ರಾಜನಿಗೆ ಬಿತ್ತು ಕೋಳ!
2ಜಿ ಸ್ಪೆಕ್ಟ್ರಂ ಹಗರಣದ ರೂವಾರಿ ಎ.ರಾಜ ಅವರನ್ನು C.B.I ಅಧಿಕಾರಿಗಳು ಕೊನೆಗೂ ಬಂಧಿಸಿದ್ದಾರೆ. ಅವರ ಜೊತೆ ಅವರ ಆಪ್ತ ಕಾರ್ಯದರ್ಶಿಗಳಾದ ಚಾಂಡೋಲಿಯ ಮತ್ತು ಸಿದ್ದಾರ್ಥ ಬೆಹುರಾ ಕೂಡಾ ಬಂಧನಕೊಳಗಾಗಿದ್ದಾರೆ.
ಈ ಮೂಲಕ ದೇಶದ ರಾಜಕಾರಣದಲ್ಲಿನ ಕಪ್ಪುಚುಕ್ಕೆಯೊಂದು ಮರೆಯಾಗಿದೆ. ದೇಶದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ನಷ್ಟ ಉಂಟುಮಾಡಿ, ತನ್ನ ಜೇಬನ್ನು ಭದ್ರಪಡಿಸಿಕೊಂಡ ರಾಜ ಜೈಲಿನಲ್ಲಿ ಕೂಡಾ ಭದ್ರವಾಗಿರಬಹುದು. 'ವಿಶೇಷ ಸೌಲಭ್ಯ' ಪಡೆದುಕೊಂಡು ಜೈಲಿನಲ್ಲಿ ಕೂಡಾ 'ರಾಜ'ನಂತೆ ಇರಬಹುದು.
ಯಾಕೆಂದರೆ ಯು.ಪಿ.ಎ ಸರಕಾರಕ್ಕೆ ಬೆಂಬಲ ನೀಡಿ ಕಾಯುತ್ತಿರುವ, ಕೀರಲು ಸ್ವರದ ಮುದುಕ ಕರುಣಾನಿಧಿಯವರ ಬಂಟನಲ್ಲವೇ ಈತ! ನಿಜವಾಗಿ ನೋಡಿದರೆ ರಾಜನನ್ನು ಬಂಧಿಸುವುದರ ಜೊತೆಗೆ ಕರುಣಾನಿಧಿಯನ್ನು ಕೂಡಾ ಬಂಧಿಸಬೇಕು. ರಾಜ ಆರೋಪಿಯೆಂದು ಗೊತ್ತಿದ್ದರು ನಾಚಿಕೆ ಬಿಟ್ಟು ಆತನ ಬೆಂಬಲಕ್ಕೆ ನಿಂತ ತಮಿಳುನಾಡಿನ ಮುಖ್ಯಮಂತ್ರಿಯ ವ್ಯಕ್ತಿತ್ವ ಮೆಚ್ಚತಕ್ಕದಲ್ಲ.
ಇನ್ನೂ ಕೂಡಾ ಅದೇ ಹಳಸಿದ ದ್ರಾವಿಡ- ಆರ್ಯ ಸಂಘರ್ಷದ ಕಥೆ ಹೇಳಿಕೊಂಡು, ತಮಿಳರನ್ನು ಮೂರ್ಖರನ್ನಾಗಿ ಮಾಡುತ್ತಿರುವ ಕರುಣಾನಿಧಿ, ಎಂತವರೆಂದು ಭ್ರಷ್ಟ ರಾಜನಿಗೆ ಬೆಂಬಲ ಕೊಟ್ಟಾಗಲೇ ನಾವು ತಿಳಿದುಕೊಳ್ಳಬಹುದು.
ರಾಜನನ್ನು ಬಂಧಿಸಿಯಾಗಿದೆ, ಇನ್ನು ಮಾಡಬೇಕಾದ ತುರ್ತು ಕೆಲಸವೆಂದರೆ; ಆತನನ್ನು ಸರಿಯಾಗಿ ತನಿಖೆ ನಡೆಸಿ ಯಾರ-ಯಾರ ಬಳಿ ಎಷ್ಟೆಷ್ಟು ತೆಗೆದುಕೊಂಡಿದ್ದಾನೆ ಎಂಬುವುದನ್ನು ಹೊರಹಾಕಿಸಬೇಕು. ಸಾಧ್ಯವಾದರೆ ದೇಶಕ್ಕೆ ಆದ ನಷ್ಟವನ್ನು ತುಂಬಿಸುವ ಪ್ರಯತ್ನ ಮಾಡಬೇಕು.
ಹಾಗೇ ಸುಮ್ಮನೆ - 2ಜಿ ಸ್ಪೆಕ್ಟ್ರಂ ಹಗರಣದ ನಷ್ಟ 1.76 ಲಕ್ಷ ಕೋಟಿ ಎಂದು ಕೇಳಿದ ಉಮೇಶ, 'ಛೇ ಅದರಲ್ಲಿ ನನಗೆ 1 ಕೋಟಿ ಕೊಟ್ಟರೆ ಸಾಕಿತ್ತು, ಜೀವಮಾನ ಪೂರ್ತಿ ರಾಜನ ಹೆಸರು ಹೇಳಿಕೊಂಡು ತಿನ್ನುತ್ತಿದ್ದೆ' ಎಂದು ಹೇಳುತ್ತಿದ್ದಾನೆ.
-ಡಾ.ಶೆಟ್ಟಿ
ಕಾಲೇಜಿಗೆ ಹೋದರೆ knowledge ಬರುತ್ತಾ?
ಕಾಲೇಜಿನಲ್ಲಿ ಲೈಬ್ರೆರಿ ಸೈಡಿಗೆ ತಲೆ ಹಾಕಿ ಮಲಗದೇ ಇದ್ದರೆ ನಾವು ಪಡೆಯುವ ಜ್ಞಾನ ಕೇವಲ 30 % ಅಂತ ಹೇಳಬಹುದು.
ಜ್ಞಾನ ಎಂಬುದು ಅದೆಷ್ಟೋ ನಾನಾ ರೀತಿಯ ಪುಸ್ತಕಗಳ ಜೊತೆ ಒಡನಾಟ ಬೆಳಸಿಕೊಂಡಾಗ, ಜೊತೆಗೆ ಹೆಚ್ಚಿನ ಸಂದರ್ಭದಲ್ಲಿ ಜೀವನದ ಅನುಭವವೇ ಜ್ಞಾನಕ್ಕೆ ಸಣ್ಣ ದಾರಿ ಮಾಡಿಕೊಡುತ್ತದೆ. ಇವುಗಳೆಲ್ಲ ಕ್ಲಾಸು ಎಂಬ ನಾಲ್ಕು ಗೋಡೆಯ ಮಧ್ಯೆ ಕುಳಿತು ದೊರಕುವಂತದ್ದಲ್ಲ.
ತರಗತಿಯಲ್ಲಿ 90 % ಮಾರ್ಕ್ಸ್ ಇದೆ ಅಂತಾದರೆ ಅದು ಜ್ಞಾನವಲ್ಲ, ಯಾರು ಬೇಕಾದರು ಮಾರ್ಕ್ಸ್ ಗಳಿಸಬಹುದು ಆದರೆ ಜ್ಞಾನವನ್ನಲ್ಲ. ಮಾರ್ಕ್ಸ್ ಎಂಬುವುದು ಸಮಾಜದ ಬಾಯಿ ಮುಚ್ಚಿಸಲು ಬೇಕೆ ವಿನಃ ಮಾರ್ಕ್ಸ್ ಪಡೆಯುವುದರಿಂದ ಜೀವನಕ್ಕೆ ಏನು ಲಾಭವಿಲ್ಲ.
ವಿದ್ಯಾರ್ಥಿಯೊಬ್ಬ ಉತ್ತಮ ಅಂಕದಿಂದ ಹೆಚ್ಚು ಅಂದರೆ rank ಗಳಿಸಬಹುದು. ತದನಂತರ ಉದ್ಯೋಗಕ್ಕೆ ಸೇರಿ ಹಣ ಮಾಡಬಹುದು ಅಷ್ಟೆ .
ಒಮ್ಮೆ ಓದುವ ಹುಚ್ಚು ಶುರು ಮಾಡಿಕೊಳ್ಳಿ ಜ್ಞಾನದ ಜೊತೆಗೆ ಜೀವನ successful ಆಗುತ್ತದೆ.ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರಮುಖವಾಗಿ ಬೇಕಾದದ್ದು ಓದಿನ ಹುಚ್ಚು, ಅದು ಇದ್ದಾಗ ಮಾತ್ರ ಆತನಿಂದ ಉತ್ತಮ ಬರವಣಿಗೆ ಹೊಮ್ಮಲು ಸಾಧ್ಯ.
ಕೆ.ಪಿ.ಭಟ್
ಕೊನೆಗೂ ರೆಡ್ಡಿಗೆ ಗಲ್ಲು
ವಿಕೃತಕಾಮಿ ಉಮೇಶ್ ರೆಡ್ಡಿ ಗೆ ಗಲ್ಲು ಶಿಕ್ಷೆ ಖಾಯಂ ಆಗಿದೆ. ಹೈಕೋರ್ಟ್ ನೀಡಿದ ಗಲ್ಲು ಶಿಕ್ಷೆಯನ್ನು, ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದು ಉಮೇಶ್ ರೆಡ್ಡಿ ಬದುಕಲು ಯೋಗ್ಯನಲ್ಲ ಎಂಬ ತೀರ್ಮಾನಕ್ಕೆ ಬಂದಿದೆ.
ಈ ರೆಡ್ಡಿ ಸಾಮಾನ್ಯನಲ್ಲ ಹಲವಾರು ಅತ್ಯಾಚಾರಗಳು, ಕೊಲೆಗಳು, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಿದ್ದು ಇತ್ಯಾದಿ ಅಪರಾಧಗಳು ಈತನ ಮೇಲಿದೆ. 12 ವರ್ಷದ ಹಿಂದೆ ವೃದ್ಧೆಯನ್ನು ಅತ್ಯಾಚಾರ ಮಾಡಿ ಕೊಂದ ಆರೋಪದಲ್ಲಿ ಈತ ಸಿಕ್ಕಿ ಬಿದ್ದಿದ್ದ.
ನಮ್ಮ ನ್ಯಾಯ ವ್ಯವಸ್ಥೆ ಎಷ್ಟೊಂದು ಉದಾರವೆಂದರೆ, ಇವನಂತಹ ದುಷ್ಟಜಂತುವನ್ನು 12 ವರ್ಷ ಜೈಲಿನಲ್ಲಿಟ್ಟುಕೊಂಡು ಸಾಕಿದೆ. ಇನ್ನೂ ಸಾಕುತ್ತದೆ ಯಾಕೆಂದರೆ ಸುಪ್ರೀಂ ಕೋರ್ಟಿನಲ್ಲಿ ಗಲ್ಲು ಶಿಕ್ಷೆ ಸಿಕ್ಕಿದ ಕೂಡಲೇ ಆತನನ್ನು ಗಲ್ಲಿಗೇರಿಸುವುದಿಲ್ಲ ಬದಲಾಗಿ ರೆಡ್ಡಿ , 'ನನಗೆ ಕ್ಷಮಾದಾನ ನೀಡಬೇಕು' ಎಂದು ರಾಷ್ಟ್ರಪತಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಆತ ಅರ್ಜಿ ಸಲ್ಲಿಸಿ, ಅದನ್ನು ಮಾನ್ಯ ರಾಷ್ಟ್ರಪತಿಯವರು ಪರಿಶೀಲಿಸಿ, 'ಗಂಭೀರ' ಚರ್ಚೆ ನಡೆಸಿ; ಆತನಿಗೆ ಗಲ್ಲು ಶಿಕ್ಷೆ ನೀಡುವುದೋ? ಬೇಡವೋ? ಎಂಬ ನಿರ್ಧಾರಕ್ಕೆ ಬರುವಾಗ ಇನ್ನು 10 ವರ್ಷ ಕಳೆದಿರುತ್ತದೆ.
ಒಟ್ಟಿನಲ್ಲಿ ಉಮೇಶ್ ರೆಡ್ಡಿ ಹೊರಗಿರುವುದಕ್ಕಿಂತ, ಜೈಲಿನಲ್ಲಿಯೇ ಆರಾಮವಾಗಿ ಕಾಲ ಕಳೆಯುತ್ತಿದ್ದಾನೆ. ಈತನಿಂದ ತೊಂದರೆಗೊಳಗಾದ ಹೆಣ್ಣು ಮಕ್ಕಳ ಬಾಳು, ಅವರ ಕುಟುಂಬದವರ ಗೋಳು ವ್ಯರ್ಥವಾಗಿದೆ.
ಉಮೇಶ್ ರೆಡ್ಡಿಯನ್ನು ಇಷ್ಟು ವರ್ಷ ಬದುಕಲು ಬಿಟ್ಟ ನಮ್ಮ ದೇಶ ನಿಜಕ್ಕೂ ಗ್ರೇಟ್ ಅಲ್ಲವೇ?
ಹಾಗೇ ಸುಮ್ಮನೆ - ಈ ಉಮೇಶ್ ರೆಡ್ಡಿಯಿಂದಾಗಿ ಹೆಚ್ಚು ತೊಂದರೆ ಅನುಭವಿಸಿರುವುದು ನಮ್ಮ ಉಮೇಶ. ಯಾಕೆಂದರೆ ಯಾವ ಹುಡುಗಿಗೆ propose ಮಾಡಿದರು, ಈತನ ಉಮೇಶ ಎಂಬ ಹೆಸರು ಕೇಳಿಯೇ ಹುಡುಗಿಯರು ಒಪ್ಪಲ್ಲವಂತೆ.
-ಡಾ.ಶೆಟ್ಟಿ
'ಮಾರ್ಗ'ದರ್ಶನ ಅಗತ್ಯ
ರಸ್ತೆಗಳು ಅತೀ ಹೆಚ್ಚು ಇರುವ 2 ನೇ 'ಅಗ್ರ'ಮಾನ್ಯ ರಾಷ್ಟ್ರವೆಂದರೆ ಭಾರತ. ಅತೀ ಹೆಚ್ಚು ಎಂದರೆ ರಸ್ತೆಯ ಮೇಲಿನ ಮೋಹವು ತೀರಾ ಹೆಚ್ಚು ಇರುತ್ತದೆ. ಈ ಹೆಣ್ಣಿನ ಮೋಹ ಮನುಷ್ಯನನ್ನು ಹೇಗೆ ತಲೆಕೆಡಿಸಿ ಬೌದ್ಧಿಕವಾಗಿ ಬೋಳರನ್ನಾಗಿ ಮಾಡುತ್ತದೆಯೋ, ಅದೇ ರೀತಿ ಈ ರಸ್ತೆಯ ಮೋಹ ಕೂಡಾ.
ಯಾಕೆ ಈ ರೀತಿ ಹೇಳುತ್ತಿದ್ದೇನೆ ಎಂದರೆ, ರಸ್ತೆಯಲ್ಲಿ ನಮ್ಮ 60 % ಯುವಜನತೆ ಅಪಘಾತಕ್ಕೆ ಈಡಾಗುತ್ತಿದ್ದಾರೆ. ಸರಿಯಾದ ಪೂರ್ವ ತರಭೇತಿ ಇಲ್ಲದಿರುವುದೇ ಇದಕ್ಕೆ ಕಾರಣ. ದೇಶದೆಲ್ಲೆಡೆ ಅದೆಷ್ಟೋ ಜನ ಲೈಸೆನ್ಸ್ ವೀಹಿನರಾಗಿಯೇ ಗಾಡಿ ಗಾಡಿ ಓಡಿಸುತ್ತಿರುವುದೂ ಇದಕ್ಕೆ ಮತ್ತೊಂದು ಕಾರಣ. ಮತ್ತು ತರಭೇತಿ ರಹಿತ licence issue ಕೂಡಾ ಒಂದು ವಿಧದಲ್ಲಿ ಕಾರಣ.
ಹೀಗಾಗಿ ಯುವ ಜನತೆಗೆ ಶೈಕ್ಷಣಿಕವಾಗಿ ಮಾರ್ಗದರ್ಶನ ನೀಡಿದರೆ ಸಮಸ್ಯೆಗೆ ಪರಿಹಾರ ಸಿಕ್ಕಬಹುದು.
-ಡಾ.ಶ್ರೇ
ಪ್ರಾಂಶುಪಾಲರ ನಡೆ
ಕಾಲೇಜಿನ ಎಲ್ಲಾ ಸಮಸ್ಯೆಗಳಿಗೂ ಉತ್ತರ ಕೊಡಬೇಕಾದ ವ್ಯಕ್ತಿ ಪ್ರಾಂಶುಪಾಲರು ಆಗಿರುವುದರಿಂದ ಆತನನ್ನು ಫುಟ್ಬಾಲ್ ಗೆ ಹೋಲಿಸಬಹುದು,ಯಾರು ಬೇಕಾದರೂ ಕಿಕ್ ಕೊಡಬಹುದು; ಆ ಹುದ್ದೆಯೇ ಅಂತಹದ್ದು.
ಒಂದೆಡೆಯಲ್ಲಿ ಆಡಳಿತ ವರ್ಗ, ಇನ್ನೊಂದೆಡೆ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಹೆತ್ತವರು ಎಲ್ಲರನ್ನು ಹೊಂದಿಸಿಕೊಂಡು ಹೋಗುವುದೇ ಒಂದು ಸಾಹಸ.
ಪ್ರಾಂಶುಪಾಲರಿಗೆ 'ಅಹಂ' ಬಂದರೆ ಅದು ಕಾಲೇಜಿನ ಅವನತಿಗೆ ಮುನ್ಸೂಚನೆ ಕೊಟ್ಟಂತೆ. ಈ ಹುದ್ದೆಗೆ ಎಷ್ಟು ಗೌರವವಿದೆಯೋ ಅಷ್ಟೇ ಜವಾಬ್ದಾರಿಯು ಇದೆ. ಆತನ ಒಂದು ಹೊತ್ತಿನ ವರ್ತನೆಯಲ್ಲಿ ಮೇಲು ಕೆಳಗಾದರೆ ಎಡವಟ್ಟುಗಳು ಮಹಡಿಯಷ್ಟರ ಮಟ್ಟಿಗೆ ಬೆಳೆದಿರುತ್ತದೆ.
ಚಿಕ್ಕ ತೂತು ಸಾಕು ನೀರು ದೋಣಿಯೊಳಗೆ ಪ್ರವೇಶಿಸಿ ಕೆಲವೇ ಕ್ಷಣಗಳಲ್ಲಿ ದೋಣಿ ಮುಳುಗಿ ಪಾತಾಳ ಸೇರಲು.
'ನಾನು ಬ್ಯುಸಿ' ಎಂಬ ಪದ ಇಲ್ಲಿ ಅರ್ಥಹೀನ. 24 ಘಂಟೆಗಳ ಕಾಲ ಕೆಲಸದ ಒತ್ತಡದಲ್ಲಿರುವ ಅದೆಷ್ಟೋ ಉನ್ನತ ವ್ಯಕ್ತಿಗಳು ವಿದ್ಯಾರ್ಥಿಗಳ ಜೊತೆ 'ರಂಗ'ದಲ್ಲಿ ಕಲೆತು ಬೆರೆಯುವುದನ್ನು ನಾವು ಕಂಡಿದ್ದೇವೆ. ಎಲ್ಲರನ್ನು ಕೂಡಿಕೊಂಡು ರೂಢಿಸಿಕೊಂಡ ಮುಖವಾಡಗಳನ್ನು ಕಳಚಿ ಧ್ಯೇಯ, ತತ್ವಗಳ ಸರಿಯಾದ ಪಾಲನೆ ಅಗತ್ಯ.
-ಕೆ.ಪಿ.ಭಟ್
ವಾವ್! ಸಿನ್ಹಾ
ಅಂತೂ, ಇಂತೂ ಬಿ.ಜೆ.ಪಿ ನಾಯಕರು ನಿದ್ದೆಯಿಂದ ಎದ್ದಿದ್ದಾರೆ. ಬಿ.ಜೆ.ಪಿ ಗೂ ಕಣ್ಣಿದೆ ಎಂಬ ವಿಚಾರ ಈಗ ಜನರಿಗೆ ಗೊತ್ತಾಗುತ್ತಿದೆ. ಶತ್ರುಘ್ನ ಸಿನ್ಹಾ ಅವರು ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದಿರುವುದು ನಿಜಕ್ಕೂ ಆಶ್ಚರ್ಯಕ್ಕೆ ಎಡೆಮಾಡಿದೆ.
ರಾಜ್ಯದಲ್ಲಿ ಹಗರಣಗಳ ಮೇಲೆ ಹಗರಣಗಳು ಬಯಲಾಗುತ್ತಿದ್ದರು, ಬಾಲ ಮುಚ್ಚಿಕೊಂಡು ಸುಮ್ಮನಿದ್ದ ಬಿ.ಜೆ.ಪಿ ಯ 'ಅಗ್ರ'ನಾಯಕರು ಶತ್ರುಘ್ನ ಸಿನ್ಹಾ ಮೂಲಕ ಮಾತನಾಡುತ್ತ ಇದ್ದಾರೋ ಏನೋ? ಇಲ್ಲ ಬಿ.ಜೆ.ಪಿಯಲ್ಲಿದ್ದುಕೊಂಡು, ಸ್ವಚ್ಚ ರಾಜಕಾರಣ ಮಾಡಿ ಸತ್ತ ಯಾವುದೋ ಒಬ್ಬ ನಾಯಕನ ಆತ್ಮ ಸಿನ್ಹಾರ ಮೂಲಕ ಮಾತನಾಡುತ್ತಿದೆ ಇರಬೇಕು. ಇಲ್ಲವಾದರೆ ಸಿನ್ಹಾ ಅವರು 'ಯಡಿಯೂರಪ್ಪ ಎದುರಿಸುತ್ತಿರುವ ಆರೋಪಗಳ ಜೊತೆ ಆದರ್ಶ ಹಗರಣ,ಸಿಡಬ್ಲ್ಯೂಜಿ ಮತ್ತು 2ಜಿ ಹಗರಣವನ್ನು ತುಲನೆ ಮಾಡಲು ಸಾಧ್ಯವಿಲ್ಲ. ಆದರೆ, ಚಿಕ್ಕ ಕಳ್ಳರು ಮತ್ತು ದೊಡ್ಡ ಕಳ್ಳರು ಎಂಬ ಅರ್ಥದಲ್ಲಿ ಯಾರು ಮಾತನಾಡಬಾರದು. ಚಿಕ್ಕವನಿರಲಿ, ದೊಡ್ದವನಿರಲಿ ಕಳ್ಳ ಕಳ್ಳನೇ. ಯಡಿಯೂರಪ್ಪ ರಾಜೀನಾಮೆ ನೀಡಬೇಕು' ಎಂಬ ಮಾತುಗಳನ್ನು ಹೇಳಲು ಸಾಧ್ಯವಿರಲಿಲ್ಲ.
ಒಟ್ಟಿನಲ್ಲಿ ಯಡಿಯೂರಪ್ಪನವರು ಮಾಡಿದ್ದು ತಪ್ಪು ಎಂದು ಹೇಳಲು ಅಂಜುತ್ತಿದ್ದ ಬಿ.ಜೆ.ಪಿಯ ನಾಯಕರಿಗೆ ಶತ್ರುಘ್ನ ಸಿನ್ಹಾ ಅವರು ಮಾದರಿಯಾಗಿದ್ದಾರೆ, Hats off ಸಿನ್ಹಾ
ಏನೇ ಇರಲಿ ಬಿ.ಜೆ.ಪಿ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಂಡು, ರಾಜ್ಯಕ್ಕೆ ಅಂಟಿದ ಕಳಂಕವನ್ನು ದೂರ ಮಾಡಿದರೆ ಸಾಕು. ಈ ಪಕ್ಷಾತೀತವಾದ ಭ್ರಷ್ಟಾಚಾರಗಳಿಂದ ರಾಜ್ಯದ ಜನರಿಗೆ 'ನಾನು ಕನ್ನಡಿಗ' ಎಂದು ಹೆಮ್ಮೆಯಿಂದ ಹೇಳಲು ಸಾಧ್ಯವಿಲ್ಲದಂತಾಗಿದೆ.
ಹಾಗೇ ಸುಮ್ಮನೆ - ಸಿನ್ಹಾ ಅವರ ಹೇಳಿಕೆಯನ್ನು ಕೇಳಿದ ಉಮೇಶ, 'ಅಯ್ಯೋ ದೇವರೇ ನಮ್ಮ ಸಿನ್ಹಾ ಅವರು ಬಿ.ಜಿ.ಪಿ ಬಿಟ್ಟು ಕೈ ಪಕ್ಷದ
ಹ್ಯಾಂಡ್-ಆಪರೇಶನ್ ಬಲೆಗೆ ಏನಾದರು ಬಿದ್ದರೋ' ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾನೆ.
-ಡಾ.ಶೆಟ್ಟಿ
ನಾವೂ ಮಾಡಬೇಕು ಕಟಾವು
ಮತ್ತೆ ಇದನ್ನೇ ಬರೆಯಲು ಮನಸ್ಸಿನ ಮೂಲೆಯಲ್ಲೆಲ್ಲೋ ಮೆತ್ತಗಿನ ನೋವು ಕಾಡುತ್ತದೆ. ಯಾಕಾದರೂ ಸದಾ ಈ ವಿಚಾರದ ಬಗ್ಗೆಯೇ ನಾವು ತಲೆಕೆಡಿಸಿಕೊಳ್ಳುತ್ತಿರಬೇಕು? ಅವರುಗಳು ಅವರಷ್ಟಕ್ಕೆ ಹಾರಾಡಿಕೊಂಡೋ ತೂರಾಡಿಕೊಂಡೋ ಇರಲಿ ಎಂದು ಒಮ್ಮೊಮ್ಮೆ ಮಿಂಚಿನಂತೆ ಸಣ್ಣ ಆಲೋಚನೆ ಹೊಳೆದರೂ, ಮತ್ತೆ ಈ ಆಲೋಚನೆಗಳನೆಲ್ಲ ಬದಿಗಿಟ್ಟು, ಬರೆಯಲೇ ಬೇಕೆನಿಸುವಷ್ಟರಮಟ್ಟಿಗಿನ ತುಡಿತ. ಕಾರಣ ಇಷ್ಟೇ; ಇದರ ಬಗ್ಗೆ ದ್ವನಿ ಎತ್ತದಿದ್ದರೆ ಎಲ್ಲಿ ನಾವು ಜವಾಬ್ದಾರಿಯಿಂದ ನುಣುಚಿಕೊಂಡು, ಪಲಾಯನ ಮಾಡಿದಂತೆ ಆಗುವುದೋ ಎಂಬ ಸಣ್ಣ ನಾಚಿಕೆ. ಈಗಂತೂ ಎಲ್ಲರಿಗೂ ಅರಿವಾಗಿರುತ್ತದೆ. ಯಾವ ವಿಚಾರದ ಬಗ್ಗೆ ಈತ ಬರೆಯಲು ಹೊರಟಿದ್ದಾನೆ ಎಂದು. 'ಮತ್ತದೇ ರಾಜಕೀಯ ಗುರು'.
ನಿನ್ನೆ ಬೆಂಗಳೂರಿನ ಜಕ್ಕರಾಯನಕೆರೆ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ, ಬಿ.ಜೆ.ಪಿ ಹಟಾವೋ-ಕರ್ನಾಟಕ ಬಚಾವೋ ಎಂಬ ಬ್ರಹತ್ ಕಾರ್ಯಕ್ರಮವನ್ನು ಸಿದ್ದರಾಮಯ್ಯನವರ ಮುಂದಾಳತ್ವದಲ್ಲಿ ಆಯೋಜಿಸಿತ್ತು. ಅಲ್ಲಿ ನಾವು ಕೇಳಿದ್ದು ಕೇವಲ ಅಂಧಸಹಿತ-ಸಹಿಷ್ಣು ವಿಹೀನ ಅರಚಾಟ,ಬೈಗುಳ ಹಾಗೂ ಅದಕ್ಕೂ ಮೀರಿದ್ದು.
ಬಿ.ಜೆ.ಪಿ ಸಾಚಾ ಪಕ್ಷ ಅಂತ ಇಲ್ಲಿ ಹೇಳುವುದು ನನ್ನ ಉದ್ದೇಶವೇ ಅಲ್ಲ. ಅದು ಅತ್ಯಂತ ನೀಚ ಪಕ್ಷ ಎಂದು ಅದೇ ಸ್ವಯಂ ಪ್ರೇರೇಪಿತವಾಗಿ ಜನತೆಗೆ ತೋರಿಸಿಯಾಗಿದೆ. ಅದಕ್ಕೆ ಜನತೆಯೇ ತಕ್ಕ ಪಾಠ ಕಲಿಸುತ್ತದೆ. ಯಾಕೆಂದರೆ ನಮ್ಮ ಜನ ಅಷ್ಟೊಂದು ದಡ್ಡರಲ್ಲ ಬಿಡಿ. ಆದರೆ ಕಾಂಗ್ರೆಸ್ ಪಕ್ಷದ ಹೋರಾಟದ ಪರಿ ನಿನ್ನೆ ನಿಜವಾಗಲೂ ಅರ್ಥಗರ್ಭಿತವಾಗಿರಲಿಲ್ಲ. ನಿಜವಾಗಿಯೂ ಕರ್ನಾಟಕ ರಾಜ್ಯದ ಬಗೆಗೆ ತುಂಬು ಹೃದಯದ ಪ್ರೀತಿ ಇದ್ದಿದ್ದರೆ, ಈ ಪೊಳ್ಳು ಹೋರಾಟವನ್ನು ಬಿಟ್ಟು ಅವರ ಅಧಿಕಾರ ವ್ಯಾಪ್ತಿಯಲ್ಲಿ ರಾಜ್ಯದ ಒಳಿತಿಗೆ ಅದೇನೇನು ಮಾಡಬೇಕೋ ಅದನ್ನು ಮಾಡಬೇಕಿತ್ತು. ಆದರೆ ಅದರ ಹೊರತಾಗಿ ಪಕ್ಷ ಎಲ್ಲಾ ಮಾಡುತ್ತಿದೆ. ಹೇಗೆ ಅವಧಿಗೆ ಮುನ್ನ ರಾಜ್ಯದ ಚುಕ್ಕಾಣಿ ಹಿಡಿಯುವುದು ಎಂಬ ಏಕ ಮಾತ್ರ ಆಲೋಚನೆಯಲ್ಲಿ ನಿರತರಾಗಿದ್ದಾರೆ ಪಕ್ಷದ ಪರಿಚಾರಕರು.
ನಿನ್ನೆಯ ಇವರ ಪರಾಕ್ರಮ ಯಾವರೀತಿಯದ್ದಾಗಿತ್ತೆಂದರೆ, ಬಿ.ಜೆ.ಪಿ ಹಟಾವೋ-ಕರ್ನಾಟಕದ ಹಣ ಬಚಾವೋ-ನಾವೂ ಮಾಡ್ಬೇಕು ಕಟಾವು ಎಂಬಂತಿತ್ತು.
ಡಾ.ಶ್ರೇ
ಮುದುಕನ ಅವಾಂತರ
ವಿಶ್ವದ ಅರಬ್ ರಾಷ್ಟ್ರಗಳ ಪೈಕಿ ಸಾಕಷ್ಟು ಹೆಸರುಗಳಿಸಿರುವ ಈಜಿಪ್ಟ್ ನ ಅದ್ಯಕ್ಷರಾದ 82 ವರ್ಷದ ಮುಬಾರಕ್ ಅವರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಲು ತೀವ್ರವಾಗಿ ಪ್ರತಿಭಟನೆ ನಡೆಯುತ್ತಿದೆ.
ಮೂರು ದಶಕದಿಂದ ಅಧಿಕಾರದಲ್ಲಿದ್ದುಕೊಂಡು, ಪ್ರಜೆಗಳು ಕೈಮುಗಿದು ನಿಮ್ಮ ಅಧಿಕಾರ ಬೇಡ ಅಂದರೂ ಕುರ್ಚಿ ಬಿಟ್ಟು ಕದಲುತ್ತಿಲ್ಲ ಈ ಮುದುಕ.
ಇವನ ವಿರುದ್ದ ಪ್ರತಿಭಟನೆಯಲ್ಲಿ ಸತ್ತವರ ಸಂಖ್ಯೆ 150ಕ್ಕೆ ಏರಿರುವುದು ವಿಷಾಧಕರ. ವಿಶ್ವದ ಎಲ್ಲಾ ಕಡೆಯಿಂದಲೂ ಇವನ ಪದಚ್ಯುತಿ ಗೆ ಒತ್ತಾಯಿಸುತ್ತಿದ್ದಾರೆ.
ಸತ್ತವರ ಆತ್ಮ ಶಾಂತಿಗಾದರೂ ಈ ಮುದುಕ ಅಧಿಕಾರ ಹಸ್ತಾಂತರಿಸುವ ಅಗತ್ಯವಿದೆ.
- ಕೆ.ಪಿ.ಭಟ್
ವಿದೇಶದಲ್ಲಿ ನೌಕರಿ ಬೇಕೇ?
ನಿಮಗೆ ವಿದೇಶದಲ್ಲಿ ನೌಕರಿ ಬೇಕೇ? ಕೇವಲ 80,000 ಕೊಡಿ ನಾವು ಮಾಡಿ ಕೊಡುತ್ತೇವೆ, ಎಂದು ಹೇಳುವ ಬ್ರೋಕರುಗಳು ನಮಗೆ ಅಲ್ಲಲ್ಲಿ ಕಾಣಸಿಗುತ್ತಾರೆ. ಅವರನ್ನು ನಂಬಿ ನೀವು ಹಣ ಕೊಟ್ಟರೆ ಅಲ್ಲಿಗೆ ಮುಗಿಯಿತು, ನಿಮ್ಮ ತಲೆಗೆ 3 ನಾಮ ಗ್ಯಾರಂಟಿ.
ವೀಸಾ, ಪಾಸ್ ಪೋರ್ಟ್ ಎಂದು ನಿಮ್ಮಿಂದ ಸಾವಿರ-ಸಾವಿರ ತೆಗೆದುಕೊಂಡು ನಂತರ ವಂಚಿಸಿ ಮರೆಯಾಗುವ ವ್ಯಕ್ತಿಗಳು ನಮ್ಮ ಸುತ್ತಮುತ್ತ ಇದ್ದಾರೆ. ಕೆಲವರು ಪಾಸ್ ಪೋರ್ಟ್, ವೀಸಾ ಮಾಡಿಕೊಡುತ್ತಾರೆ, ಆದರೆ ಆ ನೌಕರಿಯನ್ನು ನಂಬಿ ನೀವು ವಿಮಾನ ಹತ್ತಿ ಹೋದರೆ; ಒಂದೋ ಅಲ್ಲಿ ಕಡಿಮೆ ಸಂಬಳಕ್ಕೆ ಗುಲಾಮರಂತೆ ದುಡಿಯಬೇಕಾಗುತ್ತದೆ, ಇಲ್ಲವೇ 1 ವರ್ಷಕ್ಕೆ ಆಗುವಂತಹ ವಿಸಿಟಿಂಗ್ ವೀಸಾದಿಂದಾಗಿ ಆ ದೇಶದಿಂದ ಸ್ವಲ್ಪ ಸಮಯದಲ್ಲೇ ಹೊರ ಬೀಳಬೇಕಾಗುತ್ತದೆ.
ಇಂತಹ ವಂಚಕರನ್ನು ನಂಬಿ, ಮನೆಯವರ ಬಂಗಾರ ಮಾರಿ ಹಣ ಕೊಡುವ ವ್ಯಕ್ತಿಗಳು ಕೊನೆಗೆ ಬೆಪ್ಪು ತಕ್ಕಡಿಯಂತೆ ನಿಲ್ಲಬೇಕಾಗುತ್ತದೆ. ಆದುದರಿಂದ ಜನರೇ ಎಚ್ಚರವಾಗಿರಿ! ಇವರು ನಿಮ್ಮಲ್ಲಿಗೂ ಬರಬಹುದು.
ಹಾಗೇ ಸುಮ್ಮನೆ- ವಿದೇಶದಲ್ಲಿ ಉದ್ಯೋಗ ಎಂದರೆ ಸಾಕು ಉಮೇಶ ಬೆವರಿ ಹೋಗುತ್ತಾನೆ. ಯಾಕೆಂದರೆ ಹೀಗೆ ಒಬ್ಬ ಬ್ರೋಕರ್ ಉಮೇಶನನ್ನು ವಿದೇಶಕ್ಕೆ ಕಳುಹಿಸುತ್ತೇನೆ ಎಂದು ನಂಬಿಸಿ ಮುಂಬೈ ಏರ್ ಪೋರ್ಟ್ ನಲ್ಲೆ ಬಿಟ್ಟನಂತೆ. ಉಮೇಶ ಅಲ್ಲಿಂದ ಹೊರ ಬಂದು ಸ್ಲಂ ನೋಡುವಾಗ ಗೊತ್ತಾದದ್ದು ತಾನು ಮೋಸ ಹೋದೆ ಎಂಬ ವಿಷಯ.
-ಡಾ. ಶೆಟ್ಟಿ
ಹೈಡ್ ಪಾರ್ಕ್
ಬ್ರಿಟನ್ ನ ಪ್ರಸಿದ್ಧ ಉದ್ಯಾನ ಗಳಲ್ಲಿ ಹೈಡ್ ಪಾರ್ಕ್ ಒಂದು. ಇಲ್ಲಿ ವಸಂತ ಋತು ಅತ್ಯಂತ ಮನೋಹರವಾಗಿರುವುದರಿಂದ ಪ್ರೇಮಿಗಳು ಮೈಮರೆತು ಸ್ವರ್ಗ ಸುಖಕ್ಕೆ ಜಾರಿರುತ್ತಾರೆ. ಹೈಡ್ ಪಾರ್ಕ್ ನ SPEAKERS CORNER ಜಗತ್ತಿನ ಗಮನ ಸೆಳೆದಿದೆ.
ಇಲ್ಲಿ ವಾಕ್ ಸ್ವಾತಂತ್ರ್ಯ ಯಥೇಚ್ಛವಾಗಿ ಇರುವುದರಿಂದ ಯಾರು ಯಾರನ್ನು ಟೀಕಿಸಬಹುದು. ರೇಡಿಯೋ ಟಿ.ವಿ ಮಾಧ್ಯಮಗಳಲ್ಲಿ ಪ್ರಸ್ತಾಪಿಸದ ಸಮಾಜ ಬಾಹಿರ ಸಂಗತಿಗಳನ್ನು ಸಾರಿ ಸಾರಿ ಹೇಳಬಹುದು. ಬ್ರಿಟನಿನ ರಾಣಿಯನ್ನು ಟೀಕಿಸುತ್ತ ಭಾಷಣಕಾರರು ಆಕೆಯ ಪದಚ್ಯುತಿಗೆ ಕರೆನೀಡುತ್ತಿದ್ದರಂತೆ ಮತ್ತು ವರ್ಣಬೇಧ ತೊಂದರೆ ಅನುಭವಿಸುವ ವರ್ಣೀಯರು ಹೈಡ್ ಪಾರ್ಕಿಗೆ ಬಂದು ಬ್ರಿಟನಿನ ಈ ದುಷ್ಟ ಪ್ರವೃತ್ತಿಯನ್ನು ಖಂಡಿಸಿ ಬ್ರಿಟಿಷರ ಜನ್ಮ ಜಾಲಾಡುತ್ತಾರೆ.
ಇಲ್ಲಿ ಇಲ್ಲರಿಗೂ ವಾಕ್ ಸ್ವಾತಂತ್ರ್ಯ ಇರುವುದರಿಂದ, ಇಂಗ್ಲೀಷ್ ಹುಡುಗಿಯರು ಸಣ್ಣ ಡ್ರೆಸ್ ಗಳನ್ನು ಧರಿಸಿ ತಮ್ಮ ಬಿಳಿ ತೊಡೆಗಳನ್ನು ಎಷ್ಟು ತೋರಿಸಿ, ಮೈಮರೆತು ಆಹ್ವಾನಿಸಿದರೂ ಗಮನಕ್ಕೆ ಬರದಂತೆ ಇರುವ ಬ್ರಿಟಿಷ್ ಪುರುಷರನ್ನು ಷಂಡರೆಂದು ಆಫ್ರಿಕದ ಜನ ಹೇಳುತ್ತಿದ್ದರಂತೆ. ಇಷ್ಟೆಲ್ಲಾ ವಾಕ್ ಸ್ವಾತಂತ್ರ್ಯ ಇದ್ದರೂ ಇದು ಮನರಂಜನೆಗೆ ಮಾತ್ರ, ಇದನ್ನು ಯಾರೂ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ.
ಇಂತಹ ಉದ್ಯಾನ ಭಾರತದಲ್ಲಿ ಇದ್ದರೆ ಅದೆಷ್ಟೋ ಸತ್ಯಗಳು ಬೆತ್ತಲಾಗುತ್ತಿದ್ದವು.
ಕೆ.ಪಿ.ಭಟ್
ನ್ಯಾಯ?
ಚರ್ಚ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ವರದಿ ನಿನ್ನೆ ಶುಕ್ರವಾರ ಲೋಕಾರ್ಪಣೆ ಯಾಗಿದೆ. ನ್ಯಾ. ಬಿ.ಕೆ.ಸೋಮಶೇಖರ್ ನೇತ್ರತ್ವದ ವಿಚಾರಣಾ ಆಯೋಗವು, ಬಿ.ಜೆ.ಪಿ. ಹಾಗೂ ಹಿಂದೂ ಪರ ಸಂಘಟನೆಗಳು ದಾಳಿಯ 'ಕಾರ್ಯಕರ್ತ' ರಲ್ಲ ಎಂದು ವರದಿಯಲ್ಲಿ ಹೇಳಿದೆ.
ಈ ಆಯೋಗವು ಬಹಳ ಕೂಲಂಕುಶವಾಗಿ, ವಿಸ್ತ್ರತವಾಗಿ, ವಿನೂತನವಾಗಿ, ವಿಡಂಬನಾತ್ಮಕತೆಯ ಗೋಜಿನ ಹೊರತಾಗಿ ಪೂರ್ತಿ ಸನ್ನಿವೇಶವನ್ನು ಅತ್ಯಂತ ಪಾರದರ್ಶಕವಾಗಿ, ಯಾವುದೇ ಪರಿಪಕ್ವ ಹೀನತೆಯ ಹಂಗಿಗೆ ತಲೆಕೊಡದೆ ಅಧ್ಯಯನ(?) ನಡೆಸಿ ಜನತೆಯ ಎದುರಿಗೆ ನ್ಯಾಯವನ್ನು ಎತ್ತಿ ಹಿಡಿದಿದ್ದಾರೆ ಎಂದು ಕರ್ನಾಟಕದ ಅತ್ಯಂತ ಮೂರ್ಖಶಿಖಾಮಣಿಗೂ ಅರಿವಾಗಿದೆ. ಎಲ್ಲೆಲ್ಲೂ ಆಯೋಗದ ಮೇಲೆ ಕೆಂಗಣ್ಣು ಬೀರುವ ಜನಗಳೇ ನಮ್ಮ ನಡುವೆ ತುಂಬಿರುವ ಈ ಸಂದರ್ಭದಲ್ಲೂ, ಆಯೋಗದ 'ಅಭೂತಪೂರ್ವ' ಸಾಧನೆ ಮೆಚ್ಚತಕ್ಕದ್ದು. ಯಾವುದೇ ಕ್ಷುಲ್ಲಕ ರಾಜಕಾರಣಕ್ಕೆ ಬಲಿಯಾಗದೆ ಇಡೀ ಪ್ರಸಂಗವನ್ನು ಸೂಕ್ಷ್ಮವಾಗಿ ಗಮನಿಸಿ ಬಹಳ ಗಂಭೀರವಾಗಿ ಆಯೋಗ ವರದಿ ಸಲ್ಲಿಸಿದೆ.
ಈ ವರದಿಯಿಂದ, ಜನತೆಯ ನ್ಯಾಯಾಂಗ ವ್ಯವಸ್ಥೆಯ ಮೇಲೆ ಇರುವ ನಂಬಿಕೆ 'ದುಪ್ಪಟ್ಟಾ'ಗಿದೆ. ಎಂದರೂ ತಪ್ಪಿಲ್ಲ. ಇಂತಹ ನ್ಯಾಯಾಂಗ ವ್ಯವಸ್ಥೆ ಎಲ್ಲೆಡೆ ಸಂಪೂರ್ಣವಾಗಿ ಹಾಸು ಹೊಕ್ಕಾದರೆ ಇಡೀ ದೇಶ ಭಧ್ರತೆಯ ಬುನಾದಿಯ ಅಂಚನ್ನು ತಲುಪಿ ಎಲ್ಲಾ ರಾಷ್ಟ್ರಗಳನ್ನು ಮೀರಿಸಿ, ಸುಸಂಪನ್ನ ಅದಕ್ಕೂ ಮೀರಿ ನ್ಯಾಯ ಸಂಪನ್ನ ದೇಶ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.
-ಡಾ.ಶ್ರೇ.
ಆಚಾರವಿಲ್ಲದ ನಾಲಿಗೆ
ಯಾರೇ ಒಬ್ಬ ಕಾನೂನು ಪದವಿ ಪಡೆದು ಅಥವಾ ಉನ್ನತ ಹುದ್ದೆಯಲ್ಲಿ ಇದ್ದವರು ಯಾವುದು ಹಿತ-ಅಹಿತ ಎಂದು ತಿಳಿಯುವ ಅಗತ್ಯವಿದೆ. ಕೊಳೆತ ಆಲೋಚನೆಗಳನ್ನು ಮುಂದಿಟ್ಟುಕೊಂಡು ಮುಗ್ಧ ಮನಸ್ಸುಗಳ ಮೇಲೆ ತನ್ನ ಪ್ರಭಾವ ಬೀರಿದರೆ ಮನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
'ಗುಲಾಮಿ ಮಾನಸಿಕತೆಯಿಂದ ಹೊರ ಬನ್ನಿ,ವಿಕ್ರತ ಮನಸ್ಸಿನ ವಿದೇಶಿಯರ ಆಚರಣೆಗಳು ಬೇಡ.' ಎಂದು ವಿವೇಕೋತ್ಸವ 2011 ರ ಸಂದರ್ಭದಲ್ಲಿ ರಾಜ್ಯ ವಕೀಲರ ಉಪಾಧ್ಯಕ್ಷ ನ್ಯಾಯವಾದಿ ಪಿ.ಪಿ. ಹೆಗ್ದೆ ಹೇಳಿದ ಮಾತಿದು.
ಸೀಮಿತ ಆಲೋಚನೆಗಳನ್ನು ಮಾಡಿ, ಬಾವಿಯಲ್ಲಿರುವ ಕಪ್ಪೆಯಂತೆ ವರ್ತಿಸುವ ಮತ್ತು ಭಾಷಣಗಳನ್ನು ಬಿಗಿಯುವ ಇವರುಗಳು, ಅದು ಯಾವ ರೀತಿಯ ರಾಷ್ಟ್ರಭಕ್ತಿ ತೋರಿಸುತ್ತಿದ್ದಾರೋ ತಿಳಿಯುತ್ತಿಲ್ಲ.
ಈ ಅಯ್ಯ ಬಾಯಿಪಾಠ ಮಾಡಿದ್ದು ಬ್ರಿಟಿಷರು ಜಾರಿಗೊಳಿಸಿದ ಕಾನೂನನ್ನು,ಧರಿಸಿದ್ದು ಕಪ್ಪು ಕೋಟನ್ನು; ಇಲ್ಲಿಯೂ ಮತ್ತೊಮ್ಮೆ ವ್ಯಕ್ತವಾಗುವುದು ಆತನ ಆಚಾರವಿಲ್ಲದ ನಾಲಿಗೆ.
ಇಂಗ್ಲಿಷರ ಬುದ್ದಿಯವರೇ ಇಂದಿಗೂ ದೇಶವನ್ನು ಆಳುತ್ತಿದ್ದಾರೆ ಎಂದು ಹೇಳುವ ಇವರುಗಳು, ಅದು ಯಾವುದೋ ಬೇರೆ ದೇಶ ಕಟ್ಟಲು ಹೊರಟಂತೆ ಕಂಡುಬರುತ್ತಾರೆ. ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಇವರುಗಳನ್ನು ನೆನಪು ಮಾಡುವ ಸಂದರ್ಭದಲ್ಲಿ, ಅವರ ಹಾದಿಯಲ್ಲಿ ಸಾಗಿ, ಬದುಕಿನ ನಿಜ ಆರ್ಥ ತಿಳಿದವರಿಗೆ ಮಾತ್ರ ಇಂತಹ ಕಾರ್ಯಕ್ರಮದಲ್ಲಿ ಮಣೆಹಾಕಬೇಕು ಎಂಬುದು ನನ್ನ ವಿನಂತಿ.
ಕೆ.ಪಿ.ಭಟ್
ಖೈದಿಗಳಿಗೂ ಬಂತು ಸವಲತ್ತು
ರಾಜ್ಯದ 4 ಕಡೆ ಬಯಲು ಬಂದಿಖಾನೆ ನಿರ್ಮಾಣ ಮಾಡಲಾಗುವುದು ಎಂದು ಬಂದಿಖಾನೆ ಸಚಿವ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.
ಈ ಮೂಲಕ ಖೈದಿಗಳಿಗೆ ಸವಲತ್ತು ದೊರೆತಂತಾಗಿದೆ, ಹೇಗೆಂದರೆ ಈಗಾಗಲೇ ದೇವನಹಳ್ಳಿಯ ಬಳಿ ಇರುವ ಬಯಲು ಬಂದಿಖಾನೆಯಲ್ಲಿ, ಖೈದಿಗಳಿಗೆ ಸ್ವಾವಲಂಬಿಯಾಗಿ ಜೀವನ ನಡೆಸಲು ಅವಕಾಶವಿದೆ. ಇಲ್ಲಿ ಸ್ವತಂತ್ರವಾಗಿ ಇರಬಹುದು, ಇಂತಹ ಬಂದಿಖಾನೆಗಳು ಇತರ ಜೈಲುಗಳಿಗೆ ಮಾದರಿ. ಇವು ಇನ್ನಷ್ಟು ರಚನೆಯಾಗಬೇಕು, ಯಾಕೆಂದರೆ ಖೈದಿಗಳನ್ನು ಜೈಲಿನಲ್ಲಿ ಮೃಗಗಳಂತೆ ನಡೆಸಿಕೊಂಡರೆ; ಅವರು ಬದಲಾಗುವ ಸಾಧ್ಯತೆ ಕಡಿಮೆ.
ಜೈಲುಗಳು ಹೇಗಿರಬೇಕೆಂದರೆ, ಖೈದಿಯೊಬ್ಬ ತಪ್ಪು ಮಾಡಿ ಜೈಲು ಸೇರಿಕೊಂಡರೆ, ಅಲ್ಲಿ ಆತ ಸಂಪೂರ್ಣವಾಗಿ ಬದಲಾಗಬೇಕು. ಆತನಿಗೆ ಒಳಿತು-ಕೆಡುಕುಗಳು ಚೆನ್ನಾಗಿ ಅರ್ಥವಾಗಬೇಕು, ಶಿಕ್ಷೆಯನ್ನು ಮುಗಿಸಿಕೊಂಡು ಹೊರಬರುವಾಗ ಉತ್ತಮ ಪ್ರಜೆಯಾಗಿರಬೇಕು.
ಬಯಲು ಬಂದಿಖಾನೆಗಳಿಂದ ಈ ಕೆಲಸ ಸಾಧ್ಯವಾಗುತ್ತದೆ, ಯಾಕೆಂದರೆ ಅಲ್ಲಿ ಖೈದಿಗಳಿಗೆ ಮನೆಯಂತಹ ವಾತಾವರಣ ಇರುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಕೆಲಸ ಮೆಚ್ಚಬೇಕಾದದ್ದು.
ಹಾಗೇ ಸುಮ್ಮನೆ- ಬಯಲು ಬಂದಿಖಾನೆ ಸವಲತ್ತಿನ ಬಗ್ಗೆ ಕೇಳಿದ ಉಮೇಶ, ತನ್ನ ಮನೆಗಿಂತ ಜೈಲೇ ಎಷ್ಟೋ ವಾಸಿ. ಮನೆಯಲ್ಲಿ ಹೆಂಡತಿಯ ಗುಲಾಮನಾಗಿ ಬದುಕುದಕ್ಕಿಂತ ಬಂದಿಖಾನೆಯಲ್ಲಿ ಸ್ವಾವಲಂಬಿಯಾಗಿರಬಹುದು ಅನ್ನುತ್ತಿದ್ದಾನೆ.
-ಡಾ.ಶೆಟ್ಟಿ
ಆಯಿಲ್ ಮಾಫಿಯ
ಸೋನಾವಾನೆ, ಮಹಾರಾಷ್ಟ್ರ ಡಿ.ಸಿ, Oil ದಂಧೆಯ ಪರಿಣಾಮ ದಂಧೆಯ ಧುರೀಣರ ಕೋಪಕ್ಕೆ ಬಲಿಯಾಗಿದ್ದಾರೆ. 'ಪ್ರಾಮಾಣಿಕ ಪ್ರಯತ್ನದ ಫಲ' ಎಂದು ಇದನ್ನು ಬಣ್ಣಿಸಬಹುದು.
ಈಗ ನಮ್ಮ ಕೇಂದ್ರ ಸರಕಾರಕ್ಕೆ ಈ ಸಾವು ಪಾಠವಂತೆ. ಅಲ್ಲಾ ಸ್ವಾಮಿ ಈ ಆಯಿಲ್ ದಂಧೆ ಬಗ್ಗೆ, ಇದು ಹೊಸ ಚಾಪ್ಟರ್ ಎಂದು ನುಡಿಯೋ ಸರಕಾರ, ಇತಿಹಾಸದ ಪುಟಗಳನ್ನು ತೆರೆದೇ ನೋಡಿಲ್ಲ ಅನಿಸುತ್ತೆ. ಅಥವಾ ತೆರೆಯಲು ಮನಸಿಲ್ಲವೋ ಗೊತ್ತಿಲ್ಲ. 1990 ರ ದಶಕದ ನಂತರದಿಂದಲೇ ಈ ದಂಧೆ ಆರಂಭವಾಗಿದೆ. ಸೀಮೆ ಎಣ್ಣೆಗೆ ಡೀಸೆಲ್ ಬೆರೆಸಿ ಕಲಬೆರಕೆ ಮಾಡಿ ಮಾರಾಟ ಮಾಡುವುದು ಆ ಜಮಾನದಿಂದಲೇ ಚಾಲ್ತಿಯಲ್ಲಿತ್ತು. ನಮ್ಮ ಹಲವಾರು ರೌಡಿ ಬಾಂಧವರು ಇದರ ಮುಂದಾಳತ್ವವನ್ನು ವಹಿಸಿದ್ದರು. ಅದೆಷ್ಟೋ ಕೊಲೆ ಹಾಗೂ ಇನ್ನಿತರ ಕ್ಷುಲ್ಲಕ ಕ್ರೈ೦ ಗಳು ಈ ದಂಧೆಯಲ್ಲಿ ನಡೆದಿರುವುದು ತೀರಾ ಮಾಮೂಲು ಸಂಗತಿ. ಇಷ್ಟೆಲ್ಲಾ ನಡೆದ ಮೇಲೂ ಸರಕಾರಕ್ಕೆ ಆಗ, ಏನು ಗೊತ್ತಿರಲ್ಲಿಲ್ಲವೋ? ಅಥವಾ ಹಾಗೇ ನಟನೆಯೋ ಗೊತ್ತಿಲ್ಲ.
ಈಗಂತೂ ಕೇಂದ್ರಕ್ಕೆ ಎಚ್ಚರವಾಗಿದೆ. ತಡವಾದರೂ ಪರವಾಗಿಲ್ಲ ಎದ್ದಿದ್ದಾರಲ್ಲ ಅದೇ ಸಂತಸ. ರಾಜ್ಯಗಳಿಗೆ ವಾರ್ಷಿಕವಾಗಿ 95 ಲಕ್ಷ ಸೀಮೆ ಎಣ್ಣೆ ವಿತರಣೆಯಾದರೆ, ಅದರಲ್ಲಿ ಶೇ 40 ರಿಂದ 60% ಕಲಬೆರೆಕೆ ಸಿಗುತ್ತಿದೆ ಎಂದು ತಿಳಿಸಿದ್ದಾರೆ. ಎಷ್ಟರ ಮಟ್ಟಿಗೆ ಈ ದಂಧೆ ಹಾಸು ಹೊಕ್ಕಾಗಿದೆ ಎಂಬುವುದು ಇದರಲ್ಲಿ ನಮಗೆ ಅರಿವಾಗುತ್ತದೆ.
ಪೆಟ್ರೋಲಿಯಂ ಸಚಿವ ಜೈಪಾಲ್ ರೆಡ್ಡಿಯವರು ಈ ಸಂಗತಿಯಿಂದ ಬಹಳ ವಿಚಲಿತ ರಾದಂತೆ ಕಂಡು ಬಂದಿದೆ. ಈ ಮಾಫಿಯಾವನ್ನು ತಡೆದೆ ತೀರುತ್ತೇವೆ. ಇದನ್ನು ತಡೆಯಲು, ಅಭಿವೃದ್ದಿ ಪಡಿಸಿದ ಕೆಮಿಕಲ್ ಮಾರ್ಕರ್ ವ್ಯವಸ್ಥೆ ಜಾರಿಗೆ ತರುವುದಾಗಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳು ಮುಂದೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕಷ್ಟೇ.
- ಡಾ.ಶ್ರೇ
ಕ್ಯಾಂಪಸ್ ಕಿಲ್ಲರ್ಸ್
'ಗುಡು ಗುಡಿಯ ಸೇದಿ ನೋಡೋ' ಎಂಬ ಸಾಲಿಗೆ ಸರಿಯಾಗಿ ಕಾಲೇಜು ವಿದ್ಯಾರ್ಥಿಗಳು ತಮಗೆ ಅರಿವಿಲ್ಲದಂತೆ ಮಾದಕ ದ್ರವ್ಯಗಳ ವ್ಯಸನಿಗಳಾಗಿ ಬಿಡುತ್ತಾರೆ. ಕಾಲೇಜಿನ ಪರಿಸರದಲ್ಲಿ ಸರಿಯಾದ ಆಯಾ ಕಟ್ಟಿನ ಜಾಗದಲ್ಲಿ ಕೆಲವು ಕಡೆ ಗೂಡಂಗಡಿಗಳಲ್ಲಿ, ಕೋಡ್ ವರ್ಡ್ ಗಳ ಮೂಲಕ ಮಾದಕ ವಸ್ತುಗಳನ್ನು ಪಡೆದುಕೊಳ್ಳುತಾರೆ. ಈ ದ್ರವ್ಯಗಳು ಮೂಲತಃ ಶ್ರೀಲಂಕಾ, ಮಲೇಶಿಯ, ಇರಾನ್ , ಆಫ್ಗಾನ್ ಕಡೆಯಿಂದ ಕಾಲೇಜಿನ ಬೀದಿ ಬೀದಿಗಳಿಗೆ ಹರಿದು ಬರುತ್ತದೆ.
ಸಿಗರೇಟಿನ ತಂಬಾಕು ತೆಗೆದು ಗಾಂಜಾವನ್ನು ತುಂಬಿಸುವುದು ಅವರಿಗೆ ಕೆಲವು ಸೆಕೆಂಡ್ ಗಳ ಕೆಲಸ. ಎಲ್ಲರ ಕಣ್ಣೆದುರೇ ಕಣ್ಣು ಕಟ್ಟಿದಂತೆ ಈ ಕೆಲಸವೂ ನಡೆದು ಹೋಗುತ್ತದೆ.
ಕೆಲವೊಮ್ಮೆ ನಗಲು ಶುರು ಹಚ್ಚಿದರೆ ನಗುತ್ತಲೇ, ಅಳಲು ಶುರು ಮಾಡಿದರೆ ಅಳುತ್ತಲೇ ಗಾಂಜಾ ನಶೆಯಲ್ಲಿರುವ ವಿದ್ಯಾರ್ಥಿಗಳು ತಮ್ಮದೇ ಲೋಕದಲ್ಲಿ ಇರುತ್ತಾರೆ. ಈ ರೀತಿ ಕಾಲೇಜು ದಿನಗಳು ಕಳೆಯುವುದೇ ಅವರಿಗೆ ತಿಳಿಯುವುದಿಲ್ಲ. ತಮ್ಮ ಭವಿಷ್ಯಕ್ಕೆ ತಾವೇ ಸಂಚಕಾರ ತಂದೊಡ್ಡುತ್ತಾರೆ.
-ಕೆ.ಪಿ. ಭಟ್
ಅಳಿದ ಮಹಾನಗರಕ್ಕೆ ವಂದನೆ

'
ವಿಜಯನಗರ ಸಾಮ್ರಾಜ್ಯ' ಈ ಶಬ್ದ ಕೇಳಿದ ಕೂಡಲೇ ಪ್ರತಿ ಭಾರತೀಯನ ಕಿವಿ ಒಮ್ಮೆ ನೆಟ್ಟಗಾಗುತ್ತದೆ. ಸಾಹಿತ್ಯ, ವಾಸ್ತುಶಿಲ್ಪ, ಸಂಸ್ಕ್ರತಿಗಳಿಂದ ಶ್ರೀಮಂತವಾಗಿದ್ದ ಈ ಸಾಮ್ರಾಜ್ಯ ಆದಿಲ್ ಶಾಯಿಗಳ ಕುತಂತ್ರದ ದಾಳಿಯಿಂದಾಗಿ ಅವನತಿ ಹೊಂದಿತು.
ವಿಜಯನಗರ ಸಾಮ್ರಾಜ್ಯದ ವೈಭವದ ಬಗ್ಗೆ, ಆ ಕಾಲದಲ್ಲಿ ಪರ್ಷಿಯಾದ ರಾಜನ ಪರವಾಗಿ, ಪ್ರವಾಸಿಯಾಗಿ ಬಂದಿದ್ದ ಅಬ್ದುಲ್ ರಜಾಕ್ ಈ ಕೆಳಗಿನ ಮಾತುಗಳನ್ನು ಹೇಳುತ್ತಾನೆ 'ಈ ನಗರವು ಬಹಳ ವಿಶಾಲವಾಗಿ, ಜನರಿಂದ ಕಿಕ್ಕಿರಿದು ತುಂಬಿದೆ. ಇಲ್ಲಿಯ ರಾಜನು ಬಹಳ ಬಲಶಾಲಿ. ಅವನ ರಾಜ್ಯವು ಸಿಂಹಳ ದ್ವೀಪದಿಂದ ಗುಲ್ಬರ್ಗಾದ ವರೆಗೆ, ಬಂಗಾಳದಿಂದ ಮಲಬಾರ್ ವರೆಗೆ ಸಾವಿರ ಗಾವುದಗಳಿಗಿಂತಲೂ (ಒಂದು ಗಾವುದ ಸುಮಾರು 12 ಮೈಲಿ)ಹೆಚ್ಚಿನ ಪ್ರದೇಶಗಳಿಗೆ ವಿಸ್ತರಿಸಿದೆ. ಈ ರಾಜ್ಯದಲ್ಲಿ 300 ಬಂದರುಗಳಿವೆ. ಬೆಟ್ಟದಂತೆ ಬೆಳೆದಿರುವ ಸಾವಿರ ಆನೆಗಳು, 11 ಲಕ್ಷ ಸೈನಿಕರಿಂದ ಕೂಡಿದ ಬಲಿಷ್ಠವಾದ ಸೈನ್ಯವಿದೆ. ಇಡೀ ಹಿಂದುಸ್ತಾನದಲ್ಲಿ ಈ ರಾಜನನ್ನು ಮೀರಿಸಿದ ಬಲಶಾಲಿ ರಾಜ ಇನ್ನೊಬ್ಬನಿಲ್ಲ. ಏಳು ಸುತ್ತುಗೋಡೆಗಳ ನಡುವೆ ನಿರ್ಮಿಸಲಾದ ಈ ವಿಜಯನಗರ ಎಂತಹುದೆಂದರೆ ಇಡೀ ಭೂ ಪ್ರಪಂಚದಲ್ಲಿ ಇಂತಹದನ್ನು ಕಣ್ಣು ಕಂಡಿಲ್ಲ, ಕಿವಿ ಕೇಳಿಲ್ಲ' ನೆನಪಿಡಿ ಒಬ್ಬ ಮುಸ್ಲಿಂ ಬರೆದ ಸಾಲುಗಳಿವು, ಆತನಿಗೆ ಕೃಷ್ಣದೇವರಾಯನನ್ನು ಹೊಗಳಿ ಬರೆಯಬೇಕಾದ ಅಗತ್ಯವಿರಲಿಲ್ಲ, ಪೂರ್ವಗ್ರಹಪೀಡಿತವಲ್ಲದ ಈ ಸಾಲುಗಳನ್ನು ನಂಬಲೇ ಬೇಕು.ಹಲವು ವಿದೇಶಿಯರು ಮೆಚ್ಚಿ ಬರೆದಿರುವ ವಿಜಯನಗರ ಸಾಮ್ರಾಜ್ಯ ಅವನತಿ ಹೊಂದಿದ್ದು ನಮ್ಮ ದೌರ್ಭಾಗ್ಯ.
ಮತಾಂಧ, ಕಾಮುಕ, ಅಹಂಕಾರಿ ಮೊಘಲ್ ದೊರೆ ಅಕ್ಬರ್ ನನ್ನು 'ದಿ ಗ್ರೇಟ್ ಅಕ್ಬರ್' ಎಂದು ಕರೆಯುವ ಸೋಗಲಾಡಿ ಇತಿಹಾಸಕಾರರು, ಕೃಷ್ಣದೇವರಾಯನ ಬಗ್ಗೆ ಬರೆದದ್ದು ಕಡಿಮೆ. ಅವರಿಗೆ ಕೃಷ್ಣದೇವರಾಯ ಗ್ರೇಟ್ ಅಲ್ಲ ಬದಲಾಗಿ ದಕ್ಷಿಣದ ಸಾಮಾನ್ಯ ದೊರೆ ಅಷ್ಟೆ!
ವಿಜಯನಗರ ಸಾಮ್ರಾಜ್ಯದ ವೈಭವವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ, ಶಬ್ದಗಳಿಗೆ ನಿಲುಕದ ವೈಭವವದು.
ನಾನು ಇದನ್ನೆಲ್ಲಾ ಯಾಕೆ ಹೇಳಿದೆ ಅಂದರೆ ಇಂದಿನಿಂದ ಹಂಪಿ ಉತ್ಸವ ನಡೆಯುತ್ತಿದೆ. ನಮ್ಮ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಈಗಿನ ತಲೆಮಾರಿಗೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಇದು ನಿಜವಾಗಿಯೂ ಶ್ಲಾಘನೀಯ ಪ್ರಯತ್ನ. ಹಂಪಿ ಉತ್ಸವ ಚೆನ್ನಾಗಿ ನಡೆದು, ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸಾರುವಂತಾಗಲಿ ಎಂಬುವುದು ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯನ ಹಾರೈಕೆಯಾಗಿದೆ.
- ಡಾ.ಶೆಟ್ಟಿ
ರೋಡೀ!
ನೀನು ನಿನ್ನ ಜೀವಮಾನದಲ್ಲೇ ಉದ್ದಾರ ಆಗಲ್ಲ. You foolish, ನಿನ್ನ ಬಗ್ಗೆ ನೀನು ಏನು ತಿಳಿದು ಕೊಂಡಿದ್ದಿ? ಇದು ನಮ್ಮ ಶೋ, It has got its own great dignity. ನಮ್ಮ ಮೊದಲ ಆವೃತ್ತಿ ಯಲ್ಲಿ ಗೆಲುವು ಸಾಧಿಸಿದವರನ್ನು ಕಂಡಿದ್ದೀಯ? How were they? and how are you now?
ಬೋಳು ತಲೆಯ ಗೋಳು ವ್ಯಕ್ತಿತ್ವದ ಎರಡು ಆಸಾಮಿಗಳು ಒಂದೇ ತರಹದ ಧಿರಿಸನ್ನು ಧರಿಸಿ ಕುರ್ಚಿಯ ಮೇಲೆ ಕುಳಿತು ರೋಡೀ ಎಂಬ ರಿಯಾಲಿಟಿ ಶೋದಲ್ಲಿ ಬಾಯಿಗೆ ಬಂದಂತೆ ಬಡಬಡನೆ ಅರ್ಥ ಹೀನತೆಯ ಹಂಗಿನಲ್ಲಿ ಹ್ಯಾಂಗ್ ಆಗಿ ಬಡಬಡಿಸೋ ಇವರೇ, ರಘು ಮತ್ತು ರಾಜೀವ್ .
ಇನ್ನು ಇಲ್ಲಿಗೆ ಬರುವ ವ್ಯಕ್ತಿಗಳು, ಈ ಶೋ ನಲ್ಲಿ ಭಾಗವಹಿಸಿದರೆ ಅದೇನೋ ಸಾಧನೆ ಮಾಡಿದಂತೆ ಆಗುವುದೋ ಎಂಬ ಡಾ೦ಭಿಕ ನಂಬಿಕೆಯಲ್ಲಿ Numb ಆಗಿ ಮಾತಾಡೋ ಪರಿ ನೋಡಿದರೆ, ಇಂತಹ ಮೂರ್ಖರೂ ಇದ್ದಾರೋ? ಎಂಬ ಭಯ ಕೂಡಾ ಕಾಡುತ್ತದೆ. ಯಾರೋ ಒಬ್ಬ ಮೊನ್ನೆ; I am born to become roadie, my blood is roadie ಎಂದು ಹೇಳುವಾಗ ಅವನಲ್ಲಿ ಇದ್ದ ಹುಚ್ಚು ಉತ್ಸಾಹಕ್ಕೆ ಈ ಶೋ ಅದೇನು ಮಹಾ ಸಾಧನಾತ್ಮಕವಾದ ಕಾರ್ಯ ಮಾಡಿದೆ ಎಂದು ಯೋಚಿಸಿದಾಗ ತೀರಾ ಹಾಸ್ಯಾಸ್ಪದ ಎನಿಸಿಬಿಟ್ಟಿತು.
ಇನ್ನೊಬ್ಬ, Before last year ಅಶುತೋಶ್ ರೋಡಿ ಯಾಗಿದ್ದಾನೆ. ಆತ ನಮ್ಮ ಮನೆಯ ಪಕ್ಕದವ. ಆ ಬೆಪ್ಪನೆ ರೋಡಿಯಾಗಬೇಕಾದರೆ ನಾನ್ಯಾಕೆ ಆಗಬಾರದು? ಎಂದು ನುಡಿದಾಗ, ಈ ಗೋಳು ವ್ಯಕ್ತಿಗಳು ಅಶುತೋಶ್ ಬಗ್ಗೆ ಭಾರಿ ದೊಡ್ಡ ಭಾಷಣ ಬಿಗಿದು, 'ಅಶು ಬಿಗ್ ಬಾಸ್ ವಿನ್ನರ್ .He has got his own potential.' ಎಂದಿದ್ದರು.ಅಲ್ಲಾ, ಈ ಬಿಗ್ ಬಾಸ್ ಶೋನಲ್ಲಿ ಅದೇನು ಮಹಾ ಸಾಧನೆ ಇದೆ ರೀ? ಮತ್ತಿನ್ನು ರೋಡೀಸ್ ನಲ್ಲಿ ಅದೇನೋ ಮೀನು ಕಪ್ಪೆ ತಿಂದು ಭಾರವಾದ ವಸ್ತುಗಳನ್ನು ಎತ್ತಿ, ಬೈಕ್ ಓಡಿಸಿ ರೋಡಿ ಆಗುತ್ತಾರೆ. ಇದರಲ್ಲಿ ಏನಿದೆ ರೀ ಮಣ್ಣು?
ಇಂತಹ ಸಣ್ಣ ಶೋ ಗಳಿಂದ ಬಹಳ ದೊಡ್ಡ Fame ಸಿಗುತ್ತದೆ ಎಂಬ ಮೂರ್ಖರುಗಳು ಇಲ್ಲಿಗೆ ಬಂದು ತಮ್ಮ ತನವನ್ನು ಕಳೆದು ಕೊಳ್ಳುವುದಲ್ಲದೆ Success ಬಗೆಗಿನ ನಿಜವಾದ ಅರ್ಥವನ್ನು ಮರೆತೇ ಬಿಡುತ್ತಾರೆ. There is no short cut for success. If so, your success will be very short.
ಇವುಗಳು, ಯುವಜನತೆಯ ಜ್ಞಾನ ವ್ಯಾಪ್ತಿಯನ್ನೇ ಸಂಕುಚಿತತೆಯತ್ತ ಕೊಂಡೊಯ್ದು ಜ್ಞಾನ ಷಂಡತೆಯ ಕಸಿಯನ್ನು ಕಟ್ಟುತ್ತದೆ. ಇನ್ನೂ, ಇಂತಹ ಶೋ ನ ಆಯೋಜಕರೋ? ಅವರುಗಳು ಮುಖವಾಡದ ಮಂಥನದಲ್ಲಿ ಮಣ್ಣನ್ನೇ ಹೊರ ತೆಗೆದು ಆ ಮಣ್ಣಲ್ಲೇ ಹೂತುಹೋಗುವ ಆಜನ್ಮ ಮೂರ್ಖರು.
-ಡಾ.ಶ್ರೇ
ವೈ. ಎನ್. ಕೆ. ನೆನಪು
ಅರವತ್ತರ ದಶಕದಲ್ಲಿ ಕನ್ನಡದ ಪತ್ರಿಕೋದ್ಯಮದ ಸ್ಪೂರ್ತಿ ಎಂದರೆ ವೈ.ಎನ್.ಕೆ. ಅವರು. ಇವರ ಬರಹದಲ್ಲಿ ವಿಶಿಷ್ಟ ಛಾಪನ್ನು ಕಾಣಬಹುದು. ತರುಣರಿಗೆ ಪ್ರೋತ್ಸಾಹ ನೀಡುವ ಜೊತೆಗೆ ಇವರ ಲೇಖನಗಳು ಪತ್ರಿಕೋದ್ಯಮದಲ್ಲಿ ಆಸಕ್ತಿಯನ್ನು ಮೂಡಿಸುತ್ತದೆ.
ಪ್ರಜಾವಾಣಿ ಪತ್ರಿಕೆಯ ಆಧಾರವಾಗಿದ್ದ ಇವರು, ಪದಗಳಲ್ಲಿ ಮೋಡಿ ಮಾಡುತ್ತಿದ್ದರು, ಇವರ ಬರವಣಿಗೆಗಳು ಜನರ ಮನಸ್ಸಿಗೆ ತಟ್ಟುತಿತ್ತು. ರವಿಬೆಳಗೆರೆ, ವಿಶ್ವೇಶ್ವರ ಭಟ್ ನಂತಹ ಪತ್ರಕರ್ತರಿಗೆ ಇವರೇ ಸ್ಪೂರ್ತಿ.
ತಾವು ಇರುವ ಊರನ್ನೇ ಸರಿಯಾಗಿ ಸುತ್ತದೆ, ಇನ್ಯಾವುದೋ ಊರಿನ ಬಗ್ಗೆ ವ್ಯಂಗ್ಯದ ಬರಹಗಳನ್ನು ಬರೆಯುವ ಈಗಿನ ಪತ್ರಕರ್ತರಿಗೆ ಇವರು ಮಾದರಿಯಾಗಬೇಕು. ಕಾರಣ ಪ್ರಪಂಚ ಪರ್ಯಟನೆ ಮಾಡಿದ ಕೆಲವೇ ಕೆಲವು ಕನ್ನಡ ಪತ್ರಕರ್ತರಲ್ಲಿ ವೈ.ಎನ್.ಕೆ ಒಬ್ಬರು.
ತಮಗೆ ದೊರೆತ ಒಂದೊಂದು ತುಣುಕನ್ನು ಸ್ವಾರಸ್ಯಕರವಾಗಿ ನಿರೂಪಿಸುವಲ್ಲಿ ಇವರದ್ದು ಎತ್ತಿದ ಕೈ.
ಕೆ.ಪಿ.ಭಟ್
29 ವರ್ಷಕ್ಕೆ ಅಜ್ಜನಾದ ಭೂಪ!
ಲಂಡನ್ ನಲ್ಲಿ 29 ವರ್ಷದ ವ್ಯಕ್ತಿಯೊಬ್ಬ ತಾತನಾಗಿದ್ದಾನೆ. ಹೇಗಂತೀರ? ಆತನ 14 ವರ್ಷದ ಮಗಳು ಗರ್ಭಿಣಿಯಂತೆ! ಇದಕ್ಕೆ ಮೂಗಿನ ಮೇಲೆ ಬೆರಳು ಇಡಬೇಡಿ, ಇದಕ್ಕಿಂತ ಆಶ್ಚರ್ಯದ ಸಂಗತಿ ಇನ್ನೊಂದಿದೆ, ಆಕೆಯ ತಂದೆಗೂ 14 ವರ್ಷಕ್ಕೆ ಮದುವೆಯಾಗಿತ್ತು. ಗರ್ಭಿಣಿಯಾಗಿರುವ ಹುಡುಗಿ ತಪ್ಪೇನು ಮಾಡಿಲ್ಲ ಬಿಡಿ. ಆಕೆ ಅವಳ ತಂದೆಯನ್ನೇ ರೋಲ್ ಮಾಡೆಲ್ ಆಗಿ ಭಾವಿಸಿದಳೋ ಏನೋ ಪಾಪ!! ಆದರೆ ಆಕೆಯ ತಂದೆ 'ಛೇ ನಾನು ಹರೆಯದಲ್ಲಿ ಮಾಡಿದ ತಪ್ಪನ್ನೆ ತನ್ನ ಮಗಳು ಕೂಡ ಮಾಡಿದಳು' ಅಂತ tension ಆಗಿದ್ದಾನಂತೆ.
ಇದೆಲ್ಲದಕ್ಕಿಂತ ಆಶ್ಚರ್ಯಕರ ವಿಚಾರ ಇನ್ನೊಂದಿದೆ. ಅದೆಂದರೆ, ಗರ್ಭಿಣಿಯಾಗಿರುವ ಹುಡುಗಿ 'ತಾನು ಗರ್ಭಿಣಿ' ಅನ್ನೋ ವಿಷಯವನ್ನು facebook ನಲ್ಲಿ ಹಂಚಿಕೊಂಡದ್ದು! ಗರ್ಭ ಧರಿಸುವುದು ಮಹಾನ್ ಸಾಧನೆ ಎಂದು ತಿಳಿದು ಕೊಂಡಳೋ ಏನೋ ಈ ಮಹಾತಾಯಿ.
ಇದನ್ನು ಓದುವಾಗ ನಮಗೆ ವಿಶೇಷ ಅನಿಸಬಹುದು ಆದರೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇದು ಸಾಮಾನ್ಯ, ಅಲ್ಲಿ ಇಂತಹ ಘಟನೆಗಳು ಆಗಾಗ ಸಂಭವಿಸುತ್ತಲೇ ಇರುತ್ತದೆ. ಹೈಸ್ಕೂಲಿನ ಮಕ್ಕಳಿಗೆ ಮೀಟಿಂಗ್, ಡೇಟಿಂಗ್ ಕೊನೆಗೆ ಏನೇನೋ ಟಿಂಗ್ ಗಳು ಸಾಮಾನ್ಯ ಆಗಿಬಿಟ್ಟಿದೆ. ಆದರೆ ವಿಪರ್ಯಾಸ ಅಂದರೆ ನಮ್ಮವರಿಗೆ ಈ ಸಂಸ್ಕೃತಿ ಆಕರ್ಷಣೀಯ, ಅನುಕರಣೀಯ ಅಂತ ಅನಿಸುತ್ತಿರುವುದು ಹಾಗೂ ನಮ್ಮ ಸಂಸ್ಕೃತಿಯ ಉತ್ತಮ ವಿಚಾರಗಳು, ನಮ್ಮ ಸಂಸ್ಕೃತಿಯ ಉದಾತ್ತತೆ ಮುಂತಾದ ವಿಚಾರಗಳ ಅರಿವು ಇಲ್ಲದಿರುವುದು.
ನಮ್ಮಲ್ಲೂ ಕೂಡ 29 ವರ್ಷದ ವ್ಯಕ್ತಿ ತಾತ, 14 ವರ್ಷದ ಹುಡುಗಿ ತಾಯಿ ಈ ತರದ ಘಟನೆಗಳು ಸಂಭವಿಸಬಾರದು ಎಂದಾದರೆ ಮೊದಲು ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಇಲ್ಲವಾದರೆ ನಮ್ಮ ಪತ್ರಿಕೆಗಳು ಕೂಡ ಮೇಲೆ ಹೇಳಿದಂತ ಘಟನೆಗಳನ್ನು ವರದಿ ಮಾಡಬೇಕಾಗುತ್ತದೆ!
ಹಾಗೇ ಸುಮ್ಮನೆ- ಉಮೇಶ ಮದುವೆಯಾಗಬೇಕು ಎಂದು 5 ವರ್ಷದಿಂದ ಹುಡುಗಿ ಹುಡುಕ್ತಿದ್ದಾನಂತೆ, ಆದರೆ ಇವನ ಮುಸುಡಿ ನೋಡಿದವರು ಯಾರು ಕೂಡ ಹುಡುಗಿ ಕೊಡ್ತಿಲ್ಲವಂತೆ; ಇದರಿಂದ ಬೇಸತ್ತ ಉಮೇಶ 'ಛೇ ನಾನು ಫಾರಿನ್ ಅಲ್ಲಿ ಹುಟ್ಬೇಕಿತ್ತು, ಈ ಹೊತ್ತಿಗೆ ನನಗೆ ಮೊಮ್ಮಕ್ಕಳು ಆಗ್ತಾ ಇದ್ರು' ಅಂತ ಗೊಣಗ್ತಿದ್ದಾನಂತೆ!!
- ಡಾ.ಶೆಟ್ಟಿ
ಬೇನಾಮಿ ಮಾತು.....
ರೇಡಿಯೋದಲ್ಲಿ, 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಎಂಬ ಹಾಡನ್ನು ಕೇಳುತ್ತಿರಬೇಕಾದರೆ ನನ್ನಲ್ಲಿ ಕನ್ನಡದ ಬಗ್ಗೆ ಮತ್ತಷ್ಟು ಪ್ರೀತಿಯನ್ನು ಹೆಚ್ಚಿಸುತ್ತಿತ್ತು. ಅದೇ ಸಂದರ್ಭ ಸಿ.ಎಂ. ಯಡಿಯೂರಪ್ಪ ನವರ ಆಚಾರವಿಲ್ಲದ ನೀಚ ನಾಲಿಗೆಯು ಬೇನಾಮಿ ಶಬ್ದಗಳನ್ನು ಕಕ್ಕುತ್ತಿತ್ತು.
ಬೆಂಗಳೂರು ಸುತ್ತ-ಮುತ್ತ ಬೇನಾಮಿ ಆಸ್ತಿ-ಪಾಸ್ತಿ ಪತ್ತೆ ಹಚ್ಚಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಮತ್ತು ಇದರ ವಿವರ ನೀಡಿದವರಿಗೆ ಬಂಪರ್ ಬಹುಮಾನ ನೀಡಲಾಗುವುದೆಂದು ಖಾಸಗಿ ಹೋಟೆಲ್ ನ ಬಿ.ಜೆ.ಪಿ ಶಾಸಕಾಂಗ ಸಭೆಯಲ್ಲಿ ಹೇಳಿದ್ದರು. ಇಂತಹ ಹೇಳಿಕೆ ಕೊಡಲು ಇವರಿಗೆ ಯಾವ ನೈತಿಕತೆ ಇದೆ.
ಕೊಚ್ಚೆಯಲ್ಲಿ ಬಿದ್ದಿರುವ ಯಡಿಯೂರಪ್ಪ ನವರಿಗೆ ಇನ್ನಾವುದೋ ಕೊಚ್ಚೆಯ ವಾಸನೆ ಬಡಿಯುತ್ತಿದೆ. ಕೆಸರಿಗೆ ಕಲ್ಲನ್ನು ಬಿಸಾಕಿದರೆ ಅದು ನಮಗೆ ರಟ್ಟುತ್ತದೆ ಎನ್ನುವ ಪರಿಜ್ಞಾನ ಇವರಿಗಿಲ್ಲ.
ಒಟ್ಟಾರೆಯಾಗಿ ಬೇನಾಮಿ ಆಸ್ತಿಯನ್ನು ವಶಪಡಿಸಿಕೊಳ್ಳುವ ಮೂಲಕ ಸರ್ಕಾರದ ಬೊಕ್ಕಸವನ್ನು ಹೆಚ್ಚಿಸಿಕೊಳ್ಳುವ ಮಾರ್ಗವಿದು.
- ಕೆ.ಪಿ. ಭಟ್