಆರಾಧಿಸಿ, ಸ್ವರ್ಗಾಂತರದ ಲೋಕದಲ್ಲಿ ಭವ್ಯವಾಗಿ ಬಾಳುತ್ತಾರೆ. ಯಾರಿವರು? ಇಷ್ಟು ಅತಿ ಸೂಕ್ಷ್ಮ ಭಾವನೆಯನ್ನು ಬರೆದಾಗಲಾದರೂ ಎಲ್ಲರಿಗೂ ಅರ್ಥವಾಗಬೇಕು. ಅರ್ಥವಾಗದಿದ್ದರೆ ಬಿಡಿ. ನಾನೇ ಹೇಳುತ್ತೇನೆ. ಇವರೇ ರುದ್ರನ ಆರಾಧಕರು, ಅರ್ಥಾತ್ ಶಿವನ ಮೂರನೇ ಮುಖವಾಗಿರುವ ರುದ್ರರು ಇವರು.  Yes ಇವರೇ ಅಘೋರಿಗಳು.
ಜೀವನದ  ಜಂಜಾಟದಿಂದ  ವಿಮುಖರಾಗಿ, ನಾಮ  ಬಳಿದು, ಶಿವನನ್ನು ಬದುಕೇ ಅಲ್ಲದ ಬದುಕಿನ ದೇವರನ್ನಾಗಿಸಿ ವಿಚಿತ್ರವಾಗಿ ಆರಾಧಿಸುತ್ತಾರೆ. ಅವರ ಆರಾಧನೆಯೇ ಒಂದು ವಿಸ್ಮಯ,ವಿಚಿತ್ರ, ನಿಗೂಢ, ಭಯಾನಕ. ಗಂಗೆಯಲ್ಲಿ ತೇಲಿ ಬಂದ ಹೆಣ ಭಕ್ಷಣಾ ವಿಧಿ , ಮಸಣದಲ್ಲಿ  ನಾಯಿಯನ್ನು ತಿನ್ನುವುದು, ಮಸಣದಲ್ಲಿ ಅರ್ಧ ಬೆಂದ ಹೆಣವನ್ನು ತಿನ್ನುವುದು, ಕೋಳಿಯನ್ನು ತಿನ್ನುವುದು, ಅವರ ಮೂತ್ರವನ್ನೇ ಕುಡಿಯುವುದು. ಸಾಧನಾ ಸುತ ಯೋಗದ ಮೂಲಕ ಆತ್ಮದ ಹಿಡಿತ, ಜತೆಗೆ ಇದೆಲ್ಲವನ್ನೂ ಮಾಡಲು ಬೇಕಾಗಿರುವ ರಾಗವನ್ನು ಮನದಲ್ಲಿ ಉದಿಸಲು ಸಹಾಯಕವಾಗುವ  ಆಯುರ್ ಪುತ್ರ ಗಾಂಜಾದ ಸೇವನೆ. 
ಇವರು ಮನುಜನಿಂದ ದೂರವಿದ್ದು ಗಂಗೆಯಲ್ಲಿಯೋ ಕಾಶಿಯಲ್ಲಿಯೋ, ಮತ್ತೆ ಹಲವು ಅಜ್ಞಾತ ಸ್ಥಳಗಳಲ್ಲಿ ಅವಿತು ಕುಳಿತುಕೊಂಡು ಸಾಧನೆ ಮಾಡುತ್ತಿರುತ್ತಾರೆ. ಪರಮಾತ್ಮನನ್ನು ಸೇರಲು. ಭವದ ಎಲ್ಲಾ ಸಂಭಂಧಗಳನ್ನು ಕಡಿದು ಜ್ಞಾನ ಸಾಗರವನ್ನು ತಲುಪಿ, ಸ್ವರ್ಗಾವಸ್ಥೆಯ ಅವಸ್ಥೆಯಲ್ಲಿ ಮುಕ್ತಿ ಸಂಕೇತವಾಗಲು ಯೋಗ ನಿರತರಾಗಿರುತ್ತಾರೆ. 
ಭವಕ್ಕೆ ಎಲ್ಲಾ ಸಂದೇಶವನ್ನು ಸಾರುವ ಹಾಗು ಯಾವ ಸಂದೇಶವನ್ನೂ ಸಾರದೆ ಇರುವ ಅವಸ್ಥೆಯಲ್ಲಿ ಜನರಿಗೆ ಅರ್ಥವಾಗುವ ಇವರ ಬದುಕನ್ನು ಅಧ್ಯಯನ ಮಾಡುವುದೇ ಮತ್ತೊಂದು ಸಾಧನೆ. ಅಂದರೆ ಎಲ್ಲರೂ ಇದೆ ಬದುಕನ್ನು ಬದುಕಬೇಕು ಎಂದು ಹೇಳುವುದಲ್ಲ, ಆದರೆ ಅವರ ಬದುಕನ್ನು ಅವಹೇಳನವಂತೂ ಮಾಡುವುದು ಶುದ್ಧ ತಪ್ಪು. ಒಮ್ಮೊಮ್ಮೆ ಆಗಾಗ ಬದುಕಲ್ಲಿ ತೀರಾ ನಿರಾಶರಾದಾಗ, 'ಅವರ ಹಾಗೆ ಆದರೆ' ಎಂದು ಅನಿಸುವುದಂತೂ  ಸತ್ಯ 
                                           -ಡಾ.ಶ್ರೇ 

Tuesday, February 22, 2011

ಪ್ಲಾನಿಂಗ್ ಅಗತ್ಯ 
ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು, ಎಷ್ಟು ಬೊಬ್ಬೆ ಹೊಡೆದು, ತಾವು ಕರ್ನಾಟಕವನ್ನು ಪ್ರಕಾಶಿಸುತ್ತೇವೆ ಎಂದರೂ ಇನ್ನೂ 3 ರಿಂದ 4 ವರ್ಷಗಳ ಕಾಲ ರಾಜ್ಯ ಬಹಳಷ್ಟರಮಟ್ಟಿಗೆ ವಿದ್ಯುತ್ ಕೊರತೆಯನ್ನು ಎದುರಿಸಲಿದೆ. ಸಚಿವೆ ಕರಂದ್ಲಾಜೆ ಏನೂ ಕೆಲಸ ಮಾಡದೆ ಸುಮ್ಮನೆ ಕುರ್ಚಿಯಲ್ಲಿ ಕೂತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅವರು ಸರಿಯಾದ ರೀತಿಯ ಪ್ಲಾನಿಂಗ್ ಇಲ್ಲದೆ ಯೋಜನೆಯನ್ನು ಹೊರಡಿಸಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎನ್ನಬಹುದು.
ಯಾವೊದೋ ವಿರೋಧ ಪಕ್ಷ, ವೋಟ್ ಬ್ಯಾಂಕ್ ಇನ್ನಿತರ ಒತ್ತಡಗಳಿಂದ ಮಣಿದು ಕರಂದ್ಲಾಜೆಯವರು, ಶಾಕಿನಿಂದ ಹೊರಬರಲು ತ್ವರಿತ ಯೋಜನೆಗಳನ್ನು ಹೊರಡಿಸಿರುವುದೇ ಇದಕ್ಕೆ ಮೂಲ ಕಾರಣ. ಒಬ್ಬ ವ್ಯಕ್ತಿ ಯಾವತ್ತೂ ಸಮಯವನ್ನು ಚೇಸ್ ಮಾಡಿ ಆಲೋಚನೆ ಮಾಡಿ ಗೆಲ್ಲುತ್ತೇನೆ ಎಂದು ಹೋದರೆ ಗೆಲುವು ಸಾಧ್ಯವಿಲ್ಲ. ಒಂದು ವೇಳೆ ಗೆಲುವು ದೊರೆತರೂ ಆ ಗೆಲುವು ಸ್ವಲ್ಪ ದಿನದ ಮಟ್ಟಿಗೆ ಮಾತ್ರ ಸೀಮಿತವಾಗಿರುತ್ತದೆ. ಶೋಭಾ ಅವರ ಸ್ಥಿತಿಯೂ ಹೀಗೆ ಆಗಿದೆ. ಮೊನ್ನೆ ಮೊನ್ನೆ ಅವರು ಹೊಸ ಮನೆಗಳಿಗೆ ಸೋಲಾರ್ ಕಡ್ಡಾಯ ಎಂಬ ಯೋಜನೆಯನ್ನು ಹೊರಡಿಸಿ ಮಾಧ್ಯಮ ಮಿತ್ರರಿಂದ ಹಾಗು ಜನಗಳಿಂದ ಹೊಗಳಿಕೆ ಪಡೆದುಕೊಂಡರು. ಆದರೆ ವಾಸ್ತವದಲ್ಲಿ ಆ ಯೋಜನೆ ನೆನೆಗುದಿಗೆ ಬಿದ್ದಿದೆ. It is just because of failure in proper planning.
ರಾಜ್ಯದಲ್ಲಿ ಇವತ್ತು 165 ದಶಲಕ್ಷ ಯುನಿಟ್ ಅಷ್ಟರಮಟ್ಟಿಗೆ ವಿದ್ಯುತ್ ಬೇಡಿಕೆ ಇದೆ. ಒಟ್ಟು ರಾಜ್ಯ ಈಗ 8 ರಿಂದ 10 ದಶ ಲಕ್ಷ ಯುನಿಟ್ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ. ಆದರೆ 2010-11  ರ ಬಜೆಟ್ ನಲ್ಲಿ ಇಂಧನಕ್ಕೆ ಮೀಸಲಿರಿಸಿದ ಹಣ ಕೇವಲ 3547 ಕೋಟಿ. ವಿಶ್ಲೇಷಣಾತ್ಮಕವಾಗಿ ಹೇಳುವುದಾದರೆ ಈ ಹಣ ಎಲ್ಲಿಗೂ ಸಾಲುವುದಿಲ್ಲ. ಏಕೆಂದರೆ, ಇದರ ಅರ್ಧದಷ್ಟು ಹಣವನ್ನು ರಾಜ್ಯ ಕಳೆದ 10 ತಿಂಗಳಿನಿಂದ ವಿದ್ಯುತ್ ಖರೀದಿಗೆಂದೇ ವ್ಯಯಿಸಿದೆ. ಹಣ ಮುಡಿಪು ಇಡಬೇಕು ಎಂಬ ಕೇವಲ ಕಾರಣಕ್ಕೆ ಮಾತ್ರ ಹಣವನ್ನು ಮೀಸಲಿಟ್ಟಿದ್ದಾರೆ ಎಂದೆನಿಸುತ್ತದೆ. ರಾಜ್ಯದಲ್ಲಿ ಸಾಕಷ್ಟು ವಿದ್ಯುತ್ ಘಟಕ ಸ್ಥಾಪನೆಯ ಯೋಜನೆಗೆ ಹಸಿರು ನಿಶಾನೆ ದೊರೆತಿದ್ದರೂ, ಅಲ್ಲಿನ ಕಾಮಗಾರಿಯೂ ಬಹಳ ವಿಳಂಬವಾಗುತ್ತಿದೆ. ಮತ್ತೆ ಬೇಜಾವಾಬ್ಧಾರಿ.
ಒಟ್ಟಾರೆಯಾಗಿ, ಇಂಧನ ಸಚಿವರು ಇವೆಲ್ಲವನ್ನು ಕೂಲಂಕುಷವಾಗಿ ಗಮನಿಸಿ, ಕುಳಿತು ಸರಿಯಾದ ಪೂರ್ವತಯಾರಿ ಮಾಡಿ, ಅದಕ್ಕೆ  ತಕ್ಕ ಹಣ ವ್ಯಯಿಸಿ ಪ್ರಾಮಾಣಿಕವಾಗಿ ಮುಂದುವರೆದರೆ ಸಮಸ್ಯೆ ಬಗೆಹರಿದೀತು ಎಂಬುವುದು ನಮ್ಮ ಭಾವನೆ. ಆದರೆ ಇದೆ ರೀತಿ ಮುಂದುವರೆದರೆ, ಸಮಸ್ಯೆ ಉಲ್ಬಣಿಸುತ್ತದೆ ಹೊರತು ಕಡಿಮೆಯಾಗುವುದು ಸಾಧ್ಯವಿಲ್ಲ.
                                           -ಡಾ.ಶ್ರೇ 
ಮಸ್ತಕದಲ್ಲಿ ಪುಸ್ತಕದ ರಾಶಿ ಬಂದಾಗ
ಬರದದ್ದೆಲ್ಲ  ಬರಹವಾಗುವುದಿಲ್ಲ, ಭಾಷೆ ಒಲಿದು ಪದಗಳು ನಾವು ಹೇಳಿದಂತೆ ಕೇಳುತ್ತಿರಬೇಕು. ಬರಹದಲ್ಲಿ ಸೂಕ್ಷ್ಮತೆಯೊಂದಿಗೆ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಗೀಜಗನ ಗೂಡಿನಂತೆ ಸುಂದರವಾಗಿ ಮತ್ತು ಮನಸ್ಸಿನಲ್ಲಿ ನೆಲೆಯೂರುವ ರೀತಿಯಲ್ಲಿ ಮೂಡಿ ಬರಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ  ಬರಹವೇ ಮೂಲವಾಗಿರುವುದರಿಂದ ಬರವಣಿಗೆಯು ಓದುಗನಿಗೆ knowledge  ಕೊಡುವ ರೀತಿಯಲ್ಲಿ ಬರಬೇಕು ಎನ್ನುವುದು ನನ್ನ ಅಭಿಪ್ರಾಯ. 
ಅಮೇರಿಕಾದ ಜೇಮ್ಸ್ ಹ್ಯಾಡ್ಲಿ ಚೇಸ್ ಒಬ್ಬ ಉತ್ತಮ ಕಾದಂಬರಿಗಾರ. ಇವರು 63 ಸ್ವನಾಮಾಕಿಂತ  ಕಾದಂಬರಿಗಳನ್ನು ಹಾಗು ಸ್ವನಾಮಾಕಿಂತ ವಲ್ಲದೆ ಬೇರೆ ಹೆಸರಿನಲ್ಲಿ 18 ಕಾದಂಬರಿಗಳನ್ನು ಬರೆದಿದ್ದಾರೆ. ಜೊತೆಗೆ ನಾಟಕವನ್ನು ರಚಿಸಿದ್ದಾರೆ. ಇವರ ಕಥೆಗಳನ್ನು ನಾವು ಓದಲು ಶುರು ಹಚ್ಚಿದರೆ ನಾವು ನಮ್ಮ ಓದಿನ ವೇಗವನ್ನು ಹಿಡಿಯಲು ಸಾಧ್ಯವಿಲ್ಲ. ಇವರ ಕಥೆಗಳು ಸರಳತೆಯೊಂದಿಗೆ ಸಾಮಾನ್ಯ ಜೀವನದ ಅದ್ಭುತ ರೋಚಕಗಳನ್ನು ಹೊಂದಿರುವ ಇವರ ಬರವಣಿಗೆಯು ಶ್ರೇಷ್ಠತೆಯನ್ನು  ಪಡೆದಿವೆ. 
ನಾನು ಈ ಕುತೂಹಲಕ್ಕಾಗಿ ಚೇಸ್ ರವರ ಒಂದೆರಡು ಪುಸ್ತಕಗಳನ್ನು ಸುಮ್ಮನೆ ತಿರುವು ಹಾಕಿ ಬರವಣಿಗೆಯ ಶೈಲಿಯನ್ನು ಗಮನಿಸಿ ರುಚಿಯನ್ನು ಹಿಡಿಯುವ ಪ್ರಯತ್ನದಲ್ಲಿದ್ದೇನೆ. ಅವರ ಬರವಣಿಗೆಯು ಹೆಚ್ಚಿನ ಮಟ್ಟಿಗೆ ನನ್ನನ್ನು ಆಕರ್ಷಿಸಿದೆ. ವ್ಯಾಪಾರಿಗಳಿಗೆ ಪುಸ್ತಕ ಪೂರೈಸುವ ಕೆಲಸ ನಿರ್ವಹಿಸುತ್ತಿದ್ದ ಇವರು ಪುಸ್ತಕ ರಾಶಿಯ ಮೇಲೆ ಇದ್ದುದ್ದರಿಂದ ಓದುವ ಗೀಳಿನೊಂದಿಗೆ ಬರವಣಿಗೆಯಲ್ಲಿ ಯಶಸ್ಸು ಕಂಡರೂ ಎನ್ನಬಹುದು. 
ಒಂದಿಷ್ಟು ಗೊಂದಲಗಳು, ಮನಸ್ಸಲ್ಲಿ ಮೂಡುವ ಹೊಸ ರೀತಿಯ ಸಂಘರ್ಷಗಳೊಂದಿಗೆ ಓದುವಿಕೆ ಎಂಬ ಹುಚ್ಚನ್ನು ಹಿಡಿಸಿಕೊಂಡು, ಬರವಣಿಗೆಯಲ್ಲಿ ತೊಡಗಿದಾಗ ಜನರ ಮನದಲ್ಲಿ ನೆಲೆಯೂರಲು ಸಾಧ್ಯ. 
                                                               -ಕೆ.ಪಿ.ಭಟ್ 

Monday, February 21, 2011

ಜೆ.ಡಿ.ಎಸ್- ಬಿಜೆಪಿ ಮತ್ತೆ ಮೈತ್ರಿಯಂತೆ!
'ಪರಿಸ್ಥಿತಿ ಬಂದರೆ ನಾವು ಜೆ.ಡಿ.ಎಸ್ ಜೊತೆ ಮತ್ತೆ ಕೈ ಜೋಡಿಸಲು ಸಿದ್ಧ' ಎಂಬ ಮಾತುಗಳನ್ನು ಬಿ.ಜೆ.ಪಿ ರಾಜ್ಯಾಧ್ಯಕ್ಷ ಈಶ್ವರಪ್ಪನವರು ಹೇಳಿದ್ದಾರೆ. ಈ ಮೂಲಕ ರಾಜ್ಯದ ಎಲ್ಲಾ ಪಕ್ಷಗಳು ಅವಕಾಶವಾದಿ ರಾಜಕಾರಣ ಮಾಡುವುದರಲ್ಲಿ ಎತ್ತಿದ ಕೈ. ಎಂಬ ಅಂಶ ಸ್ಪಷ್ಟವಾಗುತ್ತದೆ. 
ಹಿಂದೊಮ್ಮೆ ಜೆ.ಡಿ.ಎಸ್ ಜೊತೆ ಹನಿಮೂನ್ ಮಾಡಿ ನಂತರ ಡೈವೋರ್ಸ್ ಆಗಿದ್ದ ಬಿ.ಜೆ.ಪಿ ನಂತರ ಅದೇ ವಿಚಾರವನ್ನು ಮತದಾರರ ಮುಂದೆ ಇಟ್ಟು ಅಧಿಕಾರಕ್ಕೆ ಬಂದಿತ್ತು. ಯಡಿಯೂರಪ್ಪನವರಂತು ' ನಮಗೆ ನಂಬಿಕೆ ದ್ರೋಹವಾಗಿದೆ' ಎಂದೇ ಮಾಧ್ಯಮಗಳ ಎದುರು ಕಣ್ಣೀರಿಟ್ಟಿದ್ದರು. ಅವರ ಕಣ್ಣೀರು ಕಂಡವರಿಗೆ ಗಂಡ ಕೈ ಕೊಟ್ಟ ಹೆಂಡತಿಯಂತೆ ಕಾಣುತ್ತಿತ್ತು. 
ನಮ್ಮ ಮತದಾರರು ಕರುಣೆ ತೋರಿ ಬಿ.ಜೆ.ಪಿ ಯನ್ನು ಅಧಿಕಾರಕ್ಕೆ ಏರಿಸಿದ್ದರು. ಆದರೆ ಈಶ್ವರಪ್ಪನವರು ಪುನಃ ಜೆ.ಡಿ.ಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮಾತನಾಡುತ್ತಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡು! 
ಇನ್ನು ಮುಂದೆ ಸರಕಾರಕ್ಕೆ ಆಪತ್ತಿನ ಪರಿಸ್ಥಿತಿ ಬಂದರೆ ಜೆ.ಡಿ.ಎಸ್ ಜೊತೆ ಕೈ ಜೋಡಿಸುವ ಸಾಧ್ಯತೆ ಇದೆ ಎಂಬ ವಿಚಾರ ಜನರಿಗೆ ಮನದಟ್ಟಾಗಿರುವುದು ಯಾವಾಗ ಎಂದರೆ; ಬಿ.ಜೆ.ಪಿ ಮೈಸೂರು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜೆ.ಡಿ.ಎಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಾಗ. 
ಅಧಿಕಾರ ಬೇಕೆಂದರೆ ಹೊಲಸು ತಿನ್ನಲೂ ರೆಡಿ ಇರುವ ನೀಚ ರಾಜಕಾರಣಿಗಳಿಂದಲೇ ರಾಜಕಾರಣ ಇಂತಹ ದುಸ್ಥಿತಿಗೆ ಇಳಿದಿರುವುದು. ಈಶ್ವರಪ್ಪ ಅವರ ಮಾತಿನಿಂದ ರಾಜಕಾರಣದಲ್ಲಿ ಯಾರು ಯಾರಿಗೂ ಶತ್ರುಗಳಲ್ಲ, ಮಿತ್ರರೂ ಅಲ್ಲ ಎಂಬ ವಿಚಾರ ಸ್ಪಷ್ಟವಾಗುತ್ತದೆ. ಈಶ್ವರಪ್ಪನವರ ಈ ಮಾತು ಪಕ್ಷದಲ್ಲಿ ಇನ್ನೂ ಉಳಿದಿರುವ ಅತೃಪ್ತರಿಗೆ ಎಚ್ಚರಿಕೆಯ ಸಂದೇಶವೂ ಆಗಿರಬಹುದು. ಸಂಪುಟ ಪುನರ್ ರಚನೆ ಮಾಡುವಾಗ ಕಿರಿಕ್ ಮಾಡುವ ಶಾಸಕರೇ ಎಚ್ಚರವಾಗಿರಿ! ಬಿ.ಜೆ.ಪಿ ಗೆ ನಿಮ್ಮ ಅಗತ್ಯವಿಲ್ಲ ಎಂತೂ ಜೆ.ಡಿ.ಎಸ್ ಶಾಸಕರು ಮಾಡಲು ಕೆಲಸವಿಲ್ಲದೆ ಬಿದ್ದಿದ್ದಾರೆ.
ಹಾಗೇ ಸುಮ್ಮನೆ- ಜೆ.ಡಿ.ಎಸ್ ನೊಂದಿಗೆ ಪುನಃ ಮೈತ್ರಿ ಮಾಡುತ್ತೇವೆ ಎಂಬ ಮಾತು ಕೇಳಿದ ಉಮೇಶ, 'ನಮ್ಮ ಕಮಲ ಪಕ್ಷದವರು ಅಧಿಕಾರಕ್ಕೆ ಬೇಕಾಗಿ ನಕ್ಸಲರ ಜತೆ ಕೂಡ ಮೈತ್ರಿ ಮಾಡಿಕೊಳ್ಳಬಹುದು' ಎಂದು ಹೇಳುತ್ತಿದ್ದಾನೆ.
                                               -ಡಾ.ಶೆಟ್ಟಿ 
   
ಬಂಧನಗಳಿಂದ ವಿಮುಖರಾದಾಗ 
ಪ್ರತಿಯೊಬ್ಬನಿಗೂ ಜೀವನದಲ್ಲಿ success ಆಗಲು ಸಾಧ್ಯವಿಲ್ಲ. ಆದರೆ success  ಪದದ ಅರ್ಥವೇ ಬೇರೇ,ಹಣ ಗಳಿಸುವುದಕ್ಕು successಗು ಆಗಾದವಾದ ವ್ಯತ್ಯಾಸವಿದೆ. ಕೆಲವು ಜನರ ಪ್ರಕಾರ ಹಣಗಳಿಸುವುದು ಜೀವನದಲ್ಲಿ success ಅಂದುಕೊಂಡು ಬಿಡುತ್ತಾರೆ. ಅದು ಅವರು ಮಾಡುವ ದೊಡ್ಡ ತಪ್ಪು.
ಹಣವನ್ನು ಯಾರುಬೇಕಾದರು ಗಳಿಸಬಹುದು ಆದರೆsuccess  ಅನ್ನು ಅಲ್ಲ. success  ಯಾವಾಗ ದೊರೆಯಲು ಸಾಧ್ಯ?
ನಮ್ಮ ನಿರ್ದಿಷ್ಟ ಆಸಕ್ತಿಯ ಮೇಲೆ ಹಗಲು-ಇರುಳು ಎನ್ನದೇ ಅದರ ಗುಂಗಿನಲ್ಲೇ ಇದ್ದು ಜಗವನ್ನು ಮರೆತು ಮತ್ತು ಹೆಚ್ಚಿನ ಸಂದರ್ಭ ಎಲ್ಲಾ ಬಂಧನಗಳಿಂದ ವಿಮುಖರಾದಾಗ ಮಾತ್ರ ಸಾಧ್ಯ.
ಏಕಾಂತದಲ್ಲಿ ಹೊಳೆಯುವ ಹಲವು ಐಡಿಯಾಗಳಿಗೆ ಸರಿಯಾದ ಚೌಕಟ್ಟನ್ನು ನೀಡುವ ಅಗತ್ಯವಿದೆ.ಅಂದರೆ ಹುಟ್ಟುವಾಗಲೇ ಅನಾಥನಾದವನಿಗೆ ಬಂಧನ ಎಂಬ ಪದದ ಅರ್ಥವೇ ತಿಳಿದಿರುವುದಿಲ್ಲ.ಆದರೆ ಬಂಧನಗಳನ್ನು ಹೊಂದಿ ಅದರಿಂದ ವಿಮುಖರಾಗುವುದೆಂದರೆ ಅದು ಕಷ್ಟವೇ ಸರಿ. ಸಾಹಿತ್ಯದ ಬಗ್ಗೆ ಚಿಂತನೆಯನ್ನು ಮಾಡುವ ಸಂಧರ್ಭ ಎಲ್ಲಾ ಬಂಧನಗಳಿಂದ ವಿಮುಖರಾಗಬೇಕೆಂದು ಹೇಳುವುದಲ್ಲ. ಆದರೆ ಬಂಧನಗಳಿಂದ ವಿಮುಖರಾಗಿಹೊದಂತೆ ಮನಸ್ಸಿನ ನೋವು, ತೀವ್ರತೆಯೊಂದಿಗೆ ಸಾಹಿತ್ಯದಲ್ಲಿ ಆಳವಾದ ಪ್ರಭಾವವನ್ನು ಬೀರಿದವರನ್ನು ನಾವು ಕಾಣಬಹುದು.
ನಮ್ಮsuccess  ಇತರರಿಗೆ ಎತ್ತಿ ತೋರಬೇಕೆಂದಿಲ್ಲ. ಅದರ ಅರಿವು ನಮ್ಮ ಮನಸ್ಸಿನಲ್ಲಿ ಆಗಬೇಕು. ಇಂತಹವುಗಳ ಜೊತೆಗೆ ಮನಸ್ಸಿನಲ್ಲಿ ಸದಾ ಸಂಗರ್ಷದಲ್ಲಿ ಇದ್ದಾಗ success  ತಾನಾಗೇ ಬಂದು ನಮ್ಮ ಹೆಸರು ಅದೆಷ್ಟೋ  ಕೋಟಿಮಂದಿಯ ಬಾಯಿ ಮಾತಗಿರುತ್ತದೆ.
                                -ಕೆ.ಪಿ.ಭಟ್ 

Saturday, February 19, 2011

ನಾನು ನನ್ನ ಕನಸು..
ದಟ್ಟ ಕಾಡಿನ ನಡುವೆ ಪುಟ್ಟಮನೆ, ಆ ಮನೆಯ ಎದುರು ಪ್ರಶಾಂತವಾಗಿ ಹರಿಯುತ್ತಿರುವ ನದಿ. ಒಟ್ಟಿನಲ್ಲಿ ಅದು ರೋಡೆ ಕಾಣದ ಊರು, ಕರೆಂಟೇ ಕಾಣದ ನಾಡು.
ದಿನಪತ್ರಿಕೆ, ಟಿ.ವಿ, ಕಂಪ್ಯೂಟರ್, ಮೊಬೈಲ್ ಯಾವುದು ಇಲ್ಲದ, ಮುಗ್ಧತೆಯೇ ಮುತ್ತಿಕೊಂಡಿರುವ ಪ್ರಶಾಂತವಾದ ಸ್ಥಳವದು. ಮೇಲೆ ಹೇಳಿದ ಅದೇ ಪುಟ್ಟ ಮನೆಯಲ್ಲಿ, ನಾನು ಕೂತು ಓದುತ್ತಿದ್ದೆ. ಮನೆಯ ಹಳೆಯ ಕಪಾಟಿನಲ್ಲಿ, ತುಂಬಿ ತುಳುಕಿ, ಇಡಲು ಜಾಗವಿಲ್ಲದೆ, ನನ್ನ ಆತ್ಮೀಯ ಸ್ನೇಹಿತರಾದ ಪುಸ್ತಕಗಳು ಬಿದ್ದುಕೊಂಡಿವೆ. ಅವು 'ನೀನು ನಿನ್ನ ಇಡೀ ಜನ್ಮಪೂರ್ತಿ ಓದಿದರು, ನಮ್ಮನ್ನು ಓದಿ ಮುಗಿಸಲು ಸಾಧ್ಯವಿಲ್ಲ'  ಎಂಬಂತೆ ಅಣಕಿಸುತ್ತಿದ್ದವು. ಯಾಕೋ ಸುಸ್ತಾದಂತೆ ಆಗಿ, ನಾನು ಎದ್ದು ನನ್ನ ಕೋಣೆಗೆ ಬಂದೆ, ಅಲ್ಲಿ ಬಂದು ನೋಡಿದಾಗ ಮನಸ್ಸಿಗೆ ಆನಂದವಾಯಿತು. ಯಾಕೆಂದರೆ ನನ್ನ ಕೋಣೆ ಪೂರ್ತಿ ಎಣ್ಣೆಯ ಬಾಟಲಿಗಳು, ಸಿಗರೇಟು ಪ್ಯಾಕುಗಳು ತುಂಬಿತ್ತು.
ಅಡುಗೆ ಕೋಣೆಯಲ್ಲಿ ನನ್ನ ಪ್ರೀತಿಯ ಹುಡುಗಿ ಅಡುಗೆ ಮಾಡುತ್ತಿದ್ದಳು. ನನ್ನ ತಾಯಿ ಮನೆಯ ಎದುರು ಕೂತು ಏನನ್ನೋ ಯೋಚನೆ ಮಾಡುತ್ತಿದ್ದರು. 
ಇದು ನನಗೆ ನಿನ್ನೆ ರಾತ್ರಿ ಬಿದ್ದ ಕನಸು, ನನಗೆ ಬಿದ್ದ ಕನಸ್ಸನ್ನು ಓದುಗರಿಗೆ ಹೇಳಿ ಬೋರು ಹೊಡೆಸುವ ಉದ್ದೇಶ ನನ್ನದಲ್ಲ. ಪ್ರತಿದಿನ ಅದೇ ಸುದ್ದಿಯೊಂದಿಗೆ ಗುದ್ದಾಡಿ, ಪದಗಳು ಸಿಗದೇ ನಲುಗಾಡಿ. ಇದ್ದವರನೆಲ್ಲ ಬೈದು, ಉಳಿದ ಕೆಲವರನ್ನು ಹೊಗಳಿ. ವ್ಯವಸ್ಥೆಯನ್ನು ದೂರಿ, ಬರೆದು ಬರೆದು ಸಾಕಾಯಿತು. ಇವತ್ತು ಏನಾದರು ಹೊಸತು ಬರೆಯೋಣ ಎನಿಸಿತು. ಅದಕ್ಕೆ ತಕ್ಕಂತೆ ನಿನ್ನೆ ನನಗೆ ಬಿದ್ದ ಕನಸು ಕೂಡ ಅದ್ಭುತವಾಗಿತ್ತು. ನನ್ನ ಕನಸನ್ನು ಪುನಃ ಒಂದು ಬಾರಿ ಓದಿಕೊಳ್ಳಿ, 'ಎಷ್ಟು ಚೆನ್ನಾಗಿದೆ' ಎಂದು ನಿಮಗೆ ಅನಿಸದೆ ಇರಲಾರದು. 
ಯಾವುದೋ ಒಂದು ದಟ್ಟ ಕಾಡಿನ ನಡುವೆ, ಪುಟ್ಟ ಮನೆಯ ಮಾಡಿ, ಮುದ್ದಿನ ಸಂಸಾರದ ಜೊತೆಗೆ ಜೀವನ ಮಾಡುವುದೆಂದರೆ ಅದು ಸ್ವರ್ಗವೇ ಅಲ್ಲವೇ? ಮನೆ ತುಂಬಾ ತುಂಬಿರುವ ಪುಸ್ತಕಗಳು, ಕುಡಿಯಲು ಬೇಕಾದಷ್ಟು ಎಣ್ಣೆ, ಸೇದಲು ಸಿಗರೇಟು ಇಷ್ಟಿದ್ದರೆ ಸಾಕಲ್ಲವೇ ಒಬ್ಬ ಬರಹಗಾರನಿಗೆ. ದಟ್ಟ ಕಾಡಿನ ನಡುವೆ ಪುಸ್ತಕಗಳನ್ನು ಓದಿಕೊಂಡು, ಏನನ್ನೋ ಧ್ಯಾನಿಸಿಕೊಂಡು, ಪ್ರಕೃತಿಯ ಜೊತೆ ಒಂದಾಗಿರುವುದು ಚಂದವಲ್ಲವೇ?
ನನಗಂತೂ ಈಗಿನ ಜೀವನದ ಜಂಜಾಟಗಳಿಂದ, ಕನಸಲ್ಲಿ ಕಂಡ ಲೋಕವೇ ಚೆನ್ನಾಗಿದೆ ಎನಿಸಿತು..
                                                -ಡಾ.ಶೆಟ್ಟಿ 
ಗೆಲ್ಲಲಿ ಭಾರತ
ಅಭೂತಪೂರ್ವ ಆಶಾವಾದ, ಸಹಸ್ರ ಹಾರೈಕೆ, ನೂರಾರು ಕನಸು ಮತ್ತೆ ಜಯದ ಮನಸ್ಸು. ಇವೆಲ್ಲಕ್ಕೆ ಪೂರಕ ಎಂಬಂತೆ, ಸಾರ್ವತ್ರಿಕ ಸಮತೋಲನ, ಸಂಘಟಿತ, ಸಂಘರ್ಷ ರಹಿತ ತಂಡ. ಇದಕ್ಕೂ ಮೀರಿ ಆಯಾಯ ವಲಯದಲ್ಲಿ ಸೂಕ್ಷ್ಮ ಅರ್ಥ ವ್ಯಾಪ್ತಿಯನ್ನು ಹೊಂದಿರುವ ಪ್ರತಿಯೊಬ್ಬ ಆಟಗಾರ. ಇದು ನಮ್ಮ ಈ ಸಾಲಿನ ವಿಶ್ವ ಕಪ್ ಸರಣಿಯ ಭಾರತ ತಂಡ.
ಗಂಗೂಲಿ, ನಾಯಕ ವಿಹೀನತೆಯ ಬಳಿಕ, ಕೇವಲ ಕಹಿ ಅನುಭವವನ್ನೇ ಅನುಭವಿಸಿದ ಭಾರತ ತಂಡ ಈ ಬಾರಿ ಪೂರ್ಣ ಪ್ರಮಾಣದಲ್ಲಿ ವಿಶ್ವ ಕಪ್ ಗೆದ್ದುಕೊಳ್ಳಲು ಸಜ್ಜಾಗಿದೆ. ಕಳೆದ ಪಂದ್ಯಗಳತ್ತ ಕಣ್ಣು ಹಾಯಿಸಿ ವಿಶ್ಲೇಷಣೆಗೆ ತೊಡಗಿದರೆ, ತಂಡ ಎಲ್ಲಾ ಸಮಸ್ಯೆಗಳನ್ನು ಮೀರಿ ಉತ್ತಮ ಫಲಿತಾಂಶವನ್ನೇ ಕಂಡಿದೆ. ಈ ಪರಿಪೂರ್ಣ ಗೆಲುವುಗಳು ಇಂದು ಶುರುವಾಗುವ ವಿಶ್ವಕಪ್ ಮೇಲೆ ಶೇ 100 ರಷ್ಟು ಪರಿಣಾಮ ಬಿದ್ದೇ ಬೀಳುತ್ತದೆ ಎನ್ನುವುದು ನಂಬಿಕೆ.
ಧೋನಿಯಿಂದ ತೊಡಗಿ ಶ್ರೀಶಾಂತ್ ವರೆಗೆ ಎಲ್ಲರೂ ಗೆಲುವಿನ ಹಸಿವಿನಲ್ಲಿ ಬೇಯುತ್ತಿದ್ದು, ವಿಶ್ವಕಪ್ Ikon ಎಂದೇ  ಕರೆಯಲ್ಪಡುವ ಸಚಿನ್ ಮತ್ತೆ ಯಾವತ್ತಿನಂತೆ ತಮ್ಮ ರನ್ ಹಸಿವೆಯನ್ನು ಜಾಸ್ತಿ ಮಾಡಿಕೊಂಡಿದ್ದಾರೆ. ಇವೆಲ್ಲವೂ ತಂಡಕ್ಕೆ ಡಬಲ್ + ಆಗಲಿದೆ.ಇದೆಲ್ಲವನ್ನೂ ಗಮನಿಸಿ, ನಾವು ಹಿಂದೆಗೂ ಇಂದಿಗೂ ಇತರ ತಂಡಕ್ಕೂ ತಾಳೆ ಹಾಕಿ ನೋಡಿದಾಗ ನಮ್ಮ ತಂಡ ಈ ಬಾರಿಯ ವಿನ್ನಿಂಗ್ ಫೇವರಿಟ್. ಸೊ ಈ ಬಾರಿ ದೇಶ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆ ತಂಡಕ್ಕೆ ಹಾಗು ಅಭಿಮಾನಿಗಳಿಗೆ ಬಹಳವಾಗಿ ಇದೆ. ಆದರೂ ಕೆಲವೊಮ್ಮೆ ಎಡವುದು ಮಾಮೂಲು. ಈ ಬಾರಿ ಈ ರೀತಿ ಆಗದೆ ತಂಡ  ಕಪ್ ತೆಗೆದುಕೊಳ್ಳಲಿ ಎಂದು ಹೃದಯ ಪೂರ್ವಕವಾಗಿ ಆಶಿಸೋಣ.
                                              -ಡಾ.ಶ್ರೇ 
ಅಂತಿಮ ಉಪನ್ಯಾಸ 
ನನಗೆ ನನ್ನ ಸಾವು ಯಾವಾಗ ಬರುತ್ತದೆ ಎಂದು ತಿಳಿಯುತ್ತಿದ್ದರೆ ಚೆನ್ನಾಗಿರುತ್ತಿತ್ತು! ಆ counting ದಿನಗಳು ಜೀವನದ ಮಹೋನ್ನತ ಕಾರ್ಯಕ್ಕೆ ಎಡೆಮಾಡಿಕೊಡುತ್ತಿತ್ತು. ಎನ್ನುವುದು ನನ್ನ ಭಾವನೆ. ಹೀಗೆ ಅನಿಸಲು ಕಾರಣ Randy pausch ರವರ ಅಂತಿಮ ಉಪನ್ಯಾಸ (last lecture) ಓದಿದ ಬಳಿಕ. 
ಇವರು ಜಠರದ  ಹುಣ್ಣುಗಳಿಂದ ತತ್ತರಿಸಿ ಸಾವು ಇನ್ನೂ 6 ತಿಂಗಳ ಒಳಗೆ ಬರುವುದು ಖಚಿತವಾಗಿತ್ತು. ಇದಾದ ಬಳಿಕ ನಂತರದ ದಿನಗಳಲ್ಲಿ ಒಂದು ಉಪನ್ಯಾಸ ಕರೆ ಬಂದಿತ್ತು. ಅದು ಅವರ ಅಂತಿಮ ಉಪನ್ಯಾಸ. ಆ ಉಪನ್ಯಾಸವು ಪ್ರತಿಯೊಬ್ಬನ ಜೀವನಕ್ಕೂ ಮಾದರಿಯಾಗುವ ರೀತಿಯಲ್ಲಿ ಮೂಡಿ ಬಂದಿದೆ. 
ತುಂಬಾ ಚಿಕ್ಕ ಮಕ್ಕಳನ್ನು ಹೊಂದಿದ್ದ ಇವರು ಈ ಅಂತಿಮ ಉಪನ್ಯಾಸದ ಮೂಲಕ ಜೀವನ, ಸಮಯ ಮತ್ತು ಹೇಗೆ ಬಾಳಿ ಬದುಕಿ ಸಾಧಿಸಬೇಕು ಎಂಬುವುದರ ಬಗ್ಗೆ ಸವಿಸ್ತಾರವಾಗಿ ಬಿಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಮಕ್ಕಳಿಗೆ ಈ ಉಪನ್ಯಾಸ ಉತ್ತಮ ಜೀವನಕ್ಕೆ ಸಾಕ್ಷಿಯಾಗುವುದರಲ್ಲಿ ಸಂಶಯವಿಲ್ಲ. ಉತ್ತಮ ಸಾಧನೆಯನ್ನು ಬಯಸುವ ಬದುಕಿಗೆ ಸಮಯ ಕ್ಷಣಿಕ ಎಂದು ಕಂಡು ಬರುತ್ತದೆ. ಪ್ರತಿಯೊಬ್ಬನ ಜೀವನದಲ್ಲೂ ಎಂದಾದರು ಸಮಯ ಕ್ಷಣಿಕ ಎಂಬ ಭಾವನೆ ಬಂದೇ ಬರುತ್ತದೆ. ಈ ಮಾತು ನೂರಕ್ಕೆ ನೂರು ಸತ್ಯ . 
ಭರವಸೆಯೊಂದಿಗೆ, ಆತ್ಮವಿಶ್ವಾಸ ಬೆಳೆಸಿಕೊಂಡು ರೋಗದ ಗುರುತೇ ಸಿಗದಂತೆ ಬಾಳಿದ ವ್ಯಕ್ತಿ Randy. ತಮ್ಮ ಅಂತಿಮ ಉಪನ್ಯಾಸದಲ್ಲಿ ಅವರು, ಏನಾದರು ಸಾಧಿಸ ಬೇಕು ಎಂಬ ಮಹಾತ್ವಾಕಾಂಕ್ಷೆ ಹೊಂದಿದವರಿಗೆ ಒಳ್ಳೆಯ ಆಶಾ ಭಾವನೆಯನ್ನು ಒದಗಿಸಿದ್ದಾರೆ. 
ಒಬ್ಬ ಉತ್ತಮ ಫುಟ್ಬಾಲ್  ಆಟಗಾರನಾಗಲು ಆಸೆ ಪಡುವವರು ಮೊದಲು ಚೆಂಡನ್ನು ಕೇಳಬಾರದು, ಆಟ ಆಡುವ ನಿಗದಿತ ಸಮಯದಲ್ಲಿ  ಓರ್ವನ ಬಳಿ ಚೆಂಡಿರುತ್ತದೆ. ಉಳಿದ ಆಟಗಾರರು ಆ ಸಮಯದಲ್ಲಿ ಏನು ಮಾಡುತ್ತಾರೆ  ಎಂಬುವುದನ್ನು ಮೊದಲು  ಕಲಿಯಬೇಕು. ಅಂದರೆ ನಾವು ಮೂಲವನ್ನು ಶೋಧಿಸುವ ಅಗತ್ಯವಿದೆ. 
ಕೇವಲ Randy ಅವರನ್ನು ನಮ್ಮ ಬದುಕಿಗೆ ಅಳವಡಿಸಿಕೊಂಡರೆ ಸಾಧನೆಯ ಮೊದಲ ಮೆಟ್ಟಿಲನ್ನು ಹತ್ತಬಹುದು.
ಸಮಯಾವಕಾಶವನ್ನು ಮಾಡಿಕೊಂಡು the last lecture ಪುಸ್ತಕವನ್ನು ಓದಿ. ತಮಗೆ ಪುಸ್ತಕ ದೊರೆಯದೆ ಹೋದ ಸಂಧರ್ಭದಲ್ಲಿ 8105975357 ಈ ನಂಬರ್ ಗೆ ಕರೆ ಮಾಡಿ. newyorker times ತಂಡ ಒದಗಿಸುವ ವ್ಯವಸ್ಥೆಯನ್ನು ಮಾಡುತ್ತದೆ.
                                                 -ಕೆ.ಪಿ.ಭಟ್  

Thursday, February 17, 2011

ಜಾನ್- ಬಿಪಾಶ Break up!
ಅವರಿಬ್ಬರು ಅಮರ ಪ್ರೇಮಿಗಳು, ಅವರ ಪ್ರೀತಿಗೆ ಸರಿ ಸುಮಾರು 10 ವರ್ಷಗಳೇ ಸಂದಿವೆ. ಬಾಲಿವುಡ್ ನ  ಯಾವುದೇ ಪಾರ್ಟಿ ಇರಲಿ, ಯಾವುದೇ ಚಿತ್ರದ ಸಂಗೀತ ಬಿಡುಗಡೆ ಇರಲಿ, ಬಾಲಿವುಡ್ಡಿನ ಯಾವುದೇ ಸಮಾರಂಭಗಳಲ್ಲಿ ಇವರಿಬ್ಬರು ಜೊತೆಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಬಾಲಿವುಡ್ಡಿನಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಪ್ರೇಮ ಕಥೆಗಳಿಗಿಂತ, ಇವರ ಪ್ರೇಮ ಕಥೆ ತೀರಾ ವಿಭಿನ್ನವಾದದ್ದು.ಯಾಕೆಂದರೆ ಬಾಲಿವುಡ್ ಎಂಬ ರಂಗು-ರಂಗಿನ ದುನಿಯಾದಲ್ಲಿ, 1 ದಶಕಗಳ ಕಾಲ ಒಬ್ಬನ(ಳ) ಜೊತೆಯಲ್ಲೇ ಕಾಲ ಕಳೆಯುದು ಎಂದರೆ ಅಸಾಧ್ಯವೇ! ಆದರೆ ಜಾನ್ ಅಬ್ರಹಾಂ ಮತ್ತು ಬಿಪಾಶ ಬಸು ಇದನ್ನು ಮಾಡಿ ತೋರಿಸಿದ್ದರು.
ಆದರೆ ಅದ್ಯಾರ ಕೆಟ್ಟ ದೃಷ್ಟಿ ಇವರ ಮೇಲೆ ಬಿತ್ತೋ ಗೊತ್ತಿಲ್ಲ, ಇವರಿಬ್ಬರು ಈಗ ಬೇರೆ-ಬೇರೆಯಾಗಿದ್ದಾರೆ. ಎಷ್ಟೋ ವರ್ಷದಿಂದ ಜನರು ಕುತೂಹಲದ ಕಣ್ಣಿನಿಂದ ನೋಡುತ್ತಿದ್ದ ಇವರ ಪ್ರೇಮ ಕಥೆಗೆ ಕೊನೆಗೂ ಪೂರ್ಣವಿರಾಮ ಬಿದ್ದಿದೆ.
ಬಾಲಿವುಡ್ಡಿನಲ್ಲಿ ಪ್ರೀತಿ ಹುಟ್ಟುವುದು, ನಂತರ ಬಿಟ್ಟು ಹೋಗುವುದು ಸಾಮಾನ್ಯ ಸಂಗತಿಯೆನ್ನಿ. ಯಾರು, ಯಾರನ್ನು, ಯಾವಾಗ ಪ್ರೀತಿಸುತ್ತಾರೆ, ಅದ್ಯಾವಾಗ ಬಿಟ್ಟು ಹೋಗುತ್ತಾರೆ ಎನ್ನುವುದು ಗೊತ್ತೇ ಆಗುವುದಿಲ್ಲ! 
ಆದರೆ ಜಾನ್-ಬಿಪಾಶ ಪ್ರೀತಿ ತುಂಬಾ ಹಳೆಯದು, ತುಂಬಾ ಗಾಢವಾದದ್ದು ಎಂಬ ಅಭಿಪ್ರಾಯ ಎಲ್ಲರಲ್ಲೂ ಇತ್ತು. ಇದರ ಜೊತೆಗೆ ಈ ಜೋಡಿ ಲಿವಿಂಗ್-ಟುಗೆದರ್ ಸಂಬಂಧ ಹೊಂದಿತ್ತು. ಆದರೆ ಇವರ ಪ್ರೀತಿ ಅಂತ್ಯವಾದದ್ದು ಮಾತ್ರ ಕ್ಷುಲ್ಲಕ ಕಾರಣಕ್ಕಾಗಿ. ಬಿಪಾಶ  ಜಾನ್ ನ ಬಳಿ ಮದುವೆಯಾಗುವಂತೆ ಒತ್ತಾಯಿಸಿದಳಂತೆ, ಪ್ರತಿ ದಿನ ಅದೇ ಮುಖ ನೋಡಿ ನೋಡಿ ಸಾಕಾಗಿ ಹೋಗಿತ್ತೋ ಏನೋ, ಜಾನ್ ಅದನ್ನು ನಿರಾಕರಿಸಿದ. ಅಲ್ಲಿಗೆ ಇವರಿಬ್ಬರ ಪ್ರೀತಿಯ ಸುಂದರಕಾಂಡ ಮುಗಿಯಿತು. ಈಗ ಇಬ್ಬರು 'ನಾನೊಂದು ತೀರ, ನೀನೊಂದು ತೀರ'. 
ಒಟ್ಟೊಟ್ಟಿಗೆ ಪಾರ್ಟಿಗಳಿಗೆ ಹೋಗುತ್ತಿದ್ದವರು, ಈಗ ಬೇರೆ-ಬೇರೆಯಾಗಿ ಪಾರ್ಟಿ attend ಮಾಡುತ್ತಿದ್ದಾರಂತೆ. ಒಂದೇ flat ನಲ್ಲಿ ವಾಸಿಸುತ್ತಿದ್ದವರು, ಈಗ ಬೇರೆ-ಬೇರೆ ಗೂಡು ಸೇರಿಕೊಂಡಿದ್ದಾರೆ. 
ಏನೇ ಆಗಲಿ ಬಾಲಿವುಡ್ಡಿನ 'ಜಾದು ಹೆ ನಶಾ ಹೆ' ಜೋಡಿ ಈಗ 'ತಡಪ್ ತಡಪ್ ಸೆ, ಇಸ್ ದಿಲ್ ಸೆ ಆಗ್ ನಿಕಾಲ್ತಿ ರಹೀ' ಹಾಡು ಗುನುಗುತ್ತಿದೆ. ಛೆ! ಹೀಗಾಗಬಾರದಿತ್ತು ಪಾಪ!
ಹಾಗೇ ಸುಮ್ಮನೆ- ನಮ್ಮ ಉಮೇಶ, ಬಿಪಾಶನಿಗೆ ಬಾಳು ಕೊಡಲು ready ಇದ್ದಾನೆ. ಆದರೆ ಬಿಪಾಶ, ಜಾನ್ ಗೆ ಕೊಟ್ಟ 6 ಲಕ್ಷದ ಬೈಕ್ ಅನ್ನು, ಉಮೇಶನಿಗೆ ಕೊಡಬೇಕಂತೆ.
                                                   -ಡಾ.ಶೆಟ್ಟಿ  
ಈಜಿಪ್ಟ್ ನಿಂದ ಇತರೆಡೆಗೆ 
30 ವರ್ಷದ ಧೀರ್ಘ ಸರ್ವಾಧಿಕಾರಿ, ಈಜಿಪ್ಟ್ ನ ಹೋಸ್ನಿ ಮುಬಾರಕ್ ಪ್ರಜೆಗಳ ಬ್ರಹತ್ ಒತ್ತಾಯದ ಮೇರೆಗೆ ಪದತ್ಯಾಗಕ್ಕೆ ಮಣಿದು ರಾಜಿನಾಮೆ ನೀಡಿ ಬಿಟ್ಟರು. ಅಲ್ಲಿನ ಪ್ರಜೆಗಳ ನಿರಂತರ ಹೋರಾಟದ ಪರಿಣಾಮವೇ ಇಂತಹ ಉತ್ತಮ ಬದಲಾವಣೆಗೆ ನಾಂದಿ. 
ಪ್ರಜಾಪ್ರಭುತ್ವವೇ ವಿಶ್ವದಾಧ್ಯಂತ ಚಾಲ್ತಿಯಲ್ಲಿರಬೇಕು ಎನ್ನುವ ನೈತಿಕ ಬುದ್ದಿವಂತರ ನಡುವೆ, ಇನ್ನೂ ಹಲವು ರಾಷ್ಟ್ರಗಳಲ್ಲಿ ಸರ್ವಾಧಿಕಾರ ಸಾಂಗವಾಗಿ ಮೆರೆಯುತ್ತಿದೆ. ಇಂತಹ ರಾಷ್ಟ್ರಗಳಲ್ಲಿ ಈಜಿಪ್ಟ್ ಒಂದಾಗಿತ್ತು. ಈಗ ಜನರ ತೀವ್ರ ಹೋರಾಟದ ನಡುವೆ ಪರಿಸ್ಥಿತಿ ಬದಲಾಗಿದೆ. ವಿಷಯ ಇಷ್ಟೇ ಆಗಿದ್ದರೆ ಬಹಳಷ್ಟು ಸಂತಸ ಪಡಬೇಕಾದ ಅವಶ್ಯಕತೆ ಇರಲಿಲ್ಲ. ಆದರೆ, ಅಲ್ಲಿನ ತೀವ್ರ ಹೋರಾಟದ ಬಿಸಿ ಈಗ ಮಧ್ಯಪ್ರಾಚ್ಯದ ಇನ್ನಿತರ ರಾಷ್ಟ್ರಗಳಿಗೂ ತಾಗಿರುವ ಹಿನ್ನೆಲೆಯಲ್ಲಿ ಅಲ್ಲೂ ಈಗ ಹೋರಾಟಕ್ಕೆ ಅಖಾಡ ಸಿದ್ದವಾಗಿದೆ. 
ಬಹರೇನ್, ಇರಾನ್, ಯಮನ್, ಲಿಬಿಯಾದಲ್ಲಿ ಸರ್ವಾಧಿಕಾರವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ, ಬುಧವಾರ ಪ್ರತಿಭಟನೆ ತೀವ್ರಗೊಂಡಿದೆ. ಬಹರೇನ್ ನ ದೊರೆ ಶೇಖ್ ಹಮಾದ್ ಬಿನ್ ಇಶಾ ಆಲ್- ಖಲೀಫಾ ಹಾಗು 33 ವರ್ಷಗಳಿಂದ ಅಧಿಕಾರದಲ್ಲಿಯೇ ಜಡ್ಡು ಹಿಡಿದ ಸೂಳೆ ಹುಳದಂತೆ ಅಂಟಿಕೊಂಡಿರುವ ಯಮನ್ ನ ಅಧ್ಯಕ್ಷ, ಅಲಿ ಅಬ್ದುಲ್ಲಾ ಸಲೆಹ್ ತರ ತರ ನಡುಗಲು ಪ್ರಾರಂಭಿಸಿದ್ದಾರೆ. 
ಅಂತೂ ಈಜಿಪ್ಟ್ ನ  ಅಗತ್ಯ ಹೋರಾಟದ ಫಲವಾಗಿ ಮಧ್ಯ ಪ್ರಾಚೀಯರು ಎಚ್ಚೆತ್ತು ಕೊಂಡಿದ್ದಾರೆ. ಇವರ ಈ ಹೋರಾಟ, ಗುರಿ ಮುಟ್ಟುವವರೆಗೆ ಯಾವುದೇ ಅಡೆ ತಡೆಗೆ ಬಗ್ಗದೆ ಸಾಂಗವಾಗಿ ಸಾಗಿ ಸರ್ವಾಧಿಕಾರ ಪರಂಪರೆ ಕೊನೆಗೊಂಡರೆ, ಪ್ರತಿ ವ್ಯಕ್ತಿ ಅಸ್ಥಿತ್ವ ಎಂಬ ಹೊಸ ಪರಂಪರೆಯತ್ತ ವ್ಯವಸ್ಥೆ ತೆರೆದುಕೊಂಡು ನಿರ್ಮಲ ಮತ್ತು ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯವಾಗುವುದರಲ್ಲಿ ಸಂಶಯವಿಲ್ಲ.
The great ಮಹಮ್ಮದ್    
ಪ್ರವಾದಿ ಮಹಮ್ಮದ್ ರ ಬಗ್ಗೆ ಜಗತ್ತಿನಾಧ್ಯಂತ ನಡೆಯುತ್ತಿರುವ ಅವಹೇಳನಗಳು ಅಪ ಪ್ರಚಾರ ಏನೆ ಆಗಿರಬಹುದು, ಅವರುಗಳು ಮಹಮ್ಮದರ ಜೀವನ ಮತ್ತು ನಡೆದು ಬಂದ ಹಾದಿಯ ಬಗ್ಗೆ ತಿಳಿಯುವುದು ಬಹಳವಿದೆ ಮತ್ತು ಅಗತ್ಯವಿದೆ. 
ಪ್ರವಾದಿ ಮಹಮ್ಮದರ ಬಾಲ್ಯವನ್ನು ತಿಳಿದವರು ಯಾರೂ ಅವರ ಬಗ್ಗೆ ಕೇವಲವಾಗಿ ಮಾತನಾಡುವುದಿಲ್ಲ. ಅಜ್ಞಾನ ತಲೆಗೆ ಅಂಟಿ ಹೋದವರು ಇಂತಹ ಅನಂತ ವ್ಯಕ್ತಿತ್ವವನ್ನು ಕೀಳಾಗಿ ಕಾಣುವುದು ಸರ್ವೇ ಸಾಮಾನ್ಯ. 
ಇವರ ಬಾಲ್ಯ ಕಣ್ಣಲ್ಲಿ ನೀರು ಸುರಿಸುವಂತದ್ದು. ಅತಿ ಬೇಗನೆ ತಂದೆ ತಾಯಿಯನ್ನು ಕಳಕೊಂಡ ಇವರ ಬದುಕಿನ ಭವಣೆ ಹೇಳ ತೀರದು. ಭವಿಷ್ಯ ವಾಣಿ ನುಡಿಯುವವರು ಇವರನ್ನು ಕಂಡೊಡನೆ ಇವರ ಶ್ರೇಷ್ಟತೆಯನ್ನು ಅರಿಯುತ್ತಿದ್ದರು. 
ಹೋದಲೆಲ್ಲಾ ಪವಾಡದ ರೀತಿಯ ಛಾಪನ್ನು ಇವರು ಹೊಮ್ಮಿಸಿದ್ದಾರೆ. ಇದಕ್ಕೆಲ್ಲಾ ಮೀರಿದ ಅವರ ಮನದ ಹತೋಟಿಯನ್ನು  ಮೆಚ್ಚುವಂತಹದ್ದು  ಯಾಕೆಂದರೆ, ಮಧ್ಯಪಾನ ಮತ್ತು ವೇಶ್ಯಾವಾಟಿಕೆ ಗಳೇ ತುಂಬಿ ಪಾಪ ಕೂಪದಲ್ಲಿ ಬಿದ್ದು ಜನರು ಹೊರಳುತ್ತಿದ್ದ ಸಂದರ್ಭದಲ್ಲಿ ಪ್ರತ್ಯೇಕವಾಗಿ ತನ್ನದೇ ಚಿಂತನೆಯಲ್ಲಿ ತೊಡಗಿದ್ದ  ವ್ಯಕ್ತಿ ಇವರು. 
ಯಾರೇ ಆಗಲಿ ತಾನು ತನ್ನದು ಶ್ರೇಷ್ಠ ಎನ್ನುವ ಮುಂಚೆ ಈ ರೀತಿಯ ವ್ಯಕ್ತಿತ್ವವನ್ನು ಪರಿಚಯ ಮಾಡಿಕೊಳ್ಳವ ಅಗತ್ಯವಿದೆ. ಪ್ರತಿಯೊಬ್ಬನ ಮನಸ್ಸಿನಲ್ಲಿ ಮೂಡ ಬೇಕಾದ ಮನಶಕ್ತಿ ಇವರು.
                                                                ಕೆ.ಪಿ. ಭಟ್    

Tuesday, February 15, 2011

ತಂಬಾಕು ರಹಿತ ಕ್ಯಾಂಪಸ್ 
ಇನ್ನು ಒಂದು ವಾರದೊಳಗೆ, ಶಾಲಾ ಕಾಲೇಜು ಆವರಣದಲ್ಲಿ ತಂಬಾಕು ಉತ್ಪನ್ನಗಳು ದೊರೆಯುವುದಿಲ್ಲ. ಹಿಂದೆ ಒಮ್ಮೆ ಇದೇ ರೀತಿಯ ಆದೇಶ ಬಂದು ನಂತರ ಟುಸ್ ಆಗಿತ್ತು. ಆದರೆ ಈ ಬಾರಿ ಹೈಕೋರ್ಟ್, ಆದೇಶ ನೀಡಿರುವುದರಿಂದ ಈ ಆದೇಶವು ಕಟ್ಟುನಿಟ್ಟಾಗಿ ಪಾಲನೆಯಾಗುವ ಲಕ್ಷಣ ಕಾಣುತ್ತಿದೆ.
ಹೈಕೋರ್ಟಿನ ಹೊಸ ಆದೇಶದ ಪ್ರಕಾರ, ಶೈಕ್ಷಣಿಕ ಸಂಸ್ಥೆಯಿಂದ 100 ಮೀಟರ್ ಆವರಣದಲ್ಲಿ ತಂಬಾಕು ಉತ್ಪನ್ನಗಳ ಮಾರಟಕ್ಕೆ ಕಡಿವಾಣ ಹಾಕಬೇಕು ಮತ್ತು 'ತಂಬಾಕು ಮಾರಾಟ ನಿಷೇದ' ಎಂಬ ನಾಮಫಲಕ ಹಾಕಬೇಕು ಎಂಬ ಸೂಚನೆ ನೀಡಿದೆ. ಇದರ ಜೊತೆಗೆ ಈ ಆದೇಶವನ್ನು ಉಲ್ಲಂಘಿಸಿದರೆ, ಆ ಶೈಕ್ಷಣಿಕ ಸಂಸ್ಥೆಯ ಮಾನ್ಯತೆಯನ್ನು ರದ್ದುಗೊಳಿಸುವ ಎಚ್ಚರಿಕೆಯನ್ನು ಕೂಡಾ ನೀಡಿದೆ.
ಹೈಕೋರ್ಟಿನ ಈ ಕ್ರಮದಿಂದಾಗಿ, ಒಂದು period ಆದ ಕೂಡಲೇ ಹೊರಗೆ ಬಂದು ದಮ್ ಎಳೆಯುತ್ತಿದ್ದವರು; ಕೈಗೆ ಸಿಕ್ಕಿದ ಗುಟ್ಕಾ ಜಗಿದುಕೊಂಡು, ಅದನ್ನು ಸಿಕ್ಕ ಸಿಕ್ಕಲ್ಲಿ ಉಗಿಯುತ್ತಿದ್ದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವುದರಲ್ಲಿ ಅನುಮಾನವಿಲ್ಲ.ಕೆಲ ಉಪನ್ಯಾಸಕರು ಕೂಡಾ ತೊಂದರೆ ಅನುಭವಿಸಬಹುದು ಪಾಪ!
ಹೈಕೋರ್ಟ್ ಈ ಆದೇಶ ನಿಜಕ್ಕೂ ಪರಿಣಾಮಕಾರಿಯಾಗಿದೆ. ಇದರಿಂದಾಗಿ ಕೆಲ ವಿದ್ಯಾರ್ಥಿಗಳಾದರು ದುಶ್ಚಟಗಳ ದಾಸರಾಗುವುದು ತಪ್ಪಬಹುದು. ಯಾಕೆಂದರೆ 'ತನ್ನ ಗೆಳೆಯ ಸಿಗರೇಟು ಸೇದುತ್ತಾನೆ.ತಾನು ಸೇದಿದರೆ ಏನು ತಪ್ಪು?' ಎಂಬ ಮನಸ್ಥಿತಿಯಲ್ಲಿ ದುಶ್ಚಟಗಳಿಗೆ ಬಲಿಯಾಗುವ ವಿದ್ಯಾರ್ಥಿಗಳು ಬಹಳಷ್ಟಿದ್ದಾರೆ.
ಹೈಕೋರ್ಟಿನ ಈ ಕ್ರಮದಿಂದಾಗಿ ಕಾಲೇಜಿನ ಪಕ್ಕದ ಗೂಡಂಗಡಿಗಳಲ್ಲಿ ಹೊಗೆ ಏಳುವುದು ತಪ್ಪಬಹುದು ಅಲ್ಲವೇ?
ಹಾಗೇ ಸುಮ್ಮನೆ - '24 ಗಂಟೆ kick ನಲ್ಲಿ ಇರಬೇಕು' ಎಂಬ ಮನೋಭಾವದ ಉಮೇಶ, ತಂಬಾಕು ನಿಷೇದದಿಂದಾಗಿ ಬೇಜಾರಾಗಿದ್ದಾನೆ. ಆದರೆ  ಇನ್ನು ಮುಂದೆ ಸಿಗರೇಟು ಬಿಟ್ಟು, ಕಾಲೇಜಿಗೆ ವಾಟರ್ ಕ್ಯಾನಿನಲ್ಲಿ, ಎಣ್ಣೆ ಕೊಂಡೊಯ್ಯಬೇಕು ಎನ್ನುತ್ತಿದ್ದಾನೆ.
                                                     -ಡಾ.ಶೆಟ್ಟಿ   
ಸೋತವರು 
ಕೊನೆಗೂ ನಮ್ಮ ಪಕ್ಷೇತರು ಪಕ್ಕೆ ಮುರಿದುಕೊಂಡು ಬಿಟ್ಟಿದ್ದಾರೆ. ಅಂದು ತಾರಕಕ್ಕೇರಿದ ರಾಜಕೀಯ ತೆವಲಿನ ಸಮಯದಲ್ಲಿ ಮುಖ್ಯಮಂತ್ರಿಗಳ ವಿರುದ್ದ ದೂರು ಹಾಗೂ ಸರಕಾರ ಬೀಳಿಸಲು ಪ್ರಯತ್ನ ಮಾಡಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ವಿಧಾನ ಸಭಾ ಸದಸ್ಯತ್ವದಿಂದ ಸಭಾಪತಿ ಅಂದು ಐವರು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ್ದಾರೆ.
ಇದನ್ನು ಪ್ರಶ್ನಿಸಿ ಹೈ ಕೋರ್ಟ್ ಮೆಟ್ಟಿಲೇರಿದ ಪಕ್ಷೆತರರಿಗೆ, ಹೈ ಕೋರ್ಟ್ ತಮ್ಮ ಪರ ತೀರ್ಪು ನೀಡುವುದು ಎಂದು ಆತ್ಮವಿಶ್ವಾಸದಿಂದ ಬೀಗಿದ್ದರು. ಆದರೆ ನಿನ್ನೆ ಹೊರಬಂದ ತೀರ್ಪಿನಲ್ಲಿ, ಕೋರ್ಟ್ ವಿಧಾನ ಸಭಾ ಅಧ್ಯಕ್ಷರ ನಿಲುವನ್ನು ಸ್ಪಷ್ಟವಾಗಿ ಬೆಂಬಲಿಸಿದೆ. ತುಲನಾತ್ಮಕವಾಗಿ, ತಳ ಸ್ಪರ್ಶವಾಗಿ ಇದನ್ನು ಗಮನಿಸಿದರೆ, ತೀರ್ಪು ಸರಿ ಎಂದು ಅನಿಸಿಬಿಡುತ್ತದೆ. 5 ವರ್ಷಗಳ ಕಾಲ ಆಡಳಿತ ನಡೆಸಲು ಜನ ಒಪ್ಪಿಗೆ ಕೊಟ್ಟ ಮೇಲೆ ಒಂದು ಪಕ್ಷ 5 ವರ್ಷ ಆಡಳಿತ ನಡೆಸಿದರೆ ಎಲ್ಲರಿಗೂ ಒಳಿತು. ಇಲ್ಲವಾದರೆ, ಮತ್ತೆ ರಾಜ್ಯದ ಬೊಕ್ಕಸವೇ ಹಾಳಾಗುವುದು. ಒಂದು ಚುನಾವಣೆ ಎಂದರೆ ಅದೆಷ್ಟು ದುಡ್ಡು ಖರ್ಚಾಗುತ್ತದೆ ಎಂದರೆ, ಅದು ಹೇಳಿ ಸುಖವಿಲ್ಲ. 
ಈ ಹಿನ್ನೆಲೆಯಲ್ಲಿ ಕೇವಲ 10 -16  ಶಾಸಕರಿಂದ ಇಡೀ ಸರಕಾರ ಉಳಿಯುವುದು-ಉರುಳುವುದು ಎಂದರೆ ಇದು ರಾಜಕೀಯ ದುರಂತ. ಇದನ್ನು ಗಮನಿಸಿದರೆ ತೀರ್ಪು ನಿಜವಾಗಿಯೂ ಸಮಂಜಸವಾಗಿದೆ. ಆದರೆ ಈ ತೀರ್ಪನ್ನು ಬದಿಗಿಟ್ಟು ನಾವು ಇಡೀ ಬೆಳವಣಿಗೆಯನ್ನು ಗಮನಿಸಿದರೆ, ಈ ಅನರ್ಹತೆಯ ಕಥೆಯ ಭಾಗ-1 (ಹೈ ಕೋರ್ಟ್), ಭಾಗ-2 (ಸುಪ್ರೀಂ ಕೋರ್ಟ್) ಎಪಿಸೋಡುಗಳಿಂದ ಬಡವಾಗುವುದು, ಅವರು ಗೆದ್ದ ಕ್ಷೇತ್ರ ಮತ್ತು ಕ್ಷೇತ್ರದ ಜನತೆ. ಯಾವತ್ತೂ ಹೀಗೆಯೇ, ರಾಜಕೀಯದಲ್ಲಿ ಯಾರಿಗೆ ಲಾಭವಾದರೂ ಯಾರಿಗೆ ನಷ್ಟವಾದರೂ ಬೇಸತ್ತ ಭಾವ ಮಾತ್ರ ಜನತೆಗೆ ಮುಡಿಪು.
                                           -ಡಾ.ಶ್ರೇ 
ಬರೇ ಲಂಚ 
ಲಂಚದ ಅವತಾರ ಆರಂಭ ಎಲ್ಲಿಂದ? ಅದು ನಮ್ಮ ಹುಟ್ಟಿನಿಂದ ಶುರುವಾಗುತ್ತದೆ ಎಂದರೆ ನಂಬುತ್ತೀರಾ? ಮಗು ಹುಟ್ಟಿದಾಗ ಅದನ್ನು ನೋಡಲು ಬರುವ ಮಂದಿ ಮಗುವಿನ ಕೈಯಲ್ಲಿ ತೂರಿಸುವ ನೋಟುಗಳಿಗೆ ಏನೆಂದು ಕರೆಯಬಹುದು? ಈ ಪದ್ಧತಿ ಸಂಪ್ರದಾಯವಾಗಿದ್ದರು, ಒಂದು ರೀತಿಯ ಸ್ವಾರ್ಥದ ಪರಿಯಲ್ಲಿ ನಡೆದು ಹೋಗುತ್ತದೆ.
ವೇದ ಪುರಾಣಗಳಲ್ಲಿ ಲಂಚದ ಎಷ್ಟೋ ಹಗರಣಗಳನ್ನು ನೋಡಬಹುದು. ಲಂಚ ಹೀಗೆ ಇರಬೇಕೆಂಬ ನಿರ್ದಿಷ್ಟ ನಿಲುವಿಲ್ಲ. ರಾಜನು ತನ್ನ ರಾಜ್ಯದ ಯಾವುದಾದರು ಹುಡುಗಿಯನ್ನು ಇಷ್ಟಪಟ್ಟರೆ ಅವಳ ಜೊತೆ ತನ್ನ ದಾಹ ತೀರಿಸಲು ಆಕೆಯ ಮನೆಮಂದಿಗೆ ಕೊಡುವುದೇನು?  ಆಸ್ತಿ! ಇದು ಕೂಡಾ ಲಂಚದ ಸ್ವರೂಪವಲ್ಲವೇ?
ಈ ನಿಟ್ಟಿನಲ್ಲಿ ಏನೇ ಕಾನೂನು ಬಂದರೂ ತನ್ನ ಕೆಲಸ ಕಾರ್ಯಕ್ಕಾಗಿ, ಲಂಚ ಕೊಡುವ ಮಂದಿ ಹೆಚ್ಚು.  ಆ ಬಗ್ಗೆ ಯಾರೇ ಎಷ್ಟೇ ಭಾಷಣ ಮಾಡಿದರೂ ತಮ್ಮ ಸ್ವಾರ್ಥಕ್ಕಾಗಿ ಲಂಚದಾಟ ನಡೆಯುತ್ತಲೇ ಇರುತ್ತದೆ. 
                                                       -ಕೆ.ಪಿ.ಭಟ್